ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ ವಹಿಸಿಕೊಂಡ ಬಳಿಕ ತೆಗೆದುಕೊಂಡ ಬಹಳ ಮಹತ್ವದ ನಿರ್ಧಾರವೇ ಬೆಂಗಳೂರಿನಲ್ಲಿ ಸೇಫ್ ಫುಟ್‌ಪಾತ್ ಅಭಿಯಾನ. ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆರಹಿತ ಕಾಲುದಾರಿಗಳನ್ನು ಒದಗಿಸುವ ಉದ್ದೇಶದಿಂದ ಸಚಿವ ಕೃಷ್ಣ ಬೈರೇಗೌಡ ಜಿಬಿಎ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದು, ನಿನ್ನೆಯಿಂದ ಸೇಫ್ ಫುಟ್‌ಪಾತ್ ಅಭಿಯಾನ ಆರಂಭವಾಗಿದೆ.

ಸಚಿವರು ಹಾಗೂ ಅಧಿಕಾರಿಗಳ ಸೂಚನೆ ಮೇರೆಗೆ ನಿನ್ನೆ ಬೆಳ್ಳಂಬೆಳಗ್ಗೆಯೇ ಕಾರ್ಯಪ್ರವೃತ್ತರಾದ ಜಿಬಿಎ ಸಿಬ್ಬಂದಿ ನಗರದ ವಿವಿಧ ಭಾಗಗಳಲ್ಲಿ ಫುಟ್‌ಪಾತ್‌ಗಳ ಮೇಲೆ ನಿರ್ಮಿಸಿದ್ದ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳು, ಬೋರ್ಡ್‌ಗಳು ಹಾಗೂ ಅನಧಿಕೃತ ಕುಳಿತುಕೊಳ್ಳುವ ವ್ಯವಸ್ಥೆಗಳನ್ನು ತೆರವುಗೊಳಿಸಿದ್ದಾರೆ. ಕೆಲವು ಭಾಗಗಳಲ್ಲಿ ಜೆಸಿಬಿಯನ್ನೂ ಕೂಡ ಬಳಸಲಾಗಿದ್ದು, ಕೇಂದ್ರ ವಲಯದ ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ ಮತ್ತು ಚಾಮರಾಜಪೇಟೆ ಸೇರಿ ಒಟ್ಟು 16 ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವು ಹೋಟೆಲ್‌ಗಳು ಫುಟ್‌ಪಾತ್ ಮೇಲೆ ಗ್ರಾಹಕರಿಗಾಗಿ ಹಾಕಿದ್ದ ಕುರ್ಚಿ, ಟೇಬಲ್‌ಗಳು ಹಾಗೂ ತಾತ್ಕಾಲಿಕ ಟೀ ಅಂಗಡಿಗಳನ್ನೂ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಸ್ಥಳೀಯರು ಮನವಿ ಮಾಡಿದರೂ ಕೂಡ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ.

ನಗರದಲ್ಲಿ ಪಾದಚಾರಿಗಳಿಗೆ ಸುರಕ್ಷಿತಗೆ ರಾಜ್ಯ ಸರ್ಕಾರ, ಸಚಿವರು, ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಈ ಕಾರ್ಯಾಚರಣೆ ಮೆಚ್ಚಲೇಬೇಕಾದದ್ದು. ಆದರೆ ಇದೇ ರೀತಿಯ ಚುರುಕು ಅಥವಾ ತ್ವರಿತ ಕಾರ್ಯಾಚರಣೆ ರಾಜಕಾಲುವೆ ಒತ್ತುವರಿ ತೆರವಿನಲ್ಲಿ ಯಾಕಿಲ್ಲ.. ಈಗಲೂ ಅದೆಷ್ಟೋ ಜನರು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ತಮ್ಮ ಸ್ವಂತ ಜಾಗ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಲ್ಲಿ ಉಳ್ಳವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೀದಿ ಬದಿ ವ್ಯಾಪಾರಿಗಳ ಅಂಗಡಿ ಮುಚ್ಚಿಸಿದಂತೆ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡವರ ಮೇಲೆ ತ್ವರಿತವಾದ ಕಠಿಣ ಕ್ರಮ ಯಾಕಿಲ್ಲ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಇನ್ನು ನಗರದಲ್ಲಿ ಬೀದಿ ವ್ಯಾಪಾರಿಗಳು ಜೀವನ ನಡೆಸಲು ಮುಕ್ತ ಅವಕಾಶವಿದೆ. ಪಾಲಿಕೆ ಗುರುತಿಸುವ ನಾನ್-ವೆಂಡಿಂಗ್ ವಲಯಗಳ ರಸ್ತೆಗಳನ್ನು ಹೊರತುಪಡಿಸಿ ಉಳಿದ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮುಕ್ತವಾಗಿ ವ್ಯಾಪಾರ ನಡೆಸಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರೂ ಕೂಡ ಕೆಲ ಬದಿ ವ್ಯಾಪಾರಿಗಳಿಗೆ ಈ ಬಗ್ಗೆ ಮಾಹಿತಿ ಕೊರತೆಯಿದ್ದು, ಅಧಿಕಾರಿಗಳು ಅಂಗಡಿ ತೆರವುಗೊಳಿಸಿದ ದಿನದಿಂದ ವ್ಯಾಪಾರ ಮಾಡಲಾಗದೇ, ಜೀವನ ನಡೆಸಲು ಸಂಪಾದನೆ ಇಲ್ಲದೇ ಅಲೆದಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿ, ವ್ಯಾಪಾರಕ್ಕೆ ಸೂಕ್ತ ಸ್ಥಳವಾಕಾ ದೈನಂದಿನ ಬದುಕಿಗೆ ತೊಂದರೆಯಾಗದಂತೆ ಕೂಡಲೇ ಕ್ರಮ ವಹಿಸಬೇಕಿದೆ.






