‘ಸ್ತ್ರೀ ಎನ್ನುವ ಶಕ್ತಿ’ ಪ್ರಕೃತಿಗೆ ಸಮಾನಳು. ಮಾನವ ಏನನ್ನೇ ಸಾಧಿಸಿದರೂ ಪ್ರಕೃತಿ ಎದುರು ಮಾನವನ ಶಕ್ತಿ ನಗಣಗ್ಯ. ಅದೇ ರೀತಿ ಪುರುಷ ಅದೆಷ್ಟೇ ಬಲಾಢ್ಯನಾದರೂ ಸ್ತ್ರೀ ಶಕ್ತಿ ಎದುರು ತುಸು ಕಡಿಮೆಯೇ ಎನಿಸುತ್ತದೆ. ಇದಕ್ಕೆ ಕಾರಣ ಭಾರತದಲ್ಲಿ ದೇಶ ರಕ್ಷಣೆ ಕೆಲಸಕ್ಕೆ ಮಹಿಳಾ ಮಣಿಗಳ ಸೇನೆ ಸದ್ದಿಲ್ಲದೆ ಸಜ್ಜಾಗುತ್ತಿದೆ. ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ತರಬೇತಿ ನಡೆಯುತ್ತಿದೆ ಎನ್ನುವುದು ನಮ್ಮ ಕರ್ನಾಟಕದ ಹೆಮ್ಮೆ. ಬೆಂಗಳೂರಿನ ನೀಲಸಂದ್ರದಲ್ಲಿರುವ ಮಿಲಿಟರಿ ಕ್ಯಾಂಪಸ್ನಲ್ಲಿ ಮಾರ್ಚ್ 1 ರಿಂದ ತರಬೇತಿ ಶುರುವಾಗಿದ್ದು ಬರೋಬ್ಬರಿ 31 ವಾರಗಳ ತರಬೇತಿ ನಡೆಯಲಿದೆ ಎನ್ನಲಾಗಿದೆ. ಸೇನಾ ಪ-ಡೆಗೆ ಹೇಗೆ ಕಠಿಣ ತರಬೇತಿ ನೀಡಲಾಗುತ್ತದೆ ಅದೇ ರೀತಿಯಲ್ಲಿ 4 ವರ್ಷದ ಅಗ್ನಿವೀರ್ ಪಡೆಗೂ ಕಠಿಣ ತರಬೇತಿ ನೀಡಲಾಗ್ತಿದೆ.

ಎರಡೂವರೆ ಲಕ್ಷ ಜನರಲ್ಲಿ ಆಯ್ಕೆಯಾದ ಕನ್ನಡತಿ..!
ಮಿಲಿಟರಿ ಪೊಲೀಸ್ ಪಡೆಗೆ ಮಹಿಳಾ ಪಡೆಯನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಅರ್ಜಿ ಆಹ್ವಾನ ಮಾಡಿದ್ದು, ದೇಶಾದ್ಯಂತ ಎರಡೂವರೆ ಲಕ್ಷ ಮಂದಿ ಸೇನೆಗೆ ಸೇರುವುದಕ್ಕೆ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 100 ಜನರ ತಂಡವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ಆ ನೂರು ಜನ ಮಹಿಳಾ ಸೇನಾಪಡೆಯಲ್ಲಿ ಕರ್ನಾಟಕದಿಂದ ಒಬ್ಬಳೇ ಒಬ್ಬಳು ಯುವತಿ ಆಯ್ಕೆಯಾಗಿದ್ದಾಳೆ ಎನ್ನುವುದು ಸದ್ಯಕ್ಕೆ ಹೆಮ್ಮೆ ಪಡುವ ಸಂಗತಿಯಾಗಿದೆ. ಉಡುಪಿ ಜಿಲ್ಲೆ ಕುಂದಾಪುರದ ಶ್ರೀದೇವಿ ಮೊದಲ ಮಹಿಳಾ ಸೇನಾಪಡೆಯಲ್ಲಿ ಸ್ಥಾನ ಪಡೆದುಕೊಂಡಿದ್ದು, ದೇಶ ಸೇವೆ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗುವ ಕಾಲ ಬಂದಿದೆ. ನಾನು ನಾಲ್ಕು ವರ್ಷ ಮಾತ್ರವಲ್ಲ, ಒಟ್ಟು 35 ವರ್ಷ ಸೇವೆ ಮಾಡ್ತೇನೆ ಎನ್ನುವ ಮೂಲಕ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾಪಟುಗಳು, ಎನ್’ಸಿಸಿ ಕೆಡೆಟ್ಗಳಿಗೆ ಅವಕಾಶ..!
ಕೇಂದ್ರ ಸರ್ಕಾರ 4 ವರ್ಷಗಳಿಗೆ ಮಾತ್ರ ಅಗ್ನಿವೀರ್ ಎನ್ನುವ ಸೇನಾಪಡೆಯನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. 4 ವರ್ಷಗಳ ಬಳಿಕ ಎಲ್ಲರಿಗೂ ಒಂದು ನಿವೃತ್ತ ಪ್ಯಾಕೇಜ್ ಕೊಟ್ಟು ವಾಪಸ್ ಕಳಿಸಲಾಗುತ್ತದೆ. ಪ್ರತಿವರ್ಷ ನೇಮಕಾತಿ ಹಾಗು ನಿವೃತ್ತಿ ನಡೆಯುತ್ತಿರುತ್ತದೆ. ಒಂದು ವೇಳೆ ಸೇನಾ ತರಬೇತಿ ಹಾಗು ಮುಂದಿನ ನಾಲ್ಕು ವರ್ಷಗಳ ಕಾಲ ಉತ್ತಮ ಪ್ರದರ್ಶನ, ಚಾಕಚಕ್ಯತೆ, ವೃತ್ತಿಯಲ್ಲಿ ಗುರುತಿಸಬಹುದಾದ ಕಾರ್ಯಗಳನ್ನು ಮಾಡಿದ ಶೇಕಡ 25 ರಷ್ಟು ಜನರನ್ನು ಮುಖ್ಯ ಸೇನಾಪಡೆಗೆ ಮುಂದುವರಿಸಲಾಗುತ್ತದೆ.

ಇದೇ ಕನಸನ್ನು ಹೊತ್ತು ಭಾರತಾಂಬೆಯ ಸೇವೆಗೆ ನಾ ಮುಡಿಪು ಎಂದಿದ್ದಾಳೆ ಕುಂದಾಪುರದ ಹೆಣ್ಣು ಮಗಳು, ಹೆಮ್ಮಯ ಕನ್ನಡತಿ ಶ್ರೀದೇವಿ. ಎರಡೂವರೆ ಲಕ್ಷ ಜನರಲ್ಲಿ ಕೇವಲ 100 ಜನರನ್ನು ಆಯ್ಕೆ ಮಾಡಿರುವ ಕೇಂದ್ರ ಸರ್ಕಾರ ಕ್ರೀಡಾಪಟುಗಳು, ಎನ್ಸಿಸಿ ಕೆಡೆಟ್ಗಳಿಗೆ ಅವಕಾಶ ಕಲ್ಪಿಸಿದೆ. ಶ್ರೀದೇವಿ ಕೂಡ ಕ್ರೀಡಾಪಟು.
ಸರ್ಕಾರಿ ಶಾಲೆಯಲ್ಲೇ ಓದಿದ ಗಟ್ಟಿಗಿತ್ತಿ ಶ್ರೀವಿದ್ಯ..!

ಉಡುಪಿ ಜಿಲ್ಲೆ ಕುಂದಾಪುರದ ಶ್ರೀದೇವಿ, ಕೃಷಿಕರಾದ ತಂದೆ, ತಾಯಿಗೆ ಒಬ್ಬಳೇ ಮಗಳು. ಪ್ರಾಥಮಿಕ ಹಾಗು ಪ್ರೌಢಶಾಲೆಯನ್ನು ಸರ್ಕಾರಿ ಶಾಲೆಯಲ್ಲಿ ಓದಿದ ಶ್ರೀದೇವಿ, ಕ್ರೀಡಾ ಕೋಟಾದಲ್ಲಿ ಆಳ್ವಾಸ್ನಲ್ಲಿ ಪಿಯು ಮುಗಿಸಿದ್ರು. ಆ ಬಳಿಕ ಬಿಕಾಂ ವಿದ್ಯಾಭ್ಯಾಸವನ್ನು ಬಂಡರ್ಕರ್ ಕಾಲೇಜಿನಲ್ಲಿ ಓದಿ, ಕೆಎಎಸ್ ಹುದ್ದೆಯ ಕನಸು ಕಾಣ್ತಿದ್ದವರು. ಇದೀಗ ದೇಶಸೇವೆ ಮಾಡಲು ಸಿಕ್ಕ ಅವಕಾಶವನ್ನು ಕೆಚ್ಚೆದೆಯಿಂದ ಸ್ವೀಕಾರ ಮಾಡಿ, ಕಠಿಣ ತರಬೇತಿಯಲ್ಲಿ ತಲ್ಲೀನರಾಗಿದ್ದಾರೆ. ನುರಿತ ಹಾಗು ಹಿರಿಯ ಸೇನ ಅಧಿಕಾರಿಗಳು ಯುವತಿಯರ ಪಡೆಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಫಿಸಿಕಲ್ ಫಿಟ್ನೆಸ್, ಆರ್ಮ್ ಟ್ರೈನಿಂಗ್, ಡಿಸಿಪ್ಲಿನ್ ಬಗ್ಗೆ ತರಬೇತಿ ನೀಡಲಾಗ್ತಿದೆ. ಮುಂದಿನ ಏಳೂವರೆ ತಿಂಗಳ ತರಬೇತಿ ಬಳಿಕ ಸೇನಾಪಡೆಗೆ ಸೇರ್ಪಡೆ ಆಗಲಿದ್ದಾರೆ. ಕಂದನನ್ನು ಎತ್ತಿ ಆಡಿಸುವ ಹೆಣ್ಣು ಇದೀಗ ಭಾರತಾಂಬೆಯ ರಕ್ಷಣೆಗೂ ಟೊಂಕಕಟ್ಟಿ ನಿಂತಿದ್ದು ಸಾಧನೆಯೇ ಸರಿ.







