ದೇಶದ ರೈತ ಸಮುದಾಯದ ತೀವ್ರ ವಿರೋಧಕ್ಕೆ ತುತ್ತಾಗಿದ್ದ ಮೂರು ಕೃಷಿ ಕಾಯ್ದೆಗಳ ವಿಷಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಯೂ ಟರ್ನ್ ಸದ್ಯದ ಮಟ್ಟಿಗೆ ಆ ವಿವಾದಿತ ಕಾಯ್ದೆಗಳಿಂದ ಅನ್ನದಾತರಿಗೆ ಬಿಡುಗಡೆ ಸಿಕ್ಕ ಸಂದೇಶ ನೀಡಿದೆ. ಆದರೆ, ರೈತರ ಮತ್ತೊಂದು ಪ್ರಮುಖ ಬೇಡಿಕೆಯಾಗಿರುವ ಕನಿಷ್ಟ ಬೆಂಬಲ ಬೆಲೆ(ಎಂ ಎಸ್ ಪಿ) ಕಾಯ್ದೆಯ ವಿಷಯದಲ್ಲಿ ಮೋದಿಯವರ ನಡೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.
ಪ್ರತಿಭಟನಾನಿರತ ರೈತರು ಬಹುತೇಕ ಎಂ ಎಸ್ ಪಿ ವಿಷಯದಲ್ಲಿ ಕಾನೂನು ಜಾರಿಯಾಗಬೇಕು ಮತ್ತು ರೈತರ ಮೇಲೆ ಕಾರು ಹಾಯಿಸಿ ಸಾಮೂಹಿಕ ಹತ್ಯೆ ಮಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಆ ಹಿನ್ನೆಲೆಯಲ್ಲಿ ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಕಬ್ಬು ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ತಮ್ಮ ಬೇಡಿಕೆಗಳು ಈಡೇರುವವರೆಗೆ ತಾವು ಪ್ರತಿಭಟನೆ ವಾಪಸು ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.
ಆ ಮೂಲಕ ಇದೀಗ ವಿವಾದಿತ ಮೂರು ಕೃಷಿ ಕಾನೂನುಗಳಿಂದ ಕೃಷಿ ಸಂಬಂಧಿತ ಚರ್ಚೆ ಎಂಎಸ್ ಪಿ ಕಡೆ ವಾಲಿದೆ. ಮುಖ್ಯವಾಗಿ ಎಂಎಸ್ ಪಿ ಎಂಬುದು ಭಾರತದ ಕೃಷಿ ವಲಯಕ್ಕೆ ಅನಿವಾರ್ಯವೇ? ಅಲ್ಲವೇ? ಮತ್ತು ಒಂದು ವೇಳೆ ರೈತರ ಹಕ್ಕೊತ್ತಾಯಕ್ಕೆ ಮಣಿದು ಎಂಎಸ್ ಪಿಗೆ ಕಾನೂನು ಬೆಂಬಲ ನೀಡಲು ಸರ್ಕಾರ ನಿರ್ಧರಿಸಿದರೆ ಅದರಿಂದಾಗಿ ಭಾರತೀಯ ಆರ್ಥಿಕತೆಯ ಮೇಲೆ ಆಗಬಹುದಾದ ಪರಿಣಾಮಗಳು ಏನು ಎಂಬ ಬಗ್ಗೆ ಕೂಡ ಚರ್ಚೆ ಆರಂಭವಾಗಿದೆ.
ಮುಖ್ಯವಾಗಿ ಮೋದಿಯವರು ಕಳೆದ ಒಂದು ವರ್ಷದಿಂದ ಬಲವಾಗಿ ಸಮರ್ಥಿಸಿಕೊಂಡು ಬಂದಿದ್ದ ಮತ್ತು ಆ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟವನ್ನು ಹಣಿಯಲು ಇನ್ನಿಲ್ಲದ ಯತ್ನಗಳನ್ನು ನಡೆಸಿದ್ದ ಹಿನ್ನೆಲೆಯಲ್ಲಿ, ಇದೀಗ ದಿಢೀರನೇ ಆ ಕಾಯ್ದೆಗಳನ್ನು ವಾಪಸ್ ಪಡೆಯುವ ಮಾತುಗಳನ್ನಾಡಿರುವುದು ಎಂ ಎಸ್ ಪಿ ವಿಷಯದಲ್ಲಿ ರೈತರ ಪಟ್ಟು ಸಡಿಲಿಸುವ ಹುನ್ನಾರವೇ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ. ಕೃಷಿ ಕಾಯ್ದೆಗಳ ವಿಷಯದಲ್ಲಿ ತಾವು ಒಂದು ಹೆಜ್ಜೆ ಹಿಂದಿಟ್ಟು, ತಮ್ಮ ಆಪ್ತ ಕಾರ್ಪೊರೇಟ್ ಕುಳಗಳಿಗೆ ದೊಡ್ಡ ಪೆಟ್ಟು ಕೊಡಲಿರುವ ಎಂ ಎಸ್ ಪಿ ಪೂರಕ ಕಾನೂನು ರಚನೆಯ ಪಟ್ಟಿನಿಂದ ರೈತರನ್ನು ಹತ್ತು ಹೆಜ್ಜೆ ಹಿಂದೆ ಸರಿಸುವ ಲೆಕ್ಕಾಚಾರ ಮೋದಿಯವರ ಈ ತಂತ್ರದ ಹಿಂದಿರಬಹುದೆ? ಎಂಬುದು ಕೂಡ ಚರ್ಚೆಗೆ ಬಂದಿದೆ.
ಯಾಕೆಂದರೆ; ಭಾರತದ ಸದ್ಯದ ಕೃಷಿ ಬಿಕ್ಕಟ್ಟಿನ ಹೊತ್ತಿನಲ್ಲಿ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯ ಆಸರೆ ಹಿಂದೆಂದಿಗಿಂತ ಹೆಚ್ಚೇ ಇದೆ. ಅದರಲ್ಲೂ ಮಳೆ ವೈಪರೀತ್ಯ, ಬೆಲೆ ವೈಪರೀತ್ಯಗಳಿಂದ ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ರಕ್ಷಿಸಲು ಒಂದು ಸಮರ್ಥ ಮತ್ತು ಪರಿಣಾಮಕಾರಿ ರಕ್ಷಣಾ ವ್ಯವಸ್ಥೆಯ ಅನಿವಾರ್ಯತೆ ಇದೆ. ಅದು ಮುಕ್ತ ಮಾರುಕಟ್ಟೆ ಮತ್ತು ಕಾರ್ಪೊರೇಟ್ ಕೃಷಿ ಉದ್ಯಮದಿಂದ ಬಡ ರೈತರಿಗೆ ರಕ್ಷಣೆ ಒದಗಿಸುವಂತಿರಬೇಕು ಕೂಡ. ತರಕಾರಿ ಮತ್ತು ಆಹಾರ ಧಾನ್ಯಗಳ ಮಾರುಕಟ್ಟೆ ಎಂಬುದು ಕಾರ್ಪೊರೇಟ್ ಉದ್ಯಮಿಗಳ ಕಪಿಮುಷ್ಟಿಯಲ್ಲಿ ಸಿಲುಕಿರುವಾಗ ಬೆಲೆ ವೈಪರೀತ್ಯ ಮತ್ತು ವ್ಯಾಪಾರಿಗಳ ಶೋಷಣೆಯಿಂದ ಕೃಷಿಕರನ್ನು ಉಳಿಸಲು ಎಂಎಸ್ ಪಿ ವ್ಯವಸ್ಥೆಗೆ ಕಾನೂನು ಬಲ ನೀಡಿ, ಎಲ್ಲಾ ಕೃಷಿ ಬೆಳೆಗಳಿಗೆ ವೈಜ್ಞಾನಿಕವಾಗಿ ನಿಗದಿ ಮಾಡಿದ ಬೆಂಬಲ ಬೆಲೆ ನೀಡುವುದು ದೇಶದ ಶೇ.70ರಷ್ಟು ಜನಸಂಖ್ಯೆಯ ಬದುಕಿನ ಭದ್ರತೆಯ ದೃಷ್ಟಿಯಿಂದಲೂ ಅಗತ್ಯ ಕ್ರಮ.
ಆದರೆ, ದೇಶದ ಆರ್ಥಿಕತೆಯ ಸದ್ಯದ ಸ್ಥಿತಿಯಲ್ಲಿ ಈಗಿನ ಕೆಲವೇ ಕೆಲವು ಬೆಳೆಗಳ ಬೆಂಬಲ ಬೆಲೆ ಖರೀದಿಗಾಗಿಯೇ ವಾರ್ಷಿಕ ಸರಿಸುಮಾರು 3 ಲಕ್ಷ ಕೋಟಿ ರೂ. ವ್ಯಯಿಸಲಾಗುತ್ತಿದೆ. ಅಷ್ಟೊಂದು ಅಪಾರ ಹಣ ವೆಚ್ಚ ಮಾಡಿಯೂ ಖರೀದಿಸಿದ ಆಹಾರ ಧಾನ್ಯಗಳನ್ನು ಸಕಾಲಕ್ಕೆ ಸದುಪಯೋಗಪಡಿಸಿಕೊಳ್ಳಲಾಗುತ್ತಿಲ್ಲ. ದೇಶದ ಒಟ್ಟಾರೆ ಬೇಡಿಕೆಯ ದುಪ್ಪಟ್ಟು ಆಹಾರ ಧಾನ್ಯಗಳು ಪ್ರತಿ ವರ್ಷ ಸರ್ಕಾರಿ ಗೋದಾಮುಗಳಲ್ಲಿ ಹಾಳಾಗಿ ತಿಪ್ಪೆ ಸೇರುತ್ತಿವೆ. ವಾಸ್ತವವಾಗಿ ದೇಶಕ್ಕೆ ಸದ್ಯ ಅಗತ್ಯ ದಾಸ್ತಾನಿಡಬೇಕಾದ ಆಹಾರ ಧಾನ್ಯಗಳ ಪ್ರಮಾಣ 41 ಲಕ್ಷ ಟನ್ ಆಗಿದ್ದರೆ, ಪ್ರತಿ ವರ್ಷ ಸರಿಸುಮಾರು 110 ಲಕ್ಷ ಟನ್ ನಷ್ಟು ಆಹಾರ ಧಾನ್ಯವನ್ನು ಎಂ ಎಸ್ ಪಿನಡಿ ಖರೀದಿಸಿ ಸಂಗ್ರಹಿಸಲಾಗುತ್ತಿದೆ.
ಹಾಗಾಗಿ ಅಗತ್ಯಕ್ಕಿಂತ ದುಪ್ಪಟ್ಟು ಪ್ರಮಾಣದ ಆಹಾರ ಧಾನ್ಯವನ್ನು ಬೆಂಬಲ ಬೆಲೆ ನೀಡಿ ಖರೀದಿಸಿ ಗೋದಾಮುಗಳಲ್ಲಿ ಹಾಳುಮಾಡಲಾಗುತ್ತಿದೆ. ಆದ್ದರಿಂದ ಮೊದಲು ಬೆಂಬಲ ಬೆಲೆಯಡಿ ಖರೀದಿ ಮಾಡಿದ ಆಹಾರ ಧಾನ್ಯ ನಷ್ಟವಾಗದೆ ದೇಶದ ಬಡವರು ಮತ್ತು ದುರ್ಬಲ ವರ್ಗದ ಜನರಿಗೆ ಸಕಾಲದಲ್ಲಿ ಗುಣಮಟ್ಟದೊಂದಿಗೆ ತಲುಪುವ ವ್ಯವಸ್ಥೆಯಾಗಬೇಕು. ಪಡಿತರ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿ, ಅದನ್ನು ಇನ್ನಷ್ಟು ಸದೃಢಗೊಳಿಸಿ ಜನರ ಮನೆ ಬಾಗಿಲಿಗೆ ಪಡಿತರ ತಲುವುವಂತಹ ವ್ಯವಸ್ಥೆ ಜಾರಿಯಾಗಬೇಕು. ಅದು ಆಗದೇ ಕೇವಲ ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡಿ, ಎಲ್ಲಾ ಕೃಷಿ ಉತ್ಪನ್ನಗಳ ಖರೀದಿಗೆ ಅವಕಾಶ ನೀಡಿದರೆ, ಅನಾಹುತಕ್ಕೆ ದಾರಿ ಮಾಡಿದಂತಾಗುತ್ತದೆ. ಅದು ಅಂತಿಮವಾಗಿ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ ಎಂಬ ಅಭಿಪ್ರಾಯವೂ ತಜ್ಞರ ವಲಯದಿಂದ ಕೇಳಿಬರುತ್ತಿದೆ.
ಮೂರು ಕೃಷಿ ಕಾಯ್ದೆಗಳ ಕುರಿತ ಅಧ್ಯಯನಕ್ಕಾಗಿ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಅನಿಲ್ ಗನ್ವತ್ ಕೂಡ ಇಂತಹದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ರೈತರ ಬೇಡಿಕೆಯ ಸ್ವರೂಪದಲ್ಲೇ ಎಂಎಸ್ ಪಿ ಜಾರಿ ಮಾಡಿದರೆ ಮತ್ತು ಅದಕ್ಕಾಗಿ ಕಾನೂನು ರೂಪಿಪಿಸಿದರೆ ದೇಶದ ಆರ್ಥಿಕತೆಗೆ ಸಂಕಷ್ಟ ಎದುರಾಗಲಿದೆ. ಬೆಂಬಲ ಬೆಲೆಗೆ ಕಾನೂನು ಬಲ ನೀಡಿ ಅದನ್ನು ಕಡ್ಡಾಯಗೊಳಿಸಿದರೆ, ದೇಶದ ಯಾವೊಬ್ಬ ವ್ಯಾಪಾರಿಯೂ ಯಾವ ಕೃಷಿ ಉತ್ಪನ್ನವನ್ನೂ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಲಾಗದು. ಆಗ ವ್ಯಾಪಾರಿಗಳು, ದಾಸ್ತಾನುದಾರರು ಮತ್ತು ಒಟ್ಟಾರೆ ಇಡೀ ಸರಕು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.
ಆದರೆ, ದೇಶದ ಸುಮಾರು 55 ಶೇಕಡ ಜನರು ನೇರವಾಗಿ ಅವಲಂಬಿತರಾಗಿರುವ ಕೃಷಿ ವಲಯ, ದೇಶದ ಒಟ್ಟಾರೆ ಆದಾಯದಲ್ಲಿ ಶೇ.54ರಷ್ಟು ಕೊಡುಗೆ ಹೊಂದಿದೆ. ದೇಶದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದರೂ(ಸದ್ಯ ಶೇ.17ರಷ್ಟಿದೆ) ಆ ವಲಯದ ಮೇಲೆ ಅವಲಂಬಿತರಾಗಿರುವ ಜನರ ಪ್ರಮಾಣ ಕುಸಿದಿಲ್ಲ. ಅದರಲ್ಲೂ ಕರೋನಾ ಮತ್ತು ಲಾಕ್ ಡೌನ್ ಸಂಕಷ್ಟದ ಬಳಿಕ ಕೃಷಿ ವಲಯಕ್ಕೆ ಮರಳುತ್ತಿರುವವ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ 1951ರ ಹೊತ್ತಿಗೆ ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಕೇವಲ ಶೇ.28ರಷ್ಟಿದ್ದ ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಇದೀಗ ಸರಿಸುಮಾರು ಶೇ.60ರಷ್ಟಾಗಿದೆ(ಕೃಷಿಯಲ್ಲಿ ತೊಡಗಿಸಿಕೊಂಡವರ ಪೈಕಿ). ಕರೋನೋತ್ತರ ಅವಧಿಯಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ ಎಂಬುದು ನಿರ್ವಿವಾದದ ಸಂಗತಿ.
ಹಾಗಾಗಿ ತುಂಡು ಭೂಮಿ ಸಾಗುವಳಿದಾರರ ಸಂಖ್ಯೆ ಕೂಡ ಗಣನೀಯವಾಗಿ ಏರುತ್ತಿದೆ. ದೇಶದಲ್ಲಿ ಇರುವ ಒಟ್ಟು ಕೃಷಿಕರ ಪೈಕಿ ಶೇ.86ರಷ್ಟು ಮಂದಿಗೆ ಕೇವಲ ಒಂದರಿಂದ ಎರಡು ಹೆಕ್ಟೇರ್ ನಷ್ಟು ಭೂಮಿ ಮಾತ್ರ ಇದೆ. ಇನ್ನು ಅರ್ಧ ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ದೇಶದ 24 ಲಕ್ಷಕ್ಕೂ ಅಧಿಕ ಕೃಷಿಕರ ಪೈಕಿ ಶೇ.40ರಷ್ಟು ಮಂದಿ ಅವರ ಆದಾಯದ ಹಲವು ಪಟ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ದುರ್ಬಲ ರೈತರ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು ಕರೋನಾ ಸಂಕಷ್ಟ. ಕರೋನಾ ಅವಧಿಯ ಲಾಕ್ ಡೌನ್ ದೈನಂದಿನ ಚಟುವಟಿಕೆಯ ಮೇಲೆ ಕೃಷಿ ವಲಯದಲ್ಲಿ ದೊಡ್ಡ ಮಟ್ಟದ ಅನಾಹುತ ಸೃಷ್ಟಿಸದೇ ಇದ್ದರೂ, ಕೃಷಿ ಉತ್ಪನ್ನಗಳ ಮಾರುಕಟ್ಟೆ ಮತ್ತು ಆ ವಹಿವಾಟಿನ ಹಣಕಾಸು ವ್ಯವಹಾರದ ಮೇಲೆ ಭಾರೀ ಪೆಟ್ಟು ನೀಡಿದೆ. ಕಳೆದ ಏಳು ವರ್ಷಗಳ ಮೋದಿ ಆಡಳಿತದಲ್ಲಿ ನೋಟು ರದ್ದತಿ ಮತ್ತು ಜಿಎಸ್ ಟಿ ಹಾಗೂ ಪಾನ್ ಕಾರ್ಡ್ ಕಡ್ಡಾಯದಂತಹ ಕ್ರಮಗಳು ನೇರ ಖರೀದಿ ವಹಿವಾಟು ಮತ್ತು ನಗದು ವ್ಯವಹಾರದ ಮೇಲೆ ನಿಂತಿರುವ ದೇಶದ ಶೇ.80ರಷ್ಟು ಕೃಷಿ ಉತ್ಪನ್ನಗಳ ವಹಿವಾಟಿನ ನಡು ಮುರಿದಿದ್ದವು. ಇದೀಗ ಕರೋನಾ ಅದನ್ನು ನೆಲಕಚ್ಚಿಸಿದೆ.
ಇಂತಹ ಹೀನಾಯ ಸ್ಥಿತಿಯಿಂದ ದೇಶದ ಕೃಷಿ ವಲಯವನ್ನು ಪಾರು ಮಾಡಲು ಕನಿಷ್ಟ ಬೆಂಬಲ ವ್ಯವಸ್ಥೆಗೆ ಕಾನೂನು ಬಲ ನೀಡಿ ಅದನ್ನು ಎಲ್ಲಾ ಕೃಷಿ ಬೆಳೆಗಳಿಗೂ ವಿಸ್ತರಿಸಬೇಕು. ಆದರೆ, ಸದ್ಯ ಕೇವಲ 23 ಕೃಷಿ ಬೆಳೆಗಳಿಗೆ ಮಾತ್ರ ಎಂ ಎಸ್ ಪಿ ನಿಗದಿ ಮಾಡಿದ್ದರೂ ವಾಸ್ತವವಾಗಿ ಖರೀದಿ ಮಾಡುತ್ತಿರುವುದು ಭತ್ತ, ಜೋಳ, ಗೋಧಿ, ಕೆಲವು ಎಣ್ಣೆಕಾಳುಗಳು ಸೇರಿದಂತೆ ಏಳೆಂಟು ಆಹಾರ ಧಾನ್ಯಗಳನ್ನು ಮಾತ್ರ. ವಾರ್ಷಿಕ ಸರಿಸುಮಾರು 3 ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ಆಹಾರ ಧಾನ್ಯಗಳನ್ನು ಎಂಎಸ್ ಪಿಯಡಿ ಖರೀದಿಸುತ್ತಿದ್ದರೂ, ಆ ಪೈಕಿ ಅಕ್ಕಿ ಮತ್ತು ಗೋಧಿ ಬೆಳೆಗಳೆರಡರ ಎಂ ಎಸ್ ಪಿ ಖರೀದಿಗೇ ಸುಮಾರು ಎರಡೂವರೆ ಲಕ್ಷ ಕೋಟಿಯಷ್ಟು ವ್ಯಯ ಮಾಡಲಾಗುತ್ತಿದೆ.
ಆದರೆ, ಕೃಷಿ ವಲಯದ ಇಂತಹ ಗಂಡಾತರಗಳನ್ನು ಅದರ ಮೂಲದಲ್ಲೇ ಸರಿಪಡಿಸುವಂತಹ ವ್ಯವಸ್ಥೆಯ ಬಗ್ಗೆ ಆಸಕ್ತಿ ವಹಿಸದ ಸರ್ಕಾರಗಳು ಕೃಷಿ ವಲಯಕ್ಕೆ ಕಾರ್ಪೊರೇಟ್ ಹೂಡಿಕೆ ತರುವ, ಒಪ್ಪಂದ ಕೃಷಿ ವ್ಯವಸ್ಥೆ ಜಾರಿಗೊಳಿಸುವ, ಕೃಷಿ ಉತ್ಪನ್ನಗಳನ್ನು ಅಗತ್ಯ ವಸ್ತು ಕಾಯ್ದೆಯ ಹೊರಗಿಡುವಂತಹ ಮೂಲಭೂತವಾಗಿ ಕೃಷಿಕರನ್ನು ಕೃಷಿ ವಿಮುಖರನ್ನಾಗಿ ಮಾಡುವ ನೀತಿಗಳತ್ತಲೇ ಆಸಕ್ತಿ ವಹಿಸುತ್ತಿವೆ. ಈ ಮೂರು ವಿವಾದಿತ ಕೃಷಿ ಕಾಯ್ಚೆಗಳೂ ಅಂತಹದ್ದೇ ಅಜೆಂಡಾ ಹೊಂದಿರುವ ಕಾರಣಕ್ಕೆ ಆ ಪರಿಯ ವಿರೋಧಕ್ಕೆ ತುತ್ತಾಗಿದ್ದವು. ಹಾಗಾಗಿ ಕನಿಷ್ಟ ಸದ್ಯದ ಬಿಕ್ಕಟ್ಟಿನಿಂದ ರೈತರನ್ನು ಮತ್ತು ಕೃಷಿ ವಲಯವನ್ನು ಪಾರು ಮಾಡಬೇಕಿದ್ದರೆ, ಕನಿಷ್ಟ ಬೆಂಬಲ ವ್ಯವಸ್ಥೆಗೆ ಕಾನೂನು ಬಲ ನೀಡಿ ಕಡ್ಡಾಯ ಖರೀದಿಯನ್ನು ಜಾರಿಗೆ ತರಬೇಕಿದೆ.
ಆದರೆ, ಕಾರ್ಪೊರೇಟ್ ಮಿತ್ರರ ಹಿತಕ್ಕೆ ತಕ್ಕಂತೆ ಕಾನೂನು ಕಾಯ್ದೆ ರೂಪಿಸುವ ಪ್ರಧಾನಿ ಮೋದಿಯವರ ಆಡಳಿತ ಹಾಗೆ ಬಡ ರೈತನ ಹಿತದ ಕೆಲಸ ಮಾಡುತ್ತದೆಯೇ? ಎಂಬುದು ನಿರಾಶದಾಯಕ ಉತ್ತರದ ಪ್ರಶ್ನೆ.