ಭಾರತೀಯ ಕುಟುಂಬ ಪದ್ಧತಿಯಲ್ಲಿ ಗರ್ಭ ಧರಿಸುವುದನ್ನು ಹಬ್ಬವೆಂಬಂತೆ ಆಚರಿಸಲಾಗುತ್ತದೆ. ಒಬ್ಬಮಹಿಳೆ ಗರ್ಭ ಧರಿಸುವುದೆಂದರೆ ಕುಟುಂಬಕ್ಕೆ ಹೊಸ ಜೀವ ಮತ್ತು ಹೊಸ ವ್ಯಕ್ತಿ ಸೇರ್ಪಡೆಯಾಗುವುದು ಎಂದೇ ಇಲ್ಲಿ ಪರಿಗಣಿಸಲಾಗುತ್ತದೆ. ಗರ್ಭಿಣಿ ಮಹಿಳೆಯರನ್ನು ಆದರಿಸುವುದು, ವಿಶೇಷ ಗಮನ ನೀಡುವುದೆಲ್ಲಾ ನಮ್ಮ ಪದ್ಧತಿಯ ಒಂದು ಭಾಗವೇ ಆಗಿ ಹೋಗಿದೆ.
ಆದರೆ ‘ಲಾನ್ಸೆಟ್ ಮೆಡಿಕಲ್ ಜರ್ನಲ್’ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಭಾರತೀಯ ಮಹಿಳೆಯರ ಮತ್ತು ಬಾಲಕಿಯರ ಆತ್ಮಹತ್ಯೆ ದರವು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಅದರಲ್ಲೂ ಹೊಸ ತಾಯಂದಿರ, ಗರ್ಭಿಣಿಯರ ಆತ್ಮಹತ್ಯಾ ಪ್ರಕರಣಗಳು ಬೆಚ್ಚಿಬೀಳಿಸುವಷ್ಟು ಹೆಚ್ಚಾಗಿದೆ. ಇದಕ್ಕೆ ಮುಖ್ಯ ಕಾರಣ ಕೌಟುಂಬಿಕ ಹಿಂಸಾಚಾರ. ಕೆಲವೊಮ್ಮೆ ಗರ್ಭಾವಸ್ಥೆಯ ಆರಂಭಿಕ ಹಂತದಲ್ಲಿ ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲಾಗದ್ದಕ್ಕೆ ಅಥವಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಕಾರಣಕ್ಕೆ ಇಂತಹ ಹಿಂಸೆಗಳಾಗುವುದೇ ಹೆಚ್ಚು.
ಭಾರತವು ಒಟ್ಟಾರೆ ತಾಯಿಯ ಮರಣವನ್ನು ಕಡಿಮೆ ಮಾಡುವಲ್ಲಿ ಈ ಶತಮಾನದಲ್ಲಿ ಅದ್ಭುತ ಎನ್ನುವ ಸಾಧನೆ ಮಾಡಿದೆ. 2004ರಲ್ಲಿ ಪ್ರತಿ 10,000 ತಾಯಂದಿರಿಗೆ 254 ಮರಣ ಸಂಭವಿಸುತ್ತಿದ್ದರೆ ಈ ಸಂಖ್ಯೆ 2019 ರಲ್ಲಿ 103ಕ್ಕೆ ಇಳಿದಿದೆ. ವಿಶ್ವಸಂಸ್ಥೆಯು 2030 ರ ವೇಳೆಗೆ 1,00,000 ತಾಯಂದಿರಿಗೆ ಸಾವುಗಳ ಸಂಖ್ಯೆಯನ್ನು 70ಕ್ಕೆ ಇಳಿಸುವ ಗುರಿಯನ್ನು ಜಾಗತಿಕವಾಗಿ ನಿಗದಿಪಡಿಸಿದೆ. ನಮ್ಮ ಪ್ರಸವಾನಂತರದ ಸಾವಿನ ಪ್ರಮಾಣ ಇದೇ ರೀತಿಯಲ್ಲಿದ್ದರೆ ಆ ಗುರಿಯನ್ನು ತಲುಪುವುದು ಕಷ್ಟವೇನಲ್ಲ.
ಆದರೆ ಆ ಯಶಸ್ಸು ಈ ಮೊದಲು ಭಾರತದಲ್ಲಿ ಹೆಚ್ಚಾಗಿ ಗಮನಿಸದೆ ಹೋದ ವಿದ್ಯಮಾನವನ ಒಂದನ್ನು ಬಹಿರಂಗಪಡಿಸಿದೆ. ಅದುವೇ ಗರ್ಭಧಾರಣೆಯ ಸಮಯದಲ್ಲಿ ಅಥವಾ ಪ್ರಸವಾನಂತರದಲ್ಲಿ ತಾಯಂದಿರ ಆತ್ಮಹತ್ಯೆ. 2016ರಲ್ಲಿ ದಕ್ಷಿಣ ಭಾರತದಲ್ಲಿ ಕಡಿಮೆ ಆದಾಯದ 462 ಕುಟುಂಬಗಳನ್ನು ಸಮೀಕ್ಷೆಮಾಡಿ ಕೈಗೊಂಡ ಅಧ್ಯಯನವೊಂದು 7.6% ರಷ್ಟು ಹೊಸ ತಾಯಂದಿರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ವರದಿ ಸಲ್ಲಿಸಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವು ಕೆಲಸ ಮಾಡಿಲ್ಲ ಎನ್ನುವ ಆರೋಗ್ಯ ತಜ್ಞರು 2018 ರಲ್ಲಿ ರೂಪಿಸಲಾದ ಆತ್ಮಹತ್ಯೆ ತಡೆಗಟ್ಟುವ ಕ್ರಿಯಾ ಯೋಜನೆಯನ್ನು ಸಹ ಇದುವರೆಗೆ ಜಾರಿಗೆ ತರಲಾಗಿಲ್ಲ ಎಂದು ಹೇಳುತ್ತಾರೆ.
ಈ ಬಗ್ಗೆ ಮಾತನಾಡಿರುವ ಮನೋವೈದ್ಯೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂತರರಾಷ್ಟ್ರೀಯ ನೆಟ್ವರ್ಕ್ನ ಸದಸ್ಯರಾಗಿರುವ ಲಕ್ಷ್ಮಿ ವಿಜಯಕುಮಾರ್ ಅವರು “ಭಾರತವು ಅಗಾಧ ಸಂಖ್ಯೆಯಲ್ಲಿ ಯುವ ತಾಯಂದಿರನ್ನು ಕಳೆದುಕೊಳ್ಳುತ್ತಿದೆ” ಎನ್ನುತ್ತಾರೆ. “ಈ ಸಮಸ್ಯೆಯನ್ನು ಪರಿಹರಿಸಲು ನಾವು ಯಾವುದೇ ಪರಿಣಾಮಕಾರಿ ವ್ಯವಸ್ಥೆಯನ್ನು ಹೊಂದಿಲ್ಲ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ. ಅಲ್ಲದೆ ಭಾರತ ಸರ್ಕಾರದ ಬಳಿ ಗರ್ಭಿಣಿಯರ ಅಥವಾ ತಾಯಂದಿರ ಆತ್ಮಹತ್ಯಾ ಪ್ರಕರಣದ ನಿಖರ ಮಾಹಿತಿ ಇಲ್ಲ. ಸಮೀಕ್ಷೆಯ ಮೂಲಕ ಸಂಗ್ರಹಿಸಿದ ಡಾಟಾವನ್ನೇ ಭಾರತವು ರಾಷ್ಟ್ರೀಯ ತಾಯಂದಿರ ಸಾವಿನ ಅಂಕಿಅಂಶಗಳಾಗಿ ಪರಿಗಣಿಸುತ್ತದೆ. ಆದರೆ ಈ ಡಾಟಾವು ಸಾವಿನ ಕಾರಣಗಳನ್ನು ಪ್ರತ್ಯೇಕಿಸುವುದಿಲ್ಲ. ಪೊಲೀಸರು ಸಹ ತಮ್ಮಲ್ಲಿ ವರದಿಯಾದ ಆತ್ಮಹತ್ಯೆಗಳ ಡೇಟಾವನ್ನು ಇಟ್ಟುಕೊಳ್ಳುತ್ತಾರೆ, ಆದರೆ ಮಹಿಳೆಯು ಗರ್ಭಿಣಿಯಾಗಿದ್ದರಾ ಅಥವಾ ತಾಯಿಯ ಎನ್ನುವ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ.
ವಿಶ್ವಾದ್ಯಂತ ಪೆರಿನಾಟಲ್ (ಪ್ರಸವ ಪೂರ್ವ ಮತ್ರು ಪ್ರಸವಾನಂತರ) ಆತ್ಮಹತ್ಯೆಗಳು ಹೆಚ್ಚಾಗಿ ಮನೋವೈದ್ಯಕೀಯ ಅನಾರೋಗ್ಯದ ಇತಿಹಾಸಕ್ಕೆ ಸಂಬಂಧಿಸಿವೆ, ಆದರೆ ವಿಜಯಕುಮಾರ್ ಹೇಳುವಂತೆ ಭಾರತದಲ್ಲಿ ಇಂತಹ ಪ್ರಕರಣಗಳಿಗೆ ಅದು ಕಾರಣವಾಗಿಲ್ಲ. ಭಾರತದಲ್ಲಿ ಸಾಮಾಜಿಕ ಕಾರಣಗಳಾದ ಬಾಲ್ಯವಿವಾಹ, ಸಂಗಾತಿಯ ಹಿಂಸಾಚಾರ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮುಂತಾದ ಕಾರಣಗಳಿಂದ ಆತ್ಮಹತ್ಯೆಗಳಾಗುವುದೇ ಹೆಚ್ಚು.
ಸರ್ಕಾರೀ ಅಂಕಿಅಂಶಗಳ ಪ್ರಕಾರವೇ 15-49 ರ ವಯಸ್ಸಿನ ಪ್ರತಿ ಮೂರು ಭಾರತೀಯ ಮಹಿಳೆಯರಲ್ಲಿ ಒಬ್ಬ ಮಹಿಳೆ ಸಂಗಾತಿಯಿಂದಲೇ ಹಿಂಸಾಚಾರಕ್ಕೆ ಒಳಗಾಗುತ್ತಾರೆ. ಈ ಮಹಿಳೆಯರಲ್ಲಿ ಸುಮಾರು 3.1% ಮಹಿಳೆಯರು ಗರ್ಭಾವಸ್ಥೆಯಲ್ಲಿ ದೈಹಿಕ ಹಿಂಸೆಯನ್ನು ಅನುಭವಿಸಿರುವುದಾಗಿ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡುವ ದೆಹಲಿಯ ಕೌನ್ಸಿಲರ್ ಗರೀಮಾ ಮಲಿಕ್ ಭಾರತೀಯ ಮಹಿಳೆಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಶಕ್ತಗೊಳಿಸುವ ವೃತ್ತಿಪರ ತರಬೇತಿಗಳನ್ನು ನೀಡಬೇಕು. ಆರ್ಥಿಕ ಸ್ವಾವಲಂಬನೆ ಇದ್ದಾಗ ಇಂತಹ ಹಿಂಸೆಗಳಿಂದ ತಪ್ಪಿಸಿಕೊಳ್ಳುವುದು ಸುಲಭ ಎನ್ನುತ್ತಾರೆ. ಅಲ್ಲದೆ ಆಸ್ಟ್ರೇಲಿಯಾದಲ್ಲಿ ನಡೆದ ಸಂಶೋಧನೆಯೊಂದು ಆತ್ಮಹತ್ಯೆಗಳನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಬಹುದೆಂದು ಕಂಡುಹಿಡಿದಿದೆ. “ನಾವು ಅಂತಹ ಮಹಿಳೆಯರೊಂದಿಗೆ ಮಾತನಾಡಿದಾಗ ಅಂತಹ ಗಂಡಂದಿರನ್ನು ತೊರೆದು ವಿಷಕಾರಿ ಪರಿಸರವನ್ನು ಬಿಟ್ಟು ಈ ರೀತಿಯ ಸಂಬಂಧದಿಂದ ಹೊರಬರುವುದನ್ನು ಅವರು ಬಯಸುತ್ತಾರೆ ಎಂಬುವುದು ತುಂಬಾ ಸ್ಪಷ್ಟವಾಗಿ ಕಂಡುಬಂತು. ಆದರೆ ಅವರು ಆರ್ಥಿಕವಾಗಿ ಸ್ವತಂತ್ರವಾಗಿಲ್ಲದೇ ಇರುವುದರಿಂದ ಅವರಿಗೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಗಿರಿಮಾ.
ಆತ್ಮಹತ್ಯೆಗೈಯ್ಯಲು ಅನುಕೂಲಕರವಾಗಿರುವ ವಿಷ, ಕೀಟನಾಶಕಗಳು ಕೈಗೆ ಸಿಗದಂತೆ ಮಾಡುವ ಮೂಲಕ ಆತ್ಮಹತ್ಯೆಯ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ಒಂದು ಸಂಶೋಧನೆ ಹೇಳುತ್ತದೆ. ಆತ್ಮಹತ್ಯೆ ತಡೆಗಟ್ಟುವಿಕೆಗೆ ಮೀಸಲಿಟ್ಟ ಹಣದ ಬಗ್ಗೆ ಕೇಳಿದ ಪ್ರಶ್ನೆಗೆ ಸರ್ಕಾರವು ಫೆಬ್ರವರಿಯಲ್ಲಿ ಉತ್ತರಿಸಿದ್ದು ಈ ಯೋಜನೆಗೆ ಈಗಾಗಲೇ ನಿಧಿಯನ್ನು ಮೀಸಲಿಡಲಾಗಿದೆ ಮತ್ತು ಮಾನಸಿಕ ಆರೋಗ್ಯಕ್ಕಾಗಿ ರಾಷ್ಟ್ರೀಯ ಟೆಲಿಮೆಡಿನಿಕ್ ಕಾರ್ಯಕ್ರಮವನ್ನೂ ಘೋಷಿಸಲಾಗಿದೆ ಎಂದಿದೆ. ಆದರೆ 2018ರಲ್ಲೇ ಆತ್ಮಹತ್ಯೆಗಳನ್ನು ಕಡಿಮೆಗೊಳಿಸುವ ವಿಧಾನಗಳನ್ನು ಸೂಚಿಸಲು ಲಕ್ಷ್ಮೀ ವಿಜಯಕುಮಾರ್ ಅವರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಒಂದನ್ನು ಸರಕಾರ ರೂಪಿಸಿದ್ದು ಅದರ ಶಿಫಾರಸುಗಳನ್ನು ಇನ್ನೂ ಜಾರಿ ಮಾಡಿಲ್ಲ. “ನಾವು ಯೋಜನೆಯನ್ನು ಸಲ್ಲಿಸಿದ್ದೇವೆ. ಆದರೆ ಇದು ಇನ್ನೂ ಕಡತದಲ್ಲೇ ಇದೆ. ಒಂದು ದಿನ ಅದು ಜಾರಿಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಲಕ್ಷ್ಮೀ ವಿಜಯಕುಮಾರ್.