ಅಮೆರಿಕಾ ತನ್ನ ಸಂಪೂರ್ಣ ಸೇನೆಯನ್ನು ವಾಪಸ್ಸು ಕರೆಸಿಕೊಂಡ ಮೇಲೆ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆ ಮಾಡಿರುವ ತಾಲಿಬಾನಿಗಳು ಮತ್ತೊಂದು ಮಜಲನ್ನ ಏರಿದ್ದಾರೆ. ಖಾರಿ ಫಾಸೀಹುದ್ದೀನ್ಗೆ ಸೇನಾ ಮುಖ್ಯಸ್ಥನ ಪಟ್ಟ ಕಟ್ಟಿದ್ದಾರೆ. 2015ರಲ್ಲಿ ಸತ್ತನೆಂದು ಸುದ್ದಿಯಾಗಿದ್ದ ಫಾಸೀಹುದ್ದೀನ್ ಈಗ ಅಫ್ಘಾನ್ ಸೇನಾ ಮುಖ್ಯಸ್ಥ.
ಬಂದೂಕು ತೋರಿಸಿ, ಅಮಾಯಕರ ನೆತ್ತರು ಹರಿಸಿ ವಿರಾಜಮಾನರಾಗಿರುವ ಉಗ್ರರು ತಾಲಿಬಾನ್ ಸೇನೆಯ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಒಂದು ಕಾಲದಲ್ಲಿ ಭಾರೀ ಘರ್ಜಿಸಿದ್ದ, ಐದು ಸಿಂಹಗಳನ್ನ ಜಯಿಸಿದ ಶೂರ ಎಂದು ಬಿರುದಾಂಕಿತನಾಗಿದ್ದ ಖಾರಿ ಫಾಸೀಹುದ್ದೀನ್ಗೆ ಸೇನಾ ಮುಖ್ಯಸ್ಥನ ಪಟ್ಟ ಕಟ್ಟಿದ್ದಾರೆ. ಈ ಮೂಲಕ ಅಧಿಕೃತವಾಗಿ ತಾಲಿಬಾನ್ ಸರ್ಕಾರದ ಸೇನಾ ಪಡೆಯ ಮುಖ್ಯಸ್ಥನಾಗಿ ಫಾಸೀಹುದ್ದೀನ್ ಅಧಿಕಾರ ವಹಿಸಿಕೊಂಡಿದ್ದಾನೆ.
ಇನ್ನು ತಾಲಿಬಾನ್ ಮಧ್ಯಂತರ ಸರ್ಕಾರದ ಸೇನಾ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಖಾರಿ ಫಾಸೀಹುದ್ದೀನ್ ಸೇನೆಯ ಬಲಿಷ್ಠತೆ ಬಗ್ಗೆ ಭರವಸೆ ಬಿತ್ತಿದ್ದಾರೆ. ಶೀಘ್ರದಲ್ಲೇ ತಾಲಿಬಾನ್ ಸರ್ಕಾರದ ಹೊಸ ಸೇನಾ ಪಡೆ ರಚನೆ ಆಗಲಿದೆ. ತುಂಬ ಬಲಿಷ್ಠವಾದ ಸೇನಾ ಪಡೆಯ ಸೇನಾಳುಗಳು ದೇಶದ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲಲಿದ್ದಾರೆ ಅನ್ನೋ ಭರವಸೆ ನೀಡಿದ್ದಾರೆ. ಹೀಗಾಗಿ ತಾಲಿಬಾನ್ ಸರ್ಕಾರದ ಈ ನೂತನ ಸೇನಾ ಸುದ್ದಿ ವಿಶ್ವದ ರಾಷ್ಟ್ರಗಳನ್ನ ಮತ್ತಷ್ಟೂ ಅಲರ್ಟ್ ಮಾಡಿದೆ.
ಖಾರಿ ಫಾಸೀಹುದ್ದೀನ್ ತಾಲಿಬಾನ್ ಸೇನಾ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತನ್ನ ಸೇನೆ ಬಗ್ಗೆ ಇಸ್ಲಾಮಿಕ್ ಎಮಿರೇಟ್ಸ್ ಸರ್ಕಾರಕ್ಕೆ ಭರವಸೆ ಬಿತ್ತಿದ್ದಾರೆ. ಶೀಘ್ರದಲ್ಲೇ ತಾಲಿಬಾನ್ ಸರ್ಕಾರದ ಹೊಸ ಸೇನಾ ಪಡೆ ರಚನೆ ಆಗಲಿದೆ ಅಂದಿದ್ದಾರೆ. ಶಿಸ್ತು, ಬದ್ಧತೆ, ಬಲಿಷ್ಠತೆಯೊಂದಿಗೆ ಸೇನೆಯನ್ನ ರಚನೆ ಮಾಡೋದಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ. ಸರ್ಕಾರಕ್ಕೆ ಪೂರಕವಾಗಿ ಸೇನೆ ರಚನೆ ಮಾಡೋದಕ್ಕಾಗಿ ರೂಪುರೇಷೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಅಂತ ಹೇಳಿದ್ದಾರೆ. ದೇಶ ರಕ್ಷಣೆಗಾಗಿ ಶೀಘ್ರದಲ್ಲೇ ತಾಲಿಬಾನ್ ಸೇನೆ ಕಾರ್ಯಾರಂಭ ಮಾಡಲಿದೆ ಅಂತ ಫಾಸೀಹುದ್ದೀನ್ ಸರ್ಕಾರಕ್ಕೆ ತಿಳಿಸಿದ್ದಾರೆ.
ಖಾರಿ ಫಾಸೀಹುದ್ದೀನ್ ಐದು ಸಿಂಹಗಳನ್ನ ಗೆದ್ದ ವಿಜಯಶಾಲಿ ಅಂತಲೇ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅಲ್ಲದೇ ಕಳೆದ ತಿಂಗಳಿನಿಂದ ತಾಲಿಬಾನಿಗಳಿಗೆ ಸೆಡ್ಡು ಹೊಡೆದ ಪಂಜ್‌ಶೀರ್ ವಶಕ್ಕೆ ಪಡೆದುಕೊಳ್ಳುವಲ್ಲಿಯೂ ಖಾರಿ ಫಾಸೀಹುದ್ದೀನ್ ಪ್ರಮುಖವಾದ ಪಾತ್ರವನ್ನ ವಹಿಸಿಕೊಂಡಿದ್ದ. ಇನ್ನೂ ಬದಾಕ್ಷಾನ್ ಪ್ರಾಂತ್ಯದ ಶ್ಯಾಡೋ ಗವರ್ನರ್ ಆಗಿಯೂ ಖಾರಿ ಕಾರ್ಯನಿರ್ವಹಿಸಿದ್ದ. ತಜಿಕ್-ಎತ್ನಿಕ್ ಗುಂಪಿನಲ್ಲಿ ಪಾಸೀಹುದ್ದೀನ್ ಪ್ರಮುಖ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ತಾಲಿಬಾನ್ ಮಿಲಿಟರಿ ಹುದ್ದೆ ಪಡೆದುಕೊಂಡ ಮೊದಲ ತಜಿಕ್ ವ್ಯಕ್ತಿ ಅನ್ನೋ ಹೆಗ್ಗಳಿಕೆಗೂ ಈತ ಪಾತ್ರನಾಗಿದ್ದಾರೆ.
ಇನ್ನು ಕಳೆದ 2015ರಲ್ಲಿ ಫಾಸೀಹುದ್ದಿನ್ ಹತ್ಯೆ ಆಗಿದ್ದಾರೆ ಅಂತ ಅಫ್ಘಾನ್ ಸರ್ಕಾರ ಘೋಷಣೆ ಮಾಡಿತ್ತು. 40 ಮಂದಿಯ ಹತ್ಯೆಯಲ್ಲಿ ಫಾಸೀಹುದ್ದಿಯನ್ನ ಕೂಡ ಮೃತಪಟ್ಟಿದ್ದ ಅಂತ ಹೇಳಲಾಗಿತ್ತು. ಆಗ ಇಲ್ಲ ನಾನು ಸತ್ತಿಲ್ಲ ಬದುಕಿದ್ದೇನೆ ಅಂತ ಫಾಸೀಹುದ್ದೀನ್ ಹೇಳಿಕೆಯೊಂದನ್ನ ಬಿಡುಗಡೆಗೊಳಿಸಿದ್ದ. ಹೀಗೆ ಅಂದು ಸತ್ತು ಸುದ್ದಿಯಾಗಿದ್ದ ಖಾರಿ ಫಾಸೀಹುದ್ದೀನ್ ಈಗ ತಾಲಿಬಾನ್ ಸರ್ಕಾರದ ಮಹತ್ವದ ಸೇನಾ ಪಡೆಯ ಮುಖ್ಯಸ್ಥನಾಗಿ ಅಧಿಕಾರ ಸ್ವಿಕರಿಸಿದ್ದಾರೆ.
ಈ ನಡುವೆ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಅಬ್ದುಲ್ ಘನಿ ಬರಾದಾರ್ ಸರ್ಕಾರದಲ್ಲಿ ಯಾವುದೇ ಒಳ ಜಗಳ ಇಲ್ಲ. ನಾನೂ ಯಾರೊಂದಿಗೂ ಅಸಮಾಧಾನ ಹೊಂದಿಲ್ಲ ಅಂತ ಹೇಳಿದ್ದಾರೆ.
ಕೆಲವು ದಿನಗಳಿಂದ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಕಾಣಿಸಿಕೊಳ್ಳದೇ ಇರೋದಕ್ಕೆ ಹತ್ಯೆ ಆಗಿದ್ದಾರೆ ಅಂತ ಹೇಳಲಾಗುತ್ತಿತ್ತು. ಅಲ್ಲದೇ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ ಹೀಗಾಗಿ ಬರಾದಾರ್ ಅಸಮಾಧಾನಗೊಂಡಿದ್ದಾರೆ ಅಂತಲೂ ವರದಿಗಳಾಗುತ್ತಿದ್ದವು. ಆದ್ರೆ ಈಗ ಈ ವರದಿಗಳು ಸುಳ್ಳು, ಸರ್ಕಾರದಲ್ಲಿ ಎಲ್ಲವೂ ಸರಿ ಇದೆ ನಾನೂ ಸರ್ಕಾರದೊಂದಿಗೆ ಸರಿಯಿದ್ದೇನೆ ಅಂತ ಹೇಳಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಅಮಾಯಕರ ಹೆಣಗಳ ಮೇಲೆ ಸರ್ಕಾರ ಕಟ್ಟಿ ವಿಜೃಂಭಿಸುತ್ತಿರೋ ತಾಲಿಬಾನಿಗಳ ಸೇನೆ ಅದ್ಹೇಗೆ ಜನರನ್ನ ರಕ್ಷಣೆ ಮಾಡುತ್ತೋ.