ಈ ವಾರ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿಯ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು ಪ್ರತಿ ಡಾಲರ್‌ಗೆ 77 ರೂಗಳಷ್ಟಾಗಿದೆ. ಕಳೆದ ಗುರುವಾರ ರೂಪಾಯಿ ಮೌಲ್ಯ 77.63 ಆಗಿದ್ದು ಇದು ಇನ್ನೂ ತೀವ್ರ ಕುಸಿತ ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸುತ್ತಿದ್ದಾರೆ. ಮುಂದಿನ ಕೆಲವು ಮಾಹೆಗಳಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು 80 ರೂಗಳಿಗೆ ಕುಸಿಯುವ ಸಾಧ್ಯತೆಗಳಿವೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ನಿರೀಕ್ಷೆಯ ಅನುಸಾರ ಹಣಕಾಸು ವರ್ಷ 2029ರ ವೇಳೆಗೆ ಭಾರತದ ರೂಪಾಯಿ ಮೌಲ್ಯ ಡಾಲರ್‌ಗೆ 94 ರೂಗಳಷ್ಟಾಗುವ ಸಾಧ್ಯತೆಗಳಿವೆ.
ಏಕೆ ಹೀಗಾಗುತ್ತಿದೆ ?
ಈ ವರ್ಷ ಭಾರತದ ರೂಪಾಯಿಯ ಮೌಲ್ಯ ಸತತವಾಗಿ ಕುಸಿಯುತ್ತಲೇ ಬಂದಿದೆ. 2022ರ ಜನವರಿಯಿಂದ ಈವರೆಗಿನ ಅವಧಿಯಲ್ಲಿ ಅಮೆರಿಕದ ಡಾಲರ್ ವಿರುದ್ಧ ಶೇ 4ರಷ್ಟು ಮೌಲ್ಯವನ್ನು ಕಳೆದುಕೊಂಡಿದೆ. ಭಾರತದ ವಿದೇಶಿ ವಿನಿಮಯ ಆಪದ್ಧನವೂ ಸಹ 600 ಬಿಲಿಯನ್ ಡಾಲರ್‌ಗಿಂತಲೂ ಕಡಿಮೆ ಮಟ್ಟಕ್ಕೆ ಕುಸಿದಿದೆ. ಸೆಪ್ಟಂಬರ್ 3 2021ರಂದು 642 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಆಪದ್ಧನ ಸಾರ್ವಕಾಲಿಕ ಹೆಚ್ಚಳ ಕಂಡಿತ್ತು. ಆದರೆ ನಂತರದ ಆರು ತಿಂಗಳಲ್ಲಿ 45 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಕಳೆದ ಶುಕ್ರವಾರ ಆರ್‌ಬಿಐ ಬಿಡುಗಡೆ ಮಾಡಿದ ವರದಿಯ ಅನುಸಾರ ಮೇ 6ರ ವಾರಾಂತ್ಯಕ್ಕೆ ಭಾರತದ ವಿದೇಶಿ ವಿನಿಯಮ ಆಪದ್ಧನವು 1.774 ಬಿಲಿಯನ್ ಡಾಲರ್ ಕುಸಿತ ಕಂಡಿದ್ದು, ವಾರಾಂತ್ಯದಲ್ಲಿ 595.954 ಬಿಲಿಯನ್ ಡಾಲರ್‌ಗಳಿಗೆ ನಿಂತಿದೆ. ಈ ಕುಸಿತಕ್ಕೆ ರೂಪಾಯಿಯನ್ನು ಕಾಪಾಡುವ ನಿಟ್ಟಿನಲ್ಲಿ ಆರ್‌ಬಿಐ ಕೈಗೊಂಡ ಕೆಲವು ಕ್ರಮಗಳೇ ಮೂಲ ಕಾರಣ ಎನ್ನಲಾಗಿದೆ.
ಆದರೆ ಆರ್‌ಬಿಐನ ಉನ್ನತ ಅಧಿಕಾರಿಗಳ ಅಭಿಪ್ರಾಯದಲ್ಲಿ ವಿದೇಶಿ ವಿನಿಮಯ ಆಪದ್ಧನದಲ್ಲಿನ ಕುಸಿತಕ್ಕೆ ಕಾರಣ, ಆರ್‌ಬಿಐ ಆಪದ್ಧನದಂತೆ ಕಾಪಾಡಿಕೊಂಡಿರುವ ಆಸ್ತಿಗಳ ಡಾಲರ್ ಮೌಲ್ಯದಲ್ಲಿ ಕುಸಿತ ಕಂಡಿರುವುದೇ ಆಗಿದೆ. ಉದಾಹರಣೆಗೆ ಈ ಆಪದ್ಧನದ ಒಂದಂಶ ಯೂರೋಗಳಲ್ಲಿದ್ದು, ಡಾಲರ್ ವಿರುದ್ಧ ಯೂರೋ ಮೌಲ್ಯದಲ್ಲಿ ಕುಸಿತ ಉಂಟಾದರೆ, ಇದು ಆರ್‌ಬಿಐನಲ್ಲಿರುವ ಆಪದ್ಧನದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತನ್ನ ಎಂದಿನ ನೀತಿಗನುಸಾರವಾಗಿ ಭಾರತದ ಕೇಂದ್ರ ಬ್ಯಾಂಕ್ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿಯ ವಿನಿಮಯ ಮೌಲ್ಯವನ್ನು ಕುಸಿಯದಿರುವಂತೆ ತಡೆಗಟ್ಟುತ್ತದೆ ಅಥವಾ ಕುಸಿತದ ಪ್ರಮಾಣವನ್ನು ಕಡಿಮೆ ಮಾಡಲು ಯತ್ನಿಸುತ್ತದೆ. ಅಥವಾ ಕುಸಿತದ ಗತಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತದೆ. ಅರ್‌ಬಿಐ ನೀತಿಯ ಮೂಲ ಉದ್ದೇಶವೆಂದರೆ ಮಾರುಕಟ್ಟೆಯಲ್ಲಿ ರೂಪಾಯಿ ತನ್ನ ಸ್ವಾಭಾವಿಕ ಮೌಲ್ಯವನ್ನು ಕಂಡುಕೊಳ್ಳುವಂತೆ ಮಾಡುವುದು ಮತ್ತು ಈ ನಿಟ್ಟಿನಲ್ಲಿ ಹೂಡಿಕೆದಾರರಲ್ಲಿ ಅನಗತ್ಯ ಗೊಂದಲ, ಗಲಿಬಿಲಿ, ಗಾಬರಿ ಉಂಟಾಗದಂತೆ ಎಚ್ಚರವಹಿಸುವುದೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಆರ್‌ಬಿಐ ರಾಷ್ಟ್ರೀಕೃತ ಬ್ಯಾಂಕುಗಳಿಗೆ ತಮ್ಮ ಬಳಿ ಇರುವ ಡಾಲರ್‌ಗಳನ್ನು ಮಾರಾಟ ಮಾಡುವ ಮೂಲಕ ರೂಪಾಯಿಗೆ ಬೆಂಬಲಿಸುವಂತೆ ನಿರ್ದೇಶನ ನೀಡುತ್ತದೆ. ಮುಕ್ತ ಮಾರುಕಟ್ಟೆಯಲ್ಲಿ ರೂಪಾಯಿಗೆ ಬದಲಾಗಿ ಡಾಲರ್‌ಗಳನ್ನು ವಿನಿಮಯ ಮಾಡುವ ಮೂಲಕ ಆರ್‌ಬಿಐ ರೂಪಾಯಿಯ ಬೇಡಿಕೆಯನ್ನು ಹೆಚ್ಚಿಸಿ, ಅದರ ಕುಸಿತವನ್ನು ತಡೆಗಟ್ಟುತ್ತದೆ.
ರೂಪಾಯಿ ಮೌಲ್ಯವನ್ನು ನಿರ್ಧರಿಸುವುದು ಏನು ?
ಚಲಾವಣೆಯಲ್ಲಿರುವ ನೋಟುಗಳ ಅಥವಾ ಕರೆನ್ಸಿಯ ಮೌಲ್ಯವನ್ನು ಅದಕ್ಕೆ ಇರುವ ಬೇಡಿಕೆ ಮತ್ತು ಅದರ ಪೂರೈಕೆ ಎರಡೂ ನಿರ್ಧರಿಸುತ್ತವೆ. ಕರೆನ್ಸಿಯ ಪೂರೈಕೆ ಹೆಚ್ಚಾದಾಗ ಅದರ ಮೌಲ್ಯ ಕುಸಿಯುತ್ತದೆ. ಮತ್ತೊಂದೆಡೆ ಕರೆನ್ಸಿಯ ಬೇಡಿಕೆ ಹೆಚ್ಚಾದಾಗ ಅದರ ಮೌಲ್ಯವೂ ಹೆಚ್ಚಾಗುತ್ತದೆ. ವ್ಯಾಪಕ ಆರ್ಥಿಕತೆಯಲ್ಲಿ ಕೇಂದ್ರ ಬ್ಯಾಂಕ್ ಅಂದರೆ ಆರ್‌ಬಿಐ ಕರೆನ್ಸಿಯ ಪೂರೈಕೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಕರೆನ್ಸಿಯ ಬೇಡಿಕೆಯು ಆರ್ಥಿಕತೆಯಲ್ಲಿ ಉತ್ಪಾದನೆಯಾಗುವ ಮಾಹೆಗಳು ಮತ್ತು ಸೇವೆಗಳನ್ನು ಅವಲಂಬಿಸಿರುತ್ತದೆ.
ವಿದೇಶಿ ವಿನಿಯಮ ಮಾರುಕಟ್ಟೆಯಲ್ಲಿ ರೂಪಾಯಿಯ ಪೂರೈಕೆಯು, ಆಮದು ಮಾರುಕಟ್ಟೆಯ ಬೇಡಿಕೆ ಮತ್ತು ವಿವಿದ ವಿದೇಶಿ ಅಸ್ತಿಯನ್ನು ಆಧರಿಸಿ ನಿರ್ಧಾರವಾಗುತ್ತದೆ. ಹಾಗಾಗಿ ಆಮದು ಮಾಡಿಕೊಂಡ ತೈಲಕ್ಕೆ ಹೆಚ್ಚಿನ ಬೇಡಿಕೆ ಇದ್ದರೆ ವಿದೇಶಿವಿನಿಯಮ ಮಾರುಕಟ್ಟೆಯಲ್ಲಿ ರೂಪಾಯಿಯ ಪೂರೈಕೆಗೆ ಬೇಡಿಕೆ ಹೆಚ್ಚಾಗುತ್ತದೆ, ಇದರಿಂದ ರೂಪಾಯಿಯ ಮೌಲ್ಯ ಕುಸಿಯುತ್ತದೆ. ಮತ್ತೊಂದೆಡೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯ ಬೇಡಿಕೆಯನ್ನು, ಭಾರತದ ಮಾಹೆಗಳ ರಫ್ತಿಗೆ ವಿದೇಶಿ ಬೇಡಿಕೆ ಮತ್ತು ಇತರ ದೇಶೀ ಆಸ್ತಿಗಳು ನಿರ್ಧರಿಸುತ್ತವೆ. ಉದಾಹರಣೆಗೆ, ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಹೂಡಿಕೆದಾರದಲ್ಲಿ ಅತಿ ಹೆಚ್ಚಿನ ಉತ್ಸಾಹ ಇದ್ದಾಗ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಸರಬರಾಜು ಹೆಚ್ಚಾಗುತ್ತದೆ, ಇದರ ಪರಿಣಾಮವಾಗಿ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ.
ರೂಪಾಯಿ ಮೌಲ್ಯ ಕುಸಿತದ ಕಾರಣಗಳೇನು ?
ಈ ವರ್ಷ ಮಾರ್ಚ್ ಮಾಹೆದಿಂದಲೂ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಮೂಲ ಬಡ್ಡಿ ದರವನ್ನು ಹೆಚ್ಚಿಸುತ್ತಲೇ ಇರುವುದರಿಂದ ಹೆಚ್ಚಿನ ಪ್ರತಿಫಲವನ್ನು ನಿರೀಕ್ಷಿಸುವ ಹೂಡಿಕೆದಾರರು ಭಾರತದಂತಹ ಬೆಳೆಯುತ್ತಿರುವ ಮಾರುಕಟ್ಟೆಗಳಿಂದ ತಮ್ಮ ಬಂಡವಾಳವನ್ನು ಹಿಂಪಡೆದು ಪುನಃ ಅಮೆರಿಕದಲ್ಲೇ ಹೂಡಲು ಮುಂದಾಗುತ್ತಿದ್ದಾರೆ. ಇದರ ಪರಿಣಾಮವಾಗಿ, ಬೆಳೆಯುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಅಮೆರಿಕದ ಡಾಲರ್ ವಿರುದ್ಧ ಈ ಕರೆನ್ಸಿಗಳ ಮೌಲ್ಯಗಳು ತೀವ್ರ ಕುಸಿತ ಎದುರಿಸುತ್ತಿವೆ. ಅಭಿವೃದ್ಧಿ ಹೊಂದಿದ ಮಾರುಕಟ್ಟೆ ಕರೆನ್ಸಿಗಳಾದ ಯೂರೋ ಮತ್ತು ಯೆನ್ ಸಹ ಡಾಲರ್ ವಿರುದ್ಧ ಮೌಲ್ಯ ಕುಸಿತ ಕಂಡಿದ್ದು ಈ ವರ್ಷ ಡಾಲರ್ ಸೂಚ್ಯಂಕವು ಶೇ 8ಕ್ಕಿಂತಲೂ ಹೆಚ್ಚಾಗಿದೆ. ಕೆಲವು ವಿಶ್ಲೇಷಕರ ಅಭಿಪ್ರಾಯದಲ್ಲಿ ಈ ತಿಂಗಳ ಆರಂಭದಲ್ಲಿ ದರಗಳನ್ನು ಹೆಚ್ಚಿಸುವ ಆರ್‌ಬಿಐ ನಿರ್ಧಾರದ ಹಿಂದೆ, ಭಾರತದಿಂದ ಬಂಡವಾಳದ ತೀವ್ರ ಹೊರ ಹರಿವನ್ನು ತಪ್ಪಿಸುವ ಮೂಲಕ ರೂಪಾಯಿ ಮೌಲ್ಯದ ಕುಸಿತವನ್ನು ತಡೆಗಟ್ಟುವ ಉದ್ದೇಶವೇ ಪ್ರಧಾನವಾಗಿರಬಹುದು.. 2013ರಲ್ಲಿ ಮೂರು ತಿಂಗಳ ಅವಧಿಯಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಶೇ 15ರಷ್ಟು ಕುಸಿತ ಕಂಡಿತ್ತು. ಇದಕ್ಕೆ ಕಾರಣ ಅಮೆರಿದಕ ಫೆಡರಲ್ ರಿಸರ್ವ್ ತನ್ನ ಬಾಂಡ್ ಖರೀದಿ ಯೋಜನೆಯನ್ನು ನಿರ್ಬಂಧಕ್ಕೊಳಪಡಿಸಿ, ಹೂಡಿಕೆದಾರರನ್ನು ಭೀತಿಗೊಳಪಡಿಸುವ ಮೂಲಕ, ತನ್ನ ದೀರ್ಘಕಾಲಿಕ ಬಡ್ಡಿ ದರಗಳನ್ನು ಕಾಪಾಡಿಕೊಳ್ಳಲು ನಿರ್ಧರಿಸಿತ್ತು.

ಮೇಲಾಗಿ, ಭಾರತದ ಹಾಲಿ ಚಾಲ್ತಿ ಖಾತೆಯ ಕೊರತೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹತ್ತು ವರ್ಷಗಳಲ್ಲೇ ಅತ್ಯಧಿಕ ಎನ್ನಬಹುದಾದ ಶೇ 3.3ರಷ್ಟು ಹೆಚ್ಚಾಗಲಿದೆ ಎಂದು ಮಾರ್ಗನ್ ಸ್ಟ್ಯಾನ್ಲಿ ಸಂಸ್ಥೆ ಅಂದಾಜು ಮಾಡಿದೆ. ಸರಕು ಮತ್ತು ಸೇವೆಗಳ ಆಮದು ಮತ್ತು ರಫ್ತು ವ್ಯಾಪಾರದ ಮೌಲ್ಯಗಳ ನಡುವಿನ ಅಂತರವನ್ನು ಚಾಲ್ತಿ ಖಾತೆಯ ಕೊರತೆ ಎಂದು ಪರಿಗಣಿಸಲಾಗುತ್ತದೆ. ಹೀಗಾದಲ್ಲಿ, ಹೆಚ್ಚುತ್ತಲೇ ಇರುವ ಜಾಗತಿಕ ತೈಲ ಬೆಲೆಗಳ ನಡುವೆಯೇ ಭಾರತದ ಆಮದು ಬೇಡಿಕೆಯು ರೂಪಾಯಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಈ ಕೊರತೆಯನ್ನು ನೀಗಿಸಲು ವಿದೇಶಿ ಹೂಡಿಕೆದಾರರು ಸಾಕಷ್ಟು ಬಂಡವಾಳವನ್ನು ಪೂರೈಸಿದಲ್ಲಿ ಮಾತ್ರ ಇದು ಸರಿಹೋಗಲು ಸಾಧ್ಯ. ಆದರೆ ಅಮೆರಿಕದಲ್ಲಿ ಹೂಡಿಕೆಯ ಪ್ರತಿಫಲದ ಪ್ರಮಾಣ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವಿದೇಶಿ ಹೂಡಿಕೆದಾರರು ಭಾರತದಲ್ಲಿ ಬಂಡವಾಳ ಹೂಡುವ ಸಾಧ್ಯತೆಗಳು ಕಡಿಮೆ ಇದೆ. ಅಮೆರಿಕದ ಹತ್ತು ವರ್ಷಗಳ ಕೋಶನಿಧಿಯ ಮೇಲಿನ ಪ್ರತಿಫಲ 2020ರ ಮಧ್ಯಭಾಗದಲ್ಲಿ ಶೇ 0.5ರಷ್ಟಿದ್ದುದು ಕಳೆದ ಮಾಸಾಂತ್ಯದಲ್ಲಿ ಶೇ 3ಕ್ಕೆ ಏರಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಹಲವು ದಶಕಗಳಿಂದ ಭಾರತದ ರೂಪಾಯಿ ಡಾಲರ್ ವಿರುದ್ಧ ಮೌಲ್ಯವನ್ನು ಕಳೆದುಕೊಳ್ಳುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಎಂದರೆ, ಭಾರತದಲ್ಲಿ ಸ್ಥಳೀಯ ಬೆಲೆ ಹಣದುಬ್ಬರದ ಪ್ರಮಾಣ ನಿರಂತರವಾಗಿ ಏರುಗತಿಯಲ್ಲಿರುವುದು. ಭಾರತದಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದರೆ, ಅಮೆರಿಕದ ಫೆಡರಲ್ ರಿಸರ್ವ್ ಡಾಲರ್‌ಗಳನ್ನು ಸೃಷ್ಟಿಸಿರುವುದಕ್ಕಿಂತಲೂ ವೇಗವಾಗಿ ಭಾರತದಲ್ಲಿ ಆರ್‌ಬಿಐ ಹಣವನ್ನು ಸೃಷ್ಟಿಸುತ್ತಿದೆ ಎಂದರ್ಥ. ಆದುದರಿಂದ, ರೂಪಾಯಿ ಮೌಲ್ಯದ ಸುತ್ತ ನಡೆಯುವ ಚರ್ಚೆಗಳಲ್ಲಿ ಬಂಡವಾಳ ಮತ್ತು ವ್ಯಾಪಾರ ವಹಿವಾಟಿನ ಹರಿವು ಹೆಚ್ಚು ಪ್ರಾಧಾನ್ಯತೆ ಪಡೆಯುತ್ತದೆ. ಮತ್ತೊಂದೆಡೆ ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಭಾರತದ ಆರ್‌ಬಿಐ ತಮ್ಮ ಕರೆನ್ಸಿಗಳ ಪೂರೈಕೆಯನ್ನು ಮಾಡುವ ಪ್ರಮಾಣದಲ್ಲಿನ ವ್ಯತ್ಯಾಸ ಅಥವಾ ಅಂತರವೂ ದೀರ್ಘ ಕಾಲಾವಧಿಯಲ್ಲಿ ರೂಪಾಯಿ ಮೌಲ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಭವಿಷ್ಯದಲ್ಲಿ ಏನಾಗಬಹುದು ?
ವಿಶ್ಲೇಷಕರ ಅಭಿಪ್ರಾಯದಲ್ಲಿ ದೀರ್ಘ ಕಾಲಾವಧಿಯಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಕುಸಿಯುತ್ತಲೇ ಹೋಗುತ್ತದೆ. ಇದಕ್ಕೆ ಕಾರಣ ಭಾರತ ಮತ್ತು ಅಮೆರಿಕದಲ್ಲಿನ ದೀರ್ಘಕಾಲಿಕ ಹಣದುಬ್ಬರದಲ್ಲಿ ಇರುವ ಪ್ರಮುಖ ವ್ಯತ್ಯಾಸಗಳು. ಈ ಸಂದರ್ಭದಲ್ಲಿ, ಅಮೆರಿಕದ ಫೆಡರಲ್ ರಿಸರ್ವ್ ಅಲ್ಲಿನ ಹಣದುಬ್ಬರದ ಚಾರಿತ್ರಿಕ ಹೆಚ್ಚಳವನ್ನು ನಿಯಂತ್ರಿಸಲು ದರಗಳನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಇದಕ್ಕೆ ಪ್ರತಿಯಾಗಿ ಇತರ ದೇಶಗಳು, ಬೆಳೆಯುತ್ತಿರುವ ಮಾರುಕಟ್ಟೆಗಳು ತಮ್ಮ ಬಡ್ಡಿ ದರಗಳನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ, ತನ್ಮೂಲಕ ಬಂಡವಾಳದ ಹೊರಹರಿವನ್ನು ಮತ್ತು ಅದರಿಂದ ಉಂಟಾಗುವ ಕ್ಷೋಭೆಯನ್ನು ತಡೆಗಟ್ಟಿ ಕರೆನ್ಸಿಗಳನ್ನು ರಕ್ಷಿಸಬೇಕಾಗುತ್ತದೆ. ಅಮೆರಿಕದಲ್ಲಿ ಮಾರ್ಚ್ ಮಾಹೆಯಲ್ಲಿ 40 ವರ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚಿನ ಹಣದುಬ್ಬರ, ಶೇ 8.5ರಷ್ಟು ದಾಖಲಾಗಿದ್ದುದನ್ನು ಇಲ್ಲಿ ಗಮನಿಸಬೇಕು. ಭಾರತದಲ್ಲಿ ಆರ್‌ಬಿಐ ಸಹ ಸ್ಥಳೀಯ ಗ್ರಾಹಕ ಬೆಲೆ ಹಣದುಬ್ಬರವನ್ನು ನಿಯಂತ್ರಿಸಲು ಯತ್ನಿಸುತ್ತಿದ್ದು, ಇದು ಏಪ್ರಿಲ್ ಮಾಹೆಯಲ್ಲಿ ಎಂಟು ವರ್ಷಗಳ ದಾಖಲೆ ಮುರಿದು, ಅತಿ ಹೆಚ್ಚು, ಶೇ 7.8ರಷ್ಟು ದಾಖಲಾಗಿದೆ. ವಿಶ್ವವ್ಯಾಪಿಯಾಗಿ ಬಡ್ಡಿ ದರಗಳು ಹೆಚ್ಚಾಗುತ್ತಿರುವಂತೆಯೇ ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯೂ ಹೆಚ್ಚಾಗಲಿದ್ದು, ಆರ್ಥಿಕತೆಗಳು ತಮ್ಮ ಹಣಕಾಸು ಸ್ಥಿತ್ಯಂತರಗಳನ್ನು ಮರುಹೊಂದಾಣಿಕೆ ಮಾಡುವ ನಿಟ್ಟಿನಲ್ಲಿ ನಿರತವಾಗಿರುತ್ತವೆ.