ಆರಂಭಿಕ ಶಾಯಿ ಹೋಪ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ ದಾಖಲೆ ಬರೆದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 2ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 312 ರನ್ ಗುರಿ ಒಡ್ಡಿದೆ.
ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿತು.
ಶಾಯಿ ಹೋಪ್ ಗೆ ಇದು 100ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಶತಕ ಸಿಡಿಸಿ 100ನೇ ಪಂದ್ಯದಲ್ಲಿ 100 ರನ್ ಗಳಿಸಿದ 10ನೇ ಬ್ಯಾಟ್ಸ್ ಮನ್ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು. ಹೋಪ್ 135 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್ ಸೇರಿದ 115 ರನ್ ಸಿಡಿಸಿದರು.
ಹೋಮ್ ಮತ್ತು ಕೈಲಿ ಮೇಯರ್ಸ್ (39) ಮೊದಲ ವಿಕೆಟ್ ಗೆ 65 ರನ್ ಜೊತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿದರು. ನಂತರ ಶರ್ಮಹ್ ಬ್ರೂಕ್ಸ್ (35) ಜೊತೆ ಶಾಯಿ ಹೋಪ್ 62 ರನ್ ಪಾಲುದಾರಿಕೆ ನಡೆಸಿದರು. ಬ್ರೆಂಡನ್ ಕಿಂಗ್ (0) ವಿಫಲರಾದರು.
ಈ ಹಂತದಲ್ಲಿ ಜೊತೆಯಾದ ಶಾಯಿ ಹೋಪ್ ಮತ್ತು ನಾಯಕ ನಿಕೊಲಸ್ ಪೂರನ್ ನಾಲ್ಕನೇ ವಿಕೆಟ್ ಗೆ 117 ರನ್ ಜೊತೆಯಾಟದ ಮೂಲಕ ತಂಡದ ಬೃಹತ್ ಮೊತ್ತದ ಕನಸು ನನಸು ಮಾಡಿದರು. ಪೂರನ್ 77 ಎಸೆತಗಳಲ್ಲಿ 1 ಬೌಂಡರಿ ಸೇರಿದ 74 ರನ್ ಗಳಿಸಿ ಔಟಾದರು.