ದೇಶದಾದ್ಯಂತ ಸುಮಾರು 150 ವೈದ್ಯಕೀಯ ಕಾಲೇಜುಗಳು ಭಾರತದ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಪರರ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಕಳೆದ ಎರಡು ತಿಂಗಳುಗಳಲ್ಲಿ, ತಮಿಳುನಾಡು, ಅಸ್ಸಾಂ, ಗುಜರಾತ್, ಪಂಜಾಬ್ ಮತ್ತು ಆಂಧ್ರಪ್ರದೇಶದಾದ್ಯಂತ 30 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ನಿಯಮಗಳ ಅನುಸರಣೆ ಮಾಡದ ಕಾರಣ ಮತ್ತು ಅಸಮರ್ಪಕ ಅಧ್ಯಾಪಕರ ಕಾರಣದಿಂದ NMC ಯ ಮಾನ್ಯತೆಯನ್ನು ಕಳೆದುಕೊಂಡಿವೆ.
ಆಯೋಗದ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯು ಒಂದು ತಿಂಗಳ ಕಾಲ ಹಲವಾರು ಸಂಸ್ಥೆಗಳನ್ನು ಪರಿಶೀಲಿಸಿದ್ದು ಅನೇಕ ಅಕ್ರಮಗಳು ಗಮನಕ್ಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾ ಲೋಪಗಳು, ಆಧಾರ್-ಸಂಯೋಜಿತ ಬಯೋಮೆಟ್ರಿಕ್ ಹಾಜರಾತಿ ಕಾರ್ಯವಿಧಾನಗಳಲ್ಲಿನ ಲೋಪಗಳು, ಖಾಲಿ ಹುದ್ದೆಗಳು ಮತ್ತು ಅಧ್ಯಾಪಕರ ಕೊರತೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ, ತಮ್ಮಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಂಡ ಮೇಲೆ ಮಾನ್ಯತೆ ಕಳೆದುಕೊಂಡ ಕಾಲೇಜುಗಳ 30 ದಿನಗಳ ಒಳಗೆ NMC ಗೆ ಮನವಿ ಸಲ್ಲಿಸಬಹುದು ಮತ್ತು ಅಲ್ಲೂ ತಿರಸ್ಕೃತವಾದರೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸುವ ಆಯ್ಕೆಯನ್ನೂ ಕಾಲೇಜುಗಳು ಹೊಂದಿವೆ.
ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014ರಲ್ಲಿ 387 ಇದ್ದದ್ದು ಈಗ 654ಕ್ಕೆ ಏರಿ ಶೇ.69 ರಷ್ಟು ಹೆಚ್ಚಳವಾಗಿದೆ ಎಂದು ಫೆಬ್ರವರಿಯಲ್ಲಿ ಸರ್ಕಾರವು ಸಂಸತ್ತಿಗೆ ತಿಳಿಸಿತ್ತು. ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಆರೋಗ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, 2014ರ ನಂತರ ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲಿ ಶೇಕಡಾ 94 ರಷ್ಟು ಮತ್ತು ಸ್ನಾತಕೋತ್ತರ (ಪಿಜಿ) ಸೀಟುಗಳ ಸಂಖ್ಯೆಯಲ್ಲಿ ಶೇಕಡಾ 107 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ
‘ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ’ಯ (ಪಿಎಂಎಸ್ಎಸ್ವೈ) ಭಾಗವಾಗಿ ‘ ಸೂಪರ್ ಸ್ಪೆಷಾಲಿಟಿ ಬ್ಲಾಕ್ಗಳ ನಿರ್ಮಾಣದ ಮೂಲಕ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು’ 75 ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಮತ್ತು ಇವುಗಳಲ್ಲಿ 60 ಪೂರ್ಣಗೊಂಡಿವೆ ಎಂದು ಹೇಳಿದ್ದಾರೆ. ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅಧ್ಯಾಪಕರು, ಸಿಬ್ಬಂದಿ, ಹಾಸಿಗೆ ಸಾಮರ್ಥ್ಯ ಮತ್ತು ಇತರ ಮೂಲಸೌಕರ್ಯಗಳ ಅವಶ್ಯಕತೆಗಳನ್ನು ಸಡಿಲಿಸಲಾಗಿದೆ ಎಂದು ಅವರು ಹೇಳಿಕೆ ನೀಡಿದ್ದರು. ಆದರೆ ಈ ಬೆಳವಣಿಗೆಯು ಅಭಿವೃದ್ಧಿಗಿಂತ ಹೆಚ್ಚಾಗಿ ದೇಶದೊಳಗಿನ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಪರಿಸ್ಥಿತಿಗೆ ಕಾರಣವಾಗುತ್ತಿದೆಯೇಬ ಆತಂಕ ತಲೆದೋರುವಂತೆ ಆಗಿದೆ.
ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಕೊರತೆಯಾದರೂ, ಉತ್ತಮ ಗುಣಮಟ್ಟದ ವೈದ್ಯಕೀಯ ಕಾಲೇಜುಗಳು ಮಾತ್ರ ಕಾರ್ಯನಿರ್ವಹಿಸುವುದರಿಂದ ದೇಶದ ಒಟ್ಟಾರೆ ವೈದ್ಯಕೀಯ ಪರಿಸರ ವ್ಯವಸ್ಥೆ ಸುಧಾರಿಸುತ್ತದೆ ಎಂದು ಅನೇಕ ವೈದ್ಯರು ಅಭಿಪ್ರಾಯ ಪಡುತ್ತಾರೆ.
ಈ ಬಗ್ಗೆ ಜೈಪುರದ ಮಣಿಪಾಲ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ಸಲಹೆಗಾರ ಡಾ. ವಿಪಿನ್ ಕುಮಾರ್ ಜೈನ್ ದಿ ವೀಕ್ನೊಂದಿಗೆ ಮಾತನಾಡುತ್ತಾ “ಹಲವಾರು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿರುವಾಗ, ಸರಿಯಾದ ಅಧ್ಯಾಪಕರಿಲ್ಲದೆ, ವೈದ್ಯಕೀಯ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ” ಎಂದಿದ್ದಾರೆ. “ಎನ್ಎಂಸಿಯು ವೈದ್ಯಕೀಯ ಕಾಲೇಜುಗಳಿಗೆ ಉತ್ತಮವಾದ ಅಧ್ಯಾಪಕರುಗಳನ್ನು ಒದಗಿಸಲು ಸೂಚಿಸಿದೆ. ಆದರೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಎನ್ಎಂಸಿ ನಿಯಮಗಳ ಪ್ರಕಾರ ಅಗತ್ಯವಿರುವ ಸಾಕಷ್ಟು ಸಂಖ್ಯೆಯ ಅಧ್ಯಾಪಕರಿಲ್ಲ. ಹಾಗಾಗಿ ವೈದ್ಯಕೀಯ ವಿಭಾಗದ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ” ಎಂದೂ ಅವರು ಹೇಳಿದ್ದಾರೆ.
ವೈದ್ಯಕೀಯ ಕಾಲೇಜುಗಳಲ್ಲಿ ಶಾಶ್ವತ ಅಧ್ಯಾಪಕರನ್ನು ನಿಯೋಜಿಸುವ ತುರ್ತು ಅಗತ್ಯವಿದ್ದು ಹಲವು ಸಂಸ್ಥೆಗಳಲ್ಲಿ ಅಧ್ಯಾಪಕರನ್ನು ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಕಳುಹಿಸಲಾಗುತ್ತಿದೆ ಎಂದೂ ಹೇಳಿದ ಅವರು ಅಗತ್ಯವಿರುವ ರೋಗಿಗಳಿಗೆ ಉತ್ತಮ ಆರೈಕೆ ನೀಡಲು ಆಸ್ಪತ್ರೆಗಳಲ್ಲಿ ಉತ್ತಮವಾದ ಸೌಲಭ್ಯಗಳು ಇರಬೇಕು ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.