ಬೆಂಗಳೂರು ಸಹಿತ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಅಧಿಕವಾಗಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಮಗುವನ್ನು ಬೀದಿ ನಾಯಿಗಳ ಹಿಂಡು ಅಟ್ಟಾಡಿಸಿ ಕೊಂದು ಹಾಕಿದ್ದ ಘಟನೆ ನಡೆದಿತ್ತು.. ಬೆಂಗಳೂರಿನಲ್ಲಿ ಸೈಕಲ್ , ಬೈಕ್ ಸವಾರರನ್ನು ನಾಯಿಗಳು ಅಟ್ಟಾಡಿಸಿಕೊಂಡು ಬರುವ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ನಾಯಿಗಳ ಸಮಸ್ಯೆಯನ್ನು ನಿಯಂತ್ರಣ ಮಾಡದ ಬಿಬಿಎಂಪಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಮುಂದಾಗಿರುವ ಬಿಬಿಎಂಪಿ ಅಧಿಕಾರಿಗೆ ಬಿಜೆಪಿ ಸಂಸದರು ಆಗಿರುವ ಮನೇಕಾ ಗಾಂಧಿ ಬಿಬಿಎಂಪಿ ಅಧಿಕಾರಿಗೆ ಬಾಯಿಗೆ ಬಂದ ರೀತಿ ಮಾತನಾಡಿದ್ದಾರೆ. ಇಡೀ ಜಗತ್ತೇ ನನ್ನ ಕೈಲಿದೆ ಎನ್ನುವ ಹಾಗೆ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸಿದ್ದಾರೆ.
ಮನೇಕಾ ಗಾಂಧಿ ಜಂಭದ ಮಾತಿಗೆ ಕಾರಣ ಏನು..?
ಬೆಂಗಳೂರಿನ ಚಂದ್ರಲೇಔಟ್ ಬಳಿಯ ಅತ್ತಿಗುಪ್ಪೆ ವಾರ್ಡ್ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ಉಪಟಳ ನೀಡುತ್ತಿವೆ. ಶ್ವಾನಗಳ ನಿಯಂತ್ರಣ ಮಾಡುವಂತೆ ಬಿಬಿಎಂಪಿ ಪಶುಸಂಗೋಪನಾ ಇಲಾಖೆಗೆ ಮನವಿ ಮಾಡಿದ್ದರು. ವಿಜಯನಗರ ಶಾಸಕ ಕೃಷ್ಣಪ್ಪ ಸ್ವತಃ ಕರೆಮಾಡಿ, ಶ್ವಾನಗಳ ಉಪಟಳಕ್ಕೆ ಬ್ರೇಕ್ ಹಾಕುವಂತೆ ಸೂಚನೆ ಕೊಟ್ಟಿದ್ರು. ಸಾರ್ವಜನಿಕರ ಮನವಿ ಹಾಗು ವಿಜಯ ನಗರ ಶಾಸಕ ಕೃಷ್ಣಪ್ಪ ಸೂಚನೆ ಮೇರೆಗೆ ಪಶುಸಂಗೋಪಾ ಇಲಾಖೆ ಇನ್ಸ್ಪೆಕ್ಟರ್ ನಾಯಿಗಳನ್ನು ಹಿಡಿಯುವುದಕ್ಕೆ ಕಳುಹಿಸಿದ್ರು. ಶ್ವಾನಗಳನ್ನ ಹಿಡಿಯಲು ಮುಂದಾಗ್ತಿದ್ದ ಹಾಗೆ ಇನ್ಸ್ಪೆಕ್ಟರ್ ಹನುಮಂತ ರಾಜುವಿಗೆ ಶಾಕ್ ಆಗಿದೆ. ದಿಲ್ಲಿಯಿಂದ ಕರೆ ಮಾಡಿದ ಸುಲ್ತಾನ್ಪುರ ಸಂಸದೆ ಮನೇಕಾ ಗಾಂಧಿ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.
ಕನ್ನಡಿಗ ಅಧಿಕಾರಿ ಮೇಲೆ ಬಿಜೆಪಿ ಸಂಸದೆ ಎಗರಾಡಿದ್ದು ಯಾಕೆ..?
ಉತ್ತರ ಪ್ರದೇಶದ ಸುಲ್ತಾನ್ಪುರದ ಸಂಸದೆ ಆಗಿರುವ ಮನೇಕಾ ಗಾಂಧಿ, ಪ್ರಾಣಿ ಹಕ್ಕುಗಳಾ ರಕ್ಷಣಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಬಿಎಂಪಿಯಲ್ಲಿ ಪಶುವೈದ್ಯರಾಗಿ ಕೆಲಸ ಮಾಡುವ ಹನುಮಂತರಾಜುವಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕನ್ನಡದಲ್ಲಿ ಉತ್ತರ ಕೊಡಲು ಮುಂದಾದ ಹನುಮಂತರಾಜುಗೆ ಅವಕಾಶವನ್ನೂ ನೀಡದೆ ಬೈಯ್ದಿದ್ದಾರೆ. ನಾಯಿಗಳನ್ನು ಹಿಡಿಯಲು ವ್ಯಾನ್ ಕಳಿಸಿದ್ದು ಯಾಕೆ..? ನೀನು ಹುಚ್ಚನಾ..? ನಿನಗೆ ಕೆಲಸ ಬೇಕೋ..? ಬೇಡ್ವೋ..? ನಿನ್ನನ್ನು ಕೆಲಸದಿಂದ ತೆಗೆದು ಹಾಕಬೇಕಾ..? ನಿನಗೇನು ಬೇಕು..? ಲಿಖಿತವಾಗಿ ಯಾರಾದರೂ ದೂರು ನೀಡಿದ್ದಾರಾ..? ನೀನು ದುಡ್ಡು ತೆಗೆದುಕೊಂಡಿದ್ಯಾ..? ನೀನು ಹೀಗೆ ಆದರೆ ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ. ಅರ್ಥ ಆಯ್ತಾ..? ಇನ್ಮುಂದೆ ಎಲ್ಲಿಗೂ ವ್ಯಾನ್ ಕಳಿಸಬಾರದು. ಅರ್ಥ ಆಯ್ತಾ..? 2021ರಲ್ಲಿ ಸ್ವತಃ ಸುಲ್ತಾನ್ಪುರದಲ್ಲೂ ಪಶುವೈದ್ಯಾಧಿಕಾರಿಗೆ ಬೈಯ್ದಿದ್ದ ಪರಿಣಾಮ ಪ್ರತಿಭಟನೆಯೂ ನಡೆದಿತ್ತು. ಇದೀಗ ಬೆಂಗಳೂರಿನ ಅಧಿಕಾರಿಗೆ ಬೈಯ್ದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಸದರಿಗೆ ಇಷ್ಟೊಂದು ಅಧಿಕಾರ ಇರುತ್ತಾ..?
ಕರ್ನಾಟಕದಿಂದ ಬರೋಬ್ಬರಿ 25 ಸಂಸದರು ಆಯ್ಕೆಯಾಗಿ ಮೋದಿ ಸರ್ಕಾರದಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಸತ್ನಲ್ಲಿ ಮಾತನಾಡಲು ಹಿಂದೆ ಮುಂದೆ ನೋಡ್ತಾರೆ. ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಅವಕಾಶ ಇರುತ್ತದೆ. ಆದರೆ ಉತ್ತರ ಪ್ರದೇಶದ ಬಿಜೆಪಿ ಸಂಸದೆ ಇಡೀ ದೇಶಕ್ಕೆಲ್ಲಾ ನಾನೇ ಪ್ರಾಣಿಗಳನ್ನು ರಕ್ಷಣೆ ಮಾಡುತ್ತಿದ್ದೇನೆ ಎನ್ನುವ ಭ್ರಮೆಯಲ್ಲಿ ಬದುಕುತ್ತಿರುವಂತಿದೆ. ಚಂದ್ರಲೇಔಟ್ನ ಅತ್ತಿಗುಪ್ಪೆಯಲ್ಲಿ ನಾಯಿಗಳ ಹಾವಳಿ ಹೇಗಿದೆ ಅನ್ನೋದಾದ್ರು ಮನೇಕಾ ಗಾಂಧಿಗೆ ಗೊತ್ತಿಲ್ಲ. ಯಾರೋ ಇಲ್ಲಿಂದ ಒಂದು ಮೇಲ್ ಮಾಡಿರುತ್ತಾರೆ. ಅಷ್ಟಕ್ಕೇ ಮನೇಕಾ ಗಾಂಧಿ ಬಾಯಿಗೆ ಬಂದಂತೆ ಕನ್ನಡಿಗ ಅಧಿಕಾರಿ ಮೇಲೆ ಎಗರಾಡಿದ್ದಾರೆ. ದುಡ್ಡು ತೆಗೆದುಕೊಂಡಿದ್ಯಾ..? ಎಂದು ಕೇಳಿದ್ದಾರೆ. ನಾಯಿ ಹಿಡಿದು ಕಸಾಯಿಖಾನೆಗೆ ಮಾರಾಟ ಮಾಡಲು ಹೋಗಿದ್ರಾ..? ಬೀದಿ ನಾಯಿ ಹಿಡಿದ್ರೆ ಜನ ಬಂದು ಕಾಸು ಕೊಡ್ತಾರಾ..? ಲೋಕಸಭಾ ಸದಸ್ಯೆ ಅನ್ನೋದನ್ನು ಮರೆದು ಮನೇಕಾ ಗಾಂಧಿ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಿರೋದು ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.
ಬಿಜೆಪಿ ನಾಯಕರಿಗೆ ಕನ್ನಡಿಗರ ಮೇಲಿಲ್ಲ ಅಭಿಮಾನ..!
ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ನಡೆಯುತ್ತಿದೆ. ಒಂದು ಕಡೆ ನಂದಿನಿಯನ್ನು ಗುಜರಾತ್ನ ಅಮೂಲ್ ಜೊತೆಗ ವಿಲೀನ ಮಾಡುವ ಸಂಚು ನಡೆಯುತ್ತಿದೆ. ಗುಜರಾತ್ ಸಂಸ್ಥೆ ಜೊತೆಗೆ ಸೇರಿಸುವ ಉದ್ದೇಶದಿಂದಲೇ ನಂದಿನಿ ಹಾಲು, ತುಪ್ಪ, ಮೊಸರು ಸೇರಿದಂತೆ ಹಲವು ಉತ್ಪನ್ನಗಳ ಅಭಾವ ಸೃಷ್ಟಿ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಉತ್ತರ ಪ್ರದೇಶದ ಸಂಸದೆ ಕನ್ನಡಿಗ ಅಧಿಕಾರಿ ಮೇಲೆ ಈ ರೀತಿ ದರ್ಪ ಮೆರೆದಿರುವುದು ಚುನಾವಣಾ ವಿಚಾರ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಇದೇ ರೀತಿ ಬಿಟ್ಟುಕೊಂಡು ಹೋದರೆ ನಮ್ಮ ಸಂಸದರು ತೆಪ್ಪಗೆ ಇರ್ತಾರೆ. ಹಿಂದಿ ಭಾಷಿಕ ರಾಜ್ಯಗಳ ಸಂಸದರು ಕರ್ನಾಟಕದಲ್ಲಿ ಆಡಳಿತ ಮಾಡುವ ಕಾಲ ಬಂದರೂ ಬರಬಹುದು.
ಕೃಷ್ಣಮಣಿ