ಅಫ್ಘಾನಿಸ್ತಾನದ ತಾಲೀಬಾನ್ ಜೊತೆ ಭಾರತವು ಹಿಂಬಾಗಿಲಿನಿಂದ ಮಾತುಕತೆ ನಡೆಸುತ್ತಿದೆ. ಭಾರತದ ಬದಲಾದ ನಿರ್ಣಾಯಕ ನೀತಿಪಲ್ಲಟದಲ್ಲಿ ಈ “ಹಿಂಬಾಗಿಲ ಮಾತುಕತೆ”ಯನ್ನು ಭಾರತವೇ ಒಪ್ಪಿಕೊಂಡಿದೆ
ಜೂನ್ ಆರಂಭದಲ್ಲಿ ಅಫ್ಘಾನಿಸ್ತಾನದಿಂದ ಅಮೇರಿಕಾವು ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದಾಗಲೇ ಭಾರತವು ತಾಲೀಬಾನಿನ ಕೆಲವು ಗುಂಪುಗಳು ಮತ್ತು ಸಶಸ್ತ್ರ ತಾಲೀಬಾನ್ ನಾಯಕರೊಂದಿಗೆ ಮಾತನಾಡಲು ಆರಂಭಿಸಿದೆ ಎಂದು ಕೆಲ ಮಾಧ್ಯಮ ವರದಿ ಮಾಡಿದೆ. ಇದಾದ ಕೆಲವು ದಿನಗಳ ನಂತರ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ವರದಿಗಳನ್ನು ದೃಢಪಡಿಸಿತು. “ನಾವು ತಾಲೀಬಾನಿನ ಕೆಲ ಗುಂಪುಗಳ ಜೊತೆ ಸಂಪರ್ಕದಲ್ಲಿದ್ದೇವೆ. ಅಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣದ ಕಡೆಗೆ ನಮ್ಮ ದೀರ್ಘಾವಧಿಯ ಅಲೋಚನೆ ಇದೆ” ಎಂದು ಭಾರತೀಯ ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಭಾರತದ ವಿದೇಶಾಂಗ ಸಚಿವಾಲಯವು ತಮ್ಮ ಜೊತೆ “ಹಿಂಬಾಗಿಲ” ಸಂಪರ್ಕದಲ್ಲಿ ಇರುವುದನ್ನು ತಾಲಿಬಾನ್ನ ಕ್ವೆಟ್ಟಾ ಮೂಲದ ನಾಯಕರು ಮತ್ತು ಕತಾರ್ ಅಧಿಕಾರಿಗಳು ಕೂಡ ದೃಢಪಡಿಸಿದ್ದಾರೆ.
ತೀರಾ ಇತ್ತೀಚಿನವರೆಗೂ ತಾಲಿಬಾನ್ ಗಳ ಜೊತೆ ಮುಕ್ತವಾಗಿ ಸಂವಹನ ನಡೆಸಲು ಭಾರತ ಹಿಂಜರಿಯುತ್ತಿತ್ತು. ಏಕೆಂದರೆ ಅಫ್ಘಾನ್ ಸರ್ಕಾರ ಮತ್ತು ಜಾಗತಿಕವಾಗಿ ಅಫ್ಘಾನ್ ಹೊಂದಿರುವ ಬೆಂಬಲಿತ ದೇಶಗಳೊಂದಿಗಿನ ತನ್ನ ಸಂಬಂಧ ಹಾಳಾಗಬಹುದು ಎಂದು ಭಾರತ ಹೆದರಿತ್ತು.
ಇತಿಚ್ಚಿನ ವರ್ಷಗಳಲ್ಲಿ ಭಾರತದ ಹಿತಾಸಕ್ತಿಗಳನ್ನು ರಕ್ಷಿಸಲು ಭಾರತೀಯ ಗುಪ್ತಚರ ಅಧಿಕಾರಿಗಳು ಸಾಂದರ್ಭಿಕವಾಗಿ ತಾಲಿಬಾನ್ ಹೋರಾಟಗಾರರೊಂದಿಗೆ ಸಂಪರ್ಕ ಹೊಂದಿದ್ದರು. ವಿಶೇಷವಾಗಿ 2011 ರಲ್ಲಿ ಅಪಹರಣಕ್ಕೀಡಾದ ಭಾರತೀಯ ಎಂಜಿನಿಯರ್ಗಳು ಮತ್ತು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುವ ಭಾರತೀಯ ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಭಾರತ ಸರ್ಕಾರವು ಅವಾಗಾವಾಗ ತಾಲೀಬಾನ್ ಗಳ ಜೊತೆ ಸಂಪರ್ಕದಲ್ಲಿತ್ತು. ಹಾಗಂತ ಆ ದಿನಗಳಲ್ಲಿ ಭಾರತವು ತಾಲೀಬಾನ್ ಗಳ ಜೊತೆ ಶಾಶ್ವತ ಸಂಬಂಧವನ್ನೇನೂ ಹೊಂದಿರಲಿಲ್ಲ.
ಯಾಕೆಂದರೆ, ಭಾರತವು ತಾಲಿಬಾನ್ ಅನ್ನು ತನ್ನ ಮುಖ್ಯ ವಿರೋಧಿ ಪಾಕಿಸ್ತಾನದಂತೆಯೇ ನೋಡಿದೆ. ತಾಲೀಬಾನ್ ಎಂಬ ಸಶಸ್ತ್ರ ಗುಂಪಿನ ಜೊತೆ ನೇರ ಸಂಬಂಧ ಹೊಂದುವುದರಿಂದ ಭಾರತಕ್ಕೆ ಏನೂ ಲಾಭವಿಲ್ಲ ಎಂಬುದೂ ಗೊತ್ತಿತ್ತು. ಇದೆಲ್ಲದಕ್ಕಿಂತ ಮುಖ್ಯವಾಗಿ ಭಾರತವು ಸಶಸ್ತ್ರ ಗುಂಪುಗಳ ಬಗೆಗಿನ ತನ್ನ ಅಧಿಕೃತ ನೀತಿಯಲ್ಲಿ ರಾಜಿಯಾಗಲು ಬಯಸಲಿಲ್ಲ. ತಾಲೀಬಾನ್ ನಂತಹ ಯಾವುದೇ “ಉಗ್ರಗಾಮಿ ಗುಂಪು”ಗಳೊಂದಿಗೆ ಮಾತುಕತೆ ನಡೆಸಿದರೆ ಕಾಶ್ಮೀರಿ ಪ್ರತ್ಯೇಕತಾವಾದಿ ಗುಂಪುಗಳೊಂದಿಗೆ ಕೂಡಾ ರಾಜಿ ಸಂಧಾನ ನಡೆಸಲು/ ಮಾತುಕತೆ ನಡೆಸಲು ಒತ್ತಡ ಹೆಚ್ಚಾಗುತ್ತದೆ ಎಂದು ಭಾರತ ಸರ್ಕಾರ ಹೆದರಿತ್ತು.
ಆದರೆ ಈಗಿನ ಕಳೆದ ಕೆಲವು ವರ್ಷಗಳಲ್ಲಿ ಭಾರತದ ನೀತಿಗಳು ಬಹಳಷ್ಟು ಬದಲಾಗಿದೆ.
ಈ ಮಧ್ಯೆ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸಾನ್(ISK) ಎಂಬ ಉಗ್ರವಾದಿ ಗುಂಪು ಅಫ್ಘಾನಿಸ್ತಾನದಲ್ಲಿ ಪ್ರಭಾವಶಾಲಿಯಾಗಿ ಬೆಳೆಯಲಾರಂಭಿಸಿತು. ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸಾನ್(ISK) ಎಂಬ ಉಗ್ರ ಗುಂಪನ್ನು ಹತ್ತಿಕ್ಕಲು 2015 ರಲ್ಲಿ ಇರಾನ್ ಮತ್ತು ರಷ್ಯಾವು ತಾಲೀಬಾನ್ ಅನ್ನು ಬೆಂಬಲಿಸಿತು. ಅಫ್ಘಾನ್ ಸರ್ಕಾರದ ಮಿಲಿಟರಿ ಪಡೆಗಳ ಮಿತಿಗಳು ಮತ್ತು ತಾಲೀಬಾನ್ ಬಳಿ ಇರುವ ಬಲದ ಬಗ್ಗೆ ಇರಾನ್ ಮತ್ತು ರಷ್ಯಾವು ತಿಳಿದುಕೊಂಡು, ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸಾನ್(ISK) ಅನ್ನು ಹಣಿಯಲು ಅದು ತಾಲೀಬಾನ್ ಅನ್ನು ಆಯ್ದುಕೊಂಡು ಬೆಂಬಲಿಸಿತು.
ಅಫ್ಘನ್ ರಕ್ತಚರಿತೆ ಭಾಗ-1: ಅಫ್ಘನ್ ಅರಾಜಕತೆಯಲ್ಲಿ ಅಮೆರಿಕಾ-ರಷ್ಯಾದ ಪಾತ್ರ!
ಅಲ್ಲಿಂದೀಚೆಗೆ, ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಪ್ರಭಾವಶಾಲಿಯಾಗಿ ಬೆಳೆಯಲಾರಂಭಿಸಿತು. ತಾಲೀಬಾನ್ ಹಲವು ದೇಶಗಳೊಂದಿಗೆ ತನ್ನ ರಾಜತಾಂತ್ರಿಕ ಸಂಬಂಧಗಳನ್ನು ಕ್ರಮೇಣ ಬಲಪಡಿಸಲು ಮುಂದಾಯಿತು. ಅಫ್ಘಾನ್ ಸರ್ಕಾರದ ವಿರುದ್ದವಿದ್ದ ಎಲ್ಲಾ ಅಂಶಗಳ ಲಾಭವನ್ನು ತಾಲೀಬಾನ್ ಪಡೆಯಿತು. ಗಮನಾರ್ಹವಾದ ವಿಷಯವೆಂದರೆ 2020 ರ ಫೆಬ್ರವರಿಯಲ್ಲಿ ತಾಲೀಬಾನ್ ಸಂಘಟನೆಯು ಅಮೇರಿಕಾದ ಜೊತೆ ಐತಿಹಾಸಿಕ ಶಾಂತಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಆ ಮೂಲಕ ತಾಲೀಬಾನ್ ಅಧಿಕೃತ ಕಾರ್ಯಾಚರಣೆ ಶುರು ಮಾಡಿತು. ಆ ಬಳಿಕ 2021 ರ ಸೆಪ್ಟೆಂಬರ್ ನಲ್ಲಿ ಅಮೇರಿಕಾವು ತನ್ನ ಸೈನ್ಯವನ್ನು ವಾಪಸ್ ಕರೆಸಲು ನಿರ್ಧರಿಸಿದ ಬಳಿಕ ತಾಲೀಬಾನ್ ಅಫ್ಘಾನಿಸ್ತಾನದ ಮೂಲೆ ಮೂಲೆಯಲ್ಲಿ ಪ್ರಭಾವಶಾಲಿಯಾಗಿ ಬೆಳೆಯಿತು. (ಆದರೆ ಸೆಪ್ಟೆಂಬರ್ ಗೂ ಮೊದಲೇ ಅಮೇರಿಕಾ ಸೈನ್ಯವನ್ನು ಹಿಂಪಡೆಯಿತು,)
ಈ ಘಟನೆಗಳೆಲ್ಲವೂ ಭಾರತವನ್ನು ಅಡಕತ್ತರಿಯಲ್ಲಿ ಸಿಲುಕಿಸಿತು. ತಾನೇ ಹಾಕಿಕೊಂಡ ಸಶಸ್ತ್ರ ಗುಂಪುಗಳ ಬಗೆಗಿನ ನೀತಿಯನ್ನು ಮರುಪರಿಶೀಲನೆ ಮಾಡುವ ಹಂತಕ್ಕೆ ಭಾರತ ಬಂತು. ಅಫ್ಘಾನಿಸ್ತಾನದಿಂದ ಅಮೇರಿಕಾವು ಸೇನೆಯನ್ನು ಹಿಂತೆಗೆದುಕೊಂಡ ನಂತರ ಅಂತಿಮವಾಗಿ ತನ್ನ ಶತ್ರು ರಾಷ್ಟ್ರವಾದ ಪಾಕಿಸ್ತಾನಕ್ಕೆ ಲಾಭವಾಗುವುದನ್ನು ತಪ್ಪಿಸುವ ತಂತ್ರಗಾರಿಕೆಯ ಭಾಗವಾಗಿ ಭಾರತವು ತಾಲೀಬಾನ್ ಸಂಘಟನೆಯ ಜೊತೆ ಹಿಂಬಾಗಿಲ ಸಂಪರ್ಕವನ್ನು ಹೊಂದಲು ನಿರ್ಧರಿಸಿತು.
ಅಫ್ಘನ್ ರಕ್ತಚರಿತೆ ಭಾಗ-2: ತಾಲಿಬಾನ್ ಹುಟ್ಟು, ಅಮೆರಿಕಾ ಮತ್ತು ಶಾಂತಿ ಒಪ್ಪಂದ
ನಿಮಗೆ ನೆನಪಿರಬಹುದು. 2020 ರ ಸೆಪ್ಟೆಂಬರ್ ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ದೋಹಾದಲ್ಲಿ ನಡೆದ ಅಫ್ಘಾನ್ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿದರು. ಆ ಶಾಂತಿ ಮಾತುಕತೆಯಲ್ಲಿ ತಾಲೀಬಾನ್ ನದ್ದೇ ಮುಖ್ಯ ಪಾತ್ರವಾಗಿದ್ದು, ಆ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದು ಭಾರತದ ಆಸಕ್ತಿಯನ್ನು ಸ್ಪಷ್ಟಪಡಿಸುತ್ತದೆ. ಈ ಶಾಂತಿ ಸಭೆಯಲ್ಲಿ ಭಾರತೀಯ ಹಿರಿಯ ಅಧಿಕಾರಿಗಳ ನಿಯೋಗವೂ ಭಾಗಿಯಾಗಿತ್ತು. ದೇಶದ ಇತಿಹಾಸದಲ್ಲೇ ತಾಲೀಬಾನ್ ಗಳ ಜೊತೆ ಅಧಿಕೃತವಾಗಿ ಭಾರತದ ಉನ್ನತ ದರ್ಜೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಹಾಜರಾಗಿದ್ದು ಇದೇ ಮೊದಲು ! ಅಂದಿನಿಂದ, ಭಾರತೀಯ ಭದ್ರತಾ ಅಧಿಕಾರಿಗಳು ಹಲವಾರು ತಾಲಿಬಾನ್ ಬಣಗಳೊಂದಿಗೆ ಹಿಂಬಾಗಿಲ ಸಂವಹನ ಮಾಡಲು ಪ್ರಾರಂಭಿಸಿದರು. ಈ ತಾಲೀಬಾನ್ ಗುಂಪುಗಳು ಪಾಕಿಸ್ತಾನ ಮತ್ತು ಇರಾನ್ನ ಪ್ರಭಾವದಿಂದ ಹೊರತಾಗಿದೆ. ವಿಶೇಷವೆಂದರೆ ಈ ತಾಲೀಬಾನ್ ಗುಂಪುಗಳು ಅಫ್ಘಾನಿಸ್ತಾನದಲ್ಲಿ “ರಾಷ್ಟ್ರೀಯವಾದಿ” ಸಂಘಟನೆಗಳು ಎಂದು ಕರೆಸಿಕೊಳ್ಳುತ್ತವೆ!
ಹಾಗೆ ನೋಡಿದರೆ ಈ ರೀತಿಯ ಹಿಂಬಾಗಿಲ ಸಂವಹನಗಳಿಂದ ಭಾರತಕ್ಕೆ ಸಾಕಷ್ಟು ಲಾಭವಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ನಿರ್ಗಮಿಸಿದ ನಂತರ ಭಾರತವು ತನ್ನ ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ಬಯಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಭಾರತವು ಅಫ್ಘಾನ್ ನಲ್ಲಿ ಮಾಡಿರುವ ಬಂಡವಾಳ ಹೂಡಿಕೆಗಳನ್ನು ರಕ್ಷಿಸಲು ಬಯಸುತ್ತದೆ. ಅದಕ್ಕಿಂತಲೂ ಸ್ಪಷ್ಟವಾಗಿ ಹೇಳುವುದಾದರೆ, ಅಫ್ಘಾನಿಸ್ತಾನದಲ್ಲಿ ತಾಲೀಬಾನಿಗರು ಇದ್ದರೆ ಕಾಶ್ಮೀರ ಕೇಂದ್ರಿತ ಸಶಸ್ತ್ರ ಗುಂಪುಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಇ-ಮುಹಮ್ಮದ್ (ಜೆಇಎಂ)ವು ಕಾಶ್ಮೀರದಲ್ಲಿ ದಾಳಿ ನಡೆಸಲು ಅಫ್ಘಾನಿಸ್ತಾನವನ್ನು ಬಳಸುವುದಿಲ್ಲ. ತಾಲಿಬಾನ್ ಜೊತೆ ಹಿಂಬಾಗಿಲ ಸಂಪರ್ಕದಲ್ಲಿ ಇರುವುದರಿಂದ ಭಾರತಕ್ಕೆ ಮುಂಬರುವ ವರ್ಷಗಳಲ್ಲಿ ಅಫ್ಘಾನಿಸ್ತಾನವು ದೊಡ್ಡ ಭದ್ರತಾ ಬೆದರಿಕೆಯಾಗಿ ಕಾಡುವುದಿಲ್ಲ. (ಇದೊಂದು ರೀತಿಯಲ್ಲಿ ಉಗ್ರರ ಜೊತೆಗೆ ರಾಜಿಯಾದಂತೆ. ಅದನ್ನು ತಂತ್ರಗಾರಿಕೆ ಎಂದರೆ ತಂತ್ರಗಾರಿಕೆ. ಪುಕ್ಕಲುತನ ಎಂದರೆ ಪುಕ್ಕಲುತನ)
ತಾಲಿಬಾನ್ಗಳಿಗೆ ಕೂಡಾ ಭಾರತದೊಂದಿಗಿನ ಹಿಂಬಾಗಿಲ ಸಂಬಂಧದಿಂದ ಸಾಕಷ್ಟು ಲಾಭವಿದೆ. ಅಫ್ಘಾನ್ ನ ಹೊಸ ಸರ್ಕಾರದಲ್ಲಿ ಅಮೇರಿಕಾದ ಸಹಾಯ ಇರುವುದಿಲ್ಲ. ಹಾಗಾಗಿ ಅಫ್ಘಾನ್ ನ ಅಭಿವೃದ್ಧಿ ಮತ್ತು ಪುನರ್ ನಿರ್ಮಾಣದ ಗುರಿಗಳನ್ನು ತಲುಪಲು ತಾಲೀಬಾನಿಗರಿಗೆ ಹೊರಗಿನ ಸಹಾಯ ಅಗತ್ಯವಾಗಿ ಬೇಕಾಗಿದೆ. “ನೀವು ನಮ್ಮ ಮೇಲೆ ದಾಳಿ ಮಾಡಬೇಡಿ, ದಾಳಿ ಮಾಡುವವರಿಗೆ ಸಹಾಯ ಮಾಡಬೇಡಿ. ನಾವು ನಿಮ್ಮ ಅಭಿವೃದ್ದಿಗೆ ಸಹಾಯ ಮಾಡುತ್ತೇವೆ” ಎಂದು ಅಲಿಖಿತ ಒಪ್ಪಂದವೊಂದಕ್ಕೆ ಭಾರತ ಮತ್ತು ತಾಲೀಬಾನ್ ಸರ್ಕಾರ ಬರಬಹುದು.
ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಮೌನಕ್ಕೆ ಕಾರಣವೇನು?
ಭಾರತ ಮತ್ತು ಪಾಕಿಸ್ತಾನ ನಡೆಸುತ್ತಿರುವ ಪರೋಕ್ಷ ಯುದ್ದಗಳು ಕಡಿಮೆಯಾಗಲು ಅಫ್ಘಾನಿನಲ್ಲಿ ತಾಲೀಬಾನ್ ಸರ್ಕಾರ ಇರಬೇಕು ಎಂದು ಭಾರತ ಬಯಸುತ್ತದೆ. ಅದಕ್ಕಾಗಿ ತಾಲೀಬಾನ್ ಜೊತೆ ಮಾತುಕತೆ ಮಾಡಲು ಭಾರತ ಉತ್ಸಾಹದಿಂದ ಮುಂದೆ ಬಂದಿದೆ. ತಾಲಿಬಾನ್ ಜೊತೆ ಅನೌಪಚಾರಿಕ ದ್ವಿಪಕ್ಷೀಯ ಸಂಬಂಧವನ್ನು ಸ್ಥಾಪಿಸುವಲ್ಲಿ ಭಾರತ ಯಶಸ್ವಿಯಾದರೆ, ಅಫ್ಘಾನಿಸ್ತಾನವು ಭವಿಷ್ಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯಾವುದೇ ಘರ್ಷಣೆಗಳಿಂದ ದೂರವಿರಬಹುದು. ಬದಲಾಗಿ ತನ್ನದೇ ಆದ ದೇಶೀಯ ಸಮಸ್ಯೆಗಳತ್ತ ಅಫ್ಘಾನ್ ಗಮನ ಹರಿಸಬಹುದು.
ಆದರೆ ತಾಲಿಬಾನ್ ಜೊತೆಗಿನ ಭಾರತದ ಹಿಂಬಾಗಿಲ ಮಾತುಕತೆಯ ಯಶಸ್ಸು ಎಂಬುದು ಪಾಕಿಸ್ತಾನ ಯಾವ ರೀತಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಅವಲಂಭಿಸಿರುತ್ತದೆ. ಪಾಕಿಸ್ತಾನವು ಒಳ್ಳೆತನದಿಂದ ವರ್ತಿಸಿದ್ದೇ ಆದಲ್ಲಿ ಪಾಕ್ ಒಂದೋ ತಟಸ್ಥವಾಗಿರುತ್ತೆ. ಅಥವಾ ಪ್ರೋತ್ಸಾಹ ನೀಡುವುದಾಗಲೀ, ಅಡ್ಡಿ ಮಾಡುವುದಾಗಲೀ ಮಾಡುವುದಿಲ್ಲ. ಕೆಟ್ಟದಾಗಿ ವರ್ತಿಸುವುದಾದರೆ, ತಾಲೀಬಾನ್ ಜೊತೆ ಪಾಕಿಸ್ತಾನವೂ ಮಾತುಕತೆ ಮಾಡಿ ಭಾರತದ ಜೊತೆ ಸಂಪರ್ಕ ಸಾಧಿಸದಂತೆ ಮಾಡುವ ಸಾಧ್ಯತೆಗಳಿವೆ. ಈ ರೀತಿ ಆದರೆ ಖಂಡಿತವಾಗಿಯೂ ತಾಲೀಬಾನ್ ಮತ್ತು ಭಾರತದ ನಡುವಿನ ಮಾತುಕತೆಗೆ ಪಾಕ್ ಅಡ್ಡಿಯಾಗುತ್ತದೆ.
ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!
ಭಾರತ ಸರ್ಕಾರವು ಕಾಶ್ಮೀರದ ಸ್ವಾಯತ್ತತಾ ಸ್ಥಾನಮಾನವನ್ನು ರದ್ದುಗೊಳಿಸಿದಾಗ ತಾಲೀಬಾನ್ ಯಾವ ಪ್ರತಿಕ್ರಿಯೆಯನ್ನೂ ನೀಡದೆ ತಟಸ್ಥವಾಗಿತ್ತು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಆಗ ಉದ್ವಿಗ್ನತೆ ಇದ್ದರೂ ಗಲಭೆಗಳು, ಅಶಾಂತಿ, ಯುದ್ದ ಆಗದೇ ಇರುವುದಕ್ಕೆ ತಾಲೀಬಾನ್ ತಟಸ್ಥವಾಗಿದ್ದದ್ದೇ ಕಾರಣವಾಗಿತ್ತು. ತಾಲೀಬಾನ್ ಆ ಸಂದರ್ಭದಲ್ಲಿ ತಟಸ್ಥವಾಗಿತ್ತು ಎಂದರೆ ಅದು ಪಾಕಿಸ್ತಾನದಿಂದ ಸ್ವತಂತ್ರವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಬಯಸಿದೆ ಎಂಬುದನ್ನು ಸ್ಪಷ್ಟಪಡಿಸಿದಂತಿತ್ತು.
ತಾಲೀಬಾನ್ ಪಾಕಿಸ್ತಾನದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಅಫ್ಘಾನ್ ಸರ್ಕಾರದ ವಿರುದ್ಧ ತಾಲೀಬಾನ್ ವ್ಯಾಪ್ತಿ ಅಫ್ಘಾನಿಸ್ತಾನದಲ್ಲಿ ಬೆಳೆಯುತ್ತಿದ್ದಂತೆ ಅದರ ಆರ್ಥಿಕ ಸ್ವಾತಂತ್ರ್ಯ ಮತ್ತು ಅಂತಾರಾಷ್ಟ್ರೀಯ ಸಮುದಾಯದ ಜೊತೆ ರೂಪುಗೊಂಡ ರಾಜತಾಂತ್ರಿಕ ಸಂಬಂಧಗಳು ತಾಲಿಬಾನ್ಗೆ ಒಂದು ನಿರ್ದಿಷ್ಟ ಮಟ್ಟದ ಸ್ವಾತಂತ್ರ್ಯವನ್ನು ನೀಡಿತು. ಈಗ ತಾಲೀಬಾನ್ ಎಂಬ ಸಂಘಟನೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ರಾಜಕೀಯ ಶಕ್ತಿಯಾಗಿ ಮಾರ್ಪಟ್ಟಿದೆ. ಮತ್ತು ಅದು ನಿಧಾನವಾಗಿ ಪಾಕಿಸ್ತಾನದ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದೆ.
ಪಾಕಿಸ್ತಾನದ ವಿರೋಧದ ಮಧ್ಯೆಯೂ ತಾಲಿಬಾನ್ ಜೊತೆ ಭಾರತವು ಮಾತುಕತೆಯನ್ನು ಮುಂದುವರಿಸುತ್ತದೆ ಎಂದು ಈ ಎಲ್ಲಾ ಬೆಳವಣಿಗೆಗಳು ಹೇಳುತ್ತವೆ. ಆದರೆ ಭಾರತ ಮತ್ತು ತಾಲೀಬಾನ್ ಅಂದುಕೊಂಡಂತೆ ಈ ಹಿಂಬಾಗಿಲ ಮಾತುಕತೆಯು ಭಾರತಕ್ಕಾಗಲೀ, ಅಫ್ಘಾನ್ ಗಾಗಲೀ ತೀರಾ ಅಗತ್ಯವಾಗಿ ಬೇಕಾಗಿರುವ ಭದ್ರತೆ ಮತ್ತು ಸ್ಥಿರತೆಯನ್ನು ತರುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾಲವೇ ನಿರ್ಣಯಿಸಬೇಕಿದೆ.
ಲೇಖಕರು : ಅಬ್ದುಲ್ ಬಸಿತ್
ಸಂಶೋಧಕರು, ಎಸ್ ರಾಜರತ್ನಂ ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್ (RSIS) ಸಿಂಗಾಪೂರ್
ಅನುವಾದ : ನವೀನ್ ಸೂರಿಂಜೆ
(ಅಲ್ ಜಜೀರಾ ಪತ್ರಿಕೆಯಲ್ಲಿ 07 ಜುಲೈ 2021 ರಂದು ಪ್ರಕಟವಾಗಿರುವ ಲೇಖನ. ಆಗಿನ್ನೂ ಅಫ್ಘಾನ್/ಕಾಬೂಲ್ ಅನ್ನು ತಾಲೀಬಾನಿಗರು ವಶ ಮಾಡಿರಲಿಲ್ಲ. ತಾಲೀಬಾನಿಗರ ಜೊತೆ ಭಾರತ ಮತ್ತು ಅಮೇರಿಕಾ ನಡೆಸಿರುವ ಮಾತುಕತೆಯ ಹಿನ್ನಲೆಯಲ್ಲಿ ಪ್ರಕಟವಾಗಿರುವ ಈ ಲೇಖನ ಈಗ ಹೆಚ್ಚು ಮಹತ್ವಪೂರ್ಣವಾಗಿದೆ. ಇಂಗ್ಲೀಷ್ ಲೇಖನದ ಕೆಲ ಪದಗಳನ್ನು ಯಥಾವತ್ತಾಗಿ ಅನುವಾದ ಮಾಡಲಾಗದೇ ಇದ್ದಾಗ ಯಥಾರ್ಥ ಪದವನ್ನು ಬಳಸಲಾಗಿದೆ – ನವೀನ್ ಸೂರಿಂಜೆ)