ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ನೂತನ ಘನತ್ಯಾಜ್ಯ ನಿರ್ವಹಣೆ (Solid Waste Management – SWM) ಟೆಂಡರ್ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಹಿರಿಯ ಅಧಿಕಾರಿಗಳು (Officers), ಗುತ್ತಿಗೆದಾರರು (Contractors) ಹಾಗೂ ಸ್ವಯಂಸೇವಾ ಸಂಸ್ಥೆಗಳ (Non-Governmental Organizations – NGOs) ಪ್ರತಿನಿಧಿಗಳು ಭಾಗವಹಿಸಿದ್ದು, ಬೆಂಗಳೂರಿನ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಯಿತು.

ಚಿನ್ನದ ನಾಣ್ಯಗಳ ಖರೀದಿಯಿಂದ ಲಾಭವಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ
ನಗರದಲ್ಲಿ ಕಸದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲು ಮುಂದಿನ ಎರಡೂವರೆ ತಿಂಗಳ ಅವಧಿಯಲ್ಲಿ ಒಟ್ಟು ಮೂವತ್ತು ಪ್ಯಾಕೇಜ್‌ಗಳನ್ನು ಹಂತ ಹಂತವಾಗಿ ಜಾರಿಗೆ ತರಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲನೇ ಹಂತದಲ್ಲಿ ನಾಲ್ಕು, ಎರಡನೇ ಹಂತದಲ್ಲಿ ಏಳು ಹಾಗೂ ಮುಂದಿನ ತಿಂಗಳು ಮೂರನೇ ಹಂತದಲ್ಲಿ ಏಳು ಪ್ಯಾಕೇಜ್‌ಗಳು ಅನುಷ್ಠಾನಗೊಳ್ಳಲಿವೆ. ಕಸದ ವಿಚಾರದಲ್ಲಿ ನಾವು ತಲೆ ತಗ್ಗಿಸುವಂತಹ ಪರಿಸ್ಥಿತಿಯಿದ್ದು, ಜನರು ನೋಡುವ ದೃಷ್ಟಿಕೋನ ಬದಲಾಗಿದೆ. ಹೀಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ನಾಗರಿಕರು ಹಳೆಯ ಪದ್ಧತಿಗಳನ್ನು ಬಿಟ್ಟು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಲಭ್ಯವಿರುವ ಈ ಅವಕಾಶವನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳದಿದ್ದರೆ ಭಾರಿ ಸಾರ್ವಜನಿಕ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಮತ್ತು ಲೋಪಗಳನ್ನು ತಡೆಯಲು ತಂತ್ರಜ್ಞಾನದ ಬಳಕೆಗೆ ಸಚಿವರು ಒತ್ತು ನೀಡಿದರು. ಬಿಲ್ ಉತ್ಪಾದನೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಟೋಮೇಷನ್ ಮಾಡಬೇಕು ಮತ್ತು ಪೌರಕಾರ್ಮಿಕರು, ಸಹಾಯಕರು, ಚಾಲಕರು ಹಾಗೂ ವಾಹನಗಳ ಹಾಜರಾತಿಯನ್ನು ಸಿಂಗಲ್ ಸಾಫ್ಟ್‌ವೇರ್ ಅಡಿಯಲ್ಲಿ ಸಂಯೋಜಿಸಬೇಕು ಎಂದು ಸೂಚಿಸಿದರು. ಕಸದ ವಾಹನಗಳ ಫೋಟೋ, ಜಿಪಿಎಸ್ ಟ್ರ್ಯಾಕಿಂಗ್ ಹಾಗೂ ನಿಗದಿತ ಏಳು ರಸ್ತೆಗಳ ಸಂಚಾರ ಮಾಹಿತಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿದರೆ ಶೇಕಡಾ ತೊಂಬತ್ತರಷ್ಟು ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಪ್ರತಿಯೊಂದು ವಾಹನದ ಮೇಲೂ ಕ್ಯೂಆರ್ ಕೋಡ್ ಅಳವಡಿಸಬೇಕು ಮತ್ತು ಸಾರ್ವಜನಿಕರು ನೇರವಾಗಿ ತಮ್ಮ ದೂರು ಮತ್ತು ಅಭಿಪ್ರಾಯಗಳನ್ನು ದಾಖಲಿಸಲು ಅನುವಾಗುವಂತೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇಂಟಿಗ್ರೇಟ್ ಮಾಡಬೇಕು ಎಂದು ನಿರ್ದೇಶಿಸಿದರು.

ಕಸದ ವಾಹನಗಳು ಕಡ್ಡಾಯವಾಗಿ ಪ್ರತಿಯೊಂದು ಮನೆಗೂ ಭೇಟಿ ನೀಡುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಸಣ್ಣ ಹೋಟೆಲ್‌ಗಳು, ಬೇಕರಿಗಳು ಹಾಗೂ ಅಂಗಡಿಗಳಿಂದಲೂ ತ್ಯಾಜ್ಯವು ಪಾಲಿಕೆಯ ವಾಹನಗಳಿಗೇ ತಲುಪುವಂತೆ ನಿಗಾ ವಹಿಸಿ, ತಪ್ಪಿತಸ್ಥರಿಗೆ ಎಚ್ಚರಿಕೆ ನೀಡಬೇಕು ಎಂದು ಸೂಚಿಸಲಾಯಿತು. ರಸ್ತೆಗೆ ಕಸ ಎಸೆಯುವವರ ಬಗ್ಗೆ ಸ್ಥಳೀಯ ಕಸದ ಗಾಡಿಯ ಸಿಬ್ಬಂದಿಗೆ ಮಾಹಿತಿ ಇರುತ್ತದೆ. ಅಂತಹವರನ್ನು ಗುರುತಿಸಿ ಸೂಕ್ತ ತಿಳಿವಳಿಕೆ ಮೂಡಿಸುವ ಮೂಲಕ ನಗರದಲ್ಲಿರುವ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು. ಈ ಬಗ್ಗೆ ಸಾರ್ವಜನಿಕರಲ್ಲೂ ವ್ಯಾಪಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕು ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ಬೆಂಗಳೂರು ನಗರ ನಮಗೆ ಅನ್ನ ನೀಡಿದೆ, ಹೀಗಾಗಿ ನಮ್ಮೂರಿನ ಮೇಲಿರುವ ಕಳಂಕವನ್ನು ತೊಡೆದುಹಾಕುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಅವರು ಕರೆ ನೀಡಿದರು.

ಇದೇ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ ಅವರು, ಮೂವತ್ತಮೂರು ಪ್ಯಾಕೇಜ್‌ಗಳ ಅಡಿಯಲ್ಲಿ ಐದು ಸಾವಿರದ ನಾನೂರ ಮೂವತ್ತೊಂದು ವಾಹನಗಳೊಂದಿಗೆ ಏಳು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಹೊಸ ನಿಯಮಾವಳಿ ಪ್ರಕಾರ ಶೇಕಡಾ ನೂರರಷ್ಟು ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿದೆ. ಆರ್.ಎಫ್.ಐ.ಡಿ ಮತ್ತು ಫೇಸ್ ರೆಕಗ್ನಿಷನ್ ಮೂಲಕ ಸಿಬ್ಬಂದಿಯ ಹಾಜರಾತಿ ನಿರ್ವಹಿಸಲಾಗುತ್ತಿದ್ದು, ಐಸಿಸಿಸಿ ಮೂಲಕ ಲೈವ್ ಡೇಟಾ ಮಾನಿಟರ್ ಮಾಡಲಾಗುತ್ತದೆ. ಸರಿಯಾಗಿ ಸೇವೆ ಒದಗಿಸದಿದ್ದರೆ ಸಿಸ್ಟಮ್ ಮೂಲಕವೇ ಬ್ಲ್ಯಾಕ್‌ಲಿಸ್ಟ್‌ಗೆ ಸೇರಿಸಿ ದಂಡ ವಿಧಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.
ಈ ಪ್ರಮುಖ ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್, ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್, ಅಪರ ಆಯುಕ್ತರಾದ ಕವಿತ ರಾಜಾರಾಮ್, ಲೋಖಂಡೆ ಸ್ನೇಹಲ್ ಸುಧಾಕರ್, ವೆಂಕಟ ಚಲಪತಿ ಸೇರಿದಂತೆ ಹಲವು ಜಂಟಿ ಆಯುಕ್ತರು, ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.






