ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆ (IMD) ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜುಲೈ 2ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಪದವಿ ಪೂರ್ವ (ಪಿಯು) ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಎಚ್.ವಿ. ದರ್ಶನ್ ಅವರು ಹೊರಡಿಸಿರುವ ಆದೇಶದ ಪ್ರಕಾರ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಪಿಯು ಕಾಲೇಜುಗಳು ಜುಲೈ 2ರಂದು ಕಾರ್ಯನಿರ್ವಹಿಸುವುದಿಲ್ಲ.ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾಡಳಿತ ಸಾರ್ವಜನಿಕರು ಹಾಗೂ ಮೀನುಗಾರರಿಗೆ ವಿಶೇಷ ಎಚ್ಚರಿಕೆಯನ್ನೂ ನೀಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಲಾಗಿದೆ. ಅಲ್ಲದೆ, ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ, ಹಳ್ಳ-ಕೊಳ್ಳ, ಜಲಪಾತ ಮತ್ತು ಸಮುದ್ರ ತೀರಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.
ಶಾಲೆಗಳಿಗೆ ರಜೆ ಇರುವ ಹಿನ್ನೆಲೆಯಲ್ಲಿ ಮಕ್ಕಳು ಮಳೆ ನೀರಿನಲ್ಲಿ ಆಟವಾಡುವುದು ಅಥವಾ ಜಲಮೂಲಗಳ ಬಳಿ ತೆರಳುವುದನ್ನು ತಪ್ಪಿಸುವಂತೆ ಪೋಷಕರಿಗೆ ಜಿಲ್ಲಾಡಳಿತ ಸಲಹೆ ನೀಡಿದೆ.

ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು ಎಂದು ಸೂಚಿಸಲಾಗಿದ್ದು, ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ನಿರ್ದೇಶನ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ತಾಲ್ಲೂಕುಗಳಲ್ಲಿ ಪರಿಹಾರ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಶಿಥಿಲಗೊಂಡ ಕಟ್ಟಡಗಳು, ಮರಗಳು ಹಾಗೂ ವಿದ್ಯುತ್ ಕಂಬಗಳ ಸಮೀಪ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.






