ಮಾದಕ ವ್ಯಸನವು ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವನ್ನು ಕಾಡುತ್ತಿರುವ ಅತ್ಯಂತ ಸಂಕೀರ್ಣ ಮತ್ತು ವ್ಯಾಪಕವಾದ ಆರೋಗ್ಯ ಸಮಸ್ಯೆಯಾಗಿದೆ. ಕಾನೂನು ಜಾರಿ ಸಂಸ್ಥೆಗಳಿಂದ ಭಾರತದಲ್ಲಿ ಡ್ರಗ್ ಕಾರ್ಟೆಲ್‌ಗಳ ಮೇಲೆ ಹೆಚ್ಚುತ್ತಿರುವ ದಾಳಿಗಳ ಹೊರತಾಗಿಯೂ, ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಆಕ್ಟ್, 1985 ರ ಅಡಿಯಲ್ಲಿ ವರದಿಯಾಗುತ್ತಿರುವ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2020 ರಲ್ಲಿ NDPS ಕಾಯಿದೆಯಡಿಯಲ್ಲಿ ಸುಮಾರು 60,000 ಪ್ರಕರಣಗಳು ದಾಖಲಾಗಿವೆ ಎಂದು ವರದಿ ಮಾಡಿದೆ. ಇದು ಕಳೆದ ದಶಕದಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು. ಈ ಹೆಚ್ಚಳವು ಮಾದಕ ವ್ಯಸನ ಮತ್ತು ವ್ಯಸನವನ್ನು ತಡೆಗಟ್ಟುವಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
NDPS ಕಾಯಿದೆ 1985 ‘ವೈಯಕ್ತಿಕ ಬಳಕೆಗಾಗಿ ಮಾದಕವಸ್ತುಗಳ ಸ್ವಾಧೀನ’ ಮತ್ತು ‘ಮಾರಾಟಕ್ಕಾಗಿ ಮಾದಕವಸ್ತುಗಳ ಸಾಗಾಟ’ ಎರಡನ್ನೂ ಅಪರಾಧವೆನ್ನುತ್ತದೆ ಮತ್ತು ಗ್ರಾಹಕರು ಹಾಗೂ ಮಾದಕವಸ್ತುಗಳ ವ್ಯಾಪಾರಿಗಳನ್ನು ಅಪರಾಧಿಗಳೆಂದು ಪರಿಗಣಿಸುತ್ತದೆ. ಆದರೆ ಈ ಕಾಯ್ದೆ ಮಾದಕ ವ್ಯಸನವನ್ನು ಒಂದು ಗಂಭೀರ ಕಾಯಿಲೆ ಎಂದು ಒಪ್ಪಿಕೊಳ್ಳಲು ವಿಫಲವಾಗಿದೆ. ಮಾದಕ ವ್ಯಸನಿಗಳಿಗೆ ಶಿಕ್ಷೆಗಿಂತ ಹೆಚ್ಚಾಗಿ ಚಿಕಿತ್ಸೆ ಮತ್ತು ಪುನರ್ವಸತಿಯ ಅಗತ್ಯವಿರುತ್ತದೆ. ಇದಲ್ಲದೆ, ಮಾದಕವಸ್ತು ಕಳ್ಳಸಾಗಣೆಯ ಮೂಲ ಸಮಸ್ಯೆಗಿಂತ ಹೆಚ್ಚಾಗಿ ಮಾದಕವಸ್ತುಗಳ ವೈಯಕ್ತಿಕ ಸೇವನೆಯ ಪ್ರಕರಣಗಳ ಮೇಲೆ ಕಾನೂನು ಜಾರಿ ಸಂಸ್ಥೆಗಳು ಹೆಚ್ಚು ಗಮನ ಹರಿಸುತ್ತಿವೆ ಎಂಬುವುದನ್ನು ಈ ಸಂಸ್ಥೆಗಳು ನೀಡಿರುವ ಡಾಟಾಗಳೇ ಹೇಳುತ್ತವೆ. ಮಾತ್ರವಲ್ಲದೆ ಮಾದಕ ವ್ಯಸನಗಳ ಹೆಚ್ಚಳದ ಹೊರತಾಗಿಯೂ, ಮಾದಕ ವ್ಯಸನದ ಸಂದರ್ಭದಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿಗೆ ನೀಡಬೇಕಿರುವ ಆದ್ಯತೆಯನ್ನು ಇನ್ನೂ ನೀಡಲಾಗುತ್ತಿಲ್ಲ. 2019 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ರಾಷ್ಟ್ರವ್ಯಾಪಿ ನಡೆಸಿದ ಅಧ್ಯಯನವೊಂದರ ಪ್ರಕಾರ 75% ರಷ್ಟು ಮಾದಕ ವ್ಯಸನಿಗಳಿಗೆ ಚಿಕಿತ್ಸೆಯ ಅಗತ್ಯವಿದ್ದು ಕೆಲವೇ ಕೆಲವು ಜನರಿಗೆ ಮಾತ್ರ ಚಿಕಿತ್ಸೆ ಲಭ್ಯವಾಗುತ್ತಿದೆ.
ಬಂಧನ, ಶಿಕ್ಷೆ, ಪತ್ರಿಕಾಗೋಷ್ಠಿ, ವ್ಯಾಪಕ ಪ್ರಚಾರ, ನಿಷ್ಠಾವಂತ ಅಧಿಕಾರಿಗಳೆಂದು ಬಿಂಬಿಸಿಕೊಳ್ಳುಕುವಿಕೆಯ ಹೊರತಾಗಿ ವೈಜ್ಞಾನಿಕವಾಗಿ ಸಾಬೀತು ಪಡಿಸಲ್ಪಟ್ಟು, ಸಾರ್ವಜನಿಕ ಆರೋಗ್ಯವನ್ಬು ಗಮನದಲ್ಲಿಟ್ಟುಕೊಂಡು ಡ್ರಗ್ ನೀತಿಯನ್ನು ಒಕ್ಕೂಟ ಸರ್ಕಾರ ರೂಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಸ್ಸಾಂನ ನೌಗಾಂಗ್‌ನಿಂದ ಕಾಂಗ್ರೆಸ್ ಲೋಕಸಭಾ ಸಂಸದರಾಗಿರುವ ಪ್ರದ್ಯುತ್ ಬೊರ್ಡೊಲೊಯ್ ಅವರು ಡಿಸೆಂಬರ್ 23ರಂದು ಸಂಸತ್ತನಿನಲ್ಲಿ ಮಂಡಿಸಲೆಂದು ಸಲ್ಲಿಸಿದ್ದ ‘ಸಾರ್ವಜನಿಕ ಆರೋಗ್ಯ ಮತ್ತು ಹಾನಿ ಕಡಿತದ ಆಧಾರದ ಮೇಲೆ ಮಾನವೀಯ ಔಷಧ ನೀತಿ’ಯಲ್ಲಿ ಕೆಲವು ಶಿಫಾರಸುಗಳಿದ್ದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಡ್ರಗ್ ನೀತಿಗೆ ಹೊಸ ದಿಕ್ಕು ನೀಡಬಲ್ಲುದು.
ಅವರ ಪ್ರಕಾರ ಮೊದಲನೆಯದಾಗಿ, ವೈಯಕ್ತಿಕ ಬಳಕೆಗಾಗಿ (NDPS ಕಾಯಿದೆ 1985 ರಲ್ಲಿ ವ್ಯಾಖ್ಯಾನಿಸಲಾದ ‘ಸಣ್ಣ ಪ್ರಮಾಣಗಳು’) ‘ಸಣ್ಣ ಪ್ರಮಾಣದ’ ಮಾದಕ ದ್ರವ್ಯದ ಸ್ವಾಮ್ಯವನ್ನು ಅಪರಾಧೀಕರಿಸಲು NDPS ಕಾಯಿದೆಯನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರವು ಹೆಚ್ಚಿನ ಮುತುವರ್ಜಿ ವಹಿಸಬೇಕು. ಡ್ರಗ್ಸ್‌ನ ವೈಯಕ್ತಿಕ ಸೇವನೆಗಾಗಿ ಬಂಧಿತರಾದವರನ್ನು ಕಾನೂನು ಕ್ರಮಕ್ಕೆ ಒಳಪಡಿಸುವ ಮತ್ತು ಬಂಧಿಸುವ ಕ್ರಮಕ್ಕೆ ಬದಲಾಗಿ ಕಡ್ಡಾಯ ಡಿ-ಅಡಿಕ್ಷನ್ ಚಿಕಿತ್ಸೆ ಅಥವಾ ಪುನರ್ವಸತಿಗೆ ನಿರ್ದೇಶಿಸಲಾಗಿದೆ ಎಂಬುವುದನ್ನು ಆಡಳಿತ ಖಚಿತಪಡಿಸಿಕೊಳ್ಳಬೇಕು. ‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್’ ಅನ್ನು ತಿದ್ದುಪಡಿ ಮಾಡುವ ಸಂದರ್ಭದಲ್ಲಿ, ವ್ಯಸನಿಗಳು, ಮೊದಲ ಬಾರಿಗೆ ಡ್ರಗ್ ಬಳಸುತ್ತಿರುವವರು ಮತ್ತು ಕೇವಲ ಮನರಂಜನೆಗಾಗಿ ಮಾದಕವಸ್ತು ಬಳಕೆದಾರರ ನಡುವೆ ಇರುವ ವ್ಯತ್ಯಾಸವನ್ನು ಸರ್ಕಾರವು ಪರಿಗಣಿಸಬೇಕು.
ಶಾಸಕಾಂಗ ಕ್ರಮದ ಹೊರತಾಗಿ, ನೀತಿ ಅನುಷ್ಠಾನದ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಹಲವಾರು ಕ್ರಮಗಳನ್ನೂ ಅವರು ಸೂಚಿಸಿದ್ದಾರೆ. ಮೊದಲನೆಯದಾಗಿ, ಪೋಲೀಸಿಂಗ್ ಚಟುವಟಿಕೆಗಳನ್ನು ಮೀರಿ, ಮಾದಕ ವ್ಯಸನವನ್ನು ನಿಯಂತ್ರಿಸಲು ರಾಷ್ಟ್ರೀಯ ನಿಧಿಯನ್ನು ಡಿ-ಅಡಿಕ್ಷನ್ ಕಾರ್ಯಕ್ರಮಗಳು ಮತ್ತು ಮಾದಕವಸ್ತು ಬಳಕೆಯ ಅಸ್ವಸ್ಥತೆಗಳಿಗೆ ಚಿಕಿತ್ಸಾ ಸೌಲಭ್ಯಗಳಿಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಪ್ರಸ್ತುತ NDPS ಕಾಯಿದೆಯು ಪುನರ್ವಸತಿಗೆ ಕೆಲವು ವ್ಯಾಪ್ತಿಯನ್ನು ಒದಗಿಸುತ್ತದೆ, ಆದರೆ ಅದರ ಅನುಷ್ಠಾನವು ತುಂಬಾ ಕಳಪೆಯಾಗಿದೆ. ಎರಡನೆಯದಾಗಿ, ಮಾದಕ ವ್ಯಸನದ ಅಸ್ವಸ್ಥತೆಗಳು, ಮಾದಕವಸ್ತು ಅವಲಂಬನೆಯ ಮಟ್ಟ ಮತ್ತು ವೈರಲ್ ಹೆಪಟೈಟಿಸ್ ಮತ್ತು HIV ನಂತಹ ಸಂಬಂಧಿತ ಆರೋಗ್ಯ ಪರಿಣಾಮಗಳನ್ನು ನಿರ್ಣಯಿಸಲು ಸರ್ಕಾರವು ನಿಯಮಿತವಾದ ರಾಜ್ಯ ಮಟ್ಟದ ಸಮೀಕ್ಷೆಗಳನ್ನು ನಡೆಸಬೇಕು. ಇಂತಹ ನಿಯಮಿತ ಮೈಕ್ರೋ-ಡೇಟಾ ಸಂಗ್ರಹಣೆಯು ಅಪಾಯದಲ್ಲಿರುವ ಜಿಲ್ಲೆಗಳು ಮತ್ತು ಅಪಾಯದಲ್ಲಿರುವ ಜನರನ್ನು ಕಂಡುಹಿಡಿಯಲು ಮತ್ತು ಆ ಮೂಲಕ ನೀತಿ ಪ್ರತಿಕ್ರಿಯೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ನೆರವಾಗುತ್ತವೆ.
ಭಾರತದ ಈಶಾನ್ಯ ಪ್ರದೇಶವು ಹೆಚ್ಚಾಗಿ ಮಾದಕ ವ್ಯಸನಕ್ಕೆ ಒಳಗಾಗಿರುವುದೇ ಅಲ್ಲದೆ ಅಲ್ಲಿನ ಭೌಗೋಳೊಕ ಸಂರಚನೆಯಿಂದಾಗಿ ದೇಶದ ಉಳಿದ ಭಾಗಗಳಿಗೆ ಮಾದಕ ದ್ರವ್ಯ ವಿತರಣೆಯ ಮೂಲವೂ ಆಗಿದೆ. ಪಾರಿಸರಿಕ ಮತ್ತು ಕೆಲವು ರಚನಾತ್ಮಕ ಅಂಶಗಳ ಸಂಯೋಜನೆಯು ಸ್ಥಳೀಯ ಯುವಕರನ್ನು ಮಾದಕ ವ್ಯಸನಕ್ಕೆ ಹೆಚ್ಚು ಗುರಿಯಾಗುವಂತೆ ಮಾಡಿದೆ. ಕಡಿಮೆ ಜನಸಂಖ್ಯೆಯ ಹೊರತಾಗಿಯೂ, ಈಶಾನ್ಯದ ಹಲವಾರು ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಕ್ರಮ ಮಾದಕವಸ್ತು ಬಳಕೆಯನ್ನು ವರ್ಷಂಪ್ರತಿ ದಾಖಲಿಸುತ್ತವೆ ಮತ್ತು ಪ್ರಾಥಮಿಕವಾಗಿ ಇಂಟ್ರಾವೆನಸ್ ಡ್ರಗ್ ಬಳಕೆದಾರರಿಂದ ಎಚ್‌ಐವಿ ಹರಡುವಿಕೆಯೂ ಹೆಚ್ಚುತ್ತಿವೆ. ಆದ್ದರಿಂದ, ಮಾದಕವಸ್ತು ಕಳ್ಳಸಾಗಣೆದಾರರ ಮೇಲೆ ನಡೆಯುತ್ತಿರುವ ಶಿಸ್ತುಕ್ರಮದ ಜೊತೆಗೆ, ಮಾದಕವಸ್ತು ಬಳಕೆಯಿಂದ ಪ್ರಭಾವಿತವಾಗಿರುವ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಆರೋಗ್ಯ ಮತ್ತು ಕಲ್ಯಾಣ ಸೇವೆಗಳನ್ನು ಒದಗಿಸುವುದು ಅವಶ್ಯಕ ಎಂದೂ ತಮ್ಮ ಶಿಫಾರಸ್ಸಿನಲ್ಲಿ ಸರ್ಕಾರವನ್ನು ಕೋರಿಕೊಂಡಿದ್ದಾರೆ.
2015 ರ ‘ಈಶಾನ್ಯ ಭಾರತದಲ್ಲಿ ಡ್ರಗ್ಸ್ ಬಳಸುವ ಮಹಿಳೆಯರು’ ಎಂಬ ಶೀರ್ಷಿಕೆಯ ಯುಎನ್ ಅಧ್ಯಯನವೊಂದನ್ನು ಪ್ರಸ್ತಾಪಿಸಿರುವ ಅವರು ಅಂತಹ ಮಹಿಳೆಯರು ಪುರುಷ ವ್ಯಸನಿಗಳಿಗಿಂತ ಗಣನೀಯವಾಗಿ ಹೆಚ್ಚಿನ ಅಪಾಯಗಳನ್ನು ಹೊಂದಿದ್ದಾರೆ ಎನ್ನುತ್ತಾರೆ. ಆದ್ದರಿಂದ ಈ ನಿರ್ದಿಷ್ಟ ಅಗತ್ಯಗಳು ಮತ್ತು ಅಪಾಯಗಳನ್ನು ಎದುರಿಸಲು ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಪುನರ್ರೂಪಿಸುವ ಅಗತ್ಯವನ್ನು ಪರಿಶೀಲಿಸಬೇಕು ಎನ್ನುತ್ತಾರೆ. ಭಾರತದ ಅಕ್ರಮ ಔಷಧ ನೀತಿಗಳನ್ನು ರೂಪಿಸುವಾಗ ಅಂತಹ ಸಮುದಾಯಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ.
ಚಿಕಿತ್ಸೆ, ಶಿಕ್ಷಣ ಮತ್ತು ಪುನರ್ವಸತಿಗೆ ಆದ್ಯತೆ ನೀಡುವ ತುರ್ತು ಅವಶ್ಯಕತೆಯಿದ್ದು ಕಳಂಕ, ಅವಮಾನ ಮತ್ತು ಮೌನವು ವ್ಯಸನವನ್ನು ಶಾಶ್ವತಗೊಳಿಸುತ್ತದೆ. ಮಾದಕ ವ್ಯಸನಿಗಳ ಬಂಧನಕ್ಕಾಗಿ ವ್ಯಯಿಸುವ ಹಣವನ್ನು ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಬಳಸುವುದು ಮಾದಕ ವ್ಯಸನದ ಮೂಲವನ್ನು ಪರಿಹರಿಸುವ ಕಡೆಗೆ ಕೊಂಡೊಯ್ಯಬಹುದು. ಒಂದು ಸಮಾಜವಾಗಿ, ಕಳಂಕ ಮತ್ತು ತಾರತಮ್ಯವನ್ನು ಕಡಿಮೆ ಮಾಡಲು ನಾವೆಲ್ಲರೂ ಸಾಮೂಹಿಕವಾಗಿ ಪ್ರಯತ್ನಿಸಬೇಕು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಕ್ರಿಮಿನಲ್ ನ್ಯಾಯದ ವಿಧಾನವನ್ನು ಮೀರಿ ಕಾನೂನು ನಿಯಂತ್ರಣದ ಜೊತೆ ಜತೆಗೆ ಮಾದಕ ವ್ಯಸನಕ್ಕೆ ಮಾನವ ಹಕ್ಕುಗಳ ಸ್ಪರ್ಶ ನೀಡುವ ಅಗತ್ಯ ಹಿಂದೆಂದೆಂಗಿಂತ ಹೆಚ್ಚಿದೆ ಎಂದೂ ಅವರು ಸಲಹೆ ನೀಡಿದ್ದಾರೆ.
ಇಡೀ ಶಿಫಾರಸ್ಸನಲ್ಲಿ ಭಾರತದ ಡ್ರಗ್ ನೀತಿಯಲ್ಲಿ ಆಗ ಬೇಕಿರುವ ಅಮೂಲಾಗ್ರ ಬದಲಾವಣೆಯನ್ನು ಸಮಗ್ರವಾಗಿ ಚರ್ಚಿಸಲಾಗಿದೆ. ಸಂಸದರು ಇದನ್ನು ಸಿದ್ಧಪಡಿಸಲು ತಮ್ಮ LAMP ಫೆಲೋ ಎವಿಟಾ ರೋಡ್ರಿಗಸ್ ಅವರ ಸಹಾಯವನ್ನೂ ಪಡೆದಿದ್ದಾರೆ. ಆದರೆ ಕಾರಣಾಂತರಗಳಿಂದ ಈ ಬಾರಿಯ ಚಳಿಗಾಳದ ಅಧಿವೇಶನವು ಒಂದು ದಿನ ಮೊದಲೇ ಸಮಾಪ್ತಿಗೊಂಡು ಈ ಶಿಫಾರಸ್ಸು ಚರ್ಚೆಗೇ ಬರಲಿಲ್ಲ ಎನ್ನುವುದು ಮಾತ್ರ ದುರಂತ.