74 ವರ್ಷಗಳಲ್ಲಿ ದೇಶಕ್ಕಾಗಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೇ ಕಾಂಗ್ರೆಸ್ ಆಡಳಿತದಲ್ಲಿ ಸ್ಥಾಪಿಸಿದ ಸರ್ಕಾರಿ ಸಂಸ್ಥೆಗಳನ್ನು ಮೋದಿ ನೇತೃತ್ವದ ಸರ್ಕಾರ ಒಂದೊಂದಾಗಿ ಮಾರುತ್ತಿದೆ.
ಹೌದು, ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವಾಗ ಒಂದು ಸಣ್ಣ ಗುಂಡುಸೂಜಿ ತಯಾರಾಗುವ ತಂತ್ರಜ್ಞಾನವನ್ನು ಕೂಡ ನಾವು ಹೊಂದಿರಲಿಲ್ಲ. ಅದಕ್ಕೂ ಕೂಡ ವಿದೇಶಗಳತ್ತ ಮುಖ ಮಾಡಬೇಕಿತ್ತು. ಸೂಜಿ ಕಾರ್ಖಾನೆಯಿಲ್ಲದ ಈ ದೇಶದಲ್ಲಿ ಇಂದು ವಿಮಾನವನ್ನು ನಿರ್ಮಾಣ ಮಾಡುತ್ತೇವೆ, ಹಡಗು, ರೈಲು ಪ್ರಸಿದ್ದ ಅಣೆಕಟ್ಟು ಹೀಗೇ ಎಲ್ಲಾ ಕ್ಷೇತ್ರದಲ್ಲೂ ಭಾರತ ಈ ಮಟ್ಟಕ್ಕೆ ಬೆಳೆದಿದೆ ಎಂಬುದು ಹೆಮ್ಮೆಯ ವಿಚಾರ. ಹೀಗೆ ಕಟ್ಟಿ ಬೆಳೆಸಿದ ಅನೇಕ ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಮಾರಾಟ ಅಥವಾ ಖಾಸಗೀಕರಣ ಮಾಡುತ್ತಿದ್ದರೆ ಮುಂದೆ ದೇಶದ ಆರ್ಥಿಕ ಸ್ಥಿತಿ ಏನು? ಸರ್ಕಾರಿ ಕೆಲಸ ಹುಡಿಕಿಕೊಂಡು ಬರುವ ಜನರ ಕಥೆ ಏನು? ಎಂಬುದೇ ದೊಡ್ಡ ಪ್ರಶ್ನೆ.
ಶತಶತಮಾನಗಳಿಂದ ಮನುವಾದಿಗಳ ಶೋಷಣೆಗೆ ಬಲಿಯಾಗಿದ್ದ ಈ ದೇಶದ 90%ಗೂ ಹೆಚ್ಚು ದಲಿತ ಹಿಂದುಳಿದ ವರ್ಗದ ಜನ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. 95%ಗೂ ಹೆಚ್ಚು ಜನ ಅನಕ್ಷರಸ್ಥ ರಾಗಿದ್ದರು. 40%ಗೂ ಹೆಚ್ಚು ಜನ ಅಪೌಷ್ಟಿಕತೆಯಿಂದ ಬಾಲ್ಯ, ಯೌವನದಲ್ಲೆ ಸಾವನ್ನಪ್ಪುತ್ತಿದ್ದರು. ಈ ದೇಶದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೆಚ್ಚಿನೆಡೆ ಸಂಪರ್ಕ ಮಾರ್ಗಗಳೆ ಇರಲಿಲ್ಲ, ವಿದ್ಯುತ್ ಇರಲಿಲ್ಲ, ಸೇತುವೆಗಳಿರಲಿಲ್ಲ, ಶಾಲೆಗಳಿರಲಿಲ್ಲ, ಆಸ್ಪತ್ರೆಗಳಿರಲಿಲ್ಲ, ಉದ್ಯೋಗಾವಕಾಶಗಳಿರಲಿಲ್ಲ. ಆದರೆ ಅದೆಲ್ಲವನ್ನು, ಅದಕ್ಕಿಂತ ಹೆಚ್ಚಾಗಿ ಅದರ ಮಹತ್ವವನ್ನು ಆ ಅವಿದ್ಯಾವಂತ ಜನರಿಗೆ ಮನವರಿಕೆ ಮಾಡಿ ಹಂತಹಂತವಾಗಿ ಅನುಷ್ಠಾನ ಗೊಳಿಸಿದವರು ಈ ಸ್ವಾತಂತ್ಯ ನಂತರ ಈ ದೇಶವನ್ನಾಳಿದ ನೆಹರೂ, ಶಾಸ್ತ್ರಿ, ಇಂದಿರಾ, ರಾಜೀವ್, ಪಿವಿಎನ್, ಮನಮೋಹನ್ ಸಿಂಗ್ ಮುಂತಾದ ನಾಯಕರು.
ಈ ದೇಶವನ್ನಾಳಿದ ಈ ಎಲ್ಲಾ ನಾಯಕರುಗಳ ಗಟ್ಟಿತನದ ಆಲೋಚನೆಯ ಫಲವಾಗಿ ಭಾರತ 2012ರ ಹೊತ್ತಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನ ಪಡೆಯುವಂತಾಯಿತು. ಐಟಿ, ಬಿಟಿಯಲ್ಲಿ ಭಾರತ ಗಳಿಸಿದ ಸಾಧನೆಗಾಗಿ ಅಮೆರಿಕಾದ ಆಗಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರವರು ಭಾರತವನ್ನಾಳಿದ ನಾಯಕರ ಈ ಸಾಧನೆ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ಸಮಾರಂಭವೊಂದರಲ್ಲಿ ಹೊಗಳಿದ್ದನ್ನು ಭಾರತೀಯರೆಂದೂ ಮರೆಯಲಾರರು. ಹಾಗೆಯೇ ಮಾಜಿ ಪ್ರಧಾನಿ, ವಿಶ್ವದ ಸರ್ವ ಶ್ರೇಷ್ಟ ಆರ್ಥಿಕತಜ್ಞ ಖ್ಯಾತಿಯ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಈ ಸ್ಥಾನಮಾನ ಕೀರ್ತಿ ಲಬಿಸಿದ್ದು ಭಾರತದ ಹೆಮ್ಮೆ.
ಒಟ್ಟಾರೆಯಾಗಿ ಇಂದು ನಮ್ಮ ದೇಶ ವಿಜ್ಞಾನ ,ತಂತ್ರಜ್ಞಾನ, ಶಿಕ್ಷಣ, ಆರೋಗ್ಯ ಮುಂತಾದ ವಿಚಾರಗಳಲ್ಲಿ ವಿಶ್ವದ ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಸರಿಸಮವಾಗಿ ನಿಲ್ಲುವಂತಾಗಲು ಅದು ಈ 74 ವರ್ಷಗಳ ಫಲ ಮತ್ತು ನಮ್ಮನ್ನಾಳಿದ ನಾಯಕರು ಈ ಮೇಲೆ ವಿವರಿಸಿದ ಕ್ಷೇತ್ರಗಳಿಗೆ ನೀಡಿದ ಹೆಚ್ಚಿನ ಆಧ್ಯತೆಯೇ ಕಾರಣ ಮತ್ತು ಇದು ಆ ನಾಯಕರುಗಳ ದೂರದೃಷ್ಟಿಯ ಪ್ರತಿಫಲ ಎಂಬ ಅಂಶವನ್ನು ಈ ದೇಶದ ಜನ ಮರೆಯುವಂತಿಲ್ಲ.
ಈ ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳು ದೇಶದ 137ಕೋಟಿ ಜನರಿಗೆ ಸಮನಾಗಿ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯಗಳು. ಅದರ ಅಂಗವಾಗಿ ಸರ್ಕಾರಗಳು ಶಾಲೆಗಳನ್ನು ತೆರೆದು ವಿದ್ಯೆ ನೀಡಿತು. ವಿವಿಧ ಇಲಾಖೆಗಳನ್ನು, ಸರ್ಕಾರಿ ಕಂಪನಿಗಳನ್ನು ಸ್ಥಾಪಿಸಿ ಉದ್ಯೋಗ ನೀಡಿತು. ಆ ಮೂಲಕ ದೇಶದ ಆರ್ಥಿಕತೆ ಬೆಳೆದು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಜನ ಕಾರಿನಲ್ಲಿ, ವಿಮಾನದಲ್ಲಿ ಓಡಾಡುವ ಹಂತ ತಲುಪಿತು.
ಇಂದು ಈ ದೇಶದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅಪಾಯದಲ್ಲಿವೆ!
ಹೌದು, ಈ ದೇಶವನ್ನು ಮನುವಾದಿಗಳ ನೇತೃತ್ವದ ಸರ್ಕಾರ ಆಳ್ವಿಕೆ ನಡೆಸುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ ನೈಜ್ಯ ಸಮಸ್ಯೆಗಳನ್ನು ಸಂಪೂರ್ಣ ಮರೆಮಾಚುತ್ತಿದೆ. ಲಕ್ಷಾಂತರ ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಆಸ್ತಿಗಳನ್ನು ಖಾಸಗಿ ಕಂಪನಿಗಳ ಮಾಲೀಕರಿಗೆ ಮೂರು ಕಾಸಿಗೆ ಮಾರಾಟ ಮಾಡಲಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದೆ ಸರ್ಕಾರಿ ಉದ್ಯೋಗಗಳೇ ಇಲ್ಲದಂತಾಗುತ್ತದೆ. ಖಾಸಗಿ ಮಾಲೀಕರ ಶೋಷಣೆ ಆರಂಭವಾಗುತ್ತದೆ. ಸರ್ಕಾರದ ಖಜಾನೆ ಬರಿದಾಗಿ, ಬೆರಳೆಣಿಕೆಯ ಶ್ರೀಮಂತರ ಕೈಯಲ್ಲಿ ದೇಶ ನಲುಗಲಿದೆ. ಇದೀಗ ಒಂದು ಉತ್ತಮ ಹಂತ ತಲುಪಿರುವ ಜನಜೀವನ ಮತ್ತೆ ಹಳಿ ತಪ್ಪಿ ಮತ್ತೆ ಕಿತ್ತು ತಿನ್ನುವ ಬಡತನ ಕಾಡಲಿದೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಲವಾರು ಅತ್ಯಮೂಲ್ಯ ಸರ್ಕಾರಿ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಮತ್ತಷ್ಟು ಆಸ್ತಿಗಳನ್ನು ಮಾರಾಟ ಮಾಡಲು ಸಿದ್ದತೆ ಕೂಡ ನಡೆದಿದೆ.
ನರೇಂದ್ರ ಮೋದಿಯವರ ಆಡಳಿತದಲ್ಲಿ ಈಗಾಗಲೇ ಮಾರಾಟಗೊಂಡಿರುವ ಸರ್ಕಾರಿ ಆಸ್ತಿಗಳು ಇಂತಿವೆ:
ಪವನ್ ಹನ್ಸ್ ಲಿಮಿಟೆಡ್, ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML), ಆಸ್ಪತ್ರೆ ಸೇವೆಗಳ ಸಲಹಾ ಲಿಮಿಟೆಡ್ (HSCCL), ಎಂಜಿನಿಯರಿಂಗ್ ಪ್ರಾಜೆಕ್ಟ್(ಇಂಡಿಯಾ)ಲಿ., ಫೆರೋ ಸ್ಕ್ರಾಪ್ ನಿಗಮ್ ಲಿಮಿಟೆಡ್ (FSNL), ಎಚ್ಎಲ್ಎಲ್ ಲೈಫ್ ಕೇರ್, ರಾಷ್ಟ್ರೀಯ ಯೋಜನೆ ನಿರ್ಮಾಣ ನಿಗಮ (NPCC),
ಏರ್ ಇಂಡಿಯಾ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ(SCI), ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ (CONCOR), ಬೆಮೆಲ್, ಹಿಂದೂಸ್ತಾನ್ ಮಷೀನ್ ಟೂಲ್ಸ್ ಲಿಮಿಟೆಡ್ (HMT), ನೀಲಾಚಲ ಇಸ್ಪತ್ ನಿಗಮ್ ಲಿಮಿಟೆಡ್ (NINS), ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್, ಸೆಂಟ್ರಲ್ ಎಲೆಕ್ಟ್ರಾನಿಕ್ ಲಿಮಿಟೆಡ್(CEL), ಸಿಮೆಂಟ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ (CCIL) (ನಯಾಂಗಾವ್ ಘಟಕ), ಬ್ರೀಡ್ಜ್ ಮತ್ತು ರೂಫ್ ಕಂ ಇಂಡಿಯಾ ಲಿಮಿಟೆಡ್, ಇಂಡಿಯನ್ ಮೆಡಿಸಿನ್ ಮತ್ತು ಫಾರ್ಮಸ್ಯೂಟಿಕಲ್ ಕಾರ್ಪೋರೇಷನ್ ಲಿಮಿಟೆಡ್ (IMPCL) ಸೇರಿ ಆರು ವಿಮಾನ ನಿಲ್ದಾಣ ಈಗಾಗಲೇ ಖಾಸಗೀಕರಣಗೊಂಡಿವೆ.
ಮುಂದೆ ಮಾರಾಟ ಮಾಡಲು ಕಾಗದ ಪತ್ರ ಸಿದ್ದಗೊಂಡಿರುವ ಸಂಸ್ಥೆಗಳು.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್), ವಿದ್ಯುತ್ ಪೂರೈಕೆ ವ್ಯವಸ್ಥೆ BSNL, ಪಂಜಾಬ್ ಸಿಂಧ್ ಬ್ಯಾಂಕ್, ಕಲ್ಲಿದ್ದಲು ಗಣಿಗಾರಿಕೆ, ಭಾರತೀಯ ರೈಲ್ವೇ, ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ (LIC),150 ರೈಲುಗಳನ್ನು ಮತ್ತು 50 ರೈಲು ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ನಡೆದಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ರೈಲ್ವೆ ಸ್ಟೇಡಿಯಂಗಳು ಇವೆಲ್ಲವೂ ಮಾರಾಟದ ಸಾಲಿನಲ್ಲಿವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವೊಂದು ದೇಶದ ಅಷ್ಟೂ ಜನರಿಗೆ ಸೇರಿದ ಸಾರ್ವಜನಿಕ ಆಸ್ತಿಗಳನ್ನು ಕೇವಲ ಎರಡು, ಮೂರು ಉದ್ಯಮಿಗಳಿಗೆ ಪರಭಾರೆ ಮಾಡುತ್ತಿದ್ದರೂ ದೇಶದ ಜನ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕೈಕಟ್ಟಿ ಕುಳಿತಿರುವುದು ನಿಜಕ್ಕೂ ಖೇದಕರ ವಿಷಯ.
ಜನ ಹಸಿವು, ಬಡತನದಲ್ಲೇ ಇರಬೇಕು, ಇತರ ಸಮಸ್ಯೆಗಳ ಬಗ್ಗೆ ಮಾತನಾಡಬಾರದು, ಯಾವುದೇ ಪ್ರತಿಭಟನೆ, ಪ್ರತಿರೋಧ ತೋರಬಾರದು, ಹಾಗಿದ್ದರೆ ಮಾತ್ರ ತಮ್ಮ ಹಿಡನ್ ಅಜಂಡಾ ಜಾರಿ ಮಾಡಲು ಸಾಧ್ಯ ಎಂಬ ದುರಾಲೋಚನೆಯೇ ಬೆಲೆ ಏರಿಕೆಯನ್ನು ತಡೆಯದಿರುವ ಕಾರಣ ಎಂಬುದನ್ನು ಅರಿಯಲು ಹೆಚ್ಚಿನ ಬುದ್ಧಿವಂತಿಕೆಯ ಅಗತ್ಯವಿಲ್ಲ.
ದೇಶದ ಒಂದೊಂದೇ ಸಂಪತ್ತನ್ನು ಖಾಸಗೀಕರಣಗೊಳಿಸುವ ಮತ್ತು ಮಾರುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವವರು ಎಚ್ಚೆತ್ತುಕೊಂಡು ಜನಾಂದೋಲನ ರೂಪಿಸದಿದ್ದರೆ ದೇಶದ ಭವಿಷ್ಯ ಅಧೋಗತಿಗೆ ಇಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.