ಧರಣೀಶ್ ಬೂಕನಕೆರೆ
ರಾಜಕೀಯ ವಿಶ್ಲೇಷಕರು
ಸೈದ್ದಾಂತಿಕವಾಗಿ ಸೋಲಿಸಲಾಗದಿದ್ದಾಗ ವ್ಯಕ್ತಿಯ ಚಾರಿತ್ರ್ಯಹರಣ ಮಾಡುವುದು, ಅಸಮರ್ಥ ಎಂದು ಬಿಂಬಿಸುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹಳೆ ತಂತ್ರಗಾರಿಕೆ. ಅದನ್ನು ಕೆಲವೊಮ್ಮೆ ನೇರವಾಗಿ, ಕೆಲವೊಮ್ಮೆ ಪರೋಕ್ಷವಾಗಿ ಮಾಡಲಾಗುತ್ತದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಹಿಡಿದು ದೇಶದ ಚೊಚ್ಚಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ, ಎಐಸಿಸಿ ಅಧ್ಯಕ್ಪ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯವರೆಗೆ ಎಲ್ಲರ ವಿಷಯದಲ್ಲೂ ಹೀಗೇ ಮಾಡಲಾಗುತ್ತಿದೆ. ಈಗಿನ ಗುರಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ.
ಹಿಂದೂ ಧರ್ಮದ ಅನಿಷ್ಠ ಜಾತಿ ವ್ಯವಸ್ಥೆಯನ್ನು ಕಟುವಾಗಿ ವಿರೋಧಿಸಿದರು, ಮನುಷ್ಯವಿರೋಧಿ ಮನುಸ್ಮೃತಿಯನ್ನು ಸುಟ್ಟರು, ಸಮಾನತೆಯ ಕನಸನ್ನು ಕಟ್ಟಿಕೊಟ್ಟರು ಎಂಬಿತ್ಯಾದಿ ಕಾರಣಗಳಿಗಾಗಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ಯಾವತ್ತಿಗೂ ಬೇಡವಾಗಿರುವ ವ್ಯಕ್ತಿತ್ವ. ಅದರಿಂದಾಗಿಯೇ ‘ಸಂವಿಧಾನ ರಚನೆ ಬಾಬಾ ಸಾಹೇಬರೊಬ್ಬರ ಕೊಡುಗೆ ಅಲ್ಲ. ಅವರು ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿದ್ದರಿಂದ ಸಂಪೂರ್ಣ ಶ್ರೇಯ ಅವರ ಮುಡಿಗೇರಿದೆ’ ಎಂಬ ವಾದಗಳನ್ನು ಮಂಡಿಸಲಾಗುತ್ತದೆ. ‘ಬಾಬಾ ಸಾಹೇಬರು ಅಷ್ಟು ಸಮರ್ಥರಾಗಿರಲಿಲ್ಲ’ ಎಂದು ಬಿಂಬಿಸುವುದು
ಇಂಥ ತರ್ಕವನ್ನು ಮುಂದಿಡುವ ಮುಖ್ಯ ಉದ್ದೇಶ.
ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಲಿಲ್ಲ ಎಂದು ವ್ಯಾಖಾನಿಸುವ ‘ವಾಗ್ಮಿಗಳು’ ತಪ್ಪದೆ ಸಂವಿಧಾನಾತ್ಮಕ ಸಲಹೆಗಾರ ಬಿಎನ್ ರಾವ್, ಸಂವಿಧಾನ ತಜ್ಞರಾದ ಅಲ್ಲಾಡಿ ಕೃಷ್ಣಸ್ವಾಮಿ, ಕೆ.ಎಂ. ಮುನ್ಶಿ, ರಾಜಕೀಯ ನಾಯಕರಾದ ರಾಜೇಂದ್ರ ಪ್ರಸಾದ್, ಶ್ಯಾಮ್ ಪ್ರಸಾದ್ ಮುಖರ್ಜಿ ಹೆಸರುಗಳನ್ನು ಉಲ್ಲೇಖಿಸುತ್ತಾರೆ.
ಸಂವಿಧಾನ ರಚನಾಸಭೆಗೆ ಭಾರತದ ವಿವಿಧ ಪ್ರದೇಶಗಳ ಹಾಗೂ ವಿವಿಧ ಸಮುದಾಯಗಳ ಸದಸ್ಯರು ಇರಬೇಕು ಎನ್ನುವ ಉದಾತ್ತ ಉದ್ದೇಶ ಇತ್ತು. ಅದರಲ್ಲಿ ಪಂಡಿತ್ ಜವಾಹರಲಾಲ್ ನೆಹರೂ, ಮೌಲಾನಾ ಅಬ್ದುಲ್ ಕಲಾಂ ಅಜಾದ್ ಕೂಡ ಇದ್ದರು, ಅವರೂ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ ಎಂಬ ಸಂಗತಿಯನ್ನು ಮರೆಮಾಚಲಾಗುತ್ತದೆ. ‘ಸಂವಿಧಾನ ರಚಿಸಿದ ಕೀರ್ತಿ ಬಾಬಾ ಸಾಹೇಬರೊಬ್ಬರ ಪಾಲಾಗಬಾರದು’ ಎನ್ನುವ ದುಷ್ಠಚಿಂತನೆ ಒಂದೆಡೆಯಾದರೆ ‘ಸಂವಿಧಾನ ರಚಿಸುವಷ್ಟು ಪಾಂಡಿತ್ಯ ಅವರಲ್ಲಿ ಇರಲಿಲ್ಲ’ ಎಂದು ಬಿಂಬಿಸುವ ಅಸೂಯೆ ಇನ್ನೊಂದೆಡೆ.
ಜಾತ್ಯತೀತವಾಗಿದ್ದರು, ವೈಜ್ಞಾನಿಕ ದೃಷಿಕೋನ ಹೊಂದಿದ್ದರು ಎಂಬಿತ್ಯಾದಿ ಕಾರಣಕ್ಕೆ ಪಂಡಿತ್ ಜವಾಹರಲಾಲ್ ನೆಹರೂ ಕೂಡ ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ವರ್ಜ್ಯ. ಹಾಗಾಗಿಯೇ ಅಗಲಿರುಳೆನ್ನದೆ ನೆಹರೂ ಚಾರಿತ್ರ್ಯಹರಣ ಕೈಂಕಾರ್ಯವನ್ನು ಮಾಡಲಾಗುತ್ತಿದೆ. ಸಹಸ್ರ ಸಹಸ್ರ ಕಟ್ಟುಕತೆಗಳು ಹುಟ್ಟಿಕೊಂಡಿವೆ. ಮಲ್ಲಿಕಾರ್ಜುನ ಖರ್ಗೆ 2014ರಿಂದ 2019ರವರೆಗೆ ತಮ್ಮದು ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಿಲ್ಲದಿದ್ದರೂ ಪ್ರಧಾನಿ ಮೋದಿಯನ್ನು ಕಾಡಿದರು. ಪರಿಣಾಮವಾಗಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಾವಿರ ಕೋಟಿಯ ಸರದಾರ ಅಥಾರ್ತ್ ಭ್ರಷ್ಟಾಚಾರಿ ಎಂದು ಬಿಂಬಿಸಲಾಯಿತು. ಶತಾಯಗತಾಯ ಖರ್ಗೆ ಅವರನ್ನು ಸೋಲಿಸಲೇಬೇಕೆಂದು ಶಪಥಗೈದು 2019ರಲ್ಲಿ ಮಣಿಸಲಾಯಿತು.
ರಾಹುಲ್ ಗಾಂಧಿ ವಿಷಯದಲ್ಲಿ ಅವರು ಸೈದ್ಧಾಂತಿಕವಾಗಿ ಹೆಚ್ಚೆಚ್ಚು ಸ್ಪಷ್ಟವಾಗಿ ಮಾತಾನಾಡಿದಂತೆಲ್ಲಾ ಅವರನ್ನು ಗುರಿಯಾಗಿಸಿಕೊಂಡು ಬಿಡುತ್ತಿರುವ ಬಾಣಗಳು ಬಿರುಸಾಗತೊಡಗಿವೆ. ರಾಹುಲ್ ಗಾಂಧಿ ಅವರನ್ನು ಅಸಮರ್ಥ ನಾಯಕ, ಭ್ರಷ್ಟ ರಾಜಕಾರಣಿ ಎಂದು ಚಿತ್ರಿಸಲು ಹಲವು ರೀತಿಯ ನಿರೂಪಣೆಗಳನ್ನು ನೇಯಲಾಗುತ್ತಿದೆ. ಸಿದ್ದರಾಮಯ್ಯ ಅವರನ್ನು ದುರಹಂಕಾರಿ, ಹಿಂದೂ ವಿರೋಧಿ, ಮೇಲ್ಜಾತಿಯವರ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಅವರು ಎದೆಯುಬ್ಬಿಸಿ ನಡೆಯುವುದು ಕೊಬ್ಬಿನ ಕುರುಹಾಗಿ ಕಾಣುತ್ತಿದೆ. ಬಿಜೆಪಿ ಭ್ರಷ್ಟಾಚಾರವನ್ನು ಗಟ್ಟಿ ದನಿಯಲ್ಲಿ ಹೇಳುತ್ತಾರೆ ಎನ್ನುವ ಕಾರಣಕ್ಕೆ ಈಗ ಅವರ ಮೇಲೆ ಭ್ರಷ್ಟಾಚಾರದ ತಿರುಗುಬಾಣ ಬಿಡಲಾಗುತ್ತಿದೆ. ನೂರನಲವತ್ತು ಕೋಟಿ ಜನರ ಪ್ರತಿನಿಧಿಯನ್ನು ‘ಹಾಗೆ ಮಾತನಾಡಬಾರದು’ ಎಂದು ಮಾಜಿ ಪ್ರಧಾನಿಗಳು ಹುಕುಂ ಹೊರಡಿಸುತ್ತಾರೆ. ಆರೂವರೆ ಕೋಟಿ ಜನರ ಮುಖ್ಯಮಂತ್ರಿಯನ್ನು ಯಾರು ಹೇಗೆಬೇಕಾದರೂ ಮಾತಾಡಬಹುದಾ ಎನ್ನುವ ಪ್ರಶ್ನೆಯನ್ನು ಮಾತ್ರ ಕೇಳಿಕೊಳ್ಳುವುದಿಲ್ಲ.
ಸೈದ್ಧಾಂತಿಕ ಸ್ಪಷ್ಟತೆ ಇರುವ ನಾಯಕರನ್ನು ಅರೆಕ್ಷಣವೂ ಸಹಿಸದ ಆರ್‌ಎಸ್‌ಎಸ್ ಮತ್ತು ಬಿಜೆಪಿ ಈಗ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡಿವೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಬಳಿಕ ಅತ್ಯಂತ ಸ್ಪಷ್ಟವಾಗಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕುಕೃತ್ಯಗಳನ್ನು ಖಂಡಿಸುವ ನಾಯಕ ಪ್ರಿಯಾಂಕ್ ಖರ್ಗೆ. ಪಿಎಸ್ ಐ ನೇಮಕಾತಿ ಹಗರಣ, ಬಿಟ್ ಕಾಯಿನ್ ಹಗರಣ, ಕೋವಿಡ್ ಕಾಲದ ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಇನ್ನಿಲ್ಲದಂತೆ ಕಾಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ್ದ ಆರ್‌ಎಸ್‌ಎಸ್ ಅನ್ನೂ ಬಿಟ್ಟಿರಲಿಲ್ಲ. ಪರಿಣಾಮವಾಗಿ ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಿಯಾಂಕ್ ಖರ್ಗೆ ಬೆನ್ನುಹತ್ತಿವೆ.
ಪ್ರಿಯಾಂಕ್ ಖರ್ಗೆ ಹೆಸರಿನ ಜೊತೆಗೆ ಭ್ರಷ್ಟಾಚಾರಿ ಮತ್ತು ದುರಹಂಕಾರಿ ಎಂಬ ವಿಶೇಷಣಗಳನ್ನು ಬೆಸೆಯಲೆತ್ನಿಸಲಾಗುತ್ತಿದೆ. ಇದರ ಸ್ಪಷ್ಟ ಸುಳಿವು ‘ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುವ ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆ ನಿರ್ವಹಿಸುವಲ್ಲಿ ಅಸಮರ್ಥರಾಗಿದ್ದಾರೆ, ಅವರು ರಾಜೀನಾಮೆ ಕೊಡಬೇಕು’ ಎಂದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಮಾತುಗಳಲ್ಲಿ ಸಿಗುತ್ತವೆ. ‘ಎಲ್ಲಾ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ’ ಎನ್ನುವ ಆಕ್ಷೇಪದಲ್ಲಿ ‘ಬಡವ ನೀ ಮಡಗಿದಂಗಿರು…’ ಎಂಬ ಆದೇಶವಿದೆ. ಆರ್‌ಎಸ್‌ಎಸ್ ಅವಾಂತರಗಳು, ಬಿಜೆಪಿ ಭ್ರಷ್ಟಾಚಾರಗಳು, ದೇವರು, ಧರ್ಮ, ಸಂವಿಧಾನ, ಮೀಸಲಾತಿ, ಜಾತಿ, ಜಾತಿಗಣತಿಗಳ ಬಗ್ಗೆ ಸೊಲ್ಲೆತ್ತಬೇಡ ಎಂಬ ಸೂಚನೆಗಳಿವೆ.
ಶೂದ್ರನಾದವನು ಸಹಿಸಿಕೊಳ್ಳಬೇಕು ಎನ್ನುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿಧಿಸಿರುವ ಶಾಸನವಾಗಿರುವುದರಿಂದ ಪ್ರಿಯಾಂಕ್ ಖರ್ಗೆ ಎಲ್ಲದರ ಬಗ್ಗೆ ಮಾತನಾಡುವುದು ಸಮಸ್ಯೆಯಾಗಿದೆ. ಪ್ರಶ್ನಿಸುವುದು ಪ್ರಮಾದವಾಗಿದೆ. ಇದು ಆರಂಭ, ಪ್ರಿಯಾಂಕ್ ಖರ್ಗೆ ಹಾದಿಯನ್ನು ದುರ್ಗಮಗೊಳಿಸಲು ದಂಡಿ ದಂಡಿ ಪ್ರಯತ್ನಗಳಾಗಲಿವೆ.
ಇತ್ತೀಚಿಗೆ ರಾಜ್ಯ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳನ್ನು ‘ವಿಫಲ’ ಎಂದು ಹೇಳುವ ವ್ಯರ್ಥ ಪ್ರಯತ್ನವಾಯಿತು. ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಆದರೆ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆ ವೃದ್ಧಿಸಿರುವುದು, ಜಿಎಸ್ ಟಿ ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದು ಮತ್ತು ಆರ್ಥಿಕ ಸ್ಥಿರತೆ ಕಂಡುಬಂದಿರುವುದನ್ನು ಅಲ್ಲಗೆಳೆಯಲು ಸಾಧ್ಯವಾಗಲಿಲ್ಲ. ಇದಾದ ಮೇಲೆ ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಸರ್ಕಾರವನ್ನು ಅಧೀರರನ್ನಾಗಿಸಲು ತೀವ್ರ ರೀತಿಯ ಪ್ರಯತ್ನ ಮಾಡಲಾಯಿತು. ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆಯನ್ನೂ ಮಾಡಲಾಯಿತು. ಆದರೂ ಯಶಸ್ಸು ಸಿಗಲಿಲ್ಲ.
ಇದೆಲ್ಲದರ ಜೊತೆಗೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ನೆಚ್ಚಿನ ವಿಷಯ ಕೈಗೆತ್ತಿಕೊಂಡವು. ವಕ್ಫ್ ವಿಷಯದಲ್ಲಿ ವಿವಾದ ಸೃಷ್ಟಿಸಲೆತ್ನಿಸಿದವು. ಆದರೆ ‘ಬೇರೆಯವರಿಗೆ ಮದ್ದಾಕು, (ಮದ್ದು- ಒಂದು ರೀತಿಯ ವಿಷ) ಯಾರೂ ಸಿಗದಿದ್ದರೆ ಮನೆಯವರಿಗೇ ಹಾಕು’ ಎನ್ನುವ ಮಾತಿನಂತೆ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರ ಹೆಸರು ಕೆಡಿಸಲು ನಿರಂತರವಾಗಿ ಪ್ರಯತ್ನಿಸಿ, ಅದರಲ್ಲಿ ವಿಫಲವಾಗಿ ಕಡೆಗೆ ಮನೆಯವರಿಗೇ ಮದ್ದಾಕಿದರು. ವಕ್ಫ್ ವಿವಾದ ರಾಜ್ಯ ಬಿಜೆಪಿಯನ್ನು ಒಡೆದು ಹೋಳು ಮಾಡಿತು. ಶಾಸಕ ಮುನಿರತ್ನ ನಾಯ್ಡು ಅವರ ಹನಿಟ್ರ್ಯಾಪ್, ಬೆದರಿಕೆ, ಜಾತಿನಿಂದನೆ ಪ್ರಕರಣಗಳು ಇನ್ನಷ್ಟು ಮುಜುಗರ ಮಾಡಿದವು. ಇನ್ನೊಂದೆಡೆ ಉಪಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಮರ್ಮಾಘಾತವಾಯಿತು.
ಹೀಗೆ ನಿರಂತರವಾಗಿ ಸೋತು ನಿತ್ರಾಣವಾಗಿರುವ ಆರ್‌ಎಸ್‌ಎಸ್, ಬಿಜೆಪಿ ಮತ್ತು ಬಿವೈ ವಿಜಯೇಂದ್ರ ಈಗ ಮುಖ ಉಳಿಸಿಕೊಳ್ಳಲು ಪ್ರಿಯಾಂಕ್ ಖರ್ಗೆ ವಿರುದ್ಧ ಸಮರ ಸಾರಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರಿಸುಮುರಿಸು ಉಂಟುಮಾಡಲೆತ್ನಿಸುತ್ತಿವೆ. ವಿಜಯೇಂದ್ರ ಅವರಂತೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆದು ತಮ್ಮ ವೈಫಲ್ಯವನ್ನು ಮರೆಸಲೆತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪ್ರಿಯಾಂಕ್ ಖರ್ಗೆ ಪರ ಬಂಡೆಯಂತೆ ನಿಂತಿದೆ. ಈ ನಿರ್ಣಾಯಕ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದುನೋಡಬೇಕು.