ಕೋವಿಡ್ 19 ತಡೆಗಟ್ಟುವಲ್ಲಿ ಗ್ರಾಮ ಪಂಚಾಯತಿಗಳ ಸ್ಪಂದನೆ

ಕೊವಿಡ್‌ 19 ಕಾಯಿಲೆಯು ಸಾಂಕ್ರಮಿಕ ರೋಗವಾಗಿದ್ದು, ವಿಶ್ವದಾಧ್ಯಂತ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ತಿಳಿದ ವಿಷಯವಾಗಿದೆ. ಈ ಕಾಯಿಲೆಯನ್ನು ನಿಯಂತ್ರಿಸಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಸರ್ಕಾರವು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‌ ವೈರಸ್‌ ಸೋಂಕು ನಗರಗಳ ಗಡಿಗಳನ್ನು ದಾಟಿ ಗ್ರಾಮೀಣ ಪ್ರದೇಶಗಳನ್ನು ಪ್ರವೇಶಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಪಿಡುಗಿನ ಎರಡನೇ ಅಲೆ ನಮ್ಮ ಗ್ರಾಮಗಳ ಸುತ್ತ ಈಗಾಗಲೇ ಹರಡಿ ಉಲ್ಪಣಗೊಳ್ಳುತ್ತಿದೆ. ಕೋವಿಡ್‌ 19 ಸಾಂಕ್ರಮಿಕವು ಇಡೀ ಜಗತ್ತನ್ನು ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ಎರಡನೇ ಅಲೆಯು ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದೆ. ಗ್ರಾಮೀಣರ ಆರೋಗ್ಯದ ಮೇಲೆ ಇದು ಗಂಬೀರ ಪರಿಣಾಮ ಬೀರುತ್ತಿದೆ.

ರಾಜ್ಯ ಸರ್ಕಾರವು ಕೋವಿಡ್‌ 19 ವೈರಾಣು ಸೋಂಕಿನ ಪ್ರಸರಣದ ಸರಪಳಿಯನ್ನು ತುಂಡರಿಸಲು ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುತ್ತಿದ್ದರೂ ಸಹ ರಾಜ್ಯದ ಹಲವು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ 19 ವೈರಾಣು ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆಯು ಉಲ್ಪಣಗೊಳ್ಳುತ್ತಿರುವುದು ಕಂಡು ಬರುತ್ತಿದೆ.

ಹಳ್ಳಿಗಳಲ್ಲಿ ಕೋವಿಡ್‌ ಉಲ್ಪಣಗೊಳ್ಳಲು ಕಾರಣಗಳು: ಗ್ರಾಮೀಣ ಪ್ರದೇಶ ವಾಸಿಗಳು ಕೋವಿಡ್‌ ಪರೀಕ್ಷೆಗೆ ಒಳಗಾಗುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡದಿರುವುದು, ಕೋವಿಡ್‌ ಪರೀಕ್ಷಾ ಕೇಂದ್ರಗಳು ಸನಿಹದಲ್ಲಿ ಲಭ್ಯವಿಲ್ಲದಿರುವುದು, ಪರೀಕ್ಷೆಗಳ ಬಗ್ಗೆ ಅರಿವಿನ ಕೊರತೆ, ಸೋಂಕಿತರು ಗೃಹ ಆರೈಕೆ ವ್ಯವಸ್ಥೆ ಮಾಡಲು ಅನುಕೂಲ ಇಲ್ಲದಿರುವುದು, ಪಾಸಿಟಿವ್‌ ಬಂದಂತಹ ರೋಗಿಯೊಂದಿಗೆ  ಸಂಪರ್ಕ ಹೊಂದಿದವರನ್ನೂ ಪರೀಕ್ಷೆಗೆ ಒಳಪಡದಿರುವುದು.

ಲಾಕ್‌ ಡೌನ್‌ ಕಾರಣದಿಂದ ನಗರ/ಪಟ್ಟಣ ಪ್ರದೇಶಗಳಿಂದ ಹಳ್ಳಿಗಳ ಕಡೆ ಸೋಂಕಿತ ವ್ಯಕ್ತಿಗಳ ಹಿಮ್ಮುಖ ವಲಸೆಯಿಂದ ಗ್ರಾಮದ ಇತರರಿಗೂ ವೈರಸ್ ಮತ್ತಷ್ಟು ಹರಡಲು ಕಾರಣವಾಗಿರುವುದು. ಸಣ್ಣ ಪುಟ್ಟ ಜ್ವರ, ತಲೆ ನೋವು, ಗಂಟಲು ನೋವು, ಶೀತ, ನೆಗಡಿ ಎಂದು ಅರೆ ವೈದ್ಯರಲ್ಲಿ ಅಥವಾ ಖಾಸಗಿ ಕ್ಲಿನಿಕ್‌ ಗಳಲ್ಲಿ ಔಷಧಿ ತೆಗೆದುಕೊಂಡು ಸುಮ್ಮನಾಗುವುದು, ಮಡಿ ಅಥವಾ ಸ್ವಚ್ಛತೆಯ ಪದ್ಧತಿ ಕಡಿಮೆ ಯಾಗಿರುವುದು, ಸೋಪು, ಆಲ್ಕೋಹಾಲ್‌ ಮಿಶ್ರಿತ ದ್ರಾವಣದಿಂದ ಪದೇ ಪದೇ ಕೈ ತೊಳೆಯದಿರುವುದು, ಮಾಸ್ಕ್‌ನ್ನು ಧರಿಸದಿರುವುದು, ಧರಿಸಿದರೂ ಸ್ವಚ್ಛಗೊಳಿಸದೆ ಬಹುದಿನಗಳವರೆಗೆ  ಒಂದೇ ಮಾಸ್ಕ್‌ ಧರಿಸುವುದು. ಗುಂಪು ಸೇರುವ ಚಟುವಟಿಕೆಗಳಾದ ಮದುವೆ, ಜಾತ್ರೆ, ಮೆರವಣಿಗೆ, ಸಂತೆ ಹಾಗೂ ಧಾರ್ಮಿಕ ಆಚರಣೆ, ಸಾರ್ವಜನಿಕ ಸ್ಥಳಗಳಾದ ಪಡಿತರ ವಿತರಣಾ ಅಂಗಡಿ, ಚಿಲ್ಲರೆ ಅಂಗಡಿಗಳು,ಚಹಾ ಅಂಗಡಿಗಳು, ಹಾಲಿನ ಡೈರಿ, ದೇವಸ್ಥಾನಗಳು ಇಂತಹ ಸ್ಥಳಗಳಲ್ಲಿ ಜನಸಂದಣಿ ಇದ್ದು ದೈಹಿಕ ಅಂತರ ಕಾಪಾಡದಿರುವುದು.ಗ್ರಾಮಗಳಲ್ಲಿ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಟಾಂಟಾಂ, ಜೀಪ್, ಆಟೋ, ಖಾಸಗಿ ವಾಹನ, ಟೆಂಪೋ, ಗೂಡ್ಸ್‌ ವಾಹನಗಳಲ್ಲಿ ಅತಿ ಹೆಚ್ಚು ಜನ ಅಂತರವಿಲ್ಲದೆ ಪ್ರಯಾಣ, ದೇವಸ್ಥಾನ, ಅರಳಿಕಟ್ಟೆಗಳಲ್ಲಿ ಗುಂಪಾಗಿ ಕುಳಿತು ಹರಟೆ ಹೊಡೆಯುವುದು, ಮನೆಯ ಕೆಲಸಗಳನ್ನು ಮಾಡುವ ಮಹಿಳೆಯರಿಗೆ ಬಂದಲ್ಲಿ ಮಕ್ಕಳಿಗೆ ಕುಟುಂಬಕ್ಕೆ ಮಾಡುವವರು ಯಾರು ಇಲ್ಲ ಎಂದು ಕೆಲಸ ಮಾಡುವುದು, ಒಬ್ಬರೆ ಮನೆಯಲ್ಲಿ ಯಾರಿಗಾದರೂ ಹುಷಾರ್‌ ಇಲ್ಲಾ ಅಂದರೆ ಖಾಯಿಲೆ ಬಿದ್ದವರನ್ನು ಮಾತನಾಡಿಸಲು ಬರುವುದು, ನಮ್ಮದೇ ಬಂಧುಗಳಿಂದ ಬರುವುದಿಲ್ಲ ಎಂಬ ಭಾವನೆ, ಖಾಯಿಲೆ ಪೀಡಿತನಿಗೆ ಅಶ್ಪೃಶ್ಯತಾ ಭಾವನೆ ಬರದಿರಲಿ ಅನ್ನುವ ಕಾರಣಕ್ಕೆ ತಮ್ಮ ಬಳಿ ಸೇರಿಸಿಕೊಳ್ಳುವುದು ಹಾಗೂ ಕೃಷಿ ಮತ್ತು ಕೃಷಿಯೇತರ ಹೈನುಗಾರಿಕೆ (ಆಕಳು ಕುರಿ,ಮೇಕೆ ಮೇಯಿಸುವುದು, ಹಾಲು ಕರೆದು ಡೈರಿಗೆ ಹಾಕುವುದು)  ಸಂದರ್ಭಗಳಲ್ಲಿ ನೋಡಿಕೊಳ್ಳಲು ಯಾರು ಇಲ್ಲ ಎಂದು ಆ ಚಟುವಟಿಕೆಗಳಲ್ಲಿ ಎಲ್ಲರೊಂದಿಗೆ ತೊಡಗಿಸಿಕೊಳ್ಳುವುದು ಇತ್ಯಾದಿ ಕಾರಣಗಳಿಂದ ಹಳ್ಳಿಗಳಲ್ಲಿ ಕೋವಿಡ್‌ ಸೋಂಕು ಹೆಚ್ಚಾಗುತ್ತಿದೆ. 

ಡಾ.ರಾಜೇಂದ್ರಪ್ರಸಾದ್.ಪಿ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕೋವೀಡ್‌ 19 ವೈರಾಣು ಸೋಂಕನ್ನು ತಡೆಗಟ್ಟಲು ಅನುಕೂಲವಾಗುವಂತೆ ಗ್ರಾಮೀಣ ಪ್ರದೇಶವಾಸಿಗಳ ಹಿತದೃಷ್ಟಿಯಿಂದ ಗ್ರಾಮ ಪಂಚಾಯತಿಗಳು  ಗ್ರಾಮ ಪಂಚಾಯತಿ ಮಟ್ಟದ ಕಾರ್ಯಪಡೆ ಹಾಗೂ ವ್ಯಾಪ್ತಿಯ ಎಲ್ಲಾ ಗ್ರಾಮ ಮಟ್ಟದಲ್ಲಿ ಸ್ಥಳಿಯ ಗ್ರಾಮ  ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಕರ ವಸೂಲಿಗಾರರು, ಗ್ರಾಮ ಲೆಕ್ಕಿಗರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಯನ್ನೊಳಗೊಂಡ ಟಾಸ್ಕ್‌ ಪೋರ್ಸ್‌ ತಂಡವನ್ನು ರಚಿಸಿ,: ಕೋವಿಡ್‌ 19 ಕುರಿತು ಕುರಿತು ಪಂಚಾಯತಿ ವ್ಯಾಪ್ತಿಯ ಗ್ರಾಮದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು. ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಒಂದೇ ಕಡೆ ವೈದ್ಯರು ಮತ್ತು ಆರೋಗ್ಯ ವ್ಯವಸ್ಥೆಗಳು ಲಭ್ಯವಾಗುವಂತೆ ಮಾಡುವುದು,

ಕೊರೊನಾ ನಿಯಂತ್ರಣ ಕ್ರಮಗಳು: ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಂತರವನ್ನು (ಪಡಿತರ ವಿತರಣಾ ಅಂಗಡಿ, ಚಿಲ್ಲರೆ ಅಂಗಡಿಗಳು, ಹಾಲಿನ ಡೈರಿ, ದೇವಸ್ಥಾನಗಳು) ಕಾಪಾಡುವುದು, ಗುಂಪು ಸೇರುವುದನ್ನು (ಮದುವೆ, ಜಾತ್ರೆ, ಮೆರವಣಿಗೆ, ಸಂತೆ ಹಾಗೂ ಧಾರ್ಮಿಕ ಮತ್ತು ಇತರೆ) ನಿಯಂತ್ರಿಸುವುದು. ಸಾರ್ವಜನಿಕ ರಸ್ತೆ ಹಾಗೂ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸುವಂತೆ, ಹೇಗೆ ಧರಿಸಬೇಕು ಎಂಬುದರ ಕುರಿತು ಜನರಲ್ಲಿ ಅರಿವು ಮೂಡಿಸುವುದು.

ಕೋವಿಡ್‌ ತಪಾಷಣೆ ಮತ್ತು ಚಿಕಿತ್ಸೆ: ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಕೋವಿಡ್‌ 19 ತಪಾಷಣೆಗೆ ಒಳಪಡುವಂತೆ ಮಾಹಿತಿ ನೀಡುವುದು, 60 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹ, ಉಸಿರಾಟ ಸಮಸ್ಯೆ, ರಕ್ತದ ಒತ್ತಡ, ಅಸ್ತಮ, ಮೂತ್ರಪಿಂಡ ಕಾಯಿಲೆ ಹಾಗೂ ಇತರೆ ಗಂಭೀರ ಕಾಯಿಲೆ ಇರುವವರನ್ನು ಆಶಾ ಕಾರ್ಯಕರ್ತೆಯರಿಂದ ಪಟ್ಟಿ ಮಾಡಿಸಿ, ನಿಗಾ ಇಡುವುದು,   ಗ್ರಾಮಗಳ ಆಯಾ   ಸ್ಥಳಗಳಲ್ಲಿನ ಮನೆಗಳಿಗೆ ಭೇಟಿ ನೀಡಿ ಕೋವಿಡ್‌ 19 ಗೆ ಸಂಬಂಧಪಟ್ಟ ಸೋಂಕಿನ ಲಕ್ಷಣಗಳಿವೆಯೇ ಎಂಬುದನ್ನು ತಪಾಸಣೆ ಮಾಡುವುದು. ಸೋಂಕಿನ ಲಕ್ಷಣವಿದ್ದಲ್ಲಿ RAT ಪರೀಕ್ಷೆಯನ್ನು ಮಾಡಬೇಕು, RAT ಪರೀಕ್ಷೆಯು ಪಾಸಿಟಿವ್‌ ಇದ್ದಲ್ಲಿ ಟ್ರಯಾಜಿಂಗ್‌ ಮಾಡಿ ರೋಗಿಯ ಗುಣಲಕ್ಷಣದ ಮೇಲೆ, ರೋಗಿಯು ಆಸ್ಪತ್ರೆಗೆ ದಾಖಲಾಗಬೇಕೆ? ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯಬೇಕೆ ಎಂಬುವುದರ ಬಗ್ಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪಾಸಿಟಿವ್‌ ಬಂದಂತಹ ರೋಗಿಯೊಂದಿಗೆ ಸಂಪಕ ಹೊಂದಿದವರನ್ನೂ ಸಹ ಪರೀಕ್ಷೆಗೆ ಒಳಪಡಿಸುವುದು, ಗ್ರಾಮೀಣ ಪ್ರದೇಶದಲ್ಲಿ ಗೃಹ ಆರೈಕೆ ವ್ಯವಸ್ಥೆ ಮಾಡಲು ಅನುಕೂಲ ಹೊಂದಿರುವಂತಹವರಿಗೆ ಮಾತ್ರ ಹೋಂ ಐಸೋಲೇಷನ್‌ಗೆ ಅವಕಾಶ ಕಲ್ಪಿಸುವುದು. ಹೋಂ ಐಸೋಲೇಷನ್‌ ನಲ್ಲಿರಲು ವ್ಯವಸ್ಥೆ ಇಲ್ಲದಂತಹ ಕುಟುಂಬಗಳ ಸೋಂಕಿತರನ್ನು ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದು. ಹೋಂ ಐಸೋಲೇಷನ್‌ ರೋಗಿಗಳನ್ನು ಕಾಲಕಾಲಕ್ಕೆ ತಪಾಷಣೆ ಮಾಡಿಸುವುದು. ಸ್ಥಳದಲ್ಲಿಯೇ ಮೆಡಿಕಲ್‌ ಕಿಟ್‌ ಗಳನ್ನು ನೀಡಿ ಚಿಕಿತ್ಸೆ ಪ್ರಾರಂಭಿಸುವುದು. ಗ್ರಾಮಗಳಲ್ಲಿ ಕೋವಿಡ್ ಬರದಂತೆ ಹಾಗೂ ಬಂದಿರುವ ಕೋವಿಡ್ ಪ್ರಕರಣಗಳನ್ನು ವ್ಯವಸ್ಥಿತವಾಗಿ ನಿಭಾಯಿಸಿ ಕೋವಿಡ್ ಶೂನ್ಯ ಮಟ್ಟಕ್ಕೆ ತರಲು ಗ್ರಾಮ ಮಟ್ಟದ ಲಾಕ್‍ಡೌನ್, ಸಿಲ್‍ಡೌನ್, ಕಂಟೋನ್ಮೇಂಟ್ ಝೋನ್ ಮಾಡಲು ಕ್ರಮ ವಹಿಸುವುದು, ಇಂತಹ ಸಂದರ್ಭಗಳಲ್ಲಿ ಕುಟುಂಬದವರಿಗೆಲ್ಲರಿಗೂ ಕೋವಿಡ್‌ ಬಂದಿದ್ದಲ್ಲಿ ಕೃಷಿ ಮತ್ತು ಕೃಷಿಯೇತರ ಹೈನುಗಾರಿಕೆ (ಆಕಳು ಕುರಿ,ಮೇಕೆ ಮೇಯಿಸುವುದು, ಹಾಲು ಕರೆದು ಡೈರಿಗೆ ಹಾಕುವುದು)  ಸಂದರ್ಭಗಳಲ್ಲಿ ನೋಡಿಕೊಳ್ಳಲು ಸಹಾಯಕವಾಗಿ ಗ್ರಾಮಸ್ಥರು ನಿಲ್ಲುವಂತೆ ನೋಡಿಕೊಳ್ಳುವುದು.

ನೈರ್ಮಲ್ಯ ಮತ್ತು ಸ್ವಚ್ಚತೆ ಕಾಪಾಡುವುದು: ಇದರೊಟ್ಟಿಗೆ ಚರಂಡಿಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಸದಾ ಸ್ವಚ್ಚವಾಗಿಡುವಂತೆ, ನೋಡಿಕೊಳ್ಳುವುದು, ಪ್ರತಿ ವಾರಕ್ಕೊಮ್ಮೆ ಗ್ರಾಮದಲ್ಲಿ ಕೋವಿಡ್ ತಗ್ಗುವವರೆಗೆ ಸ್ಯಾನಿಟೇಷನ್ ಆಗುವಂತೆ ನೋಡಿಕೊಳ್ಳುವುದು. ಕನಿಷ್ಠ 15 ದಿನಕ್ಕೊಮ್ಮೆ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಕ್ಲೋರಿನೇಷನ್ ಆಗುವಂತೆ ನೋಡಿಕೊಳ್ಳುವುದು, ಗ್ರಾಮ ಪಂಚಾಯತಿ ಕಛೇರಿ, ಬಸ್‌ ಸ್ಟ್ಯಾಂಡ್‌ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಾಬೂನಿನಿಂದ ಕೈ ತೊಳೆದುಕೊಳ್ಳಲು ಸಾಬೂನು ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು. ಸ್ಥಳೀಯ ಎಸ್‌ಎಚ್‌ಜಿಗಳ ಮೂಲಕ ಆರೋಗ್ಯ ಇಲಾಖೆಯಿಂದ ತಾಂತ್ರಿಕ ಸಲಹೆ ಪಡೆದು ಬಟ್ಟೆಗಳಿಂದ ಮಾಸ್ಕ್‌ ಗಳನ್ನು ಹಾಗೂ ಸಾಬೂನು ಫಿನಾಯಲ್‌ ಇತರೆ ಶುಚಿತ್ವ ವಸ್ತುಗಳನ್ನು ಉತ್ಪಾದಿಸಲು ಕ್ರಮ ಕೈಗೊಳ್ಳುವುದು. ಇದಕ್ಕೆ ಎಸ್‌ ಹೆಚ್‌ ಜಿಗಳಿಗೆ ತರಬೇತಿ ನೀಡಬೇಕಾಗಿದೆ. ಸೈನಿಕರಿಗೆ ಮಾಸ್ಕ್‌ ಹಾಗೂ ಗ್ಲಾಸನ್ನು ನೀಡುವುದು, ಸ್ವಚ್ಚತಾಗಾರರು ಮತ್ತು ಘನ ತ್ಯಾಜ್ಯ ನಿರ್ವಹಣೆ ಮಾಡುವ ಸಿಬ್ಬಂದಿಗೆ ಮಾಸ್ಕ್‌, ಗ್ಲೌಸ್‌ ಮತ್ತು ಬೂಟ್ಸ್‌ ಗಳನ್ನು ಒದಗಿಸುವುದು. ಸ್ವಚ್ಚತಗಾರರಿಗೆ ಕೊರೊನಾ ವೈರಸ್‌ ಬಗ್ಗೆ ಮುಂಜಾಗ್ರತೆಯಾಗಿ ತರಬೇತಿ ನೀಡುವುದು,

ಹಸಿವು ಮುಕ್ತ ಹಾಗೂ ಪೌಷ್ಠಿಕ ಆಹಾರ ವಿತರಣೆ : ಲಾಕ್‌ ಡೌನ್‌ ಹಿನ್ನಲೆಯಲ್ಲಿ ಪಡಿತರ ವಿತರಣೆ ವ್ಯವಸ್ಥೆಯ ಮೂಲಕ ಅರ್ಹವಿರುವ ಎಲ್ಲಾ ಫಲಾನುಭವಿಗಳಿಗೆ ಆಹಾರದ ವಸ್ತುಗಳ ಪೂರೈಕೆಯಾಗುತ್ತಿದೆಯೇ ನೋಡಿಕೊಳ್ಳುವುದು, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಸೂಕ್ತವಾಗಿ ಆಹಾರ ವಿತರಣೆಗಳು ನಡೆಯುತ್ತಿವೆಯೆ?  ಹಾಗೂ  ಒಂದು ವೇಳೆ ಕಡುಬಡವರಿದ್ದು ಪಡಿತರ ಕಾರ್ಡ್ ಇಲ್ಲದಿದ್ದಲ್ಲಿ ಅಂತಹವರಿಗೆ ದಿನಸಿ ಕಿಟ್ ವಿತರಿಸುವುದು. ಕಟುಬಡವರಿಗೆ ಹೆಚ್ಚಿನ ಆಹಾರ ಬೇಕಿದ್ದಲ್ಲಿ ದಾನಿಗಳ/ಸರ್ಕಾರೇತರ ಸಂಸ್ಥೆಗಳ  ಮೂಲಕ ಸಂಪರ್ಕಿಸಿ ಆಹಾರ ಕಿಟ್ ವಿತರಿಸುವುದು,

ಅಂತ್ಯಕ್ರಿಯೆಗೆ ಸಹಾಯ: ಸೋಂಕಿತರ ಸಾವು ಸಂಭವಿಸಿದಲ್ಲಿ ಅಂತ್ಯಕ್ರಿಯೆ ನಡೆಸಲು ಸಹಕಾರ ನೀಡುವುದು, ಕಡು ಬಡವರಾಗಿದ್ದಲ್ಲಿ ಅಂತ್ಯಕ್ರಿಯೆ ನಿಧಿಯನ್ನು ಕೊಡುವುದು , ಆಸ್ಪತ್ರೆಯಿಂದ ಮನೆಗೆ ಕರೆತರಲು ಶವ ಸಾಗಿಸುವ ವಾಹನದ ವ್ಯವಸ್ಥೆ ಕಲ್ಪಿಸುವುದು,

ಈ ಎಲ್ಲಾ ಚಟುವಟಿಕೆಗಳನ್ನು ಗ್ರಾಮೀಣ ಭಾಗದಲ್ಲಿ, ವೈದ್ಯರು, ಎಎನ್‌ಎಂ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು, ಶಿಕ್ಷಕರು, ಗ್ರಾಮ  ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಜೊತೆಗೆ ಗ್ರಾಮಗಳ ಮುಖಂಡರು, ಸ್ಥಳೀಯ ಸ್ವಯಂಸೇವಕರು, ಲಾಭೋದ್ದೇಶವಿಲ್ಲದವರು, ಸ್ವಸಹಾಯ ಸಂಘಗಳು ಮತ್ತು ಇತರ ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ಗ್ರಾಮ ಪಂಚಾಯಿತಿಗಳು ಜವಬ್ದಾರಿಗಳನ್ನು ನೀಡಿ ಸಹಾಯಕ್ಕೆ ಬಳಸಿಕೊಳ್ಳಬೇಕಾಗಿದೆ. ಗ್ರಾಮ ಮಟ್ಟದಲ್ಲಿ ಅಗತ್ಯವಿರುವ ಔಷಧಿ, ಆರೋಗ್ಯ ಸಿಬ್ಬಂಧಿ, ಪೊಲೀಸ್ ನೆರವು, ತಾಲ್ಲೂಕು/ಜಿಲ್ಲಾ ಪಂಚಾಯತ್‌, ತಾಲ್ಲೂಕು ಜಿಲ್ಲಾ ಆಡಳಿತ ಗಳ ಸಹಕಾರ ಪಡೆದು ಕೋವಿಡ್‌ ಮುಕ್ತ ಗ್ರಾಮ ಪಂಚಾಯತಿಯನ್ನಾಗಿ ಮಾಡುವುದು. ಈ ಉದ್ದೇಶಕ್ಕಾಗಿ ಸರ್ಕಾರದ ವತಿಯಿಂದ ಎಸ್‌ ಡಿ ಆರ್‌ ಎಫ್‌ ರಡಿ ಪ್ರತಿ ಗ್ರಾಮ ಪಂಚಾಯತ್‌ಗೆ ರೂ.50,000/- ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದಲ್ಲದೆ ಗ್ರಾಮ ಪಂಚಾಯತಿಯು ತನ್ನ ಸ್ವಂತ ಸಂಪನ್ಮೂಲ, 14 ನೇ ಹಣಕಾಸು ಆಯೋಗದ ಉಳಿದಿರುವ ಅನುದಾನ, 15ನೇ ಹಣಕಾಸು ಆಯೋಗದ ಅನಿರ್ಭಂದಿತ ಅನುದಾನ ಹಾಗೂ ಆರೋಗ್ಯ ಸೆಸ್‌ ನಲ್ಲಿ ಸಂಗ್ರಹಿಸುವ ಹಣವನ್ನು ಬಳಸಿಕೊಳ್ಳಬೇಕಾಗಿದೆ. ಸಿಬ್ಬಂದಿಗಳು ತಾವು ಕೂಡ ಸುರಕ್ಷತಾ ಕ್ರಮಗಳನ್ನು ಪಾಲಿಸಿಕೊಂಡು ಕಾರ್ಯ ನಿರ್ವಹಿಸಬೇಕಾಗಿದೆ.

ಈ ಸಂಸ್ಥೆಗಳು ಜನರಿಗೆ ಹತ್ತಿರದಲ್ಲಿವೆ ಮತ್ತು ಸಮುದಾಯಗಳಿಂದ ವಿಶ್ವಾಸಾರ್ಹವಾಗಿವೆ. ಬಿಕ್ಕಟ್ಟಿನ ವಿರುದ್ಧದ ಪ್ರತಿಕ್ರಿಯೆಯು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ಮತ್ತು ಸ್ಥಳೀಯ ಮಟ್ಟದಲ್ಲಿ ಭಾಗವಹಿಸುವ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಒಳಗೊಂಡಿರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ಸಹ ಅವಶ್ಯಕ. .“ಸಾಮಾಜಿಕ ವಿಪತ್ತನ್ನು ನಿಭಾಯಿಸುವುದು ಯುದ್ಧದಲ್ಲಿ ಹೋರಾಡಿದಂತಲ್ಲ, ಸಾಮಾಜಿಕ ವಿಪತ್ತನ್ನು ಎದುರಿಸಲು ಬೇಕಾಗಿರುವುದು ಭಾಗವಹಿಸುವ ಆಡಳಿತ ಮತ್ತು ಸಾರ್ವಜನಿಕ ಚರ್ಚೆಯ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿ ಅವರಿಗೆ ಹೊಣೆಗಾರಿಕೆ ನೀಡಿ ತನ್ನ ಜೊತೆ ಜನರ ಸಂಕಷ್ಟಕ್ಕೆ ಸ್ಪಂದಿಸುವ, ನೆರವನ್ನು ಒದಗಿಸುವ ಜನರನ್ನು ಹೊಂದಿಸಿಕೊಂಡು, ಅವೆರೆಲ್ಲರಿಗೂ ಸುಲಲಿತವಾಗಿ ಕಾರ್ಯ ನಿರ್ವಹಿಸುವ ವಾತಾವರಣವನ್ನು ನಿರ್ಮಿಸಿ ಕೋವಿಡ್‌ ಮುಕ್ತ ಗ್ರಾಮ ಪಂಚಾಯತಿ ಮಾಡಬೇಕಿದೆ.

ಲೇಖಕರು:

ಡಾ.ರಾಜೇಂದ್ರಪ್ರಸಾದ್.ಪಿ MSW, PHD

ಮುಖ್ಯಸ್ಥರು-ಸಮುದಾಯ ಸಮಾಲೋಚನಾ ತಂಡ, ಗ್ರಾಸ್‌ ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್-ಮೈಸೂರು

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...