ಕೇರಳ ವಿಧಾನಸಭೆಗೆ ಆಯ್ಕೆಯಾದ ನೂತನ ಶಾಸಕರ ಪ್ರಮಾಣ ವಚನ ಸಮಾರಂಭ ಮೇ 24 ರಂದು ನಡೆಯಿತು. ಈ ವೇಳೆ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕೆ.ಎಂ ಅಶ್ರಫ್ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಭಾಷಾಭಿಮಾನ ಮೆರೆದಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಇದು ಭೌಗೋಳಿಕವಾಗಿ ಕೇರಳಕ್ಕೆ ಸೇರಿದ್ದರು ಕೂಡ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡಿಗರು ನೆಲೆನಿಂತಿದ್ದಾರೆ.
ಈ ಕಾರಣಕ್ಕಾಗಿ ಕೇರಳ ಸರ್ಕಾರ ಮಂಜೇಶ್ವರ ತಾಲ್ಲೂಕನ್ನು ಕನ್ನಡ ಭಾಷೆಯ ಅಲ್ಪಸಂಖ್ಯಾತ ಪ್ರದೇಶ ಎಂದು ಘೋಷಿಸಿದೆ. ಇಲ್ಲಿಂದ ಕೇರಳ ವಿಧಾನಸಭೆಗೆ ಆಯ್ಕೆಯಾದ ಶಾಸಕರು ಈ ಹಿಂದೆಯೂ ಕನ್ನಡದಲ್ಲಿಯೆ ಪ್ರಮಾಣ ವಚನ ಸ್ವೀಕರಿಸಿದ್ದರು.
ಕೆಲವು ತಿಂಗಳ ಹಿಂದೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಅಶ್ರಫ್ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.