ದೇಶಾದ್ಯಂತ 2024ಕ್ಕೆ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ( parliament election ) ಕರ್ನಾಟಕದ ( Karnataka ) 28 ಲೋಕಸಭಾ ( Loksabha) ಕ್ಷೇತ್ರಗಳ ಪೈಕಿ ಕನಿಷ್ಠಪಕ್ಷ 20ರಲ್ಲಿ ಜಯ ಗಳಿಸುವ ಬಗ್ಗೆ ರಾಜ್ಯದಲ್ಲಿ ಆಡಳಿತದಲ್ಲಿರುವ ಸಿಎಂ ಸಿದ್ದರಾಮಯ್ಯ ( CM Siddaramaiah ) ನೇತೃತ್ವದ ಕಾಂಗ್ರೆಸ್ ( Congress ) ಸರ್ಕಾರ ಗುರಿ ಹಾಕಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈಗ ಹೊಸದೊಂದು ವಿಚಾರ ಕಾಂಗ್ರೆಸ್ ಪಾಳಯದಿಂದ ಕೇಳಿಬರುತ್ತಿದೆ.
ಹೌದು.. ಸದ್ಯದ ಮಟ್ಟಿಗೆ ಉತ್ತರ ಪ್ರದೇಶದ ರಾಯ್‌ಬರೇಲಿ ( Raebareli )ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿಂದಲೇ ಸ್ಪರ್ಧಿಸಿ ಸಂಸದರಾಗಿರುವ ಸೋನಿಯಾ ಗಾಂಧಿ ( Sonia Gandhi ) ಇದೀಗ ಕರ್ನಾಟಕದಿಂದ ರಾಜ್ಯಸಭೆ ಪ್ರವೇಶಿಸುವ ಬಗ್ಗೆ ಆಲೋಚನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳನ್ನ ಉಲ್ಲೇಖೀಸಿ ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಇದಕ್ಕೆ ಹಲವು ಕಾರಣಗಳು ಕೂಡ ಇವೆ ಅದರಲ್ಲಿ ಪ್ರಮುಖವಾಗಿ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಸಯ್ಯದ್ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಡಾ.ಎಲ್.ಹನುಮಂತಯ್ಯ ಹಾಗೂ ಕೇಂದ್ರದಲ್ಲಿ ಸಚಿವರಾಗಿರುವ ರಾಜೀವ್ ಚಂದ್ರಶೇಖರ್ ಅವರ ಸದಸ್ಯತ್ವದ ಅವಧಿ 2024ಕ್ಕೆ ಮುಕ್ತಾಯವಾಗಲಿದೆ.
ಈ ವಿಚಾರವನ್ನ ಗಮನಿಸಿಕೊಂಡೇ ಕಾಂಗ್ರೆಸ್‌ನಲ್ಲಿ ಒಂದಷ್ಟು ಚಟುವಟಿಕೆಗಳು ಆರಂಭವಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಅಂದರೆ ಇದೇ ಜು.18ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ನಡೆದಂತಹ ಪ್ರತಿಪಕ್ಷಗಳ ಸಭೆಗೆ ಆಗಮಿಸಿದ್ದ ಸೋನಿಯಾ ಗಾಂಧಿ ಅವರ ಬಳಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿನಾಯಕಿಗೆ ರಾಜ್ಯದಿಂದಲೇ ರಾಜ್ಯಸಭೆಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ. ಆದರೆ, ಸೋನಿಯಾ ಗಾಂಧಿ ಈ ಬಗ್ಗೆ ಯಾವುದೇ ರೀತಿಯಾದ ಪ್ರತಿಕ್ರಿಯೆಯನ್ನ ನೀಡಿಲ್ಲ ಎನ್ನಲಾಗುತ್ತಿದೆ.
ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 135 ಶಾಸಕರ ಬಲ ಇರುವುದರಿಂದ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ಗೆ ಈಗ ಅನಾಯಾಸವಾಗಿ ಗೆಲ್ಲಲು ಸಾಧ್ಯವಾಗಲಿದೆ. ಆದ್ರೆ ರಾಜ್ಯ ಸಭೆಗೆ ಸೋನಿಯಾ ಗಾಂಧಿ ಸ್ಪರ್ಧಿಸುವುದು ಅನುಮಾನ ಎಂದು ಕೆಲ ರಾಜಕೀಯ ಪಂಡಿತರು ಹೇಳುತ್ತಿದ್ದು, 2024ರ ಲೋಕಸಭೆ ಚುನಾವಣೆಗೆ ಕೂಡ ಸೋನಿಯಾ ಗಾಂಧಿ ಸ್ಪರ್ಧಿಸುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಈ ಬಗ್ಗೆ ಸೋನಿಯಾ ಗಾಂಧಿ ಯಾವ ರೀತಿಯಾದ ನಿರ್ಧಾರ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.






