2018 ಮತ್ರು 20 ರ ನಡುವೆ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟ 4690 ಆರೋಪಿಗಳ ಪೈಕಿ 53% ಮಂದಿ 18-30 ವಯಸ್ಸಿನವರಾದರೆ ಹದಿಮೂರು ಆರೋಪಿಗಳು ಹದಿನೆಂಟು ವರ್ಷಕ್ಕಿಂತ ಕೆಳಗಿನವರು ಮತ್ತು ಹತ್ತು ಮಂದಿ 60 ವರ್ಷ ಮೇಲ್ಪಟ್ಟವರು ಎಂದು ಗುರುವಾರ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಕೇರಳದ ಸಿಪಿಐ ಸಂಸದರಾಗಿರುವ ಸಂತೋಷ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಯುಎಪಿಎ ಅಡಿಯಲ್ಲಿ ಬಂಧಿತರಾದ 4,690 ವ್ಯಕ್ತಿಗಳಲ್ಲಿ 2,488 (53%) ಮಂದಿ 18-30 ವಯಸ್ಸಿನವರಾದರೆ 1,850 (39%) ಮಂದಿ 30-45 ವಯಸ್ಸಿನವರು ಮತ್ತು 329 ಮಂದಿ 45-60 ವಯಸ್ಸಿನವರು ಎಂದಿದ್ದಾರೆ. 2018-20 ಅವಧಿಯಲ್ಲಿ, ಸಂಸತ್ತಿನಲ್ಲಿ ಮಂಡಿಸಿದ ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಈ 4690 ವ್ಯಕ್ತಿಗಳಲ್ಲಿ ಕೇವಲ 149 ಮಂದಿ ಮಾತ್ರ ಯುಎಪಿಎ ಅಡಿಯಲ್ಲಿ ಶಿಕ್ಷೆಗೊಳಗಾದವರು.
ಆದರೆ ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿತರಾದವರ ಶೇಕಡಾವಾರು ಸಂಖ್ಯೆ 2020ರಲ್ಲಿ 32% ರಷ್ಟು ಕಡಿಮೆಯಾಗಿದೆ. 2020ರಲ್ಲಿ 1,321 ಮಂದಿ ಈ ಕಾನೂನಿನಡಿ ಬಂಧನಕ್ಕೊಳಗಾಗಿದ್ದರೆ 2019ರಲ್ಲಿ 1,948 ಮಂದಿಯನ್ನು ಬಂಧಿಸಲಾಗಿತ್ತು. ಆದರೆ 2020 ರಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ 80ಕ್ಕೆ ಏರಿದೆ. 2014ರಲ್ಲಿ ಈ ಸಂಖ್ಯೆ 34ರಲ್ಲಿತ್ತು.
2020 ರಲ್ಲಿ UAPA ಅಡಿಯಲ್ಲಿ ಉತ್ತರಪ್ರದೇಶದಲ್ಲಿ 361 ಬಂಧನವಾಗಿದ್ದು ಇದು ದೇಶದಲ್ಲೇ ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ. 346 ಬಂಧನಗಳೊಂದಿಗೆ ಕಾಶ್ಮೀರ ಎರಡನೇ ಮತ್ತು 225 ಬಂಧನಗಳೊಂದಿಗೆ ಮಣಿಪುರ ಮೂರನೇ ಸ್ಥಾನದಲ್ಲಿದೆ.
ಕೇಂದ್ರ ಸಚಿವಾಲಯವು ಜುಲೈ 2020 ರಂದು ನೀಡಿದ ಹೇಳಿಕೆ ಪ್ರಕಾರ ಯುಎಎಪಿಎ ಅಡಿಯಲ್ಲಿ ಬಂಧಿಸಿರುವ 24,134 ಜನರಲ್ಲಿ ಕೇವಲ 212 ಮಂದಿ 2016-20 ಅವಧಿಯಲ್ಲಿ ಶಿಕ್ಷೆಗೊಳಗಾಗಿದ್ದಾರೆ.
UAPA ಕಾನೂನು 1967 ರಲ್ಲಿ ಜಾರಿಗೊಳಿಸಲ್ಪಟ್ಟ ಕಾನೂನು. ಇದಕ್ಕೆ 2008 ಮತ್ತು 2012 ರಲ್ಲಿ ಕಾಂಗ್ರೆಸ್ ಸರ್ಕಾರಗಳು ಮತ್ತು ಆ ನಂತರ ನರೆಂದ್ರ ಮೋದಿ ಸರ್ಕಾರ ತಿದ್ದುಪಡಿ ಮಾಡಿತು. 2019 ರಲ್ಲಿ, ಪ್ರಸ್ತುತ ಎನ್ಡಿಎ ಸರ್ಕಾರವು ಮಾಡಿದ ತಿದ್ದುಪಡಿಯ ಪ್ರಕಾರ ಸಂಸ್ಥೆಗಳು ಮಾತ್ರವಲ್ಲದೆ ವ್ಯಕ್ತಿಗಳನ್ನು ಸಹ ಯುಎಪಿಎ ಅಡಿಯಲ್ಲಿ ಬಂಧಿಸಬಹುದು.
ಭಯೋತ್ಪಾದನಾ ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲ್ಪಟರೆ ಜಾಮೀನು ಅಸಾಧ್ಯ. ಹಲವಾರು ವರ್ಷಗಳ ಕಾಲ ವಿಚಾರಣೆಗಾಗಿ ಜೈಲಿನಲ್ಲಿ ಕಾಯಬೇಕಾಗುತ್ತದೆ. ಹಾಗಾಗಿಯೇ ಈ ಕಾನೂನನ್ನು ಸರ್ಕಾರಗಳು ದುರ್ಬಳಕೆ ಮಾಡುವ ಅಪಾಯ ಇದೆ ಎಂಬ ಕೂಗು ಎದ್ದಿರುವುದು. ಈ ಕೂಗಿಗೆ ಸರ್ಕಾರವೇ ನೀಡಿರುವವ ಅಂಕಿ ಅಂಶಗಳು ಮತ್ತಷ್ಟು ಬಲತುಂಬುತ್ತಿವೆ. ಅದು ಸಲ್ಲಿಸಿರುವ ವರದಿಯ ಪ್ರಕಾರ 2016 ರಿಂದ 4,098 ವ್ಯಕ್ತಿಗಳು, 2017 ರಿಂದ 4,862 ವ್ಯಕ್ತಿಗಳು, 2019 ರಿಂದ 5,862 ವ್ಯಕ್ತಿಗಳು , 2019 ರಿಂದ 5,862 ವ್ಯಕ್ತಿಗಳು ಮತ್ತು 2020 ರಿಂದ 6,482 ರಷ್ಟು ವ್ಯಕ್ತಿಗಳು ವಿಚಾರಣೆಗಾಗಿ ಕಾಯುತ್ತಾ ಜೈಲಲ್ಲಿದ್ದಾರೆ. ಆದರೆ ಇದೇ ಅವಧಿಯಲ್ಲಿ ಈ ಕಾನೂನಿನ ಪ್ರಕಾರ ಬಂಧಿಸಲ್ಪಟ್ಟು ಬಿಡುಗಡೆಗೊಂಡವರು ಕೇವಲ 386 ಮಂದಿ ಮಾತ್ರ.