ಬೆಂಗಳೂರು: ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆರಹಿತ ಸಂಚಾರ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ (BBMP East Zone) ಬುಧವಾರ ಬೃಹತ್ ಮಟ್ಟದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ. ವೈಟ್‌ಫೀಲ್ಡ್, ಮಾರತಹಳ್ಳಿ, ಕೆ.ಆರ್.ಪುರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಒಂದೇ ದಿನ 13.25 ಕಿಲೋಮೀಟರ್ ಉದ್ದದ ಪಾದಚಾರಿ ಮಾರ್ಗಗಳನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನಿರ್ದೇಶನದ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ ನೂರಾರು ಪೆಟ್ಟಿ ಅಂಗಡಿಗಳು, ತಳ್ಳುಗಾಡಿಗಳು, ಅಕ್ರಮ ಶೆಡ್‌ಗಳು, ತಡೆಗೋಡೆಗಳು ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ.ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರ ಪ್ರಕಾರ, ಫುಟ್‌ಪಾತ್‌ಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರಿಂದ ಸಾರ್ವಜನಿಕರು ರಸ್ತೆಯಲ್ಲೇ ನಡೆದು ಅಪಘಾತದ ಅಪಾಯ ಎದುರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಾದಚಾರಿಗಳಿಗೆ ಸುಗಮ ಸಂಚಾರ ಒದಗಿಸಲು ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಯಾವೆಲ್ಲಾ ಪ್ರದೇಶಗಳಲ್ಲಿ ಕಾರ್ಯಾಚರಣೆ?
- ವೈಟ್‌ಫೀಲ್ಡ್: ಹೋಪ್ ಫಾರಂ ಜಂಕ್ಷನ್‌ನಿಂದ ವರ್ತೂರು ಕೋಡಿ (1.5 ಕಿ.ಮೀ)
- ಮಾರತಹಳ್ಳಿ: ಮಾರತಹಳ್ಳಿ ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್ (3.5 ಕಿ.ಮೀ)
- ಕೆ.ಆರ್.ಪುರ: ಐಟಿಪಿಎಲ್ ಮುಖ್ಯರಸ್ತೆಯಿಂದ ದೇವಸಂದ್ರ (1 ಕಿ.ಮೀ)
- ಹೊರಮಾವು: ಮುಖ್ಯ ರಸ್ತೆ (3 ಕಿ.ಮೀ)
- ಎಚ್.ಎ.ಎಲ್.: ಕೆ.ಆರ್.ಪುರ ಮೆಟ್ರೋದಿಂದ ಬೆನ್ನಿಗಾನಹಳ್ಳಿ ಮೆಟ್ರೋ (1.5 ಕಿ.ಮೀ)
- ರಾಮಮೂರ್ತಿನಗರ: ಮುಖ್ಯ ರಸ್ತೆಯ 2 ಕಿ.ಮೀ ವ್ಯಾಪ್ತಿ
- ದೊಡ್ಡನೆಕ್ಕುಂದಿ ಹಾಗೂ ಕಾಡುಗೋಡಿ: ಐಟಿಪಿಎಲ್ ಹಾಗೂ ಹೂಡಿ ವೃತ್ತದ ಸುತ್ತಮುತ್ತ
ತೆರವುಗೊಳಿಸಿದ ಅಕ್ರಮಗಳು
ಕಾರ್ಯಾಚರಣೆಯಲ್ಲಿ:
- 59 ಪೆಟ್ಟಿ ಅಂಗಡಿಗಳು
- 65 ತಳ್ಳುಗಾಡಿಗಳು
- 38 ಅಕ್ರಮ ತಡೆಗೋಡೆಗಳು
- 7 ವಾಣಿಜ್ಯ ಮಳಿಗೆಗಳ ಮೆಟ್ಟಿಲುಗಳು
- 71 ಕ್ಯಾನೋಪಿ ಹಾಗೂ ಶೆಡ್‌ಗಳು
- 156 ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು
ಇದರ ಜೊತೆಗೆ 25 ಟನ್ ಘನತ್ಯಾಜ್ಯ ಹಾಗೂ 80 ಟನ್ ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಈ ಕಾರ್ಯಾಚರಣೆಗೆ ಇಂಜಿನಿಯರಿಂಗ್, ಆರೋಗ್ಯ, ಬೆಸ್ಕಾಂ, ಬೆಂಗಳೂರು ಜಲಮಂಡಳಿ ಹಾಗೂ ಪೊಲೀಸ್ ಇಲಾಖೆಗಳನ್ನೊಳಗೊಂಡ ಜಂಟಿ ಕಾರ್ಯಪಡೆ ಸಹಕರಿಸಿತು. ಪ್ರತಿ ವಿಭಾಗಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಪಾಲಿಕೆ ಆಯುಕ್ತರು ಸ್ವತಃ ವಹಿಸಿಕೊಂಡಿದ್ದರು.ಪಾಲಿಕೆ ಈಗಾಗಲೇ ತೆರವುಗೊಳಿಸಿದ ಪ್ರದೇಶಗಳಲ್ಲಿ ಮರು ಒತ್ತುವರಿ ಆಗದಂತೆ ಮಾರ್ಷಲ್ ತಂಡಗಳನ್ನು ನಿಯೋಜಿಸಿದ್ದು, ಮತ್ತೆ ಅಕ್ರಮ ಒತ್ತುವರಿ ಕಂಡುಬಂದರೆ ಭಾರಿ ದಂಡದ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
“ಪಾದಚಾರಿ ಮಾರ್ಗಗಳು ಸಾರ್ವಜನಿಕರ ಹಕ್ಕು. ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದರೆ ಪಾಲಿಕೆ ಕಠಿಣ ಕ್ರಮ ಕೈಗೊಳ್ಳಲಿದೆ” ಎಂದು ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.







