ಹಾಸನ ಜಿಲ್ಲೆ ಅಂದ್ರೆ ಜೆಡಿಎಸ್ ಪಕ್ಷದ ಭದ್ರಕೋಟೆ ಅನ್ನೋದನ್ನು ಸುಳ್ಳು ಅನ್ನೋದಕ್ಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ರಾಜ್ಯಾದ್ಯಂತ ಗೆದ್ದರೂ ಹಾಸನದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾದ ಅನಿವಾರ್ಯತೆ ಇದೆ. ಹಾಸನದಲ್ಲಿ ದೇವೇಗೌಡರ ಕುಟುಂಬಕ್ಕೆ ನಿಷ್ಠರಾಗಿ ಇದ್ದವರು ಶಾಸಕರಾಗಿ ಆಯ್ಕೆಯಾಗುವುದು ಶತಸಿದ್ಧ. ಇನ್ನು ಹಾಸನದ ಉಸ್ತುವಾರಿ ಹೆಚ್.ಡಿ ರೇವಣ್ಣ ಅಧಿಕಾರದಲ್ಲಿ ಇರಲಿ, ವಿರೋಧ ಪಕ್ಷದಲ್ಲಿ ಇರಲಿ ಅಭಿವೃದ್ಧಿ ಕೆಲಸ ಮಾಡಿಸುವ ಚಾಕಚಕ್ಯತೆ ಇರುವ ನಾಯಕ ಎನ್ನಬಹುದು. ಕಾಂಗ್ರೆಸ್, ಬಿಜೆಪಿ ಯಾವುದೇ ಸರ್ಕಾರ ಇದ್ದರೂ ತನಗೆ ಬೇಕಾದ ಇಲಾಖೆಯ ಫೈಲ್ ಹಿಡಿದು ರೇವಣ್ಣ ಹೊರಟರೆ ಒಪ್ಪಿಗೆ ಪಡೆದುಕೊಂಡೆ ವಾಪಸ್ ಬರುತ್ತಾರೆ. ಅಧಿವೇಶನದ ಸಮಯದಲ್ಲೂ ಆಡಳಿತ ಪಕ್ಷದ ಕಡೆಗೆ ಬಂದು ಕುಳಿತು ಸಹಿ ಹಾಕಿಸಿಕೊಳ್ಳುವ ಅದೆಷ್ಟೋ ನಿದರ್ಶನಗಳಿವೆ. ಹೀಗಾಗಿ ಜನರೂ ಜೆಡಿಎಸ್‌ಗೆ ಜೈ ಅಂತಾರೆ. ಆದರೆ ಇದೀಗ ಹಾಸನ ಟಿಕೆಟ್ ವಿಚಾರವಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ.
ಹಾಸನದಲ್ಲಿ ನನ್ನನ್ನು ಅಭ್ಯರ್ಥಿ ಮಾಡುವ ತೀರ್ಮಾನ ಆಗಿದೆ..!
ಹಾಸನದ ಸಭೆಯೊಂದಲ್ಲಿ ಭವಾನಿ ರೇವಣ್ಣ ಈ ಮಾತನ್ನು ಹೇಳಿದ ಕೂಡಲೇ ವಿವಾದದ ಕಿಡಿ ಹೊತ್ತಿಕೊಂಡಿದೆ. ಭವಾನಿ ಹೇಳಿಕೆ ಬೆನ್ನಲ್ಲೇ ಹೆಚ್. ಪಿ ಸ್ವರೂಪ್ ನಾನು ಟಿಕೆಟ್ ಆಕಾಂಕ್ಷಿ ಇದ್ದೇನೆ, ನನ್ನ ತಂದೆ ಹೆಚ್.ಎಸ್ ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಜನ ನನ್ನ ಆಯ್ಕೆ ಮಾಡುವ ವಿಶ್ವಾಸವಿದೆ. ಭವಾನಿ ರೇವಣ್ಣ ಅವರ ಹೇಳಿಕೆಯಿಂದ ಕಾರ್ಯಕರ್ತರಿಗೆ ಬೇಸರ ಆಗಿದೆ ಎಂದಿದ್ದರು. ಈ ಮಾತು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹಾಸನದಲ್ಲಿ ಭವಾನಿ ರೇವಣ್ಣ ಅವರು ಸ್ಪರ್ಧೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿಲ್ಲ. ಆ ರೀತಿಯ ಅನಿವಾರ್ಯತೆ ಸೃಷ್ಟಿ ಆಗಿದ್ದರೆ ನಾನೇ ಸ್ಪರ್ಧೆಗೆ ಹೇಳುತ್ತಿದ್ದೆ. ಈಗ ಹಾಲಿ ಅಭ್ಯರ್ಥಿ ಹೆಚ್.ಪಿ ಸ್ವರೂಪ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದರು. ಈ ಮಾತಿಗೆ ಕೌಂಟರ್ ಕೊಟ್ಟಿರುವ ಸಂಸದ ಪ್ರಜ್ವಲ್ ರೇವಣ್ಣ, ಬಿ ಫಾರ್ಮ್ ಕೊಡುವುದು ಮಾಜಿ ಪ್ರಧಾನಿ ದೇವೇಗೌಡರು ಎನ್ನುವ ಮೂಲಕ ಭವಾನಿ ರೇವಣ್ಣ ಸ್ಪರ್ಧೆ ಮಾಡಿಯೇ ಮಾಡ್ತಾರೆ ಎನ್ನುವುದನ್ನು ತಿಳಿಸಿದ್ದಾರೆ.
ಕುಮಾರಸ್ವಾಮಿ ವಿರೋಧ ಮಾಡ್ತಿರೋ ಉದ್ದೇಶ ಆದ್ರು ಏನು..?
ಹಾಸನದಲ್ಲಿ ಬಿಜೆಪಿಯ ಪ್ರೀತಂಗೌಡ ಹಾಲಿ ಶಾಸಕರಾಗಿದ್ದಾರೆ. ಪ್ರೀತಂಗೌಡ ಜೆಡಿಎಸ್ ಕೋಟೆಯಲ್ಲಿ ಅರಳಿದ ಗಟ್ಟಿ ಕಮಲ ಎಂದೇ ವ್ಯಾಖ್ಯಾನ ಮಾಡಬಹುದು. ಈ ನಡುವೆ ಪ್ರೀತಂಗೌಡ ಸೋಲಿಸಲು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದು ಅನಿವಾರ್ಯತೆ ಇದೆ. ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಆದರೂ ಕುಮಾರಸ್ವಾಮಿ ಮಾತ್ರ ಹಾಸನದಲ್ಲಿ ಭವಾನಿ ಅವರನ್ನು ನಿಲ್ಲಿಸುವ ಅನಿವಾರ್ಯತೆ ಬಂದಿಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಅವರ ಮಾತಿನ ಉದ್ದೇಶ ಪಕ್ಷಕ್ಕೆ ಆಗಬಹುದಾದ ಹಾನಿಯನ್ನು ತಡೆಯುವುದು ಆಗಿದೆ. ಈಗಾಗಲೇ ಹೆಚ್.ಡಿ ರೇವಣ್ಣ ಮನೆಯಲ್ಲಿ ರೇವಣ್ಣ ಶಾಸಕರಾಗಿದ್ದಾರೆ, ಪುತ್ರ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಮತ್ತೋರ್ವ ಪುತ್ರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಇನ್ನು ಉಳಿದಿರುವ ಭವಾನಿ ರೇವಣ್ಣ ಮತ್ತೊಂದು ಕ್ಷೇತ್ತದಿಂದ ಶಾಸಕರಾಗಿ ಆಯ್ಕೆ ಆದರೆ ಇಡೀ ಕುಟುಂಬವೇ ರಾಜಕೀಯ ಶಕ್ತಿಯನ್ನು ಪಡೆದಂತಾಗುತ್ತದೆ. ಭವಾನಿ ರೇವಣ್ಣ ಗೆಲ್ಲಲೂ ಬಹುದು, ಆದರೆ ಭವಾನಿ ರೇವಣ್ಣ ಸ್ಪರ್ಧೆ ಬೇರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. 123 ಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ರಾಜ್ಯ ಸುತ್ತುತ್ತಿರುವ ಕುಮಾರಸ್ವಾಮಿ ಉದ್ದೇಶ ನೀರಲ್ಲಿ ಹೋಮ ಮಾಡಿದಂತಾಗುತ್ತದೆ ಎನ್ನುವ ಭಯ ಕಾಡುತ್ತಿದೆ.
ಹಾಸನ ವಿಚಾರದಲ್ಲಿ ಹೆಚ್.ಡಿ ರೇವಣ್ಣ ನಿರ್ಧಾರವೇ ಅಂತಿಮ..!?
ಹಾಸನದಲ್ಲಿ ಘಾಟಾನುಘಟಿ ಅಭ್ಯರ್ಥಿ ಅತ್ಯವಶ್ಯಕ ಅನ್ನೋ ಕಾರಣಕ್ಕೆ ಕಳೆದ ಒಂದು ವರ್ಷದಿಂದಲೂ ರಣತಂತ್ರ ರೂಪಿಸಲಾಗ್ತಿದೆ. ಬಿಜೆಪಿಯಿಂದ ಶಾಸಕ ಆಗಿರುವ ಪ್ರೀತಂಗೌಡ ದೇವೇಗೌಡರ ಕುಟುಂಬದ ಬಗ್ಗೆ ಟೀಕಾಸ್ತ್ರ ಪ್ರದರ್ಶನ ಮಾಡುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಸೋಲುಣಿಸಲು ರೇವಣ್ಣ ಕುಟುಂಬ ನಿರ್ಧಾರ ಮಾಡಿತ್ತು. ಅದಕ್ಕೂ ಮೊದಲು ಪ್ರೀತಂಗೌಡ ನೀಡಿದ್ದ ಸವಾಲನ್ನೇ ಸ್ವೀಕಾರ ಮಾಡಿ ಹಾಸನದಲ್ಲಿ ಭವಾನಿ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಅಷ್ಟು ಮಾತ್ರವಲ್ಲದೆ ಹಾಸನ ವಿಚಾರದಲ್ಲಿ ಜೆಡಿಎಸ್ ಪಕ್ಷ ಯಾವುದೇ ನಿರ್ಧಾರ ಮಾಡುವಂತಿಲ್ಲ ಎನ್ನುವ ಒಪ್ಪಂದ ಹೆಚ್.ಡಿ ಕುಮಾರಸ್ವಾಮಿ ಹಾಗೂ ರೇವಣ್ಣ ನಡುವೆ ನಡೆದುಕೊಂಡು ಬಂದಿದೆ. ಇದೇ ಕಾರಣಕ್ಕೆ ಜೆಡಿಎಸ್ ಮೊದಲ ಪಟ್ಟಿಯಲ್ಲಿ ಹಾಸನದ ಒಂದೇ ಒಂದು ಕ್ಷೇತ್ರಕ್ಕೂ ಟಿಕೆಟ್ ಘೋಷಣೆ ಮಾಡಿಲ್ಲ.
ಹಾಸನ ಅಖಾಡಕ್ಕೆ ಮಾಜಿ ಪ್ರಧಾನಿ ಎಂಟ್ರಿ, ಬಿಕ್ಕಟ್ಟು ಶಮನ..
ಹಾಸನ ಬಿಕ್ಕಟ್ಟಿನ ಬಗ್ಗೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಎಂಟ್ರಿ ಕೊಡುತ್ತಿದ್ದು, ಸೋಮವಾರದ ಒಳಗೆ ಸಮಸ್ಯೆ ಬಗೆಹರಿಯುವ ಬಗ್ಗೆ ಮೂಲಗಳು ಮಾಹಿತಿ ನೀಡಿವೆ. ಹಾಸನದಿಂದ ಸ್ಪರ್ಧೆ ಬೇಡ ಎನ್ನಲು ಕಾರಣ ಏನು ಎಂದು ಕುಮಾರಸ್ವಾಮಿಯಿಂದ ಸ್ಪಷ್ಟನೆ ಪಡೆದು ಆ ಬಳಿಕ ಹಾಸನದಲ್ಲಿ ಭವಾನಿ ಸ್ಪರ್ಧೆ ಯಾಕೆ ಅನ್ನೋದನ್ನು ರೇವಣ್ಣ ಅವರಿಂದ ಮಾಹಿತಿ ಪಡೆದು ಗೌಡರು ಅಂತಿಮ ತೀರ್ಮಾನ ಮಾಡಲಿದ್ದಾರೆ. ಭವಾನಿ ರೇವಣ್ಣ ದೇವೇಗೌರ ಮೆಚ್ಚಿನ ಸೊಸೆಯಾಗಿದ್ದು ಗೌಡರು ಹೇಳಿದ ಮಾತಿಗೆ ಭವಾನಿ ರೇವಣ್ಣ ಪ್ರತಿ ಮಾತು ಹೇಳುವುದಿಲ್ಲ ಎನ್ನಲಾಗುತ್ತದೆ. ಈ ಬಾರಿ ಕೂಡ ಶಾಸಕಿ ಆಗುವ ಅವಕಾಶ ಮಿಸ್ ಆಗುವ ಸಾಧ್ಯತೆ ಇದೆ.