ಪ್ರಧಾನಿ ಮೋದಿˌ ಅವರು ಪ್ರತಿನಿಧಿಸುವ ಬಿಜೆಪಿ ಹಾಗು ಬಿಜೆಪಿಯ ಮಾರ್ಗದರ್ಶಿಯಾಗಿರುವ ಸಂಘವು ಇಂದಿರಾ ಹೇರಿದ ತುರ್ತುಪರಿಸ್ಥಿತಿಯನ್ನು ಸದಾ ಟೀಕಿಸುವುದು ನೋಡಿದ್ದೇವೆ. ಇಂದಿರಾರನ್ನು ಸರ್ವಾಧಿಕಾರಿ ಎಂದು ಜರಿಯುವ ಬಿಜೆಪಿ ಮೋದಿಯ ಸರ್ವಾಧಿಕಾರವನ್ನು ಸಮರ್ಥಿಸುವುದು ವಿಚಿತ್ರ ಮತ್ತು ಹಾಸ್ಯಾಸ್ಪದ ಕೂಡ. ಮೋದಿ ಎಷ್ಟೇ ಜನಪ್ರೀಯತೆ ಗಳಿಸಿದ್ದರು ಹಾಗು ನ್ಯಾಯಾಲಯದಿಂದ ಕ್ಲೀನ್ ಚಿಟ್ ಪಡೆದರೂ ಗುಜರಾತ್ ಗಲಭೆಯ ಕಳಂಕದಿಂದ ಅವರು ನೈತಿಕವಾಗಿ ಎಂದಿಗೂ ಮುಕ್ತರಾಗಲಾರರು. ಇಂದಿರಾ ಹೇರಿದ ತುರ್ತುಪರಿಸ್ಥಿತಿ ಟೀಕಿಸುವ ಮೋದಿ ಈಗ ತಮ್ಮ ವಿರುದ್ಧ ಬಂದಿರುವ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿಷೇಧಿಸಲು ಅದೇ ತುರ್ತು ಪರಿಸ್ಥಿತಿಯ ಕಾನೂನುಗಳನ್ನು ಬಳಸಿಕೊಳ್ಳುತ್ತಿದ್ದಾರೆ.
೨೦೦೨ ರಲ್ಲಿ ನಡೆದ ಗೋಧ್ರಾ ರೈಲು ದುರಂತ ಮತ್ತು ಆನಂತರ ನಡೆದ ಗುಜರಾತ ಗಲಭೆಯ ಹಿಂಸಾಚಾರದಲ್ಲಿ ಮೋದಿಯ ಪಾತ್ರದ ಕುರಿತಾದ ಸಾಕ್ಷ್ಯಚಿತ್ರದ ಪ್ರಸಾರವನ್ನು ನಿಷೇಧಿಸುವಲ್ಲಿ ಮೋದಿ ಸರಕಾರವು ಪ್ರಜಾಪ್ರಭುತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವ ಕಾರ್ಯ ಮಾಡಿದೆ. ೨೦೦೨ ರಲ್ಲಿ ನಡೆದ ಗುಜರಾತ ಗಲಭೆಗಳ ತನಿಖೆಗೆ ಸರ್ವೋಚ್ಛ ನ್ಯಾಯಾಲಯ ನೇಮಿಸಿದ್ದ ವಿಚಾರಣಾ ಆಯೋಗದ ಪ್ರಶ್ನೆಗಳಿಗೆ ೨೦೧೦ ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿ ಉತ್ತರಿಸಿದ್ದಾರೆ. ನ್ಯಾಯಾಲಯವು ಗಲಭೆಯಲ್ಲಿ ಮೋದಿಯವರ ಪಾತ್ರವಿಲ್ಲ ಎನ್ನುವ ತೀರ್ಪು ನೀಡಿದ್ದರೂ ಕೂಡ ನೈತಿಕವಾಗಿ ಮೋದಿಯವರು ಆ ಕಳಂಕದಿಂದ ತಪ್ಪಿಸಿಕೊಳ್ಳಲಾರರು. ಏಕೆಂದರೆ ಗಲಭೆಯಲ್ಲಿ ಮೋದಿಯವರ ಪಾತ್ರದ ಕುರಿತು ಸಾಕ್ಷ್ಯಗಳ ಕೊರತೇಯಿಂದ ಅವರು ತಪ್ಪಿತಸ್ಥರಲ್ಲವೆಂದಾದರೂ ಕೂಡ ಗಲಭೆಯನ್ನು ನಿಯಂತ್ರಿಸುವಲ್ಲಿ ಮೋದಿಯವರು ಸಂಪೂರ್ಣ ವಿಫಲವಾಗಿದ್ದಂತೂ ಯಾರೂ ಅಲ್ಲಗಳೆಯಲಾಗದು.
ಗುಜರಾತಿನಲ್ಲಿ ೨೦೦೨ ರಲ್ಲಿ ನಡೆದ ಸರಣಿ ಗಲಭೆಗಳ ಸಂದರ್ಭದಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಮೋದಿಯವರ ಪಾತ್ರವನ್ನು ಬಿಬಿಸಿ ಪರಿಶೀಲಿಸಲು ಸಾಕ್ಷ್ಯಚಿತ್ರವನ್ನು ತಯ್ಯಾರಿಸಿ ಪ್ರಸಾರ ಮಾಡುತ್ತಿದೆ. ಆ ಸಾಕ್ಷ್ಯಚಿತ್ರದ ಪ್ರಸಾರವನ್ನು ಮೋದಿ ಸರಕಾರ ಈಗ ನಿಷೇಧಿಸಲು ತುರ್ತು ಪರಿಸ್ಥಿತಿಯ ಕಾನೂನುಗಳ ಮೊರೆಹೋಗಿದೆ. ಬಿಬಿಸಿಯ ಈ ಸಾಕ್ಷ್ಯಚಿತ್ರದ ಪ್ರಸಾರದ ವಿಷಯದಲ್ಲಿ ಭಾರತದಲ್ಲಿ ಈಗ ದೊಡ್ಡ ವಿವಾದ ಭುಗಿಲೆದ್ದಿದೆ. ಗಲಭೆಯ ಸಂದರ್ಭದಲ್ಲಿ ಮೋದಿಯವರ ನಡವಳಿಕೆಯನ್ನು ಪಾಶ್ಚಿಮಾತ್ಯ ರಾಜತಾಂತ್ರಿಕರು ಮತ್ತು ಬ್ರಿಟಿಷ್ ಸರ್ಕಾರ ಟೀಕಿಸಿದ ಸಂಗತಿಯನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆಯಂತೆ. ಈ ಗಲಭೆಯು ಜನಾಂಗೀಯ ಶುದ್ಧೀಕರಣದ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆಯಂತೆ.
ಅಯೋದ್ಯೆಯಿಂದ ಗುಜರಾತಿಗೆ ಪ್ರಯಾಣಿಸೂತ್ತಿದ್ದ ೫೯ ಹಿಂದೂ ಕರಸೇವಕರನ್ನು ರೈಲಿನಲ್ಲಿ ಬೆಂಕಿ ಹಚ್ಚಿ ಸುಡಲಾಗಿದೆ ಎನ್ನುವ ಸಂಶಯದ ಮೇಲೆ ಭುಗಿಲೆದ್ದ ಗುಜರಾತ ಗಲಭೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಹಿಂದೆ ಮೋದಿಯವರ ಕೈವಾಡವಿತ್ತು ಎಂಬ ಆರೋಪವು ಮೋದಿಯವರನ್ನು ದಶಕಗಳಿಂದ ಕಾಡುತ್ತಿದೆ. ರೈಲಿಗೆ ಬೆಂಕಿ ಹಚ್ಚಿದ್ದು ರಾಜ್ಯದ ಮುಸ್ಲಿಮರು ಎನ್ನುವುದು ಹಿಂದೂ ಮೂಲಭೂತವಾದಿಗಳ ಆರೋಪವಾಗಿದೆ. ಆಗ ನಡೆದ ಹಿಂಸಾಚಾರದಲ್ಲಿ ಅಂದಾಜು ೧,೦೦೦ ಮುಸಲ್ಮಾನರು ಕೊಲ್ಲಲ್ಪಟ್ಟಿದ್ದರು. ಉದ್ರಿಕ್ತ ಹಿಂದುತ್ವವಾದಿ ಗುಂಪುಗಳಿಂದ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ಹಲ್ಲೆಗಳನ್ನು ನಿಲ್ಲಿಸಲು ಪ್ರಯತ್ನಿಸದೆ ಮೋದಿಯವರು ಹಿಂದುತ್ವವಾದಿಗಳನ್ನು ಮೌನವಾಗಿ ಬೆಂಬಲಿಸಿದ್ದರು ಎಂದು ಪೊಲೀಸ್ ಪ್ರಾಥಮಿಕ ತನಿಖಾ ವರದಿಗಳಲ್ಲಿ ಆಪಾದಿಸಲಾಗಿತ್ತು.
ಈ ಆರೋಪವನ್ನು ಮೋದಿ ನಿರಾಕರಿಸಿದ್ದರು ಮತ್ತು ೨೦೧೩ ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ ವಿಚಾರಣಾ ವರದಿಯಲ್ಲಿ ಮೋದಿ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ಹೇಳಲಾಗಿತ್ತು. ಸಾಕ್ಷ್ಯಚಿತ್ರದ ಮೊದಲ ಕಂತು ಕಳೆದೆರಡು ವಾರಗಳ ಹಿಂದೆ ಯುಕೆಯಲ್ಲಿ ಪ್ರಸಾರವಾಗಿತ್ತು. ಆದರೆ ಇದನ್ನು ಭಾರತದಲ್ಲಿ ಪ್ರಸಾರ ಮಾಡುವುದನ್ನು ಮೋದಿ ಸರಕಾರ ನಿಷೇಧಿಸಿದರೂ ಅನಧಿಕೃತ ವೀಡಿಯೊ ಕ್ಲಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಇದು ಮೋದಿ ಸರಕಾರ ಮತ್ತು ಬಿಜೆಪಿಯನ್ನು ತೀವ್ರವಾಗಿ ಆತಂಕಕ್ಕೀಡು ಮಾಡಿದೆ. ಆದ್ದರಿಂದ ಈ ಸಾಕ್ಷ್ಯಚಿತ್ರವನ್ನು ನಿರ್ದಿಷ್ಟವಾಗಿ ಮೋದಿಯವರ ವ್ಯಕ್ತಿತ್ವವನ್ನು ವಿರೂಪಗೊಳಿಸಲು ವಿನ್ಯಾಸಗೊಳಿಸಲಾದ ಸುಳ್ಳು ಪ್ರಾಚಾರ ತುಣುಕು ಎಂದು ಮೋದಿ ಸರಕಾರ ವಿವರಿಸಿದೆ. ಪಕ್ಷಪಾತˌ ವಸ್ತುನಿಷ್ಠತೆಯ ಕೊರತೆ ಮತ್ತು ಸ್ಪಷ್ಟವಾಗಿ ಇದೊಂದು ಮುಂದುವರೆದ ವಸಾಹತುಶಾಹಿ ಮನಸ್ಥಿತಿಯ ಚಿತ್ರಣ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಹೇಳಿದ್ದಾರೆ.
ಈ ಸಾಕ್ಷ್ಯಚಿತ್ರವನ್ನು ೩೦೦ ಕ್ಕೂ ಹೆಚ್ಚು ಮಾಜಿ ನ್ಯಾಯಾಧೀಶರು, ಅಧಿಕಾರಿಗಳು ಮತ್ತು ಪ್ರಮುಖ ವ್ಯಕ್ತಿಗಳು ಜಂಟಿ ಹೇಳಿಕೆಯಲ್ಲಿ ಟೀಕಿಸಿದ್ದಾರೆ, ಮತ್ತು ಅವರೆಲ್ಲರು ಬಿಬಿಸಿಯು ಬ್ರಿಟಿಷ್ ಸಾಮ್ರಾಜ್ಯಶಾಹಿ ಅಜೆಂಡಾವನ್ನು ಮುಂದುವರೆಸಿದ್ದು ಅದು ಭಾರತದಲ್ಲಿ ಆಂತರಿಕವಾಗಿ ಹಿಂದೂ-ಮುಸ್ಲಿಂ ಉದ್ವಿಗ್ನತೆಯನ್ನು ಪುನರುತ್ಥಾನಗೊಳಿಸುವ ಹುನ್ನಾರ ಹೊಂದಿದೆ ಎಂದು ಆರೋಪಿಸಲಾಗಿದೆ. ಈ ಸಾಕ್ಷ್ಯಚಿತ್ರದ ಕುರಿತು ಇಂಗ್ಲೆಂಡ್ ಸಂಸತ್ತಿನಲ್ಲಿ ಚರ್ಚೆಯಾಗಿದ್ದು, ಅಲ್ಲಿ ಲೇಬರ್ ಪಕ್ಷದ ಸಂಸದ ಇಮ್ರಾನ್ ಹುಸೇನ್ ಅವರು ಹಿಂಸಾಚಾರದ ಹಿಂದೆ ಮೋದಿ ಕೈವಾಡದ ಕುರಿತು ಬ್ರಿಟಿಷ್ ಸರಕಾರ ತನ್ನ ಅಭಿಪ್ರಾಯ ಮಂಡಿಸುವಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಸವಾಲು ಹಾಕಿದ್ದಾರೆ. ಅದಕ್ಕೆ ಸುನಕ್ ಅವರು ಆ ಕುರಿತು ನನಗೆ ಖಚಿತತೆ ಇಲ್ಲ ಎಂದು ಪ್ರತಿಕ್ರೀಯಿಸಿದ್ದಾರೆ. ಆನಂತರ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ೨೦೨೧ ರಲ್ಲಿ ತರಲಾದ ಕಾನೂನಿನ ಅಡಿಯಲ್ಲಿ ಸಾಕ್ಷ್ಯಚಿತ್ರದ ಪ್ರಸಾರವನ್ನು ತುರ್ತುಪರಿಸ್ಥಿತಿಯ ಕಾನೂನಿನನ್ವಯ ನಿಷೇಧಿಸುವ ನಿರ್ದೇಶನಗಳನ್ನು ನೀಡಿದೆ.
ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಲಹೆಗಾರರಾದ ಕಾಂಚನ್ ಗುಪ್ತಾ ಅವರು ಭಾರತದ ಅಖಂಡತೆˌ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುವ ಹುನ್ನಾರದಿಂದ ಮತ್ತು ಸಂಪೂರ್ಣ ಆಧಾರರಹಿತ ಆರೋಪಗಳಿಂದ ತಯ್ಯಾರಿಸಲಾದ ಈ ಸಾಕ್ಷ್ಯಚಿತ್ರದ ತುಣುಕುಗಳನ್ನು ಹಂಚಿಕೊಂಡಿರುವ ಅನೇಕರ ಖಾತೆಗಳಿಂದ ಆ ಚುಣುಕುಗಳನ್ನು ತೆಗೆದುಹಾಕಲು ಟ್ವಿಟರ್ ಮತ್ತು ಯೂಟ್ಯೂಬ್ಗೆ ಸರಕಾರ ಆದೇಶಿಸಿದೆ ಎನ್ನುವ ವಾಹಿತಿ ನೀಡಿದ್ದಾರೆ. ಬಿಬಿಸಿ ವಾಹಿನಿಯು ಸುಳ್ಳು ಪ್ರಚಾರ ಮತ್ತು ಭಾರತ ವಿರೋಧಿ ಕಸದ ರೂಪದಲ್ಲಿ ಸಾಕ್ಷ್ಯಚಿತ್ರದ ಲಿಂಕ್ ಗಳನ್ನು ಹಂಚಿಕೊಳ್ಳುವ ಟ್ವೀಟ್ಗಳನ್ನು ಭಾರತದ ಸಾರ್ವಭೌಮ ಕಾನೂನುಗಳು ಮತ್ತು ನಿಯಮಗಳ ಅಡಿಯಲ್ಲಿ ನಿರ್ಬಂಧಿಸಲಾಗಿದೆ ಎಂದು ಗುಪ್ತಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಆದರೆ ಬಿಬಿಸಿಯು ಅದಕ್ಕೆ ಉತ್ತರವಾಗಿ ತನ್ನ ಸಾಕ್ಷ್ಯಚಿತ್ರವು ಉನ್ನತ ಸಂಪಾದಕೀಯ ಮಾನದಂಡಗಳು ಮತ್ತು ಕಠಿಣ ಸಂಶೋಧನೆಯ ಆಧಾರದಲ್ಲಿ ತಯ್ಯಾರಿಸಲಾಗಿದೆ ಎಂದು ಹೇಳಿಕೊಂಡಿದೆ.
ಕಳೆದ ಏಳು ವರ್ಷಗಳ ಮೋದಿ ಆಡಳಿತದಲ್ಲಿ ಜಾಗತಿಕ ಮಾಧ್ಯಮ ಸ್ವಾತಂತ್ರ್ಯವು ಹೆಚ್ಚಿನ ಪ್ರಮಾಣದಲ್ಲಿ ಆತಂಕಕ್ಕೊಳಗಾಗಿದೆ. ಇಂತಹ ಸವಾಲಿನ ವಾತಾವರಣದ ನಡುವೆ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವ ಭಾರತ ಸರಕಾರದ ನಿರ್ಧಾರವು ಹೊರಬಿದ್ದಿದೆ. ಮೋದಿ ಸರಕಾರವನ್ನು ವಿಮರ್ಶಾತ್ಮಕ ನೆಲೆಯಲ್ಲಿ ವಿಮರ್ಶಿಸುವ ಪತ್ರಕರ್ತರುˌ ಮಾಧ್ಯಮಗಳುˌ ಸಾಮಾಜಿಕ ಕಾರ್ಯಕರ್ತರು ಮತ್ತು ನ್ಯಾಯಾಂಗ ಸರಕಾರದಿಂದ ಕಿರುಕುಳಕ್ಕೆ ಒಳಗಾಗಿವೆ. ಕಳೆದ ವರ್ಷ, ಭಾರತವು ಮಾಧ್ಯಮ ಸ್ವಾತಂತ್ರ್ಯದ ಜಾಗತಿಕ ಸೂಚ್ಯಂಕದಲ್ಲಿ ೧೮೦ ರಲ್ಲಿ ೧೫೦ ನೇ ಸ್ಥಾನದಲ್ಲಿತ್ತು. ಇದು ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕುವ ರಾಷ್ಟ್ರಗಳಲ್ಲಿ ದಾಖಲೆಯ ಅತ್ಯಂತ ಕೆಟ್ಟ ಸ್ಥಾನವಾಗಿತ್ತು ಎನ್ನುವುದರಲ್ಲಿ ಯಾವುದೆ ಸಂಶಯವಿಲ್ಲ. ಮೋದಿ ಸರಕಾರದ ಈ ಕ್ರಮವು ಭಾರತದ ವಿರೋಧ ಪಕ್ಷಗಳು ಅತ್ಯಂತ ಕಟುವಾಗಿ ಟೀಕಿಸಿವೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚಕ್ರವರ್ತಿ ಮತ್ತು ಆತನ ಆಸ್ಥಾನದಲ್ಲಿರುವವರು ತುಂಬಾ ಅಸುರಕ್ಷಿತೆಯಿಂದ ಬಳಲುತ್ತಿದ್ದಾರೆˌ ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಕ್ಷಮಿಸಿ, ಈ ನಿಷೇಧವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಪ್ರತಿನಿಧಿಸುವ ಭಾರತದ ಸ್ವಾಭಿಮಾನದ ನಡೆಯಲ್ಲ ಎಂದು ತೃಣಮೂಲ ಕಾಂಗ್ರೆಸ್ನ ಸಂಸದ ಮಹುವಾ ಮೊಯಿತ್ರಾ ಅವರು ಟ್ವೀಟ್ ಮಾಡಿದ್ದಾರೆ.
ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ಮತ್ತು ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವ ಚಲನ ಚಿತ್ರವೊಂದು ಯಾವುದೇ ವಿರೋಧವಿಲ್ಲದೆ ಭಾರತದಲ್ಲಿ ಬಿಡುಗಡೆಯಾಗುತ್ತಿರುವಾಗ ಮೋದಿ ಕುರಿತ ಸಾಕ್ಷ್ಯಚಿತ್ರವನ್ನು ಏಕೆ ನಿರ್ಬಂಧಿಸಬೇಕು ಎಂದು ಎಐಎಂಐಎಂ ನ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಈಗಾಗಲೆ ಭಾರತದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡುವ ಕಾಶ್ಮಿರ್ ಫೈಲ್ಸ್ ಮುಂತಾದ ಬಿಜೆಪಿ ಬೆಂಬಲಿತ ಚಲನಚಿತ್ರಗಳು ಯಾವುದೇ ಆತಂಕವಿಲ್ಲದೆ ಅಪಾರ ಜನರ ವಿರೋಧದ ನಡುವೆಯೂ ಪ್ರದರ್ಶನಗೊಳ್ಳುತ್ತಿವೆ. ಇಂದಿರಾ ಹತ್ಯೆಯ ನಂತರ ನಡೆದ ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕರನ್ನು ಟೀಕಿಸುವ ಅನೇಕ ಡಾಕ್ಯೂಮೆಂಟ್ರಿಗಳು ಭಾರತದಲ್ಲಿ ಪ್ರಸಾರವಾಗಿದ್ದಾಗ್ಯೂ ಅಂದಿನ ಕಾಂಗ್ರೆಸ್ ಸರಕಾರ ಅವನ್ನು ನಿಷೇಧಿಸುವ ದುಸ್ಸಾಹಸ ಮಾಡಿರಲಿಲ್ಲ. ಆದರೆ ಮೋದಿ ಮತ್ತು ಬಿಜೆಪಿಯ ತಪ್ಪುಗಳನ್ನು ತೋರಿಸುವ ಯಾವುದೇ ಅಭಿವ್ಯಕ್ತಿಯ ಮಾದರಿಗಳನ್ನು ಇಂದಿನ ಫ್ಯಾಸಿಷ್ಟ್ ಪ್ರಭುತ್ವ ಸಹಿಸುತ್ತಿಲ್ಲ ಎನ್ನುವುದು ಬಹಳ ಆತಂಕದ ಹಾಗು ಅಷ್ಟೆ ಅಪಾಯಕಾರಿ ವಾತಾವರಣದ ನೈಜ ಚಿತ್ರಣವನ್ನು ಸಾಂಕೇತಿಸುತ್ತಿದೆ.
~ಡಾ. ಜೆ ಎಸ್ ಪಾಟೀಲ.