ಬೆಂಗಳೂರು :ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಸ್ವೀಕರಿಸಲು ಹೋಗಿ ಪ್ರಶಾಂತ್ ಮಾಡಾಳ್ ಸಿಕ್ಕಿಬಿದ್ದ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಳೆದ ಆರು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಶಾಸಕನ ಪತ್ತೆಗೆ ಲೋಕಾಯುಕ್ತ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಎಲ್ಲದರ ನಡುವೆ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವನೆ ಮಾಡಿದ್ದು ಇದು ಸಾಕಷ್ಟು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಕೇವಲ ನಾಲ್ಕು ದಿನಗಳ ಅಂತರದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರು ಲೋಕಾಯುಕ್ತ ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಿದ್ಯಾಕೆ ಎಂಬ ಸಂಶಯ ವ್ಯಕ್ತವಾಗಿದೆ. ಒಂದು ಕಡೆ ಪ್ರಶಾಂತ್ ಮಾಡಾಳ್ ನ್ಯಾಯಾಂಗ ಬಂಧನದಲ್ಲಿದ್ದರೆ ಇತ್ತ ಕೆಎಸ್ಡಿಎಲ್ಗೆ ರಾಜೀನಾಮೆ ನೀಡಿರುವ ವಿರೂಪಾಕ್ಷಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆಯಾಗಿದ್ದಾರೆ. ಪ್ರಕರಣ ನಡೆದು ಆರು ದಿನಗಳವರೆಗೂ ಇನ್ನೂ ಮಾಡಾಳು ವಿರೂಪಾಕ್ಷಪ್ಪನನ್ನು ಬಂಧಿಸದೇ ಇರೋದು ಸಹ ಅನುಮಾನಕ್ಕೆ ಎಡೆ ಮಾಡಿದೆ.
ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಕಾರ್ಯಾದೇಶವನ್ನು ನೀಡಲು ಗುತ್ತಿಗೆದಾರರಿಗೆ 80 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದ ಮಾಡಾಳು ವಿರೂಪಾಕ್ಷಪ್ಪ ಪರವಾಗಿ 40 ಲಕ್ಷ ರೂಪಾಯಿ ಲಂಚ ಸ್ವೀಕರಿಸಲು ಕ್ರೆಸೆಂಟ್ ರಸ್ತೆಯಲ್ಲಿರುವ ಖಾಸಗಿ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರಿಗೆ ಪ್ರಶಾಂತ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಸಂಬಂಧ DySP ಪ್ರಮೋದ್ ಕುಮಾರ್, ಇನ್ಸ್ಪೆಕ್ಟರ್ ಕುಮಾರಸ್ವಾಮಿಯವರನ್ನು ಜಾಗಕ್ಕೆ DySP ಆಂಥೋನಿ ಜಾನ್, ಇನ್ಸ್ಪೆಕ್ಟರ್ ಬಾಲಾಜಿ ಬಾಬುರನ್ನು ನೇಮಕ ಮಾಡಲಾಗಿದೆ.