ಇದನ್ನು ಉತ್ತರಿಸಲು ಸ್ವಸ್ವಲ್ಪ ಹಿಂದಿಂದೆ ಹೋಗುತ್ತ ಎಲ್ಲಿ ನಿಮಗೂ ಎಂಜಿನೀರಿಂಗ್ ಪಠ್ಯ ಓದಿಸುವೆನೊ ಎಂಬ ಆತಂಕವಿದೆ. ಇಂಟರ್ನೆಟ್ ಸ್ಪೀಡು ಅರ್ಥ ಮಾಡಿಕೊಳ್ಳಲು ಎರಡು ಮೂರು ತಂತ್ರಜ್ಞಾನಗಳ ಬೇಸಿಕ್ಕುಗಳನ್ನು ತಿಳಿಯುವುದು ಮುಖ್ಯ. ಒಂದು ಕೇಬಲ್ಲುಗಳು. ಇನ್ನೊಂದು ಕೇಬಲ್ಲೊಳಗೆ ಮಾಹಿತಿ ಹರಿಯುವ ಪ್ರಕ್ರಿಯೆ. ಮತ್ತೊಂದು ಈ ಹರಿಯುವಿಕೆಯನ್ನು ನಿಯಂತ್ರಿಸಲು ಇರುವ ತಂತ್ರಜ್ಞಾನಗಳು.
ಕೇಬಲ್ಲುಗಳು – ಪೂರ್ತಿ ಆಳಕ್ಕಿಳಿಯದೆ ನಾವು ಕಣ್ಣಾರೆ ನೋಡಿರುವ ಕೇಬಲ್ಲುಗಳನ್ನು ತಿಳಿಯೋಣ. ತೀರ ಮೊನ್ನೆ ಮೊನ್ನೆವರೆಗೆ ಇಂಟರ್ನೆಟ್ ಎಂದರೆ ನಮ್ಮ ಮನೆಗಳಿಗೆ ಒಂದು ಕಪ್ಪು ಕೇಬಲ್ ಎಳೆಯುತ್ತಿದ್ದರು. ಅವನ್ನು ಕತ್ತರಿಸಿ ನೋಡಿದರೆ ಒಳಗೆ ಸಣ್ಣ ತಾಮ್ರದ ತಂತಿ ಇರುತ್ತಿತ್ತು. ಅದರ ಸುತ್ತ ಬಿಳಿ ಪ್ಲಾಸ್ಟಿಕ್ಕು, ಅದರ ಮೇಲೆ ಬಟ್ಟೆ ತರಹ ನೂಲು, ಅದರ ಮೇಲೆ ಕಪ್ಪು ಪ್ಲಾಸ್ಟಿಕ್ಕು. ಇದನ್ನು ಕೋ ಆಕ್ಸಿಯಲ್ ಕೇಬಲ್ ಎಂದು ಕರೆಯುತ್ತಾರೆ.
ಇದರಲ್ಲಿ ಮಾಹಿತಿಯು ಮನುಷ್ಯನಿಗೆ ತಗುಲದ ಮಟ್ಟದ ಸಣ್ಣ ಎಲೆಕ್ಟ್ರಿಕ್ ಸಿಗ್ನಲ್ಲಾಗಿ ಹರಿಯುತ್ತದೆ. ಇಲ್ಲಿ ಕರೆಂಟು ಬಂದ್ರೆ ಒಂದು, ಬರದಿದ್ರೆ ಸೊನ್ನೆ ಎಂದರ್ಥ.
ಈಗ ಈ ಕೇಬಲ್ಲುಗಳನ್ನೆಲ್ಲ ತೆಗೆದು ಇನ್ನೊಂದು ತರಹದ ಕೇಬಲ್ ಅಳವಡಿಸುತ್ತಿದ್ದಾರೆ. ಕುಯ್ದು ನೋಡಿದರೆ ನಿಮಗೆ ಅದರೊಳಗೆ ತಲೆಗೂದಲಿಗಿಂತ ಸಣ್ಣ ಗಾತ್ರದ ನೂರಾರು ಶಾವಿಗೆಯಂತಹ ವಸ್ತು ಕಾಣಸಿಗುತ್ತದೆ. ಸ್ವಲ್ಪ ಎದ್ವಾ ತದ್ವಾ ಕೈಯಾಡಿಸಿದರೆ ಅವು ಮುರಿಯುತ್ತವೆ. ಇದನ್ನು ಫೈಬರ್ ಆಪ್ಟಿಕ್ ಕೇಬಲ್ ಎಂದು ಕರೆಯುತ್ತಾರೆ. ಇದರೊಳಗೆ ಮಾಹಿತಿಯು ಬೆಳಕಿನ ರೂಪದಲ್ಲಿ(ಎಲಕ್ಟ್ರಿಕ್ ಅಲ್ಲ) ಸಂಚರಿಸುತ್ತದೆ. ಹೆಂಗೆ? ಬೆಳಕು ಗೋಡೆಗೆ ಬಡಿದರೆ ಬಾಗುತ್ತದೆ. ಎದುರು ಗೋಡೆಯಿದ್ದರೆ ತಿರಗ ಅದಕ್ಕೆ ಬಡಿಯುತ್ತದೆ. ಇಂತಹ ಬೆಳಕನ್ನು ಪೈಪಿನೊಳಗೆ ಇಳಿಬಿಟ್ಟರೆ ಅದು ಪೈಪಿನೊಳಗಿನ ಗೋಡೆಗೆ ಬಡಿದು ಬಡಿದು ಮುಂದೆ ಚಲಿಸುತ್ತದೆ. ಈ ಪ್ರತೀ ಶಾವಿಗೆಯಂತಹ ಪೈಪಿನೊಳಗೆ ಅದೆಷ್ಟೊ ದೂರದಿಂದ ಒಂದು ಸೊನ್ನೆಗಳು ಹರಿದು ಬರುವುದು ಹೀಗೆ. ಇನ್ನೇನಿಲ್ಲ ಬೆಳಕು ಇದ್ರೆ ಒಂದು ಬೆಳಕು ಇಲ್ದಿದ್ರೆ ಸೊನ್ನೆ ಅಂತ ಅರ್ಥ ಅಷ್ಟೇ. ಈ ಕಡೆ ನಮ್ಮ ಕಂಪ್ಯೂಟರು ಅಂತಹ ಒಂದು ಸೊನ್ನೆಗಳನ್ನು ಕಲೆಹಾಕಿ ಕಳಿಸಿದ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ.
ಮೂರನೆಯ ಟೈಪಿನ ಕೇಬಲ್ ನಿಮ್ಮ ಮನೆಯೊಳಗೆ ಕಡಿಮೆ ದೂರಕ್ಕೆ ಅಂದರೆ ರೌಟರಿಂದ ಲ್ಯಾಪಟಾಪಿನ ತನಕ ಇರುವ ಕೇಬಲ್. ಅದನ್ನು ಈದರ್ ನೆಟ್ ಕೇಬಲ್ ಎಂದು ಕರೆಯುತ್ತಾರೆ. ಅದರೊಳಗೆ ಟ್ವಿಸ್ಟೆಡ್ (ಜಡೆ ಹೆಣೆದ) ಕಾಪರ್ ವಯರುಗಳು ಇರುತ್ತವೆ. ಅವು ಕಿಲೋಮೀಟರುಗಟ್ಟಲೆ ದೂರದ ಪ್ರಯಾಣಕ್ಕೆ ಸಲ್ಲವು. ಇವನ್ನು ಕ್ಯಾಟ್ ಕೇಬಲ್ ಎಂದು ಸಹ ಕರೆಯುತ್ತಾರೆ(ಕ್ಯಾಟ್ ನಲ್ಲೇ ಹಲವು ಬಗೆ ಇರುವವು). ಇದನ್ನು ಕುಯ್ದರೆ ನಿಮಗೆ ಒಳಗೆ ಎರಡು ಮೂರು ಪರಸ್ಪರ ಹೆಣೆದುಕೊಂಡ ಕಾಪರ್ ವಯರುಗಳು ಕಾಣಸಿಗುವವು.
ರವಾನೆಯ ತಂತ್ರಜ್ಞಾನ- ನಿಮ್ಮ ಮನೆಗಳಿಗೆ ಪೈಪುಗಳ ಮೂಲಕ ನೀರು ಬರುವುದು ಸಹಜ. ಅಕಸ್ಮಾತ್ ನಿಮ್ಮ ಮನೆಯಿಂದ ಬಿಬಿಎಂಪಿ ಟ್ಯಾಂಕಿಗೆ ನೀರು ಹೋಗಬೇಕಂದರೆ ಏನು ಮಾಡುವುದು? ಒಂದೋ ಮಗ್ಗುಲಲ್ಲಿ ಇನ್ನೊಂದು ಪೈಪು ಇಡಬೇಕು. ಅಥವಾ ಒಳಬರುವ ನೀರನ್ನು ನಿಲ್ಲಿಸಿ ಅದೇ ಪೈಪಿನಲ್ಲಿ ಹೊರಕಳಿಸಬೇಕು.
ಹೀಗೆ ಕೇವಲ ಬಿಬಿಎಂಪಿ ಟ್ಯಾಂಕಿಂದ ನಿಮ್ಮ ಮನೆಗೆ ನೀರು ಹರಿದರೆ ಅದನ್ನು ಕಂಪ್ಯೂಟರಿನಲ್ಲಿ ಸಿಂಪ್ಲೆಕ್ಸ್ ಎಂದು ಕರೆಯುತ್ತಾರೆ. ರೇಡಿಯೋಗಳು ನಿಮಗೆ ಹಾಡು ಕೇಳಿಸುತ್ತವೆ. ರೇಡಿಯೋದಲ್ಲಿ ನೀವು ಮಾತಾಡಕ್ಕಾಗಲ್ಲ. ಹಾಗಾಗಿ ರೇಡಿಯೋ ಸಹ ಸಿಂಪ್ಲೆಕ್ಸು.
ಒಂದು ಸಲ ಈ ಕಡೆ ಒಂದ ಸಲ ಆ ಕಡೆ ನೀರು ಹರಿಸ ಬಲ್ಲವರಾದರೆ ಅದನ್ನು ಹಾಫ್ ಡ್ಯೂಪ್ಲೆಕ್ಸ್ ಎಂದು ಕರೆಯುತ್ತಾರೆ. ಹಳೆಯ ಸಿನಿಮಾಗಳಲ್ಲಿ ಸೈನಿಕರು ವಾಕಿ ಟಾಕಿಯಲ್ಲಿ ಮಾತಾಡ್ತ ತಮ್ಮ ಮಾತು ಮುಗಿದ ಕೂಡಲೆ ಓವರ್ … ಓವರ್ ಎನ್ನುತ್ತ ತಮ್ಮ ಕೈಲಿರುವುದನ್ನು ಒತ್ತುತ್ತಿರುತ್ತಾರಲ್ಲ… ಅದು ಸಹ ಹಾಫ್ ಡ್ಯೂಪ್ಲೆಕ್ಸು.
ಒಂದೇ ಸಲ ಎರಡೂ ಕಡೆ ಹರಿಸಬಲ್ಲಿರಾದರೆ ಅದನ್ನು ಫುಲ್ ಡ್ಯೂಪ್ಲೆಕ್ಸ್ ಎಂದು ಕರೆಯುತ್ತಾರೆ.
ಅದೆಂಗಪ್ಪ ಒಂದು ಪೈಪಿನಲ್ಲಿ ಎರಡೂ ದಿಕ್ಕಿನಲ್ಲಿ ನೀರು ಹರಿಸುವುದು? ದೇವರಿಗೂ ಅಸಾಧ್ಯ.
ಒಂದು ಪೈಪಿನಲ್ಲಿ ನೀರಾಗಲಿ ಪೆಟ್ರೋಲಾಗಲಿ ಗಾಳಿಯಾಗಲಿ ಡೇಟಾ ಆಗಲಿ ಅಟ್ ಎ ಟೈಮ್ ಎರಡೂ ಕಡೆ ಹರಿಸುವುದು ಅಸಾಧ್ಯ. ಹಾಗಾದರೆ ಇಂಟರ್ನೆಟ್ ವಿಡಿಯೊ ಕಾಲ್ ನಲ್ಲಿ ಜಗಳವಾಡುವಾಗ ಅಟ್ ಎ ಟೈಮ್ ಇಬ್ರೂ ಬೈದಾಡ್ತೀವಲ್ಲ ಅದು ಹಂಗಂಗೆ ಕೇಳಿಸುತ್ತದಲ್ವ? ಹೇಗೆ ಸಾಧ್ಯ? ಮನೆಗೆ ಎಳೆದಿರುವುದು ಒಂದೇ ಕೇಬಲ್ ಆಗಿದ್ದರೂ ಸಹ!
ಭೌತಿಕವಾಗಿ ಫುಲ್ ಡ್ಯೂಪ್ಲೆಕ್ಸ್ ಗೆ ಎರಡು ಪೈಪು ಬೇಕೇ ಬೇಕು. ಫೈಬರ್ ಕೇಬಲ್ ನಲ್ಲಿ ಹಲವು ಸಣ್ಣ ಕೇಬಲ್ ಗಳು ಇರುತ್ತವೆ. ಅಂತೆಯೇ ಟ್ವಿಸ್ಟೆಡ್ (ಜಡೆ ಹೆಣೆದ) ಕೇಬಲ್ಲುಗಳಲ್ಲಿ ಸಹ ಹಲವು ವಯರುಗಳು ಇರುತ್ತವೆ. ವಯರು ಒಂದೇ ಇದ್ದರೆ ಅದು ಹಾಫ್ ಡ್ಯೂಪ್ಲೆಕ್ಸ್ ಎಂದೇ ಅರ್ಥ! ಆದರೆ… ಎಲಕ್ಟ್ರಿಕ್ ಸಿಗ್ನಲ್ ಗಳು ಮಿಂಚಿನ ವೇಗದಲ್ಲಿ ಚಲಿಸುವುದರಿಂದ ನೀವು ಅಟ್ ಎ ಟೈಮ್ ಬೈದಾಡಿದರೂ ನಿಮಗೆ ಗೊತ್ತೇ ಆಗದಂತೆ ಹಾಫ್ ಡೂಪ್ಲೆಕ್ಸ್ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ! ಸಣ್ಣ ರಸ್ತೆಯಲ್ಲಿ ಒಬ್ಬ ಟ್ರಾಫೀಕ್ ಪೊಲೀಸ್ ನಿಂತು ವಾಹನಗಳನ್ನು ಒಂದು ಸಲ ಒಂದು ದಿಕ್ಕನಲ್ಲಿ ಮಾತ್ರ ಹೋಗುವಂತೆ ನಿಯಂತ್ರಿಸುತ್ತಾನಲ್ಲ ಹಾಗೆ.
ಇಷ್ಟಾಯಿತಲ್ವ. ಈಗ ಬರೋಣ ಡೌನ್ ಲೋಡ್ ಸ್ಪೀಡು ಜಾಸ್ತಿ ಅಪ್ ಲೋಡ್ ಸ್ಪೀಡು ಕಡಿಮೆ ಕೊಟ್ಟಿರ್ತಾರೆ ಯಾಕೆ ಎಂದು. ಇಷ್ಟರಲ್ಲಿ ನಿಮಗೆ ಅರ್ಥವಾಗಿರಬೇಕು ನಿಮ್ಮ ಮನೆಗೆ ಬರುವ ವಯರಿನೊಳಗಿನ ಜಾಗ ಮತ್ತು ಸಮಯವನ್ನು ಬ್ರಾಡ್ ಬ್ಯಾಂಡಿನ ಕಂಪನಿಯವರು ಬಜೆಟ್ ಮಾಡಬೇಕು. ಐತಿಹಾಸಿಕವಾಗಿ ಇಂಟರ್ನೆಟ್ ಎಂದರೆ ಉಪಯೋಗಿಕ ದೃಷ್ಟಿಯಿಂದ 99 ಭಾಗ ಡೌನ್ ಲೋಡ್ ಕೇವಲ 1% ಅಪ್ ಲೋಡ್ ಅಗತ್ಯವಿರುತ್ತದೆ! ಒಂದು ವೆಬ್ ಸೈಟ್ ಓಪನ್ ಮಾಡಿದರೆ ಸಾಕು ನೀವು ಹಲವು ಮೆಗಾಬೈಟುಗಳಷ್ಟು ಡೇಟಾ ಡೌನ್ ಲೋಡ್ ಮಾಡಿರುತ್ತೀರಿ. ಒಂದು ಕಿಲೋಬೈಟಿನಷ್ಟೂ ಅಪ್ ಲೋಡ್ ಮಾಡಿರಲ್ಲ. ಆದ್ದರಿಂದ ಕಂಪನಿಗಳು ನಿಮಗೆ ಉತ್ತಮ ಇಂಟರ್ನೆಟ್ ಅನುಭವ ನೀಡಲು ನಿಮ್ಮ ಕೇಬಲಿನ ಜಾಗ ಮತ್ತು ಸಯಮವನ್ನು ಹೆಚ್ಚಾಗಿ ಡೌನ್ ಲೋಡಿಗೆ ಮೀಸಲಿಟ್ಟಿರುತ್ತಾರೆ. ಅಪ್ ಲೋಡಿಗೆ ಕಡಿಮೆ ಅವಕಾಶ ಕೊಟ್ಟಿರುತ್ತಾರೆ.
ಕಾಲ ಬದಲಾಗಿದೆ. ಈಗ ಸಾಮಾನ್ಯ ಜನರೂ ಸಾಕಷ್ಟು ಅಪ್ ಲೋಡಿನಲ್ಲಿ ತೊಡಗಿಸಿಕೊಂಡಿದ್ದಾರೆ. ಫೋಟೋಗಳು ವಿಡಿಯೋಗಳು ಮುಂತಾಗಿ. ಆದ್ದರಿಂದಲೇ ಕಂಪನಿಗಳು ಈಗಿನ ಅಪ್ ಲೋಡ್ ಸ್ಪೀಡು ತುಸು ಜಾಸ್ತಿ ಮಾಡಿದ್ದಾರೆ. ಆದಾಗ್ಯೂ ನೂರಕ್ಕೆ ಎಂಭತ್ತು ಜನ ದಿನವೆಲ್ಲ ಕೂತರು ಒಂದು ಮೆಗಾಬೈಟ್ ನಷ್ಟು ಅಪ್ ಲೋಡ್ ಮಾಡಿರಲ್ಲ. ಮೇಲಾಗಿ ಈಗ ಕಾಪರ್ ಹೋಗಿ ಫೈಬರ್ ಬಂದಿದೆ… ಕಂಪನಿಗಳು ಕೇಬಲ್ಲಿನ ಜಾಗ ಮತ್ತು ಸಮಯವನ್ನು ಬಜೆಟ್ ಮಾಡುವ ಅವಶ್ಯಕತೆಯೇ ಇಲ್ಲ. ಆದರೂ ಮಾಡುತ್ತಾರೆ ಯಾಕಂದರೆ ಹಣಕ್ಕೆ ತಕ್ಕನಂತಹ ಸರ್ವೀಸು ಇಡಬೇಕಲ್ವ .
ಈಗಿನ ಫೈಬರ್ ಕೇಬಲ್ಲುಗಳು ಹಲವು ಗಿಗಾಬಿಟ್ ಸ್ಪೀಡಿನಲ್ಲಿ ಒಂದೇ ಸಮಯದಲ್ಲಿ ಅಪ್ ಲೋಡ್ ಡೌನ್ ಲೋಡ್ ಎರಡನ್ನೂ ಮಾಡಬಲ್ಲವು. ಇನ್ನೂ ಹತ್ತಿಪ್ಪತ್ತು ವರುಷಗಳ ಕಾಲ ಇವನ್ನು ಮಾತಾಡಿಸೋಂಗೀಲ್ಲ ಆ ಪ್ರಮಾಣದಲ್ಲಿ ದಕ್ಷ. ಆದರೆ ಕಂಪನಿಗಳು ತಮ್ಮ ಸರ್ವರುಗಳಲ್ಲಿ ಕೊಕ್ಕೆ ಇಟ್ಟಿರುತ್ತಾರೆ. ರೌಟರ್ ಎಂಬ ಸಾಧನಗಳು ಇರುತ್ತವೆ. ಅಣೆಕಟ್ಟಿನ ಕೋಡಿ ಇರುತ್ತವಲ್ಲ ಹಾಗೆ. ಅಲ್ಲಿನ ಎಂಜಿನೀರು ನಿಮ್ಮ ಪ್ಲಾನಿಗೆ ತಕ್ಕಂತೆ ಕೊಟ್ಟ ಹಣಕ್ಕೆ ತಕ್ಕಂತೆ ಕೋಡಿಯನ್ನು ಇಷ್ಟೇ ಮೇಲೆತ್ತಿ ಡೇಟಾ ಹರಿಯ ಬಿಡುತ್ತಾನೆ. ಕಳ್ಳ! ಹಾಗಾಗಿ ಪೈಪು ದೊಡ್ಡದಿದ್ದರೂ ನಿಮ್ಮ ಮನೆಗೆ ಬೆರಳು ಗಾತ್ರದ ನೀರು ಬರಲು ಸಾಧ್ಯ.
ಬರಹ – ಮಧು ವೈ ಎನ್