• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಮಹಿಳಾ ಪ್ರಾತಿನಿಧ್ಯವೂ ಪಿತೃಪ್ರಧಾನ ವ್ಯವಸ್ಥೆಯೂ

ನಾ ದಿವಾಕರ by ನಾ ದಿವಾಕರ
September 30, 2023
in ಅಂಕಣ, ಅಭಿಮತ
0
ಮಹಿಳಾ ಪ್ರಾತಿನಿಧ್ಯವೂ ಪಿತೃಪ್ರಧಾನ ವ್ಯವಸ್ಥೆಯೂ
Share on WhatsAppShare on FacebookShare on Telegram

ಲಿಂಗ ಸೂಕ್ಷ್ಮತೆ ಮತ್ತು ಸ್ತ್ರಿ ಸಂವೇದನೆ ಇಲ್ಲದ ಸಮಾಜದಲ್ಲಿ ಸ್ತ್ರೀ ಸಮಾನತೆಯ ಆಶಾಕಿರಣ

ADVERTISEMENT

–ನಾ ದಿವಾಕರ

ಸ್ವಾತಂತ್ರ್ಯೋತ್ತರ ಭಾರತದ ಆರಂಭದ ದಿನಗಳಿಂದಲೂ ದೇಶದ ಮಹಿಳಾ ಸಂಕುಲ ಅಪೇಕ್ಷಿಸುತ್ತಿದ್ದ ಸಾಂಸ್ಥಿಕ ಸಬಲೀಕರಣದ ಒಂದು ಪ್ರಕ್ರಿಯೆ ಎಂದರೆ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವನ್ನು ನೀಡುವುದು. ಸಂವಿಧಾನ ರಚನೆಯ ಸಂದರ್ಭದಲ್ಲಿ ಈ ಕುರಿತ ಚರ್ಚೆಗಳು ನಡೆದಿದ್ದರೂ, ಅಂತಿಮ ಕರಡು ಸಿದ್ಧವಾದಾಗ ಈ ಅಂಶವು ಗಂಭೀರ ಪರಿಗಣನೆಗೆ ಬಂದಿರಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಮಹಿಳಾ ಪರ ಧೋರಣೆಯ ನಡುವೆಯೂ ಮಹಿಳೆಯರ ಸಮಾನ ಸಾಂವಿಧಾನಿಕ ಹಕ್ಕುಗಳನ್ನು ಕಾನೂನಾತ್ಮಕವಾಗಿ ಸಾಕಾರಗೊಳಿಸುವ ಪ್ರಯತ್ನಗಳು ನಡೆದಿದ್ದವೇ ಹೊರತು, ಚುನಾಯಿತ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಲಾಗಿಲ್ಲ. ಆಳುವ ವರ್ಗಗಳಿಗೆ ತಮ್ಮ ಈ ಬಾಧ್ಯತೆಯನ್ನು ನೆನಪಿಸಲು 25 ವರ್ಷಗಳೇ ಬೇಕಾಗಿದ್ದು ಸಮಕಾಲೀನ ಚರಿತ್ರೆಯ ಚೋದ್ಯ ಎನ್ನಬಹುದು.

1970ರಲ್ಲಿ ಭಾರತದಲ್ಲಿ ಉಗಮಿಸಿದ ಸ್ತ್ರೀ ಸಂವೇದನೆಯ ಧ್ವನಿಗಳು ಭಾರತದ ಪುರುಷ ಪ್ರಧಾನ ಸಮಾಜ ಮತ್ತು ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದು ವಾಸ್ತವ. ಭಾರತದಲ್ಲಿ ಮಹಿಳಾ ಚಳುವಳಿಯ ಉತ್ಕರ್ಷವನ್ನು ಕಂಡ ಈ ದಶಕದಲ್ಲೇ 1974ರಲ್ಲಿ ವೀಣಾ ಮಜುಂದಾರ್‌ ಮತ್ತು ಲೋತಿಕಾ ಸರ್ಕಾರ್‌ ಅವರ ನೇತೃತ್ವದಲ್ಲಿ ಮಂಡಿಸಲಾದ “ ಸಮಾನತೆಯ ಕಡೆಗೆ ” (Towards Equality) ವರದಿಯು ಭಾರತೀಯ ಸಮಾಜದಲ್ಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಿತಿಗತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸರ್ಕಾರದ ಮುಂದೆ ಮಂಡಿಸಿತ್ತು. ಲಿಂಗತ್ವದ ದೃಷ್ಟಿಕೋನದೊಂದಿಗೆ ಭಾರತೀಯ ಸಮಾಜದಲ್ಲಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಹಾಗೂ ಅಧಿಕಾರವಲಯದಲ್ಲಿ ಇರುವ ಲಿಂಗ ಭೇದ ಹಾಗೂ ತಾರತಮ್ಯಗಳನ್ನು ತೆರೆದಿಡುವಲ್ಲಿ ಈ ವರದಿ ಯಶಸ್ವಿಯಾಗಿತ್ತು. ಕಟು ವಾಸ್ತವ ಎಂದರೆ ಈ ವರದಿಯೇ ಭಾರತದ ಪಿತೃಪ್ರಧಾನ ಆಡಳಿತ ವ್ಯವಸ್ಥೆಯನ್ನು ಕೊಂಚ ಮಟ್ಟಿಗಾದರೂ ಜಾಗೃತಗೊಳಿಸಿತ್ತು.

ರಾಜಕೀಯ ಲೆಕ್ಕಾಚಾರದ ನಡುವೆ

ಇದರ ಮುಂದುವರಿಕೆಯಾಗಿ 1980ರ ದಶಕದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ಜಾರಿಗೆ ತರುವ ಪ್ರಯತ್ನಗಳು ನಡೆದಿದ್ದವು. ರಾಜೀವ್‌ ಗಾಂಧಿ ಅವರ ಆಡಳಿತಾವಧಿಯಲ್ಲಿ ರೂಪುಗೊಂಡ ಪಂಚಾಯತ್‌ ರಾಜ್‌ ವಿಧೇಯಕಕ್ಕೆ ಅನುಮೋದನೆ ದೊರೆಯದೆ ಹೋದರೂ 1992ರಲ್ಲಿ ನರಸಿಂಹರಾವ್‌ ಸರ್ಕಾರವು 73ನೆ ಸಂವಿಧಾನ ತಿದ್ದುಪಡಿಯ ಮೂಲಕ ಪಂಚಾಯತ್‌ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೆ ಒಂದರಷ್ಟು ಸ್ಥಾನಗಳನ್ನು ಮೀಸಲಿಡುವ ಕಾಯ್ದೆಯನ್ನು ಜಾರಿಗೊಳಿಸಿತ್ತು. ಈವರೆಗೂ 21 ರಾಜ್ಯಗಳಲ್ಲಿ ಪಂಚಾಯತ್‌ ಸಂಸ್ಥೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. 2020ರ ಒಂದು ಮಾಹಿತಿಯ ಅನುಸಾರ ಪಂಚಾಯತ್‌ ಸದಸ್ಯರ ಪೈಕಿ ಶೇ 46ರಷ್ಟು ಮಹಿಳೆಯರಿದ್ದಾರೆ.  ಇದೇ ವರದಿಯಲ್ಲಿ ಹೇಳುವಂತೆ 14 ಲಕ್ಷ 50 ಸಾವಿರ ಮಹಿಳೆಯರು ಪಂಚಾಯತ್‌ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ ಗಳಿಸಿದ್ದಾರೆ.

1996ರಲ್ಲಿ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿ ಸಂಸತ್ತಿನಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆ ಕಳೆದ 27 ವರ್ಷಗಳಿಂದಲೂ ಸಂಸತ್ತಿನ ಅಂಗಳದಲ್ಲಿ ನೆನೆಗುದಿಗೆ ಬಿದ್ದಿದ್ದು ಇದೀಗ 128ನೆಯ ಸಂವಿಧಾನ ತಿದ್ದುಪಡಿಯ ಮೂಲಕ “ ನಾರಿಶಕ್ತಿ ವಂದನ್‌ ಅಧಿನಿಯಮ ”ದ ಹೆಸರಿನಲ್ಲಿ ಉಭಯ ಸದನಗಳ ಅನುಮೋದನೆ ಪಡೆದಿದೆ. 1996ರ ನಂತರದ ವಾಜಪೇಯಿ ನೇತೃತ್ವದ ಎನ್‌ಡಿಎ ಆಳ್ವಿಕೆಯಲ್ಲಿ ಬೆಳಕು ಕಾಣದ ಈ ಮಸೂದೆ ಆನಂತರ 1999, 2002, 2003ರಲ್ಲೂ ಮಂಡನೆಯಾಗಿ ವಿಫಲವಾಗಿತ್ತು. 2008ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ 108ನೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸುವ ಪ್ರಯತ್ನ ಮಾಡಿತ್ತು. ಎಡಪಕ್ಷಗಳು, ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಒಮ್ಮತದ ಬೆಂಬಲದೊಂದಿಗೆ 2010ರಲ್ಲಿ ಈ ಮಸೂದೆಯು ಕೇಂದ್ರ ಸಚಿವ ಸಂಪುಟದ ಅಂಗೀಕಾರದ ನಂತರ ರಾಜ್ಯಸಭೆಯ ಅನುಮೋದನೆ ಪಡೆದಿತ್ತು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ, ಸುಷ್ಮಾ ಸ್ವರಾಜ್‌ ಮತ್ತು ಬೃಂದಾ ಕಾರಟ್‌ ಪರಸ್ಪರ ಕೈ ಹಿಡಿದು ಸಂಭ್ರಮಿಸಿದ್ದು ಸಂಸದೀಯ ಇತಿಹಾಸದ ಅವಿಸ್ಮರಣೀಯ ಪ್ರಸಂಗಗಳಲ್ಲಿ ಒಂದು. ಆದರೆ ಲೋಕಸಭೆಯಲ್ಲಿ ಬೆಂಬಲ ದೊರೆಯಲಿಲ್ಲ. ಈಗ ಬೆನ್ನುತಟ್ಟಿಕೊಳ್ಳುತ್ತಿರುವ ಹಲವು ರಾಜಕೀಯ ನಾಯಕರು ಆಗ ಮಸೂದೆಯನ್ನು ವಿರೋಧಿಸಿದ್ದು ವಾಸ್ತವ.

2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿಯನ್ನು ಸಾಕಾರಗೊಳಿಸುವ ಆಶ್ವಾಸನೆ ನೀಡಿ ಎರಡು ಅವಧಿಗಳನ್ನು ಪೂರೈಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (ಬಿಜೆಪಿ) ಸರ್ಕಾರ ತನ್ನ ಅಧಿಕಾರಾವಧಿಯ ಕೊನೆಯ ಹಂತದಲ್ಲಿ, 2024ರ ಮಹಾ ಚುನಾವಣೆಗಳಿಗೆ ಪೂರ್ವಭಾವಿಯಾಗಿ ಈ ಮಸೂದೆಯನ್ನು ಮಂಡಿಸಿದೆ. ಸಹಜವಾಗಿಯೇ ಉಭಯ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದರೆ ಈ “ ನಾರಿಶಕ್ತಿ ವಂದನ್‌ ಅಧಿನಿಯಮ” ವು ತಳಮಟ್ಟದಲ್ಲಿ ಜಾರಿಯಾಗಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯವನ್ನು ಸಾಕಾರಗೊಳಿಸಲು ಇನ್ನೂ ಕೆಲವು ವರ್ಷಗಳೇ ಬೇಕಾಗುತ್ತವೆ. ತಕ್ಷಣದಿಂದಲೇ ಅನುಷ್ಟಾನಗೊಳಿಸುವ ಸಂಭಾವ್ಯ ಸಾಧ್ಯತೆಗಳು ಇದ್ದುದೇ ಆದರೆ ಈ ಮಸೂದೆ 2024ರ ಚುನಾವಣೆಗಳಲ್ಲೇ ಅನುಷ್ಟಾನಗೊಳ್ಳಬಹುದಿತ್ತು. ಹಾಗೊಮ್ಮೆ ಸಾಧ್ಯತೆಗಳು ಇಲ್ಲವಾಗಿದ್ದಲ್ಲಿ ಅವಸರದಲ್ಲಿ ಮಂಡಿಸುವ ಅವಶ್ಯಕತೆ ಇರಲಿಲ್ಲ. ಇಲ್ಲಿ ಬಿಜೆಪಿಯ ಚುನಾವಣಾ ರಾಜಕಾರಣದ ಲಾಭನಷ್ಟ ಲೆಕ್ಕಾಚಾರಗಳು ಸ್ಪಷ್ಟವಾಗುತ್ತವೆ.

ಮಸೂದೆಯ ಸಂಭ್ರಮಾಚರಣೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿ ಮುಂಬರುವ ಪಂಚ ರಾಜ್ಯ ಚುನಾವಣೆಗಳಲ್ಲಿ ಮತ್ತು 2024ರಲ್ಲಿ ತನ್ನ ಮಹಿಳಾ ಪರ ಪೋಷಾಕು ಧರಿಸಲು ಈ ಮಸೂದೆಯನ್ನು ಕವಚವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗುತ್ತದೆ. ಖಂಡಿತವಾಗಿಯೂ ನಾರಿಶಕ್ತಿ ವಂದನ್‌ ಅಧಿನಿಯಮವು ಭಾರತದ ಮಹಿಳೆಯರಿಗೆ ಆಡಳಿತಾಧಿಕಾರದಲ್ಲಿ ಪ್ರಾತಿನಿಧ್ಯವನ್ನು ನೀಡುವ ಮೂಲಕ ಒಂದು ಹೊಸ ಹಾದಿಯನ್ನು ತೆರೆಯುತ್ತದೆ. ಆದರೆ ಈ ಅಧಿನಿಯಮವು ಕಾನೂನಾಗಿ ಅನುಷ್ಟಾನಗೊಂಡು, ಸಮಾಜದ ಕಟ್ಟಕಡೆಯ ಮಹಿಳೆಯನ್ನು ತಲುಪುವುದಕ್ಕೆ ಇನ್ನೂ ಎರಡು ಅಡ್ಡಗೋಡೆಗಳನ್ನು ದಾಟುವಂತೆ ಮಾಡಿರುವುದು ಯಾವ ಪುರುಷಾರ್ಥಕ್ಕಾಗಿ ? 2026ರಲ್ಲಿ ನಡೆಯಲಿರುವ ಜನಗಣತಿಯ ಅಂತಿಮ ದತ್ತಾಂಶಗಳು ಲಭ್ಯವಾಗಬೇಕಿದೆ. ತದನಂತರ ನಡೆಯುವ ಚುನಾವಣಾ ಕ್ಷೇತ್ರಗಳ ಮರುವಿಂಗಡನೆ ಅಥವಾ ಡಿ ಲಿಮಿಟೇಷನ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಈ ಎರಡೂ ಸಾಂವಿಧಾನಿಕ ಪ್ರಕ್ರಿಯೆಗಳು ನಿರ್ಣಾಯಕ ಅಂತ್ಯ ತಲುಪುವುದಕ್ಕೆ ಇಷ್ಟು ಕಾಲ ಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಅಥವಾ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕಾಲಮಿತಿಯನ್ನೂ ನಿಗದಿಪಡಿಸಿಲ್ಲ. ಹಾಗಾಗಿ ಈ ಎರಡೂ ಪ್ರಕ್ರಿಯೆಗಳು 2029ರ ವೇಳೆಗೂ ಪೂರ್ಣವಾಗದೆ ಹೋದರೆ ಮಹಿಳಾ ಪ್ರಾತಿನಿಧ್ಯದ ಕನಸು 2034ಕ್ಕೆ ವಿಸ್ತರಿಸುತ್ತದೆ. ಅಥವಾ ಇನ್ನೂ ಕನಸು ಕನಸಾಗಿಯೇ ಮುಂದುವರೆಯಬಹುದು.

ಸಂದಿಗ್ಧ ಪ್ರಶ್ನೆಗಳು ????

ಇಲ್ಲಿ ಎರಡು ಪ್ರಶ್ನೆಗಳು ಏಳುತ್ತವೆ. ಮೊದಲನೆಯದು ಜನಗಣತಿ ಮತ್ತು ಡಿ-ಲಿಮಿಟೇಷನ್‌ ಪೂರ್ವಷರತ್ತುಗಳು ವಾಸ್ತವವೇ ಆಗಿದ್ದಲ್ಲಿ ಈ ಎರಡೂ ಪ್ರಕ್ರಿಯೆಗಳನ್ನು ಶೀಘ್ರಗತಿಯಲ್ಲಿ ಪೂರೈಸುವ ಸಾಂವಿಧಾನಿಕ ನೈತಿಕತೆ ಸರ್ಕಾರಕ್ಕೆ ಇದೆಯೇ ? ಈ ಪ್ರಕ್ರಿಯೆಗಳ ಪೂರೈಕೆಗೆ ಕಾಲಮಿತಿ ನಿರ್ಧರಿಸಲಾಗಿದೆಯೇ ? ಇಲ್ಲವಾದಲ್ಲಿ ಮಹಿಳೆಯರು ಇನ್ನೂ ಎಷ್ಟು ವರ್ಷ ಕಾಯಬೇಕು ? ಎರಡನೆಯ ಪ್ರಶ್ನೆ ಎಂದರೆ ಈ ಎರಡೂ ಸಾಂವಿಧಾನಿಕ ಪ್ರಕ್ರಿಯೆಗಳು ಅವಶ್ಯಕ ಎಂದೇ ಭಾವಿಸಿದರೂ, ಕಳೆದ 9 ವರ್ಷಗಳಲ್ಲಿ ಸರ್ಕಾರ ಏಕೆ ವಿಧೇಯಕವನ್ನು ಮಂಡಿಸಲಿಲ್ಲ ? ನಾರಿಶಕ್ತಿಗೆ ವಂದಿಸಲು ಸರ್ಕಾರಕ್ಕೆ ಚುನಾವಣೆಗಳು ಹತ್ತಿರ ಬರಬೇಕಾದವೇ ? ಅಥವಾ ಮಹಿಳೆಯರ ಸಂಸದೀಯ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸುವುದಕ್ಕೂ ಚುನಾವಣಾ ರಾಜಕಾರಣಕ್ಕೂ ಸಂಬಂಧ ಇರುವುದೇ ? ಮಸೂದೆಯನ್ನು ಮಂಡಿಸುವಲ್ಲಿ ಆಗಿರುವ ವಿಳಂಬ ನಿಗೂಢವಾಗಿರುವಂತೆಯೇ ಮಂಡನೆಯೂ ನಿಗೂಢವೇ ಆಗಿದೆ.

ಮಹಿಳಾ ಮೀಸಲಾತಿಯು ಕಾನೂನಾತ್ಮಕವಾಗಿ ಜಾರಿಯಾಗುವ ಮುನ್ನ ಒಬಿಸಿ, ಅಲ್ಪಸಂಖ್ಯಾತ ಸಮುದಾಯಗಳ ಸಾಮಾಜಿಕ ನ್ಯಾಯದ ಪ್ರಶ್ನೆಯೂ ಉದ್ಭವಿಸುತ್ತದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಅನ್ವಯವಾಗುವ ಕಾಯ್ದೆಯು ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ತುಗಳಿಗೆ ಏಕೆ ಅನ್ವಯಿಸಕೂಡದು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಆಡಳಿತಾಧಿಕಾರದ ವ್ಯಾಪ್ತಿಯಲ್ಲಿ ಪ್ರಾತಿನಿಧ್ಯವನ್ನು ಕಲ್ಪಿಸುವುದೇ ಆದರೆ ಅದು ಎಲ್ಲ ಆಯಾಮಗಳನ್ನೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಪ್ರತಿ ಚುನಾವಣೆಯಲ್ಲೂ ಮಹಿಳೆಯರಿಗೆ ನಿಗದಿಪಡಿಸುವ ಮೂರನೆ ಒಂದರಷ್ಟು ಸ್ಥಾನವನ್ನು ರಾಜ್ಯಾವಾರು ಮಟ್ಟದಲ್ಲಿ ರೊಟೇಷನ್‌ ಪದ್ಧತಿಯ ಅನುಸಾರ ನಿರ್ಧರಿಸುವುದಾಗಿ ಮಸೂದೆಯಲ್ಲಿ ಹೇಳಲಾಗಿದೆ. ಈ ರೊಟೇಷನ್‌ ಪದ್ಧತಿಯನ್ನು ಈಗಿನ ಪಂಚಾಯತ್‌ ರಾಜ್‌ ಪದ್ಧತಿಯಲ್ಲಿರುವ ಮಾರ್ಗದಲ್ಲೇ ಅನುಸರಿಸಲಾಗುವುದೋ ಅಥವಾ ಪ್ರಾದೇಶಿಕ ಲಕ್ಷಣಗಳಿಗನುಗುಣವಾಗಿ ನಿರ್ಧರಿಸಲಾಗುವುದೋ ನಿರ್ಧರಿಸಬೇಕಿದೆ.

ಮಹಿಳಾ ಮೀಸಲಾತಿ ಮಸೂದೆಗೆ ಸಾಂವಿಧಾನಿಕ ಹೆಜ್ಜೆಗಳ ಸುದೀರ್ಘ ಇತಿಹಾಸ ಇರುವಂತೆಯೇ ಮಹಿಳಾ ಹೋರಾಟಗಳ ಇತಿಹಾಸವೂ ಇರುವುದನ್ನು ಎಲ್ಲ ರಾಜಕೀಯ ಪಕ್ಷಗಳೂ ಮನಗಾಣಬೇಕಿದೆ. ಮಹಿಳಾ ಸಬಲೀಕರಣದ ಪರಿಕಲ್ಪನೆಯನ್ನು ವೈಜ್ಞಾನಿಕ ಸಂಶೋಧನೆ ಮತ್ತು ಅಧ್ಯಯನಗಳ ಮೂಲಕ ಶ್ರೀಮಂತಗೊಳಿಸಿದ ಭಾರತದ ಮಹಿಳಾ ಚಳುವಳಿಯ ನಿರಂತರ ಹೋರಾಟ ಮತ್ತು ಹಕ್ಕೊತ್ತಾಯಗಳ ಮೂಲಕ ಪಡೆಯಲಾಗಿರುವ ಈ ಸಾಂವಿಧಾನಿಕ ಹಕ್ಕು ಯಾವುದೇ ರಾಜಕೀಯ ಪಕ್ಷದ ಕೊಡುಗೆಯಲ್ಲ. ಅಥವಾ ಭಾರತದ ಪಿತೃಪ್ರಧಾನ ಸಮಾಜ ಹಾಗೂ ಪುರುಷಾಧಿಪತ್ಯ ರಾಜಕಾರಣದ ಔದಾರ್ಯದ ಫಲವೂ ಅಲ್ಲ. ಹೊಸ ಮಸೂದೆಯನ್ನು ನಾರಿಶಕ್ತಿ ವಂದನೆ ಎಂಬ ರೋಚಕ ಹೆಸರಿನಿಂದ ಗುರುತಿಸಿದರೂ ಭಾರತದ ನಾರಿಯರು ಗೌರವ, ವಂದನೆ ಅಥವಾ ಆರಾಧನೆಯನ್ನು ಅಪೇಕ್ಷಿಸಿ ಈ ಮಸೂದೆಯನ್ನು ಸಂಭ್ರಮಿಸುವುದಿಲ್ಲ. ಬದಲಾಗಿ ತಮ್ಮ ಸಾಂವಿಧಾನಿಕ ಪ್ರಾತಿನಿಧ್ಯದ ಹಕ್ಕುಗಳನ್ನು ಅಧಿಕಾರ ಕೇಂದ್ರಗಳಲ್ಲಿ, ಶಾಸನ ಸಭೆಗಳ ಮೂಲಕ ಪ್ರತಿಪಾದಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಈ ಮಸೂದೆಯನ್ನು ಒಂದು ಅವಕಾಶ ಎಂದಷ್ಟೇ ಭಾವಿಸುತ್ತಾರೆ.

ನಮ್ಮದುನಮ್ಮದೆನ್ನುವ ಮುನ್ನ

“ ಈ ಮಸೂದೆ ನಮ್ಮದೇ ,,,,” ಎಂದು ಬೆನ್ನುತಟ್ಟಿಕೊಳ್ಳುತ್ತಿರುವ ಹಾಲಿ-ಮಾಜಿ-ಭವಿಷ್ಯದ ಪ್ರಧಾನಿಗಳಾಗಲೀ, ರಾಜಕೀಯ ಪಕ್ಷ-ನಾಯಕರಾಗಲೀ ಮನಗಾಣಬೇಕಾದ ಒಂದು ವಾಸ್ತವ ಎಂದರೆ ಇದು ಸ್ಥಾಪಿತ ಸಾಂಸ್ಥಿಕ ವ್ಯವಸ್ಥೆಯ ಬಳುವಳಿ ಅಲ್ಲ. 75 ವರ್ಷಗಳ ನಂತರವಾದರೂ ಇದು ಸಾಧ್ಯವಾಗುತ್ತಿದೆಯಲ್ಲಾ ಎಂಬ ನಿಟ್ಟುಸಿರಿನಲ್ಲೇ ನಮ್ಮ ಪಿತೃಪ್ರಧಾನತೆಯ ದರ್ಪದ ಹೆಜ್ಜೆಗಳನ್ನೂ ಕಾಣಬಹುದಲ್ಲವೇ ? ಅಥವಾ ಇದು ಯಾವುದೇ ಒಂದು ಪಕ್ಷ ಅಥವಾ ಸರ್ಕಾರ “ಮಹಿಳಾ ಸಬಲೀಕರಣದ” ದಿಟ್ಟ ಹೆಜ್ಜೆಯ ರೂಪದಲ್ಲಿ ನೀಡುತ್ತಿರುವ ಕೊಡುಗೆಯೂ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಗೂ ಸಮಾನ ಸಾಮಾಜಿಕ-ರಾಜಕೀಯ-ಆರ್ಥಿಕ ಅವಕಾಶಗಳು ಇರುವಂತೆಯೇ ಅಧಿಕಾರವಲಯದ ಆಡಳಿತ ವ್ಯವಸ್ಥೆಯಲ್ಲೂ ಸಮಾನತೆಯನ್ನು ಕಾಪಾಡುವುದು ಒಂದು ಸಮಾಜದ ನೈತಿಕ ಕರ್ತವ್ಯ. ಭಾರತದ ಸಂವಿಧಾನ ಪ್ರತಿ ಹೆಜ್ಜೆಯಲ್ಲೂ ಇದನ್ನೇ ಬಯಸುತ್ತದೆ. ಹಾಗಾಗಿ ಮಸೂದೆಯು ಕಾನೂನಾತ್ಮಕವಾಗಿ ಸಾಕಾರಗೊಂಡರೆ ಅದು ಭಾರತದ ನಾರಿಶಕ್ತಿಯ ಪ್ರಭಾವವಾಗಿ ಕಾಣಬೇಕಾಗುತ್ತದೆ.

ಶಾಸನಸಭೆಗಳಲ್ಲಿನ ಪ್ರಾತಿನಿಧ್ಯ ನಿರ್ವಹಣಾಧಿಕಾರದ ಸೂತ್ರಗಳನ್ನು ನಿಯಂತ್ರಿಸುವ ಒಂದು ಅಧಿಕಾರವನ್ನು ಮಹಿಳೆಯರಿಗೆ ನೀಡುತ್ತದೆ. ಆದರೆ ನಾರಿಶಕ್ತಿಗೆ ನಾವು ವಂದಿಸುತ್ತಿರುವ ಸಂದರ್ಭದಲ್ಲೇ ದಿನನಿತ್ಯ ಕಾಣುತ್ತಿರುವ ಮಹಿಳಾ ದೌರ್ಜನ್ಯಗಳಿಗೆ ಇದು ಅಂತ್ಯ ಹಾಡಲು ಸಾಧ್ಯವೇ ? ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ, ಅರೆಬೆತ್ತಲೆಯಾಗಿ ಬೀದಿ ಪಾಲಾಗಿರುವ ಘಟನೆ ನಮ್ಮ ಸಾಂವಿಧಾನಿಕ ನೈತಿಕತೆಗೇ ಸವಾಲಿನಂತೆ ಕಾಣುವುದಿಲ್ಲವೇ ? ಮಣಿಪುರದ ಬೆತ್ತಲೆ ಮೆರವಣಿಗೆ, ಕುಸ್ತಿಪಟುಗಳ ಬವಣೆ ಮತ್ತಿತರ ಇಂತಹ ಘಟನೆಗಳನ್ನು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸುವ ಧೋರಣೆ ಇರುವ ಪುರುಷಾಧಿಪತ್ಯದ ಆಡಳಿತ ವ್ಯವಸ್ಥೆ ಮೂರನೆ ಒಂದರಷ್ಟು ಮಹಿಳೆಯರ ಉಪಸ್ಥಿತಿಯಲ್ಲಿ ಭಿನ್ನವಾಗಿರಲು ಸಾಧ್ಯವೇ ? ಏಕೆಂದರೆ ಆಗಲೂ ಪುರುಷ ಸಮಾಜಕ್ಕೆ ಸ್ಪಷ್ಟ ಬಹುಮತ ಇದ್ದೇ ಇರುತ್ತದೆ ಅಲ್ಲವೇ ? ಹೆಚ್ಚೆಂದರೆ ಮಹಿಳಾ ಪ್ರಾತಿನಿಧ್ಯದ ಬಲದಿಂದ ಆಡಳಿತಾರೂಢ ಸರ್ಕಾರವನ್ನು ಸೂಕ್ತ ನೀತಿ ರೂಪಿಸಲು ಅಥವಾ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಮಣಿಸಬಹುದು.

ಮಸೂದೆ ನಮ್ಮದೇ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವ ಪಕ್ಷಗಳು ಎಷ್ಟು ಚುನಾವಣೆಗಳಲ್ಲಿ ಕನಿಷ್ಠ ಶೇ 20ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಿವೆ ? ಅಥವಾ ಮುಂಬರುವ ಚುನಾವಣೆಗಳಲ್ಲಿ ಮಸೂದೆ ಇಲ್ಲದಿದ್ದರೂ ಮೂರನೆ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಲು ಆಶ್ವಾಸನೆ ನೀಡಲು ತಯಾರಾಗಿವೆ ? ಪೂರ್ವಭಾವಿಯಾಗಿ ಈಗಲೂ 2024ರ ಚುನಾವಣೆಗಳಲ್ಲಿ ಇದನ್ನು ಕಡ್ಡಾಯಗೊಳಿಸಬಹುದಿತ್ತಲ್ಲವೇ ? ಮಹಿಳಾ ಸಬಲೀಕರಣ ಎಂದರೆ ಕೇವಲ ಸಾಮಾಜಿಕ-ರಾಜಕೀಯ ಸ್ಥಾನಮಾನ ಅಥವಾ ಅಧಿಕಾರ ರಾಜಕಾರಣದ ಪಾಲುದಾರಿಕೆ ಮಾತ್ರ ಅಲ್ಲ. ತಳಮಟ್ಟದ ಸಮಾಜದಲ್ಲಿ ದಿನನಿತ್ಯ ತಾರತಮ್ಯ, ದೌರ್ಜನ್ಯ, ಅತ್ಯಾಚಾರ, ಬಹಿಷ್ಕಾರ, ಮರ್ಯಾದೆಗೇಡು ಹತ್ಯೆಗಳಿಗೆ ಬಲಿಯಾಗುತ್ತಿರುವ ಸಾವಿರಾರು ಮಹಿಳೆಯರ ದೃಷ್ಟಿಯಲ್ಲಿ “ ಸಬಲೀಕರಣ ” ಎಂಬ ಪದವು ಕಡಲಾಳದ ವ್ಯಾಪ್ತಿ ಹೊಂದಿರುತ್ತದೆ.

ಘನತೆ-ಆತ್ಮಾಭಿಮಾನದ ಪ್ರಶ್ನೆ

ಹೆಣ್ತನದ ಘನತೆ ಮತ್ತು ಹೆಣ್ಣು ಕುಲದ ಆತ್ಮಗೌರವವನ್ನು ದಿನನಿತ್ಯ ಬೀದಿಪಾಲು ಮಾಡುತ್ತಿರುವ ಒಂದು ಪಿತೃಪ್ರಧಾನ ಸಮಾಜದಿಂದ ಭಾರತದ ಮಹಿಳೆಯರು ನಾರಿಶಕ್ತಿ ವಂದನೆಯನ್ನೋ ಅಥವಾ ಆರಾಧನಾಭಾವದ ಮನ್ನಣೆಯನ್ನೋ ಅಪೇಕ್ಷಿಸುವುದಿಲ್ಲ. ಇದನ್ನೂ ಮೀರಿದಂತೆ ತಮ್ಮ ಘನತೆ ಗೌರವಗಳನ್ನು ಕಾಪಾಡುವಂತಹ ಒಂದು ಸಂವೇದನಾಶೀಲ, ಲಿಂಗ ಸೂಕ್ಷ್ಮತೆಯ ಸಮಾಜವನ್ನು ನಿರೀಕ್ಷಿಸುತ್ತಾರೆ. ಇದು ಕೇವಲ ಶಾಸನಸಭೆಗಳಲ್ಲಿ ನಿರ್ಧರಿಸಲ್ಪಡುವುದಿಲ್ಲ. ಹಾಗಾಗಿದ್ದರೆ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಸಂಸದರಾಗಿ ಇನ್ನೂ ಮುಂದುವರೆಯುತ್ತಿರಲಿಲ್ಲ. ಅಥವಾ ಅತ್ಯಾಚಾರದ ಆರೋಪಿಗಳು ಸನ್ಮಾನಿಸಲ್ಪಡುತ್ತಿರಲಿಲ್ಲ. ರಾಜಕೀಯ ಅಧಿಕಾರದ ಅವಕಾಶಗಳನ್ನು ಹೆಚ್ಚಿಸುವ ಮೀಸಲಾತಿಯಂತಹ ಸಾಂವಿಧಾನಿಕ ಕ್ರಮಗಳು ಮಹಿಳೆಯರ ಕೈಗೆ ಸಾಂವಿಧಾನಿಕ ಅಸ್ತ್ರಗಳನ್ನು ನೀಡುತ್ತವೆ. ಆದರೆ ಈ ಅಸ್ತ್ರಗಳನ್ನು ಮುಕ್ತವಾಗಿ ಬಳಸುವ ಧೀಶಕ್ತಿ ಮೂಡಬೇಕಾದರೆ, ತಳಮಟ್ಟದಿಂದಲೂ ಸಮಾಜದಲ್ಲಿ ಲಿಂಗ ಸೂಕ್ಷ್ಮತೆಯ ನೆಲೆಗಳನ್ನು ಗಟ್ಟಿಗೊಳಿಸಬೇಕಾಗುತ್ತದೆ. ಪುರುಷ ಸಮಾಜವನ್ನು ಸಂವೇದನಾಶೀಲಗೊಳಿಸುವ, ಲಿಂಗತಾರತಮ್ಯಗಳನ್ನು ಕೊನೆಗೊಳಿಸುವ ಉಪಕ್ರಮಗಳು ಅವಶ್ಯವಾಗುತ್ತವೆ.

ಈ ಉಪಕ್ರಮಗಳಿಗೆ ಅಡ್ಡಿಯಾಗುವ ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯಗಳನ್ನು, ಸಾಂಸ್ಕೃತಿಕ ಕಟ್ಟುಪಾಡುಗಳನ್ನು ಧಿಕ್ಕರಿಸುವ ಮನಸ್ಥಿತಿಯನ್ನು ದೇಶದ ಯುವ ಮಹಿಳಾ ಸಮೂಹದಲ್ಲಿ ಸೃಷ್ಟಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಅಗತ್ಯವಾದ ಶೈಕ್ಷಣಿಕ ಅವಕಾಶಗಳನ್ನು ಹೆಚ್ಚಿಸಬೇಕಾಗುತ್ತದೆ. ಆದರೆ ನವ ಉದಾರವಾದದ ಮಾರುಕಟ್ಟೆ ಬಂಡವಾಳಶಾಹಿ ಹಾಗೂ ಸಾಂಸ್ಕೃತಿಕ ರಾಜಕಾರಣದ ಸಾಂಪ್ರದಾಯಿಕ ಶಕ್ತಿಗಳು ಇಲ್ಲಿ ದಿಕ್ಕುತಪ್ಪಿಸಲು ಸಜ್ಜಾಗಿರುತ್ತವೆ. ಮಣಿಪುರದ ಮೌನ ಇದನ್ನೇ ಸೂಚಿಸುತ್ತದೆ. ಸ್ತ್ರೀ ಸಂವೇದನೆ ಇಲ್ಲದೆ ಸ್ತ್ರೀ ದ್ವೇಷವನ್ನು ಹೋಗಲಾಡಿಸಲಾಗುವುದಿಲ್ಲ, ಪಿತೃಪ್ರಧಾನ ಆಳ್ವಿಕೆಯಲ್ಲಿ ಈ ಎರಡೂ ಪರಸ್ಪರ ಎದುರಾಗುತ್ತವೆ. ಈ ಮುಖಾಮುಖಿಯ ನಡುವೆಯೆ ಸಮಾಜದೊಳಗಿನ ಸೂಕ್ಷ್ಮ ಸಂವೇದನೆಯ ಮನಸುಗಳನ್ನು ಉತ್ತೇಜಿಸುವ ಮೂಲಕ ಲಿಂಗಭೇದದ ನೆಲೆಗಳನ್ನು ಕೊನೆಗೊಳಿಸುವತ್ತ ಭಾರತ ಮುನ್ನಡೆಯಬೇಕಿದೆ. ಮಹಿಳಾ ಹೋರಾಟಗಳು ಈ ಮಾರ್ಗದಲ್ಲಿಯೇ ಸಾಗಿ ಬಂದಿವೆ.

ಸದ್ಯದ ಪರಿಸ್ಥಿತಿಯಲ್ಲಿ ಮತ್ತೊಂದು ಸುಂದರ ಮಾಯಾಜಿಂಕೆಯಂತೆಯೇ ಕಾಣುವ ಮಹಿಳಾ ಮೀಸಲಾತಿ ಎಂಬ ಸಾಂವಿಧಾನಿಕ ನಡೆ ತನ್ನ ಅಂತಿಮ ಗುರಿ ತಲುಪಲು ಕನಿಷ್ಠ 15 ವರ್ಷಗಳಾದರೂ ಬೇಕಾಗುತ್ತದೆ ಎಂಬ ತಜ್ಞರ ಅಭಿಪ್ರಾಯವನ್ನು ಕೊಂಚ ಅತಿರೇಕ ಎಂದು ಭಾವಿಸಿದರೂ, ಈ ಸಾಂವಿಧಾನಿಕ ಅವಕಾಶದ ಬಾಗಿಲು ತೆರೆಯುವ ವೇಳೆಗೆ ಬಾಹ್ಯ ಸಮಾಜದಲ್ಲಿ ಲಿಂಗ ಸೂಕ್ಷ್ಮತೆ ಮತ್ತು ಸ್ತ್ರೀ ಸಂವೇದನೆಯ ನೆಲೆಗಳನ್ನು ಗಟ್ಟಿಗೊಳಿಸುವುದು ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕಿದೆ. ಪಿತೃಪ್ರಧಾನ ವ್ಯವಸ್ಥೆಯ ಬೇರುಗಳನ್ನು ಕಿತ್ತೊಗೆಯದೆ ಹೋದರೆ ಇದು ಸಾಧ್ಯವಾಗುವುದಿಲ್ಲ. ಮಹಿಳಾ ಮೀಸಲಾತಿ ಇದನ್ನು ಸಾಧ್ಯವಾಗಿಸಲು ನೆರವಾಗುವ ಒಂದು ಸಾಂವಿಧಾನಿಕ ಅಸ್ತ್ರವೇ ಹೊರತು, ಯಾವುದೇ ರಾಜಕೀಯ ಪಕ್ಷಗಳ ಚುನಾವಣಾ ಬತ್ತಳಿಕೆಯಲ್ಲಿರುವ ಬಾಣಗಳಲ್ಲ. ಹಾಗಾಗಲು ಬಿಡಲೂಬಾರದು. ಈ ವಾಸ್ತವವನ್ನು ಮನಗಾಣುತ್ತಲೇ ದೇಶದ ನಾರಿಘನತೆಯೊಡನೆ ನಿಲ್ಲೋಣ.

–ನಾ ದಿವಾಕರ

Tags: Narishakti Vandan ActWomenWomen Empowerment
Previous Post

ಆತಂಕ ಹುಟ್ಟಿಸಿದ ನಟ ಜಗ್ಗೇಶ್ ಪೋಟೋಸ್:  ದಿಢೀರ್ ಆಸ್ಪತ್ರೆಗೆ ದಾಖಲು..!

Next Post

ನಾರಿಶಕ್ತಿ’ಗೆ ರಾಷ್ಟ್ರಪತಿಗಳ ಅಂಕಿತ.. ಚುನಾವಣೆ ಗಿಮಿಕ್ಕಾ..? ಇಚ್ಛಾಶಕ್ತಿನಾ..?

Related Posts

Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
0

ಬಹು ನಿರೀಕ್ಷಿತ ಈ ಚಿತ್ರ ಗಣಪತಿ ಹಬ್ಬದ ವೇಳೆ ತೆರೆಗೆ ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Dynamic Prince Prajwal Devaraj) ಅವರ ಹುಟ್ಟುಹಬ್ಬ....

Read moreDetails

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

July 3, 2025

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

July 3, 2025

S/o Muttanna Kannada Movi: ಅಪ್ಪ-ಮಗನ ಬಾಂಧವ್ಯಧ ಬಹು ನಿರೀಕ್ಷಿತ “S\O ಮುತ್ತಣ್ಣ” ಚಿತ್ರ ಆಗಸ್ಟ್ 22 ತೆರೆಗೆ.

July 3, 2025
Next Post
ನಾರಿಶಕ್ತಿ’ಗೆ ರಾಷ್ಟ್ರಪತಿಗಳ ಅಂಕಿತ.. ಚುನಾವಣೆ ಗಿಮಿಕ್ಕಾ..? ಇಚ್ಛಾಶಕ್ತಿನಾ..?

ನಾರಿಶಕ್ತಿ’ಗೆ ರಾಷ್ಟ್ರಪತಿಗಳ ಅಂಕಿತ.. ಚುನಾವಣೆ ಗಿಮಿಕ್ಕಾ..? ಇಚ್ಛಾಶಕ್ತಿನಾ..?

Please login to join discussion

Recent News

Top Story

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

by ಪ್ರತಿಧ್ವನಿ
July 4, 2025
Top Story

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

by Chetan
July 4, 2025
Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 
Top Story

Siddaramaiah: ದೇವನಹಳ್ಳಿಯಲ್ಲಿ ಭೂಸ್ವಾದೀನಕ್ಕೆ ರೈತರ ತೀವ್ರವ ವಿರೋಧ – ಮನವೊಲಿಸಲು ಮುಂದಾದ ಸಿಎಂ ಸಿದ್ದು 

by Chetan
July 4, 2025
ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 
Top Story

ಸ್ವಯಂ ನಿವೃತ್ತಿಯಿಂದ ಹಿಂದೆ ಸರಿಯಲ್ಲ – ಸಿಎಂ ಮನವೊಲಿಸಿದ್ರೂ ಒಪ್ಪದ ASP ನಾರಾಯಣ ಭರಮನಿ ..! 

by Chetan
July 4, 2025
ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Prajwal Devaraj: ಪೋಸ್ಟರ್ ರಿಲೀಸ್ ಮಾಡಿ ಪ್ರಜ್ವಲ್ ದೇವರಾಜ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ “ಮಾಫಿಯಾ” ಚಿತ್ರತಂಡ

July 4, 2025

Darshan: ಚಾಮುಂಡಿ ತಾಯಿಯ ದರ್ಶನ ಪಡೆದ ದರ್ಶನ್ ದಂಪತಿ – ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ದಚ್ಚು ಭಾಗಿ 

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada