ಮೂಲ : ಪ್ರಭು ಚಾವ್ಲಾ
ಕನ್ನಡಕ್ಕೆ : ನಾ ದಿವಾಕರ
(ಮೂಲ ಲೇಖನ : Who silenced Indiaʼs protest streets – ಪ್ರಭು ಚಾವ್ಲಾ ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ 19 ಜುಲೈ 2026)
ಸರ್ಕಾರಗಳು ಮತಚೀಟಿಗಳಿಗೆ ಹೆದರುತ್ತಿದ್ದ ಹಾಗೆಯೇ ರಸ್ತೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಿಗೂ ಹೆದರುತ್ತಿದ್ದ ಕಾಲವೊಂದಿತ್ತು. ದೆಹಲಿಯ ರಾಮ್ ಲೀಲಾ ಮೈದಾನ ಅಥವಾ ಜಂತರ್ ಮಂತರ್, ಮುಂಬೈನ ಶಿವಾಜಿ ಪಾರ್ಕ್, ಚೆನ್ನೈ ನಗರದ ಮರೀನಾ ಬೀಚ್ ಇವೆಲ್ಲವೂ ಕೇವಲ ಸಾರ್ವಜನಿಕ ಸ್ಥಳಗಳಾಗಿರಲಿಲ್ಲ. ರಾಜಕೀಯ ನ್ಯಾಯೋಚಿತತೆಯನ್ನು (Political legitimacy) ಪಡೆದಂತಹ ಸಾರ್ವಜನಿಕ ಆಕ್ರೋಶದ ಪ್ರಜಾಸತ್ತಾತ್ಮಕ ವೇದಿಕೆಗಳಾಗಿದ್ವು. ಇವುಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ಜನರು ಸೇರಿದರೆ ಅದು ರಾಷ್ಟ್ರೀಯ ಸಂಕಥನವನ್ನು (National Discourse) ಬದಲಾಯಿಸುತ್ತಿತ್ತು, ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿತ್ತು ಹಾಗೂ ಅಧಿಕಾರದಲ್ಲಿರುವವರು ಕಿವಿಗೊಡುವಂತೆ ಒತ್ತಡ ಹೇರುತ್ತಿತ್ತು. ಈ ಮೈಲಿಗಲ್ಲುಗಳು ಇದ್ದ ಜಾಗದಲ್ಲಿಯೇ ಉಳಿದಿವೆ. ಕಾಣೆಯಾಗಿರುವುದು ಈ ಸ್ಥಳಗಳನ್ನು ಆಕ್ರಮಿಸುವ ನಾಗರಿಕರ ಇಚ್ಚಾಶಕ್ತಿ ಮಾತ್ರ.

NEET (ನೀಟ್) ಪೇಪರ್ ಲೀಕ್ ಮತ್ತು ಚುನಾವಣಾ ಸಮಸ್ಯೆಗಳ ವಿರುದ್ಧ ದೀರ್ಘ ಪ್ರತಿಭಟನೆ, ಸೋನಂ ವಾಂಗ್ಚುಕ್ ಪ್ರವೇಶಿಸಿದ ಮೇಲೆ ಮತ್ತೊಮ್ಮೆ ಕುತೂಹಲಕಾರಿ ಮನ್ವಂತರದ ಲಕ್ಷಣಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದೆ. ವಾರಗಟ್ಟಲೆ ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹ ನಡೆಯುತ್ತಿದ್ದರೂ, ಕೆಲವು ವಿವಿಧ ವಿರೋಧ ಪಕ್ಷಗಳ ಐಕಮತ್ಯ, ಬೆಂಬಲವನ್ನು ಗಳಿಸಿದ್ದರೂ, ಈ ಆಂದೋಲನವು, ಕುಂದುಕೊರತೆಗಳನ್ನು ರಾಷ್ಟ್ರೀಯ ಆಂದೋಲನವನ್ನಾಗಿ ಪರಿವರ್ತಿಸುವಂತಹ ಸ್ವಯಂ ಪ್ರೇರಿತ ಭಾಗವಹಿಸುವಿಕೆಯನ್ನು ದಾಖಲಿಸಲು ಪರದಾಡುತ್ತಿದೆ. ಈ ಮೌನ ಗಮನಾರ್ಹವಾಗಿ ಕಾಣುತ್ತದೆ. ನಾಗರಿಕ ಸಮಾಜದ ಹಿಂಜರಿಕೆ ಹಾಗೆಯೇ ಇದೆ, ಸಾರ್ವಜನಿಕ ವಲಯದ ಬುದ್ಧಿಜೀವಿಗಳು ಬಹುಮಟ್ಟಿಗೆ ದೂರ ಉಳಿದಿದ್ದಾರೆ, ಸಾಮಾನ್ಯವಾಗಿ ಟಿವಿ ಚರ್ಚೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುವವರೂ ನಿರಾಸಕ್ತಿ ತೋರುತ್ತಿದ್ದು, ಆಕ್ರೋಶವನ್ನು ವೈಯುಕ್ತಿಕ ಭಾಗವಹಿಸುವಿಕೆಯಾಗಿ ಪರಿವರ್ತಿಸುವಲ್ಲಿ ಸಹ ನಿರಾಸಕ್ತರಾಗಿದ್ದಾರೆ.

ಇದು ಕೇವಲ ಮತ್ತೊಂದು ಪ್ರತಿಭಟನೆಯ ವೈಫಲ್ಯವೇ ? ಅಥವಾ ಭಾರತೀಯ ಪ್ರಜಾಪ್ರಭುತ್ವದ ಲಕ್ಷಣದಲ್ಲಿ ಆಳವಾಗಿ ಆಗಿರುವ ಬದಲಾವಣೆಯ ಸಂಕೇತವೇ ? ಈ ವಿರೋಧಾಭಾಸವನ್ನು ನಿರ್ಲಕ್ಷಿಸಲಾಗುವುದಿಲ್ಲ. ಸಾರ್ವಜನಿಕರ ಆಕ್ರೋಶವನ್ನು ಕೆರಳಿಸುವಂತಹ ಸಮಸ್ಯೆಗಳಿಗೆ ಭಾರತದಲ್ಲೇನೂ ಕೊರತೆಯಿಲ್ಲ. ರೈತರು ಅಸ್ಥಿರತೆಯ ಬಗ್ಗೆ ಆರೋಪಿಸುತ್ತಲೇ ಇದ್ದಾರೆ. ಯುವ ಜನರು ಪರೀಕ್ಷೆ ಮತ್ತು ಉದ್ಯೋಗಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಭ್ರಷ್ಟಾಚಾರದ ಆರೋಪಗಳು ನಿರಂತರವಾಗಿ ಕೇಳಿಬರುತ್ತಲೇ ಇವೆ. ರಾಜಕೀಯ ಸಂಕಥನಗಳು, ವಿರಳ ಎನಿಸಿದರೂ ಹೆಚ್ಚು ಧೃವೀಕರಣವಾಗಿವೆ. ಆದಾಗ್ಯೂ ಈ ಯಾವುದೇ ಕುಂದುಕೊರತೆಗಳು ನಿರಂತರವಾದ ರಾಷ್ಟ್ರೀಯ ಕ್ರೋಢೀಕರಣಕ್ಕೆ ಕಾರಣವಾಗಿಲ್ಲ, ಹಿಂದಿನ ಪೀಳಿಗೆಗಳಲ್ಲಿ ಇದು ಬಹುಮಟ್ಟಿಗೆ ಸಹಜ ಎನಿಸುತ್ತಿದ್ದ ರಾಷ್ಟ್ರಮಟ್ಟದ ಕ್ರೋಢೀಕರಣ ಕಂಡುಬರುತ್ತಿಲ್ಲ.

ಪ್ರತಿಯೊಂದು ಇತರ ವಲಯದಲ್ಲೂ ಅಸಮಾಧಾನದ ಹೊಗೆಯಾಡುತ್ತಿರುವಾಗ ರಸ್ತೆಗಳೇಕೆ ಮೌನದ ಬೀಡುಗಳಾಗಿವೆ ? ಭಿನ್ನಾಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಡಿಜಿಟಲ್ ಪರದೆಗೆ ವರ್ಗಾವಣೆಯಾಗಿದೆಯೇ ? ಅಥವಾ ಭಾರತೀಯ ಪ್ರಜಾಪ್ರಭುತ್ವವು ಹೆಚ್ಚು ಹೆಚ್ಚು ಚುನಾವಣೆಗಳ ಮೂಲಕ, ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಾದಿಸಲ್ಪಡುತ್ತಿದೆಯೇ ? ಸಾಮೂಹಿಕ ಸಾರ್ವಜನಿಕ ಚಟುವಟಿಕೆ ಅಥವಾ ಸಂಕಥನಗಳಿಗೆ ವಿಮುಖವಾಗಿದೆಯೇ ?
ತಂತ್ರಜ್ಞಾನವು ರಾಜಕಾರಣದ ಲೆಕ್ಕಾಚಾರಗಳನ್ನು ಮಾರ್ಪಾಡು ಮಾಡಿರುವುದು ಪ್ರಶ್ನಾತೀತ ವಾಸ್ತವ. ಹಿಂದಿನ ಪೀಳಿಗೆಗಳು ಬ್ಯಾನರ್ಗಳೊಂದಿಗೆ ಮೆರವಣಿಗೆ ನಡೆಸುತ್ತಿದ್ದವು. ಇಂದಿನ ಪೀಳಿಗೆ ಸ್ಮಾರ್ಟ್ ಫೋನ್ಗಳನ್ನು ಬಳಸುತ್ತವೆ. ಒಂದು ಹ್ಯಾಷ್ಟ್ಯಾಗ್ (Hashtag) ಮೆರವಣಿಗೆಗಿಂತಲೂ ವೇಗವಾಗಿ ಚಲಿಸಬಲ್ಲದು, ಒಂದು ಸಂಕ್ಷಿಪ್ತ ವಿಡಿಯೋ ಸಾರ್ವಜನಿಕ ಸಭೆಗಿಂತಲೂ ಹೆಚ್ಚಿನ ಜನರನ್ನು ತಲುಪುತ್ತದೆ. ಒಂದು ದಶಕದ ಹಿಂದೆಯೇ ಡಿಜಿಟಲ್ ವೇದಿಕೆಗಳು (Platforms) ಅಭಿವ್ಯಕ್ತಿಯನ್ನು ಊಹಿಸಲಾಗದ ರೀತಿಗಳಲ್ಲಿ ಪ್ರಜಾಪ್ರಭುತ್ವೀಕರಿಸಿವೆ. ಆದಾಗ್ಯೂ ಕಣ್ಣಿಗೆ ಗೋಚರಿಸುವುದನ್ನು ಕ್ರೋಢೀಕರಣ ಎಂದು ತಪ್ಪಾಗಿ ಭಾವಿಸುವಂತಿಲ್ಲ. ಸರ್ಕಾರಗಳಿಗೆ ಆನ್ಲೈನ್ ಟೀಕೆಗಳು ಮುಜುಗರ ಉಂಟುಮಾಡಬಹುದು ಆದರೆ ಚಾರಿತ್ರಿಕವಾಗಿ ನೋಡಿದರೆ, ಶಿಸ್ತುಬದ್ಧ ಸಾರ್ವಜನಿಕ ಕ್ರೋಢೀಕರಣ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಜಾಸತ್ತಾತ್ಮಕ ಬದಲಾವಣೆಗಳಿಗೆ ಕಾರಣವಾಗಿದೆ.

ವರ್ತನೆಯಲ್ಲಿನ ಈ ಮನ್ವಂತರಗಳಿಗೆ ಆರ್ಥಿಕ ಬದಲಾವಣೆಗಳೂ ಕಾರಣವಿರಬಹುದು. ಭಾರತವು ಹೆಚ್ಚಿನ ಮಟ್ಟಿಗೆ ನಿರಾಶಾದಾಯಕ ಸ್ಥಿತಿಯಿಂದ ಮಹತ್ವಾಕಾಂಕ್ಷೆಯ ಹಾದಿಯಲ್ಲಿ ಸಾಗುತ್ತಿದೆ. ವಿಸ್ತರಿಸುತ್ತಿರುವ ಮಧ್ಯಮ ವರ್ಗವು ತನ್ನ ವೃತ್ತಿ, ಶಿಕ್ಷಣ, ವ್ಯಾಪಾರ-ವಾಣಿಜ್ಯ ಮತ್ತು ಆರ್ಥಿಕ ಪ್ರಗತಿಯಲ್ಲೇ ಆಸಕ್ತವಾಗಿರುವುದು ಅರ್ಥವಾಗುವಂತಹ ಬೆಳವಣಿಗೆ. ಆಂದೋಲನಗಳು ದುಬಾರಿಯಾಗುತ್ತವೆ. ಸಮಯ ಖರ್ಚಾಗುತ್ತದೆ, ಅನಿಶ್ಚಿತತೆ ಉಂಟುಮಾಡುತ್ತದೆ, ಆಗಾಗ್ಗೆ ಸಂಘರ್ಷಕ್ಕೂ ಎಡೆಮಾಡಿಕೊಡುತ್ತವೆ. ಸಮೃದ್ಧತೆ ಸಾಮಾನ್ಯವಾಗಿ ರಾಜಕೀಯ ಚಟುವಟಿಕೆಗಳನ್ನು ಮಿತಿಗೊಳಿಸುತ್ತದೆ. ಆದರೆ ಮತ್ತೊಂದೆಡೆ ಸಮೃದ್ಧತೆಯು ಸಂಘಟಿತ ಸಾರ್ವಜನಿಕ ಚಟುವಟಿಕೆಯ ಉತ್ಸಾಹವನ್ನೂ ಕುಂದಿಸುತ್ತದೆಯೇ ?
ಯುವ ಪೀಳಿಗೆಯ ವರ್ತನೆ ಮತ್ತೊಂದು ರೀತಿಯ ಅಚ್ಚರಿಯನ್ನುಂಟುಮಾಡುತ್ತದೆ. ಈ ಪೀಳಿಗೆಯು ತೀವ್ರವಾದ ಪೈಪೋಟಿ ಎದುರಿಸುತ್ತಿದೆ, ಅನಿಶ್ಚಿತ ಉದ್ಯೋಗ ಮತ್ತು ಅಗಾಧವಾದ ವೃತ್ತಿಪರ ಒತ್ತಡಗಳನ್ನು ಎದುರಿಸುತ್ತದೆ. ತಾರ್ಕಿಕವಾಗಿ ಯೋಚಿಸಿದಾಗ ಈ ಪೀಳಿಗೆಯು ಸಂಘಟಿತರಾಗಿ ಪ್ರತಿಭಟಿಸಲು ಬಲವಾದ ಕಾರಣಗಳನ್ನು ಹೊಂದಿರುತ್ತದೆ. ಆದರೂ ಒಂದು ಕಾಲದಲ್ಲಿ ರಾಷ್ಟ್ರ ರಾಜಕಾರಣವನ್ನು ರೂಪಿಸಿದ ವಿಶ್ವವಿದ್ಯಾಲಯದ ಕ್ಯಾಂಪಸ್ಗಳು ಇಂದು ಆ ಸೈದ್ಧಾಂತಿಕ ಮಂಥನವನ್ನು ಕಾಣುತ್ತಿಲ್ಲ. ವಿದ್ಯಾರ್ಥಿ ಸಂಘಗಳು ಈ ಹಿಂದೆ ಇದ್ದ ಪ್ರಭಾವವನ್ನು ಬಹುಮಟ್ಟಿಗೆ ಕಳೆದುಕೊಂಡಿವೆ. ಬಹುಶಃ ಆದರ್ಶವಾದವು ವೈಯುಕ್ತಿಕ ಮಹತ್ವಾಕಾಂಕ್ಷೆಗಳಿಗೆ ಬಲಿಯಾಗಿದ್ದು , ರಾಜಕೀಯವೇ ಆತ್ಮವಿಶ್ವಾಸವನ್ನು ಪ್ರೇರೇಪಿಸುವ ಶಕ್ತಿಯನ್ನು ಕಳೆದುಕೊಂಡಿದೆ.
ಪ್ರಸ್ತುತ ನಾಯಕತ್ವದ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯೂ ಸಹ ಜನರ ಸೂಕ್ಷ್ಮ ಪರಿಶೀಲನೆಗೊಳಗಾಗುತ್ತಿದೆ. ಪ್ರತಿಯೊಂದು ಯಶಸ್ವಿ ಸಾರ್ವಜನಿಕ ಆಂದೋಲನವೂ ಪಕ್ಷ ರಾಜಕಾರಣವನ್ನು ಮೀರಿದ ಒಂದು ನೈತಿಕ ಕೇಂದ್ರವನ್ನು ಹೊಂದಿರುವುದನ್ನು ಕಂಡಿದ್ದೇವೆ. ಮಹಾತ್ಮಾಗಾಂಧಿ ಪ್ರತಿರೋಧವನ್ನು ಒಂದು ನೈತಿಕ ಅಭಿಯಾನವಾಗಿ ಪರಿವರ್ತನೆ ಮಾಡಿದರು. ಜಯಪ್ರಕಾಶ್ ನಾರಾಯಣ್ ರಾಜಕೀಯ ಅಸಮಾಧಾನಗಳನ್ನು ಪ್ರಜಾಸತ್ತಾತ್ಮಕ ಹೋರಾಟವಾಗಿ ಪರಿವರ್ತಿಸಿದರು. ಅಣ್ಣಾ ಹಜಾರೆ ಕೊಂಚ ಕಾಲ ಯಶಸ್ವಿಯಾಗಿದ್ದರು, ಏಕೆಂದರೆ ಲಕ್ಷಾಂತರ ಜನರು ಅವರ ಆಂದೋಲನವನ್ನು ನೈತಿಕ ಮಧ್ಯಸ್ತಿಕೆಯಾಗಿ ಪರಿಗಣಿಸಿದ್ದರೇ ಹೊರತು ಪಕ್ಷಪಾತದ ನಡೆ ಎಂದು ಭಾವಿಸಿರಲಿಲ್ಲ. ಸಮಕಾಲೀನ ಆಂದೋಲನಗಳು ಸಾಮಾನ್ಯವಾಗಿ ಈ ವ್ಯತ್ಯಾಸವನ್ನು ಸಾಬೀತುಪಡಿಸಲು ಪರದಾಡುತ್ತವೆ.

ಅಷ್ಟೇ ಮುಖ್ಯವಾದ ಅಂಶ ಎಂದರೆ, ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಪ್ರಾಬಲ್ಯ ಮುಂದುವರೆದಿರುವುದು. ಅವರ ಸಂವಹನ ಕೌಶಲ, ಜನಕಲ್ಯಾಣ ಯೋಜನೆಗಳು ಮತ್ತು ವೈಯುಕ್ತಿಕ ಆಕರ್ಷಣೆಯ ಪರಿಣಾಮವಾಗಿ, ಮೋದಿ ಅಪಾರ ಜನಸ್ತೋಮದ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ವೈಯುಕ್ತಿಕ ರಾಜಕೀಯದ ಟೀಕೆಗಳ ಹೊರತಾಗಿಯೂ ಬೃಹತ್ ಸಂಖ್ಯೆಯ ಮತದಾರರ ಬೆಂಬಲ ಗಳಿಸಿದ್ದಾರೆ. ಕೆಲವು ನಿರ್ದಿಷ್ಟ ತೀರ್ಮಾನಗಳನ್ನು ಒಪ್ಪದೆ ಇರುವ ಅನೇಕ ನಾಗರಿಕರಿಗೂ ಸಹ, ಇನ್ನೂ ಹೆಚ್ಚು ಸಮಾಧಾನಕರವಾದ ರಾಷ್ಟ್ರೀಯ ಪರ್ಯಾಯಗಳು ಉಗಮಿಸಿವೆ ಎಂದು ಮನವರಿಕೆ ಆಗಿಲ್ಲ.
ಪ್ರಜಾಪ್ರಭುತ್ವವು ಕೇವಲ ಅಧಿಕಾರದಲ್ಲಿರುವವರ ಬಗ್ಗೆ ಅಸಮಾಧಾನಗಳನ್ನು ಮಾತ್ರ ಆಧರಿಸಿ ಕಾರ್ಯನಿರ್ವಹಿಸುವುದಿಲ್ಲ ಬದಲಾಗಿ ಇದನ್ನು ಬದಲಾಯಿಸುವವರ ಬಗ್ಗೆ ಇರುವ ವಿಶ್ವಾಸವನ್ನೂ ಅವಲಂಬಿಸುತ್ತದೆ. ಈ ಬದಲಾಗುತ್ತಿರುವ ವಾಸ್ತವಗಳೇ, ರಾಹುಲ್ ಗಾಂಧಿ ಏಕೆ ದೇಶದ ರಾಜಧಾನಿಯಲ್ಲಿ ಬೃಹತ್ ಸಮಾವೇಶಗಳಿಗಿಂತಲೂ ಹೆಚ್ಚಾಗಿ, ವಿದ್ಯಾರ್ಥಿಗಳೊಡನೆ, ರೈತರೊಡನೆ, ಕಾರ್ಮಿಕರೊಡನೆ ಹಾಗೂ ಸ್ಥಳೀಯ ಸಮುದಾಯಗಳೊಡನೆ ನೇರವಾಗಿ ವ್ಯವಹರಿಸುವುದನ್ನು ಅವಲಂಬಿಸುತ್ತಾರೆ ಎನ್ನುವುದನ್ನು ನಿರೂಪಿಸುತ್ತವೆ.
ಅಷ್ಟೇ ಮಹತ್ವವಾದುದು ನಾಗರಿಕ ಸಮಾಜದ ಹಿಂತೆಗೆತ. ಒಂದು ಕಾಲದಲ್ಲಿ ನಿವೃತ್ತ ನ್ಯಾಯಾಧೀಶರು, ಮಾಜಿ ನಾಗರಿಕ ಸೇವಾಧಿಕಾರಿಗಳು, ಶೈಕ್ಷಣಿಕ ವಿದ್ವಾಂಸರು, ಸಾಹಿತಿ-ಲೇಖಕರು, ಕಲಾವಿದರು ಸಾರ್ವಜನಿಕ ಅಂದೋಲನಗಳಿಗೆ ಬೌದ್ಧಿಕ ನ್ಯಾಯಪರತೆಯನ್ನು ನೀಡುತ್ತಿದ್ದುದೇ ಅಲ್ಲದೆ ನೈತಿಕ ಬಲವನ್ನೂ ಒದಗಿಸುತ್ತಿದ್ದರು. ಇವರ ಉಪಸ್ಥಿತಿಯೇ ಸಾಮಾನ್ಯ ಜನತೆಗೆ , ಸಮಸ್ಯೆಗಳು ಪಕ್ಷಪಾತದ ಲೆಕ್ಕಾಚಾರಗಳನ್ನು ಮೀರಿ ನಿಲ್ಲುತ್ತವೆ ಎಂಬ ಭರವಸೆಯನ್ನು ನೀಡುತ್ತಿತ್ತು. ಇಂದು ಅನೇಕರು ಈ ಜಾಗವನ್ನು ಆಕ್ರಮಿಸಲು ಹಿಂಜರಿಯುತ್ತಾರೆ. ಇದು ಆಯಾಸದ ಸಂಕೇತವೋ, ಎಚ್ಚರಿಕೆ, ಹೆಚ್ಚಾಗುತ್ತಿರುವ ಧೃವೀಕರಣದ ಪರಿಣಾಮವೋ ಅಥವಾ ಕುಸಿಯುತ್ತಿರುವ ಸಾರ್ವಜನಿಕ ವಿಶ್ವಾಸದ ಲಕ್ಷಣವೋ ಎನ್ನುವುದು ಚರ್ಚಾರ್ಹ ಆದರೆ ಇದರ ಪರಿಣಾಮಗಳು ಮಾತ್ರ ಸ್ಪಷ್ಟವಾಗಿವೆ. ಪ್ರತಿರೋಧದ ಆಂದೋಲನಗಳು ಒಂದು ಕಾಲದಲ್ಲಿ ಗಳಿಸುತ್ತಿದ್ದ ವಿಶಾಲ ಸಾಮಾಜಿಕ ಸಮನ್ವಯ ಮತ್ತು ಒಗ್ಗಟ್ಟನ್ನು ಪಡೆದುಕೊಳ್ಳಲು ಈಗ ಪರದಾಡುವಂತಾಗಿದೆ.
ಹಾಗೆಂದ ಮಾತ್ರಕ್ಕೆ ಭಾರತೀಯರು ರಾಜಕೀಯವಾಗಿ ಅನ್ಯಮನಸ್ಕರಾಗಿದ್ದಾರೆ ಎಂದು ಹೇಳಲಾಗುವುದಿಲ್ಲ. ಮತದಾನದಲ್ಲಿ ಭಾಗವಹಿಸುವಿಕೆ ಪ್ರಭಾವಶಾಲಿಯಾಗಿದೆ, ರಾಜಕೀಯ ಚರ್ಚೆಗಳು ಪ್ರತಿಯೊಂದು ಮಾಧ್ಯಮದಲ್ಲೂ ಹರಿದಾಡುತ್ತವೆ, ನಾಗರಿಕರು ಸರ್ಕಾರಗಳನ್ನು ಗಮನಾರ್ಹವಾಗಿ ತೀವ್ರ ಪರಿಶೀಲನೆಗೊಳಪಡಿಸುತ್ತಾರೆ. ಪ್ರಜಾಪ್ರಭುತ್ವದ ಅಂತಃಶಕ್ತಿ ಮರೆಯಾಗಿಲ್ಲ. ಬದಲಾಗಿ ಅದರ ಅಭಿವ್ಯಕ್ತಿ ಬದಲಾಗಿದೆ. ಮತ ಚಲಾವಣೆ ಪ್ರಜಾಪ್ರಭುತ್ವದ ಅಡಿಪಾಯವಾಗಿ ಉಳಿದಿದೆ ಆದರೆ ಚುನಾವಣೆಗಳು ಮಾತ್ರವೇ ಸರ್ಕಾರ –ನಾಗರಿಕರ ನಡುವಿನ ಸಂವಾದದ ವೇದಿಕೆಯಾಗುವುದಿಲ್ಲ. ಶಾಂತಿಯುತ ಪ್ರತಿಭಟನೆಗಳೂ ಸಹ ಅಷ್ಟೇ ಪ್ರಮಾಣದಲ್ಲಿ ನ್ಯಾಯಯುತ ಪ್ರಜಾತಾಂತ್ರಿಕ ಅಸ್ತ್ರವಾಗಿವೆ. ಏಕೆಂದರೆ ಈ ಪ್ರತಿಭಟನೆಗಳು ಅಧಿಕಾರದಲ್ಲಿರುವವರಿಗೆ, ಚುನಾವಣಾ ಗೆಲುವು ಕಿವಿ ಮುಚ್ಚಿಕೊಳ್ಳುವುದಕ್ಕೆ ಪರವಾನಗಿ ಆಗುವುದಿಲ್ಲ.

ಆದ್ದರಿಂದಲೇ ಯಾವುದೇ ಒಂದು ಪ್ರತಿಭಟನೆಯ ಯಶಸ್ಸು ಅಥವಾ ವೈಫಲ್ಯಕ್ಕಿಂತಲೂ, ಕ್ಷೀಣಿಸುತ್ತಿರುವ ಭಾರತದ ಪ್ರತಿರೋಧ ಸಂಸ್ಕೃತಿಯ ಅನುರಣನ (Resonance) ಹೆಚ್ಚು ಚಿಂತನಾರ್ಹವಾಗಿ ಕಾಣುತ್ತದೆ. ಸರ್ಕಾರಗಳು ಸದ್ದಿಲ್ಲದ ರಸ್ತೆಗಳನ್ನು ಅಪೇಕ್ಷಿಸಬಹುದು. ವಿರೋಧ ಪಕ್ಷವೊಂದು ಕ್ರೋಢೀಕರಣದ ಕೊರತೆಯ ಬಗ್ಗೆ ಪರಿತಪಿಸಬಹುದು. ಆದರೂ ಮೂಲ ವಿಚಾರ ಇವೆರಡಕ್ಕೂ ಸಂಬಂಧಿಸಿದ್ದಲ್ಲ. ಸಾರ್ವಜನಿಕ ನೀತಿಯನ್ನು ಪ್ರಭಾವಿಸುವ ಸಾಮೂಹಿಕ ಚಟುವಟಿಕೆಗಳ ಶಕ್ತಿಯನ್ನು ಜನರು ಅನುಮಾನಿಸತೊಡಗಿದಾಗ, ಪ್ರಜಾತಂತ್ರಗಳು ಕ್ರಮೇಣ ಬಹುಮುಖ್ಯ ದೋಷಪರಿಹಾರಕಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ.

ಬಹುಶಃ ಪ್ರತಿಯೊಂದು ವಿವರಣೆಯಲ್ಲೂ ಸತ್ಯಾಂಶದ ಒಂದು ಭಾಗ ಇದೆ. ತಂತ್ರಜ್ಞಾನವು ವರ್ತನೆಯನ್ನು ಬದಲಿಸಿದೆ. ಆರ್ಥಿಕ ಮಹತ್ವಾಕಾಂಕ್ಷೆ ಆದ್ಯತೆಗಳನ್ನು ಬದಲಿಸಿವೆ. ರಾಜಕೀಯ ನಾಯಕತ್ವವು ಚುನಾವಣೆಗಳ ಲೆಕ್ಕಾಚಾರಗಳನ್ನು ಮರುರೂಪಿಸಿವೆ. ನಾಗರಿಕ ಸಮಾಜ ಇನ್ನೂ ಹೆಚ್ಚು ವಿಘಟಿತವಾಗಿವೆ. ವಿರೋಧ ಪಕ್ಷಗಳು ಆತ್ಮವಿಶ್ವಾಸವನ್ನು ತುಂಬಲು ಪರದಾಡುತ್ತಿವೆ. ಆದರೂ ಇವೆಲ್ಲವನ್ನೂ ಮೀರಿ ಒಂದು ಪ್ರಶ್ನೆ ಕಾಡುತ್ತದೆ. ಭಾರತೀಯರು ಒಗ್ಗಟ್ಟಿನಿಂದ ಶಾಂತಿಯುತವಾಗಿ ನಿಂತು, ಸರ್ಕಾರಗಳನ್ನು ಕೆಲಕಾಲ ತಡೆಹಿಡಿದು, ಯೋಚಿಸಿ ಪ್ರತಿಕ್ರಿಯಿಸುವಂತೆ ಮಾಡುವ ತಮ್ಮ ಸಾಮರ್ಥ್ಯದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ ? ಈ ವಿಶ್ವಾಸ ಕುಂದುತ್ತಿರುವುದೇ ಆದಲ್ಲಿ ಸಮಸ್ಯೆಯು ಒಂದು ಪ್ರತಿಭಟನೆ ಅಥವಾ ಒಂದು ರಾಜಕೀಯ ಪಕ್ಷವನ್ನು ಮೀರಿ ವಿಸ್ತರಿಸುತ್ತದೆ . ಪ್ರಜಾಸತ್ತಾತ್ಮಕ ಸಹಭಾಗಿತ್ವದ ಮೂಲ ಲಕ್ಷಣವನ್ನೇ ಮುನ್ನಲೆಗೆ ತರುತ್ತದೆ.
ಸಂಸ್ಥೆಗಳು ಶಿಥಿಲವಾದಾಗ ಮಾತ್ರವೇ ಪ್ರಜಾಪ್ರಭುತ್ವಗಳು ದುರ್ಬಲವಾಗುವುದಿಲ್ಲ. ತಮ್ಮ ಉಪಸ್ಥಿತಿಯು ಇನ್ನು ನಿರ್ಣಾಯಕವಾಗಿ ಉಳಿದಿಲ್ಲ ಎಂದು ಮನದಟ್ಟಾದ ನಾಗರಿಕರು ಸಾರ್ವಜನಿಕ ವಲಯಗಳಿಂದ ಹಿಂದೆ ಸರಿದಾಗಲೂ ದುರ್ಬಲವಾಗುತ್ತದೆ. ಭಾರತ ಖಂಡಿತವಾಗಿಯೂ ಕುಂದುಕೊರತೆಗಳಿಂದ ಮುಕ್ತವಾಗಿಲ್ಲ. ಗೊಂದಲಮಯ ಪ್ರಶ್ನೆ ಎಂದರೆ, ದೇಶವು ಜನತೆಯ ಕುಂದುಕೊರತೆಗಳನ್ನು ಸಾಮೂಹಿಕ ಪ್ರಜಾಸತ್ತಾತ್ಮಕ ಧ್ವನಿಯಾಗಿ ಪರಿವರ್ತಿಸುವಂತಹ ವಿಶ್ವಾಸಾರ್ಹ ನಾಯಕರನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತಿದೆಯೇ ?
ಮೂಲ ಲೇಖನದ ಲಿಂಕ್ ಇಲ್ಲಿದೆ : https://www.newindianexpress.com/opinion/columns/pc/2026/Jul/18/who-silenced-indias-protest-streets






