ಪಂಜಾಬಿನಲ್ಲಿ ಸದ್ಯ ವಿಧಾನಸಭಾ ಚುನಾವಣಾ ಕಾಲ. ಕೃಷಿ ಕಾನೂನುಗಳ ವಿರುದ್ಧ ಸುದೀರ್ಘ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಕೇಂದ್ರ ಸರ್ಕಾರವನ್ನು ಕೊನೆಗೂ ಮಣಿಸಿದ ರೈತ ಚಳವಳಿಯ ಯಶಸ್ಸಿನ ಹಿನ್ನೆಲೆಯಲ್ಲಿ, ರೈತ ಸಂಘಟನೆಗಳು ಚುನಾವಣಾ ರಾಜಕಾರಣಕ್ಕೆ ಇಳಿಯುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೃಷಿ ಕಾರ್ಮಿಕರ ಹಾಗೂ ರೈತರ ಸುದೀರ್ಘ ಹೋರಾಟವು ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಪಡಿಸಿದೆ. ರೈತರ ತ್ಯಾಗ, ಕೆಚ್ಚೆದೆಯ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರ್ಕಾರ ತನ್ನ ಹಠಮಾರಿ ನಿಲುವಿನಿಂದ ಹಿಂದೆ ಸರಿದು ಕೃಷಿ ಕಾನೂನುಗಳನ್ನು ಹಿಂಪಡೆದಿದೆ. ಕೇಮದ್ರ ಸರ್ಕಾರದ ವಿವಿಧ ನೀತಿಗಳಿಂದಾಗಿ ಬೇಸತ್ತಿರುವ ಜನತೆಗೆ ಈ ಚಳುವಳಿಯು ಒಂದು ದಿಟ್ಟ ಬಲವಾಗಿ ಹೊರಹೊಮ್ಮಿದೆ.
ಕೃಷಿ ಕಾನೂನುಗಳ ವಿರುದ್ಧದ ಹೋರಾಟವನ್ನು ಸಂಘಟಿತವಾಗಿ ಮಾಡುವ ಸಲುವಾಗಿ ಎಲ್ಲಾ ರೈತ ಸಂಘಟನೆಗಳು ಸೇರಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ನವೆಂಬರ್ 7 2020ರಲ್ಲಿ ಸ್ಥಾಪನೆಯಾಯಿತು. ದೇಶಾದ್ಯಂತ ರೈತರು, ರೈತರ ಸಂಘಟನೆಗಳು ರಾಜಕೀಯೇತರ ಶಕ್ತಿಯಾಗಿ ಉಳಿದವು. ಕಿಸಾನ್ ಮೋರ್ಚಾದ ವೇದಿಕೆಗೆ ಯಾವ ಪಕ್ಷದ ನೇತಾರರಿಗೂ ಅವಕಾಶ ನೀಡದಿರುವುದು ರಾಜಕೀಯ ಪಕ್ಷಗಳೊಂದಿಗೆ ಜನಸಾಮಾನ್ಯರಿಗೆಇರುವ ಹತಾಶೆಯನ್ನು ಪ್ರತಿಬಿಂಬಿಸುತ್ತದೆ.
ಪಂಜಾಬಿನ ರೈತರಿಂದ ಆರಂಭವಾದ ರೈತ ಚಳುವಳಿಯು ಪಂಜಾಬಿಗೆ ಹಿಂತಿರುಗಿದ ಬಳಿಕ ಕೆಲವು ರೈತ ಸಂಘಟನೆಗಳು ರಾಜಕೀಯ ಪಕ್ಷ ʼಸಂಯುಕ್ತ ಸಮಾಜ ಮೋರ್ಚಾʼ (SSM)ಪಕ್ಷವನ್ನು ಕಟ್ಟುವ ಇರಾದೆ ವ್ಯಕ್ತಪಡಿಸಿದೆ. ಅದೇ ವೇಳೆ ಬಹುಪಾಲು ರೈತ ಸಂಘಟನೆಗಳು ಚುನಾವಣಾ ರಾಜಕೀಯದಿಂದ ದೂರ ನಿಲ್ಲುವ ನಿರ್ಧಾರಕ್ಕೆ ಬದ್ಧವಾಗಿದೆ. ಅಲ್ಲದೆ, SSM ಪಕ್ಷಕ್ಕೆ 22 ರೈತ ಸಂಘ ಹಾಗೂ ರೈತರು ಬೆಂಬಲ ಇದೆ ಎಂದು ಹೇಳಿಕೊಂಡರೂ, ಅತಿ ಹೆಚ್ಚು ಕಾರ್ಯಕರ್ತರಿರುವಂತಹ ಬಿಕೆಯು(ಏಕ್ತಾ-ಉಗ್ರಹಾನ್), ಬಿಕೆಯು (ಏಕ್ತಾ-ದಕೌಂಡ), ಕೀರ್ತಿ ಕಿಸಾನ್ ಯೂನಿಯನ್, ಬಿಕೆಯು (ಏಕ್ತಾ- ಸಿಧುಪುರ್), ಕ್ರಾಂತಿಕಾರಿ ಕಿಸಾನ್ ಯೂನಿಯನ್ ಮೊದಲಾದ 22 ಸಂಘಟನೆಗಳು ಅದರ ಭಾಗವಾಗಿಲ್ಲ.
ರೈತ ಸಂಘಗಳ ಒಂದು ವಿಭಾಗದಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಈ ನಿರ್ಧಾರವು ಕೆಟ್ಟ ಯೋಚನೆಯಾಗಿದೆ. ರೈತರ ಪ್ರತಿಭಟನೆಯ ವೇಳೆ ಯಾರ ವಿರುದ್ಧ ಕಣಕ್ಕಿಳಿದಿದ್ದರೋ ಅಂತಹ ರಾಜಕೀಯ ಪಕ್ಷಗಳ ಮುಖಂಡರಿಗೆ ಎಸ್‌ಎಸ್‌ಎಂ ಟಿಕೆಟ್ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ.
ಆಂದೋಲನವನ್ನು ಈ ನಾಯಕರು “ರಾಜಕೀಯ ಪ್ರೇರಿತ” ಎಂದು ಲೇಬಲ್ ಮಾಡಿದರು. ಇದು ಸಂಪೂರ್ಣವಾಗಿ ರೈತರ ಆಂದೋಲನವಾದ್ದರಿಂದ ಆರೋಪ ಅಂಟಿಕೊಳ್ಳಲಿಲ್ಲ. ಚಳವಳಿ ರಾಜಕೀಯೇತರವಾಗಿರುವುದು ಪ್ರತಿಭಟನೆಯ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಆದರೆ, ಎಸ್‌ಎಸ್‌ಎಂ ಚುನಾವಣೆಗೆ ಸ್ಪರ್ಧಿಸುವ ಮೂಲಕ ರೈತರ ಒಗ್ಗಟ್ಟಿಗೆ ಧಕ್ಕೆ ತಂದಿದೆ.

ಅನೇಕ ರಾಜ್ಯ ಸರ್ಕಾರಗಳು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿವೆ. ಆದರೂ, ಅಂತಹ ನಿರ್ಣಯಗಳು ಕಾನೂನುಬದ್ಧವಾಗಿ ಬದ್ಧವಾಗಿಲ್ಲ. ಹಾಗಾಗಿ, ಎಸ್‌ಎಸ್‌ಎಂ ಪಂಜಾಬ್‌ನಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರೂ, ಅಸ್ತಿತ್ವದಲ್ಲಿರುವ ಬಿಕ್ಕಟ್ಟನ್ನು ಪರಿಹರಿಸಲು ಅದಕ್ಕೆ ಸಾಧ್ಯವಾಗುವುದಿಲ್ಲ.
ವಾಸ್ತವದಲ್ಲಿ, ಬೃಹತ್ ಪ್ರತಿಭಟನೆಗಳ ತೀವ್ರತೆ ಕಂಡು ಕೃಷಿ ಕಾನೂನುಗಳ ವಿರುದ್ಧ ನಿರ್ಣಯಗಳನ್ನು ರಾಜ್ಯ ವಿಧಾನಸಭೆಗಳು ಅಂಗೀಕರಿಸಿದವು. ಆರಂಭದಲ್ಲಿ, ಶಿರೋಮಣಿ ಅಕಾಲಿದಳ (ಬಾದಲ್) ನಾಯಕರು ಕೃಷಿ ಕಾನೂನಿನ ಪ್ರಯೋಜನಗಳನ್ನು ವಿವರಿಸುತ್ತಿದ್ದರು. ಕೊನೆಗೆ, ರೈತರ ಕೋಪವೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿಯುವಂತೆ ಶಿರೋಮಣಿ ಅಕಾಲಿದಳ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಬಲ ಒತ್ತಡ ಹಾಕುವಂತಹ ಗುಂಪುಗಳ ಅಗತ್ಯ ಇರುವ ಈ ಸಂದರ್ಭದಲ್ಲಿ ಚುನಾವಣಾ ರಾಜಕೀಯಕ್ಕೆ ಇಳಿದು ಜನಾಂದೋಲನಗಳನ್ನು ದುರ್ಬಲಗೊಳಿಸುವುದು ಅವಿವೇಕತನ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಸಮಾಜದ ಎಲ್ಲ ವರ್ಗದವರನ್ನು ಕೆರಳಿಸಿದೆ. ರೈತರ ಪ್ರತಿಭಟನೆಯು ಈ ಎಲ್ಲಾ ಚಳುವಳಿಗಳು ಮತ್ತು ಜನರಿಗೆ ಭರವಸೆ ಮತ್ತು ಶಕ್ತಿಯ ಕಿರಣವನ್ನು ನೀಡಿದೆ. ರೈತರ ಕೆಲವು ಬೇಡಿಕೆಗಳು ಇನ್ನೂ ಬಾಕಿ ಉಳಿದಿದ್ದು, ಈ ಹೋರಾಟದಲ್ಲಿ ಒಗ್ಗಟ್ಟಾಗಿ ಉಳಿಯುವ ಜೊತೆಗೆ ಇತರ ಚಳವಳಿಗಳೊಂದಿಗೆ ಸಮನ್ವಯ ಸಾಧಿಸುವ ಅಗತ್ಯವಿದೆ.
ಕೆಲವು SSM ಪ್ರತಿಪಾದಕರು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ರೈತ ಸಂಘಗಳು ಇನ್ನೂ ಜನರ ಚಳುವಳಿಗಳ ಭಾಗವಾಗಿ ಉಳಿಯಬಹುದು ಎಂದು ವಾದಿಸುತ್ತಾರೆ. ವಾಸ್ತವದಲ್ಲಿ, ಚುನಾವಣೆಗಳಿಗೆ ದೊಡ್ಡ ಪ್ರಮಾಣದ ಸಂಪನ್ಮೂಲಗಳು, ಸಮಯ ಮತ್ತು ಶಕ್ತಿಯ ಅಗತ್ಯವಿದೆ ಎಂದು ಅವರು ಅರ್ಥಮಾಡಿಕೊಳ್ಳಬೇಕು. ರೈತರ ಪ್ರತಿಭಟನೆಯ ಸಮಯದಲ್ಲಿ ಗಮನಿಸಿದಂತೆ, ಸಮರ್ಪಿತ, ಪೂರ್ಣ ಸಮಯದ ಕ್ರಿಯಾಶೀಲತೆ ಮಾತ್ರ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಉತ್ತಮ ಫಲಿತಾಂಶದ ಕಡೆಗೆ ಕೊಂಡೊಯ್ಯಬಹುದು.
ಚುನಾವಣಾ ರಾಜಕೀಯದಲ್ಲಿ ರೈತ ಸಂಘದ ನಾಯಕರ ಹಿಂದಿನ ಅನುಭವವೂ ಆಶಾದಾಯಕ ಚಿತ್ರಣವನ್ನು ಹೊಂದಿಲ್ಲ. ಪಂಜಾಬ್‌ನಲ್ಲಿ ಅಜ್ಮೀರ್ ಸಿಂಗ್ ಲಖೋವಲ್ ಮತ್ತು ಭೂಪಿಂದರ್ ಸಿಂಗ್ ಮಾನ್ ಅವರಂತಹ ಒಕ್ಕೂಟದ ನಾಯಕರು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ್ದರು. ಆದರೆ, ಅವರು ಜನರಿಂದ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟರು.
ಅವರಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಸಮಸ್ಯೆಗಳನ್ನು ಹೇಳಲು ಸಾಧ್ಯವಾಗದಿರುವುದು ಈ ವೈಫಲ್ಯಕ್ಕೆ ಕಾರಣವಾಗಿದ್ದಿತು. ಈ ಪ್ರಕ್ರಿಯೆಯಲ್ಲಿ, ಅವರು ತಮ್ಮದೇ ಆದ ರೈತ ಸಂಘದ ಕಾರ್ಯಕರ್ತರ ಬೆಂಬಲವನ್ನು ಕಳೆದುಕೊಂಡರು. ಎಸ್‌ಎಸ್‌ಎಂ ವ್ಯಾಪ್ತಿಯು ಕೂಡಾ ರೈತರಿಗೆ ಮಾತ್ರ ಸೀಮಿತವಾಗಿದೆ, ಹಾಗಾಗಿ ಇದೂ ಕೂಡಾ ಇಂತಹದ್ದೇ ಸನ್ನಿವೇಶ ಎದುರಿಸಬಹುದು. ಕೃಷಿ ವಲಯದಲ್ಲಿಯೂ ಸಹ, ಕೃಷಿ ಕಾರ್ಮಿಕರು, ಮಹಿಳೆಯರು, ಗ್ರಾಮೀಣ ಕೆಲಸಗಾರರು ಮತ್ತು ಇತರ ಪ್ರಮುಖ ಮಧ್ಯಸ್ಥಗಾರರನ್ನು ತೊಡಗಿಸಿಕೊಳ್ಳಲು SSM ಗೆ ಸಾಧ್ಯವಾಗುತ್ತಿಲ್ಲ.
ಮತ್ತೊಂದೆಡೆ, ಎಸ್‌ಕೆಎಂ ನೇತೃತ್ವದ ಅಡಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ಅನೇಕ ರೈತರು ಈಗಾಗಲೇ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿದವರು. ಈ ಚುನಾವಣೆಯಲ್ಲೂ ಅವರು ತಮ್ಮ ಪಕ್ಷಗಳಿಗೆ ಮರಳಲಿದ್ದಾರೆ. ಆಂದೋಲನವು ಅವರಲ್ಲಿ ಅವರ ಹಕ್ಕುಗಳು ಮತ್ತು ದೊಡ್ಡ ರಾಜಕೀಯ ಆರ್ಥಿಕತೆಯ ಅರಿವನ್ನು ಮೂಡಿಸಿತ್ತು. ದಿಲ್ಲಿಯ ಗಡಿಯಲ್ಲಿ ಒಗ್ಗೂಡಿದ ರೈತರು ತಮ್ಮ ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳಾಗಿ ಒಡೆದು ಹೋಗುತ್ತಿದ್ದಾರೆ.
ಹಾಗಾದರೆ ರೈತರು ಮತ್ತು ಕಾರ್ಮಿಕರ ಮುಂದಿರುವ ದಾರಿ ಏನು? ಉತ್ತರ ಸರಳವಾಗಿದೆ: ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಪ್ರತಿಭಟನೆ. ಕೇವಲ ಪ್ರತಿಭಟನೆಯಿಂದಲೇ ಸರ್ಕಾರವು ಕಾನೂನುಗಳನ್ನು ರದ್ದುಗೊಳಿಸಬೇಕಾಯಿತು.

ಉದಾಹರಣೆಗೆ, ಜಾರ್ಖಂಡ್‌ನಲ್ಲಿ ಆದಿವಾಸಿಯಾದ ಹೇಮಂತ್ ಸೋರೆನ್ ಮುಖ್ಯಮಂತ್ರಿ ಆದ ಮೇಲೆ ಆದಿವಾಸಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿಲ್ಲ ನಾವು ಹೇಳಬಹುದೇ? ಮಮತಾ ಬ್ಯಾನರ್ಜಿ ಬಂಗಾಳದ ಸಿಎಂ ಆದ ನಂತರ ಸಿಂಗೂರ್ ಮತ್ತು ನಂದಿಗ್ರಾಮದ ಆದಿವಾಸಿಗಳಿಗೆ ನ್ಯಾಯ ಸಿಕ್ಕಿತು ಎಂದು ಹೇಳಬಹುದೇ? ತೆಲಂಗಾಣವನ್ನು ರಾಜ್ಯವನ್ನಾಗಿ ಮಾಡಿದ ನಂತರ ಮತ್ತು ಆಂಧ್ರಪ್ರದೇಶದ ವಿಭಜನೆಯ ಚಳವಳಿಯ ಭಾಗವಾಗಿದ್ದ ಕೆಸಿಆರ್ ಅವರು ಅದರ ಮುಖ್ಯಮಂತ್ರಿಯಾದ ನಂತರ ತೆಲಂಗಾಣದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಹೇಳಬಹುದೇ?
ಚುನಾವಣಾ ರಾಜಕೀಯವನ್ನು ಪ್ರಯೋಗಿಸಲು ಪ್ರಯತ್ನಿಸಿದ ಮಹೇಂದ್ರ ಟಿಕಾಯತ್, ರಾಕೇಶ್ ಟಿಕಾಯತ್, ಗುರ್ನಮ್ ಚದುನಿ ಮತ್ತು ಇನ್ನೂ ಅನೇಕ ರೈತ ಸಂಘದ ನಾಯಕರ ಬಗ್ಗೆಯೂ ಇದೇ ರೀತಿಯ ವಿಮರ್ಶೆಯನ್ನು ಮಾಡಬಹುದು. ಕೊನೆಗೂ, ಅವರು ಕೃಷಿ ಒಕ್ಕೂಟಗಳಿಗೆ ಮರಳಬೇಕಾಯಿತು. ಕ್ರೋನಿ ಕ್ಯಾಪಿಟಲಿಸಂ, ನವ ಉದಾರವಾದಿ ನೀತಿಗಳು ಮತ್ತು ಕೋಮುವಾದದ ವಿರುದ್ಧದ ಹೋರಾಟಗಳಲ್ಲಿ ಒಗ್ಗಟ್ಟಾಗಿ ಉಳಿಯುವ ಸಮಯ ಇದು.
-ದರ್ಶನ್ ಪಾಲ್, ಹರೀಂದರ್ ಹ್ಯಾಪಿ ಅವರ ಬರಹ…