ಮಧ್ಯಪ್ರದೇಶ : ಆಂಜನೇಯ ದೇವರ ಫೋಟೋದ ಎದುರು ಮಹಿಳಾ ದೇಹದಾರ್ಢ್ಯ ಪಟುಗಳು ಬಿಕಿನಿ ಧರಿಸಿ ಫೋಟೋಗೆ ಪೋಸ್ ನೀಡಿದ ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಘ್ರಾಸವಾಗಿದೆ. ಮಧ್ಯಪ್ರದೇಶದ ರತ್ಲಾಮ್ನಲ್ಲಿ ಬಿಜೆಪಿಯು ಮಹಿಳಾ ಬಾಡಿಬಿಲ್ಡರ್ಗಳ ದೇಹದಾರ್ಡ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಇದೇ ವಿಚಾರವಾಗಿ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ .
ಮಾರ್ಚ್ 4 ಹಾಗೂ 5ರಂದು 13ನೇ ಮಿಸ್ಟರ್ ಜ್ಯೂನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಹಿಳಾ ದೇಹದಾರ್ಢ್ಯ ಪಟುಗಳು ಆಂಜನೇಯದ ಫೋಟೋದ ಎದುರು ಪೋಸ್ ನೀಡಿದ್ದರು. ಈ ಫೋಟೋ ವೈರಲ್ ಆದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ದೇಹದಾರ್ಢ್ಯ ಸ್ಪರ್ಧೆ ನಡೆದ ಸ್ಥಳ ಹಾಗೂ ಆಂಜನೇಯನ ಫೋಟೋಗೆ ಗಂಗಾಜಲವನ್ನು ಸಿಂಪಡಿಸುವ ಮೂಲಕ ಆಕ್ರೋಶ ಹೊರ ಹಾಕಿದೆ. ಇದರ ಜೊತೆಯಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆದ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಶುದ್ಧೀಕರಣ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಬಾಡಿ ಬಿಲ್ಡಿಂಗ್ ಸ್ಪರ್ಧೆಯ ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ಮೇಯರ್ ಪ್ರಹ್ಲಾದ್ ಪಟೇಲ್, ಶಾಸಕ ಚೈತನ್ಯ ಕಶ್ಯಪ್ ಹೆಸರು ಮುದ್ರಿಸಲಾಗಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಆಂಜನೇಯ ಫೋಟೋದ ಮಹಿಳಾ ಬಾಡಿ ಬಿಲ್ಡರ್ಗಳು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಇದು ಹಿಂದೂ ದೇವರಿಗೆ ಬಿಜೆಪಿ ಮಾಡಿದ ಅವಮಾನವಲ್ಲವೇ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡ್ತಿದ್ದಾರೆ.