ವೈದ್ಯರ ಕೊರತೆಯಿರುವ ಭಾರತದಂತಹ ದೇಶದಲ್ಲಿ, ಒತ್ತಡಗಳಿಂದಲೇ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆಯಲ್ಲಿ ವೈದ್ಯರಿದ್ದಾರೆ. ಅದರಲ್ಲೂ ಕಳೆದೊಂದು ವರ್ಷದಿಂದ, ಅಂದರೆ ಕರೋನಾ ಭಾರತಕ್ಕೆ ಕಾಲಿಟ್ಟಂದಿನಿಂದ ವೈದ್ಯರ ಹಾಗೂ ಆರೋಗ್ಯ ಸೇವೆ ಕ್ಷೇತ್ರದಲ್ಲಿರುವವರ ಮೇಲಿನ ಒತ್ತಡವಂತೂ ವಿಪರೀತ. ಈ ಕಳೆದೊಂದು ವರ್ಷದಿಂದ ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿವೆ. ವೈದ್ಯರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರವನ್ನು ತಡೆಗಟ್ಟಲು ಮತ್ತು ಅಂತಹ ಹಿಂಸಾಚಾರದಿಂದ ಅವರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕಾನೂನು ರೂಪಿಸುವಂತೆ ಒತ್ತಾಯಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಿರಂತರ ಒತ್ತಾಯ ಮಾಡುತ್ತಿದೆ. ಐಎಂಎ ಈ ಕುರಿತಾಗಿ ಶುಕ್ರವಾರ ಕೂಡಾ ಪ್ರತಿಭಟನೆ ನಡೆಸಿತ್ತು.
ಕಳೆದ ಒಂದು ವರ್ಷದಲ್ಲಿ, ವೈದ್ಯರು ಮತ್ತು ಇತರ ವೈದ್ಯಕೀಯ ವೃತ್ತಿಪರರು ಕರೋನಾ ವಾರಿಯರ್ಸ್ ಎಂಬ ಹೆಸರು ಗಳಿಸಿರುವ ಅವರು ದಣಿವರಿಯಿಲ್ಲದೆ ಮತ್ತು ಪೂರ್ವಭಾವಿ ಅನುಭವವಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅನೇಕರು ಈ ಸಂದರ್ಭದಲ್ಲಿ ಸ್ವತಃ ಸಾವನ್ನಪ್ಪಿದ್ದಾರೆ. ಇನ್ನು ಎರಡನೇ ಅಲೆಯೊಂದರಲ್ಲೇ ರಾಷ್ಟ್ರವ್ಯಾಪಿ 700 ಕ್ಕೂ ಹೆಚ್ಚು ವೈದ್ಯರು ಮರಣ ಹೊಂದಿದ್ದಾರೆ. ಇನ್ನೂ ಅನೇಕರು ತಮ್ಮ ಕುಟುಂಬ ಸದಸ್ಯರನ್ನು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಸಿದ್ದಾರೆ. ಆದರೆ ಇನ್ನೂ ತಮ್ಮ ಕೆಲಸ ಮುಂದುವರಿಸಿದ್ದಾರೆ.

ಆದರೂ, ವೈದ್ಯಕೀಯ ಸಿಬ್ಬಂದಿಗಳ ವಿರುದ್ಧದ ಹಿಂಸಾಚಾರದ ವರದಿಗಳು ಆಗಾಗ ಕೇಳಿ ಬರುತ್ತಲೇ ಇವೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂನ ಯುವ ವೈದ್ಯ ಸೆಯುಜ್ ಕುಮಾರ್ ಸೇನಾಪತಿ, ಕೋವಿಡ್ ಆರೈಕೆ ಕೇಂದ್ರದಲ್ಲಿ ಸಾವನ್ನಪ್ಪಿದ ರೋಗಿಯ ಸಂಬಂಧಿಕರು ಮತ್ತು ಸ್ನೇಹಿತರಿಂದ ಪೊರಕೆ ಮತ್ತು ಪಾತ್ರೆಗಳಿಂದ ಹಲ್ಲೆಗೊಳಗಾದರು. ವೈದ್ಯರು ತಮ್ಮ ಎಂಬಿಬಿಎಸ್ ನಂತರ ಕಡ್ಡಾಯ ಸೇವೆಯಾದ ಗ್ರಾಮೀಣ ಸೇವಾ ಕರ್ತವ್ಯವನ್ನು ಆ ಕೇಂದ್ರದಲ್ಲಿ ನಿರ್ವಹಿಸುತ್ತಿದ್ದರು. ಕೇರಳದಲ್ಲಿ, ಡಾ. ರಾಹುಲ್ ಮ್ಯಾಥ್ಯೂ ಅವರನ್ನು ಕೋವಿಡ್ ರೋಗಿಯ ಮಗ ಹಲ್ಲೆ ಮಾಡಿದ್ದರು.
ಆರೋಗ್ಯ ಸೇವೆಯಲ್ಲಿರುವವರ ಮೇಲೆ ಆಕ್ರಮಣ ಮಾಡುವುದು ಕಳವಳಕಾರಿ ಸಂಗತಿಯಾಗಿದೆ, ಆದರೆ ಭಾರತದಲ್ಲಿ ಇದು ಹೊಸ ಬೆಳವಣಿಗೆಯಲ್ಲ. 2001 ರಲ್ಲಿ ಪಕ್ಷದ ಮುಖಂಡ ಆನಂದ್ ದಿಘೆ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕೋಪಗೊಂಡ ಶಿವಸೇನೆ ಕಾರ್ಯಕರ್ತರು ಥಾಣೆಯ ಸುನಿತಾದೇವಿ ಸಿಂಘಾನಿಯಾ ಆಸ್ಪತ್ರೆಯನ್ನು ಸುಟ್ಟುಹಾಕಿದ್ದರು. ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಕಂಡುಬಂದಿದೆ ಎಂಬುವುದು ಅವರ ಆರೋಪವಾಗಿತ್ತು. ವಿಜಯಪತ್ ಸಿಂಘಾನಿಯಾ ಮತ್ತೆ ಆಸ್ಪತ್ರೆಯನ್ನು ಪುನರ್ನಿರ್ಮಿಸದಿರಲು ನಿರ್ಧರಿಸಿದರು, ಇದರ ಪರಿಣಾಮವಾಗಿ ನಗರವು ಉತ್ತಮ ಆರೋಗ್ಯ ಸೌಲಭ್ಯವನ್ನು ಕಳೆದುಕೊಂಡಿತು.

‘ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ (ಐಜೆಎಂಆರ್) ನಲ್ಲಿನ 2018 ರ ಲೇಖನವೊಂದು, ವೈದ್ಯರ ಮೇಲಿನ ದಾಳಿಯು ಪುನಾರವರ್ತನೆಯಾಗುತ್ತಿವೆ ಎಂದಿದೆ. ಐಎಂಎ ನಡೆಸುತ್ತಿರುವ ಅಧ್ಯಯನದ ಪ್ರಕಾರ ಕನಿಷ್ಠ 75 ಶೇಕಡಾ ವೈದ್ಯರು ರೋಗಿಗಳಿಂದ ಅಥವಾ ಅವರ ಸಂಬಂಧಿಕರಿಂದ ಆಕ್ರಮಣವನ್ನು ಎದುರಿಸುತ್ತಾರೆ. ಹೆಚ್ಚಿನ ದಾಳಿಯು ಮೌಖಿಕ ನಿಂದನೆಯ ರೂಪದಲ್ಲಿದ್ದರೆ ಅದು ದೈಹಿಕ ಹಲ್ಲೆಯಾಗಿ ಬದಲಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಎಂದು ವರದಿ ಹೇಳುತ್ತದೆ.
ಹೊಸ ಕಾನೂನು ಅಂತಹ ಆಕ್ರಮಣಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಲ್ಲುದೇ? ಜನರು ತಮ್ಮ ಜೀವ ರಕ್ಷಕರನ್ನು ಮತ್ತು ಆರೈಕೆ ಮಾಡುವವರನ್ನು ಏಕೆ ಹೊಡೆಯುತ್ತಾರೆ? ಕಾರಣಗಳು ಹಲವು. ಪ್ರೀತಿಪಾತ್ರರು ಗಂಭೀರವಾಗಿರುವಾಗ ಕುಟುಂಬ ಸದಸ್ಯರು ಅನುಭವಿಸುವ ಆತಂಕ ಮತ್ತು ಅಸಹಾಯಕತೆ ಅವರನ್ನು ಹೆಚ್ಚು ಉದ್ವೇಗಕ್ಕೀಡು ಮಾಡುತ್ತದೆ. ಏನೂ ಮಾಡಲಾಗದ ಅವರ ಮುಂದೆ ವೈದ್ಯರು ಸಲಭ ಗುರಿಯಂತೆ ಕಾಣುತ್ತಾರೆ. ಅಲ್ಲದೆ, ವೈದ್ಯಕೀಯ ಆರೈಕೆಯ ಅತಿಯಾದ ವೆಚ್ಚವೂ ಹಲವು ಬಾರಿ ಹಲ್ಲೆಗೆ ಕಾರಣವಾಗಿದೆ. ರೋಗಿಯ ಕುಟುಂಬವು ತಾವು ಪಾವತಿಸಿದ ಹಣದ ಹೊರತಾಗಿಯೂ, ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಮೋಸ ಹೋದ ಭಾವ ಅನುಭವಿಸುತ್ತಾರೆ. ಇದು ವೈದ್ಯರ ಮೇಲಿನ ಹಲ್ಲೆಗೆ ಮತ್ತೊಂದು ಪ್ರಮುಖ ಕಾರಣ.

ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡವಲ್ಲಿ ವೈದ್ಯಕೀಯ ಸಿಬ್ಬಂದಿಗಳು ಕಠಿಣ ಪರಿಸ್ಥಿತಿ ಎದುರಿಸುತ್ತಾರೆ. ವೈದ್ಯರು ಮತ್ತು ಕುಟುಂಬಗಳ ನಡುವಿನ ಸಂವಹನವೇ ಹೆಚ್ಚಾಗಿ ತಪ್ಪು ತಿಳುವಳಿಕೆಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ವೈದ್ಯರು ತಮ್ಮ ಸಂವಹನ ಕೌಶಲ್ಯವನ್ನು ಸುಧಾರಿಸುವ ಅಗತ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವಾಸ್ತವವಾಗಿ ಇದು ವೈದ್ಯಕೀಯ ಕ್ಷೇತ್ರವು ಮತ್ತಷ್ಟು ಆತ್ಮಾವಲೋಕನ ಮಾಡಬೇಕಾದ ಕ್ಷೇತ್ರವಾಗಿದೆ. ರೋಗಿಯ ಮತ್ತು ವೈದ್ಯರ ನಡುವೆ ಮತ್ತೊಂದು ಕಾನೂನು ತರುವುದಕ್ಕಿಂತ ಹಲ್ಲೆ ಏಕೆ ನಡೆಯುತ್ತಿದೆ ಎಂದು ತಿಳಿಯುವುದು ಮುಖ್ಯವಾಗಿದೆ.
ಅದೇ ಹೊತ್ತಿಗೆ, ವೈದ್ಯಕೀಯ ತಂಡದ ಮಿತಿಗಳ ಬಗ್ಗೆ, ವೈದ್ಯಕೀಯ ವಿಜ್ಞಾನದ ಮಿತಿಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆಯಿದೆ. ವೈದ್ಯರನ್ನು ಅತಿ ಕೆಟ್ಟದಾಗಿ ನಿಂದಿಸುವ ಮತ್ತು ದೇವರಂತಹ ಸ್ಥಾನಕ್ಕೆ ಏರಿಸುವ ಎರಡೂ ಪ್ರವೃತ್ತಿಗಳನ್ನು ನಿಲ್ಲಿಸಬೇಕಾಗಿದೆ.

ಈಗಾಗಲೇ, ದೇಶವು ಅಗತ್ಯಕ್ಕಿಂತ ಕಡಿಮೆ ವೈದ್ಯರನ್ನು ಹೊಂದಿದೆ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಮತ್ತಷ್ಟು ವಿರಳವಾಗಿದೆ. ಈ ದೇಶಕ್ಕೆ ಈಗ ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಅಗತ್ಯವಿದೆ. ಹಾಗಾಗಿ ಇರುವ ಆಸ್ಪತ್ರೆಗಳು ಮುಚ್ಚದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಸರ್ಕಾರ ಹೊರಬೇಕು. ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ನೀಡುತ್ತಿರುವ ವೈದ್ಯರ ಮನೋಸ್ಥೈರ್ಯ ಕುಸಿಯದಂತೆ ನೋಡಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ. ಇನ್ನಾದರೂ, ವೈದ್ಯರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕಿದೆ.
ಇನ್‌ಪುಟ್: ದಿ ವೀಕ್