‘ಒಂದು ದೇಶ, ಒಂದೇ ದರ’ ಅನ್ವಯಿಸಿ ಕೋವಿಡ್ 19 ಲಸಿಕೆಗಳ ಬೆಲೆ ನಿಗದಿ ಮಾಡಿ ಎಂಬ ಅನೇಕ ರಾಜ್ಯ ಸರಕಾರಗಳ, ವಿಪಕ್ಷಗಳ, ಸಾರ್ವಜನಿಕರ ಜನಾಂದೋಲನದ ಒತ್ತಡಕ್ಕೆ ಕೇಂದ್ರ ಸರಕಾರ ಕೊನೆಗೂ ಮಣಿದಿದೆ. ಜತೆಗೆ ಕೋವಿಡ್19 ನಿರೋಧಕ ಸ್ವದೇಶಿ ಲಸಿಕೆಗಳಾದ ಕೋ ವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಲಸಿಕೆಗಳ ಬೆಲೆ ಇಳಿಸಲು ಅವುಗಳ ತಯಾರಿಕಾ ಕಂಪನಿಗಳಿಗೆ ಆ ಒತ್ತಡವನ್ನು ವರ್ಗಾಯಿಸಿದೆ. ಪರಿಣಾಮವಾಗಿ ಅವುಗಳ ಬೆಲೆಗಳಲ್ಲಿ ಇಳಿಕೆಯೂ ಆಗಿದೆ.
ಇನ್ನೊಂದೆಡೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಏಪ್ರಿಲ್ 28ರಂದು ನೀಡಿರುವ ಹೇಳಿಕೆಯಲ್ಲಿ, ಭಾರತದಲ್ಲಿ ಈಗಾಗಲೇ 15 ಕೋಟಿ ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದೆ.
ಪುಣೆಯಲ್ಲಿರುವ ಸೀರಂ ಇನಿಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ಶೇ.25ರಷ್ಟು ತಗ್ಗಿಸಿದ್ದರಿಂದ 400 ರೂ. ಇದ್ದ ಬೆಲೆ 300 ರೂ. ಗೆ ಇಳಿಯಿತು. ಇತ್ತ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಾನು ಸಿದ್ಧಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಬೆಲೆಯನ್ನು ಪ್ರತಿ ಡೋಸ್ ಗೆ 600 ರೂ.ನಿಂದ 400 ರೂ.ಗೆ ಇಳಿಸಿತು. ಆರಂಭದಲ್ಲಿ ಕೊರೊನಾ ವಾರಿಯರ್ಸ್ ಗಳಿಗಾಗಿ ಕೇಂದ್ರ ಸರಕಾರಕ್ಕೆ ಪ್ರಾಯೋಗಿಕವಾಗಿ ತಲಾ 150 ರೂ.ಗೆ ಲಸಿಕೆಗಳನ್ನು ಮಾರಾಟ ಮಾಡಿದ್ದ ಈ ಎರಡೂ ಸಂಸ್ಥೆಗಳು, ಈಗ ಕಚ್ಚಾ ವಸ್ತು, ತಯಾರಿಕಾ ವೆಚ್ಚದ ಏರಿಕೆಯಿಂದಾಗಿ ಕೇಂದ್ರ, ರಾಜ್ಯ ಸರಕಾರಗಳಿಗೆ ಆ ಬೆಲೆಯಲ್ಲಿ ನೀಡುತ್ತಿಲ್ಲ. ಹೀಗಾಗಿ ಬೆಲೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಂಸ್ಥೆಗಳು ತಾರತಮ್ಯ ಮಾಡುತ್ತಿರುವ ಆರೋಪಗಳು ಕೇಳಿಬಂದಿದ್ದವು.
ಈಗ ಚರ್ಚಿತವಾಗುತ್ತಿರುವ ವಿಷಯ ಅದಲ್ಲ, ಲಭ್ಯವಿರುವವುಗಳಲ್ಲಿ ಯಾವ ಲಸಿಕೆ ಉತ್ತಮ? ಯಾವ ಲಸಿಕೆ ಹೆಚ್ಚು ಪರಿಣಾಮಕಾರಿ ಎನ್ನುವುದು!
ಹಿಂದಿನಂತೆ ಅನುಮಾನ ಉಳಿದಿಲ್ಲ:
ವಾಸ್ತವದಲ್ಲಿ, ಕಳೆದ ವರ್ಷ ಕೋವಿಡ್ 19 ನ ಮೊದಲ ಅಲೆ ಅಪ್ಪಳಿಸಿದಾಗ ಸ್ವದೇಶದಲ್ಲಿ ತರಾತುರಿಯಿಂದ ಸಿದ್ಧಪಡಿಸಲಾದ ಈ ಎರಡೂ ಸ್ವದೇಶಿ ಲಸಿಕೆಗಳ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಎಲ್ಲ ಭಾರತೀಯರಿಗೆ ಲಸಿಕಾ ನೀಡುವ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನ ಪ್ರಕ್ರಿಯೆ ಆರಂಭಿಸುವ ಮುನ್ನ ಜನವರಿ 15ರಂದು ಆರಂಭಗೊಂಡ ಮೊದಲ ಹಂತದಲ್ಲಿ ವೈದ್ಯರು, ನರ್ಸ್ ಗಳು, ವೈದ್ಯ ಸಿಬ್ಬಂದಿ, ಪೊಲೀಸರು, ಮಾಧ್ಯಮದವರು ಸೇರಿದಂತೆ ಲಕ್ಷಾಂತರ ಕೋವಿಡ್ ವಾರಿಯರ್ಸ್ ಗಳಿಗೆ ಲಸಿಕೆ ನೀಡಲು ಆರಂಭಿಸಲಾಗಿತ್ತು. ಆಗ ಲಸಿಕೆಗಳ ಬಗ್ಗೆ ಅನುಮಾನ, ಸಂಶಯದ ಧ್ವನಿಗಳೇ ಹೆಚ್ಚಾಗಿದ್ದವು.
ಜನವರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ, ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ಅವರು, “ಕೋ ವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಅತ್ಯಂತ ಸುರಕ್ಷಿತ, ಪರಿಣಾಮಕಾರಿಯಾಗಿದೆ. ಸಾವಿರಾರು ಜನರ ಮೇಲೆ ಪ್ರಯೋಗಿಸಿದ್ದು, ಅಡ್ಡ ಪರಿಣಾಮವೂ ಕಡಿಮೆ ಇದೆ. ಇದರ ಬಳಕೆಯಿಂದ ಗಂಭೀರ ಸಮಸ್ಯೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ಅನೇಕ ಖ್ಯಾತ ವೈದ್ಯರು ಲಸಿಕೆಗಳ ಪರವಾಗಿ ಬ್ಯಾಟ್ ಬೀಸಿದ್ದರು. ಸ್ವದೇಶಿ ಲಸಿಕೆಗಳನ್ನು ಒಪ್ಪಿಕೊಂಡು, ಬೆಂಬಲಿಸಿದ್ದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ನಿರ್ಧಾರ ಫಲಕೊಟ್ಟಿತು. ಇದರಿಂದಾಗಿ ಮೊದಲ ಹಾಗೂ ಎರಡನೇ ಹಂತದ ಲಸಿಕಾ ಪ್ರಕ್ರಿಯೆಗಳು ಯಶಸ್ವಿಯೂ ಆಗತೊಡಗಿತ್ತು.
ಆದರೆ ಮಾರ್ಚ್ ನಲ್ಲಿ ಎರಡನೇ ಹಂತದ ಲಸಿಕಾ ಅಭಿಯಾನದಲ್ಲಿ 60 ಮೇಲ್ಪಟ್ಟ ಹಾಗೂ ಬಳಿಕ 45 ಮೀರಿದವರಿಗೆ ಲಸಿಕೆಗಳನ್ನು ಹಾಕುವ ಪ್ರಕ್ರಿಯೆ ಆರಂಭವಾಯಿತು. ಅದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ಸಹಜವಾಗಿಯೇ ಉಳಿದವರಿಗೂ ನಂಬಿಕೆ ಬಂದಿತ್ತು. ಅವರ ಬೆನ್ನಲ್ಲೇ ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯ ಸರಕಾರಗಳ ಸಚಿವರು, ಸಂಸದರು ಕೂಡ ಅನುಮಾನವಿಲ್ಲದೆ ಲಸಿಕೆ ಹಾಕಿಸಿಕೊಂಡರು. ಈ ನಡುವೆ ಆಗೊಮ್ಮೆ ಈಗೊಮ್ಮೆ ಲಸಿಕೆಗಳ ಅಡ್ಡ ಪರಿಣಾಮಗಳು ಉಂಟಾದಾಗ ಮಾಧ್ಯಮಗಳು ಹಿಂಜರಿಯದೇ ವರದಿ ಮಾಡಿದ್ದವು. ಆದರೆ ಅವುಗಳ ಪ್ರಮಾಣ ಕಡಿಮೆ ಇದ್ದುದರಿಂದ ಸಹಜವಾಗಿಯೇ ಜನಸಾಮಾನ್ಯರಲ್ಲೂ ಲಸಿಕೆಗಳ ಮೇಲೆ ವಿಶ್ವಾಸ ಮೂಡಲಾರಂಭಿಸಿತ್ತು. ಪರಿಣಾಮವಾಗಿ, ಈಗ ಫೋಕಸ್ಬದಲಾಗಿದೆ. ಮಂದಿ ಗೂಗಲ್ ಮಾಡಿ ಯಾವ ಲಸಿಕೆ ಪರಿಣಾಮಕಾರಿ, ಯಾವುದು ಉತ್ತಮ ಎಂದು ಹುಡುಕಲಾರಂಭಿಸಿದ್ದಾರೆ.
ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ ಯಾವುದು ಶ್ರೇಷ್ಠ?:
ಭಾರತದ ಲಸಿಕಾ ಅಭಿಯಾನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ ಎರಡೂ ಸ್ವದೇಶಿ ನಿರ್ಮಿತ ಲಸಿಕೆಗಳು. ಇವೆರಡೂ ದೇಶದಲ್ಲೇ ಉತ್ಪಾದನೆಯಾಗುತ್ತಿದ್ದರೂ ಅವುಗಳ ನಡುವೆ ಒಂದಿಷ್ಟು ವ್ಯತ್ಯಾಸಗಳು ಹಾಗೂ ವ್ಯತ್ಯಯಗಳಿವೆ. ಭಾರತದಲ್ಲಿ ‘ಕೋವಿ ಶೀಲ್ಡ್’ ಎಂದು ಪರಿಚಿತವಾಗಿರುವ ‘ಆಕ್ಸ್ ಫರ್ಡ್-ಆಸ್ಟ್ರಾಜನೆಕಾ’ ಲಸಿಕೆ ಹೆಚ್ಚು ಜನಪ್ರಿಯ ಹಾಗೂ ಗರಿಷ್ಠ ದೇಶಗಳಲ್ಲಿ ಬಳಕೆಯಲ್ಲಿದೆ.
ಕೋ ವ್ಯಾಕ್ಸಿನ್ ಅನ್ನು ದೇಶದಲ್ಲೇ ಅಭಿವೃದ್ಧಿ ಪಡಿಸಿ, ಉತ್ಪಾಸುತ್ತಿರುವುದು ಹೈದರಾಬಾದ್ ನ ಭಾರತ್ ಬಯೋಟೆಕ್ ಸಂಸ್ಥೆ. ಜಗತ್ತಿನ ಅತಿ ದೊಡ್ಡ ಔಷಧ ಉತ್ಪಾದಕ ಸಂಸ್ಥೆಯಾದ ಪುಣೆಯ ಸೀರಂ ಇನಿಸ್ಟಿಟ್ಯೂಟ್ –ಆಕ್ಸ್ ಫರ್ಡ್ವಿಶ್ವವಿದ್ಯಾಲಯ-ಅಸ್ಟ್ರಾಜನೆಕಾ ಸಂಸ್ಥೆಯ ‘ಕೋವಿ ಶೀಲ್ಡ್ ‘ ಭಾರತದಲ್ಲೇ ಉತ್ಪಾದನೆಯಾಗುತ್ತಿರುವ ಲಸಿಕೆ.
ಅಂದಹಾಗೆ, ಎರಡೂ ಲಸಿಕೆಗಳನ್ನು ವೈರಸ್ ನ ಮಾರ್ಪಾಡು ಮಾಡಿದ/ ನಿಷ್ಕ್ರಿಯ ಆವೃತ್ತಿಗಳನ್ನು ಬಳಸಿ ಸಿದ್ಧಪಡಿಸಲಾಗಿದೆ. ಕೋವಿ ಶೀಲ್ಡ್ ನಲ್ಲಿ ಚಿಂಪಾಂಜಿಗಳಲ್ಲಿ ಕಂಡುಬರುವ ChAD0x1 ಎಂಬ ಅಡಿನೋ ವೈರಸ್ ಅನ್ನು ಉಪಯೋಗಿಸಿ ಲಸಿಕೆಯನ್ನು ತಯಾರಿಸಲಾಗುತ್ತಿದ್ದು, ಅದು ಜೀವಂತ ವೈರಸ್ ವಿರುದ್ಧ ಮನುಷ್ಯನ ರೋಗ ನಿರೋಧಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇನ್ನೊಂದೆಡೆ ಕೋವ್ಯಾಕ್ಸಿನ್ ಒಂದು ಸಾಂಪ್ರದಾಯಿಕವಾಗಿ ತಯಾರಿಸಿದ ಲಸಿಕೆಯಾಗಿದ್ದು, ಸತ್ತ ವೈರಸ್ ನ ಮಾರ್ಪಾಡು ಮಾಡಿದ/ ನಿಷ್ಕ್ರಿಯ ಆವೃತ್ತಿಗಳನ್ನು ಬಳಸಿ ಸಿದ್ಧಪಡಿಸಲಾಗುತ್ತದೆ.
ಎರಡರಲ್ಲೂ ಅತ್ಯಂತ ಕಡಿಮೆ ಜನರಲ್ಲಿ ಲಘು ಅಡ್ಡ ಪರಿಣಾಮಗಳು ಕಂಡು ಬರುತ್ತಿದ್ದು, ಅದು ಲಸಿಕೆ ತೆಗೆದುಕೊಂಡಾಗ ಆ ಜಾಗದಲ್ಲಿ ಉಂಟಾಗುವ ನೋವು, ನಂತರದ ಬಳಲಿಕೆ, ಚಳಿ, ಜ್ವರ, ಶೀತ, ತಲೆನೋವು, ಹೊಟ್ಟೆನೋವು ಇವೆಲ್ಲವೂ ಅನೇಕರಲ್ಲಿ ಸಾಮಾನ್ಯವಾಗಿದೆ. ಆದರೆ ಇವ್ಯಾವುದೂ ಗಂಭೀರ ಸಮಸ್ಯೆಗಳಲ್ಲ. ಯಾವುದೇ ಲಸಿಕೆ ತೆಗೆದುಕೊಂಡಾಗ ನಮ್ಮ ದೇಹ ನಡೆಸುವ ಸಾಮಾನ್ಯ ಪ್ರತಿಕ್ರಿಯೆಯಾಗಿದೆ.
ಲಸಿಕೆ ತೆಗೆದುಕೊಂಡು ರಕ್ತ ಹೆಪ್ಪುಗಟ್ಟಿದ ಕಾರಣಕ್ಕೆ, ಅಲ್ಲದೆ ನರಸಂಬಂಧಿ ತೊಂದರೆ ಉಂಟಾಗಿದ್ದರಿಂದ ಆರಂಭದಲ್ಲಿ ಅನೇಕ ದೇಶಗಳಲ್ಲಿ ಕೋವಿಶೀಲ್ಡ್ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಬಳಿಕ ಸಮಸ್ಯೆಗಳನ್ನು ಸರಿಪಡಿಸಿರುವುದಾಗಿ ತಯಾರಿಕಾ ಸಂಸ್ಥೆ ಸ್ಪಷ್ಟಪಡಿಸಿ ವಿವಾದಕ್ಕೆ ತೆರೆ ಎಳೆದಿತ್ತು.
ಇನ್ನೊಂದೆಡೆ, ಕೋವ್ಯಾಕ್ಸಿನ್ಗೆ ಇಂಥ ವಿವಾದಗಳ್ಯಾವುದೂ ಈವರೆಗೆ ಸುತ್ತಿಕೊಂಡಿಲ್ಲ. ಅಷ್ಟಾದರೂ ಗರ್ಭಿಣಿಯರು, ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳು ಇರುವವರು, ರಕ್ತವನ್ನು ತೆಳುವಾಗಿಸುವ ಔಷಧ ಸೇವಿಸುವವರಿಗೆ ಕೋವ್ಯಾಕ್ಸಿನ್ ನೀಡದಂತೆ ವೈದ್ಯರು ಶಿಫಾರಸು ಮಾಡುತ್ತಿದ್ದಾರೆ.
ಇವೆರಡೂ ಲಸಿಕೆಗಳನ್ನು ಎರಡು ಡೋಸ್ ಗಳ ಲೆಕ್ಕಾಚಾರದಲ್ಲಿ ನೀಡಲಾಗುತ್ತದೆ. ಕೋವ್ಯಾಕ್ಸಿನ್ ಎರಡನೇ ಡೋಸ್ ಗೆ 4-6 ಆರು ವಾರಗಳು ಬೇಕಿದ್ದರೆ, ಕೋವಿಶೀಲ್ಡ್ ಎರಡನೇ ಡೋಸ್ ಗೆ 4-6 ಆರು ವಾರಗಳು ಬೇಕು ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗೆ ಬದ್ಧ:
ಕೋ ವ್ಯಾಕ್ಸಿನ್, ಕೋವಿ ಶೀಲ್ಡ್ ಗಳೆರಡೂ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಖಚಿತತೆಗಾಗಿ ವೈದ್ಯಲೋಕದಲ್ಲಿ ಜನಪ್ರಿಯವಾಗಿವೆ. ವೈದ್ಯಕೀಯ ಪ್ರಯೋಗಗಳ ಫಲವಾಗಿ ಕಳೆದ ವರ್ಷ ನವೆಂಬರ್ ನಲ್ಲಿ 70 ಶೇಕಡಾ ಪರಿಣಾಮಕಾರಿ ಎಂದೆನಿಸಿದ್ದ ಕೋವಿ ಶೀಲ್ಡ್ ಈಗ ಶೇ.90ರಷ್ಟು (ಜಾಗತಿಕ ವರದಿ) ಫಲಕಾರಿಯಾಗಿದೆ. ಅದೇ ವೇಳೆ, ಈ ನಡುವೆ ನಡೆಸಲಾದ ಪರೀಕ್ಷೆಗಳಲ್ಲಿ 78 ಶೇಕಡಾ ಪರಿಣಾಮಕಾರಿ ಎಂದೆನಿಸಿದ್ದ ಕೋವಿ ಶೀಲ್ಡ್ ಇತ್ತೀಚೆಗೆ ಶೇ.100ರಷ್ಟು (ದೇಸೀ ವರದಿ) ಫಲಕಾರಿಯಾಗುತ್ತಿದೆ ಎಂದು ವೈದ್ಯಕೀಯ ಪುರಾವೆಗಳಿಂದ ಸಾಬೀತಾಗಿದೆ.
ರೂಪಾಂತರಿತ ಕೊರೊನಾ ಮಣಿಸುವ ಲಸಿಕೆಗಳು:
ಎರಡೂ ಲಸಿಕೆಗಳು ಎರಡನೆಯ ಅಲೆಯಾಗಿ ಕಾಡುತ್ತಿರುವ ರೂಪಾಂತರಿತ ಕೊರೊನಾ ವೈರಸ್ ಅನ್ನು ಹಿಮ್ಮೆಟ್ಟಿಸಲು ನೆರವಾಗುತ್ತಿವೆ. ಬ್ರಿಟನ್, ಬ್ರೆಜಿಲ್, ದಕ್ಷಿಣ ಆಫ್ರಿಕಾ ದೇಶಗಳಲ್ಲಿ ರೂಪಾಂತರಗೊಂಡು ಕಾಡುತ್ತಿರುವ, ಭಾರತದಲ್ಲಿ ಎರಡು ಪಟ್ಟು, ಮೂರು ಪಟ್ಟು ಮ್ಯೂಟೆಂಟ್ ಆಗಿ ಬೆದರಿಸುತ್ತಿರುವ ಕೊರೊನಾ ವೈರಸ್ ಗಳಿಗೆ ವಿರುದ್ಧವಾಗಿ ಈ ಲಸಿಕೆಗಳು ಬಹುಮಟ್ಟಿಗೆ ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ. ಇನ್ನೊಂದೆಡೆ, ಯುಕೆ ವೈರಸ್ ಸೇರಿದಂತೆ ರೂಪಾಂತರಿತ ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಕೋವ್ಯಾಕ್ಸಿನ್ ಅಧಿಕ ಶಕ್ತಿಶಾಲಿ ಎನ್ನುವುದಾಗಿ ಅನೇಕ ಸಂಶೋಧನೆಗಳು ಹೇಳಿವೆ.
ಪೈಪೋಟಿ ನೀಡಲು ಬಂದ ಸ್ಪುಟ್ನಿಕ್ ವಿ :
ಕೋವಿಡ್ 19 ನ ಎರಡನೇ ಅಲೆಯ ಅಬ್ಬರಕ್ಕೆ ಬಳಲಿ ಬೆಂಡಾಗಿರುವ ಭಾರತದ ದೊಡ್ಡ ಜನಸಂಖ್ಯೆಗೆ ಶೀಘ್ರದಲ್ಲೇ ಲಸಿಕೆ ಹಂಚಿಕೆ ಮಾಡುವ ದೊಡ್ಡ ಜವಾಬ್ದಾರಿ ಕೇಂದ್ರ ಸರಕಾರದ ಮೇಲೆ ಬಿದ್ದಿದೆ. ಅದರ 850 ದಶಲಕ್ಷ ಡೋಸ್ ಲಸಿಕೆಗಳನ್ನು ಭಾರತದಲ್ಲಿ ಸಿದ್ಧಪಡಿಸುವ ಯೋಜನೆ ಇದೆ. ಕೋ ವ್ಯಾಕ್ಸಿನ್ ಹಾಗೂ ಕೋವಿ ಶೀಲ್ಡ್ ಲಸಿಕೆಗಳನ್ನು ಭಾರತದ ಎರಡು ಸಂಸ್ಥೆಗಳು ಹಗಲಿರುಳು ಉತ್ಪಾದಿಸಿದರೂ ನಿರೀಕ್ಷಿತ ವೇಗದಲ್ಲಿ ಲಸಿಕೆಗಳನ್ನು ಹಂಚುವಲ್ಲಿ ಯಶಸ್ವಿಯಾಗುವುದು ಅನುಮಾನ ಎನ್ನುವುದು ಕೇಂದ್ರ ಸರಕಾರಕ್ಕೂ ಖಾತರಿಯಾಗಿದೆ. ಹೀಗಾಗಿ ಪ್ರಧಾನಿ ಮೋದಿ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳಿಗೆ ಭಾರತದ ಬಾಗಿಲು ತೆರೆದಿದ್ದಾರೆ. ಅದನ್ನು ಮಾಸ್ಕೋದ ಗಮಾಲೆಯಾ ಇನಿಸ್ಟಿಟ್ಯೂಟ್ ಸಿದ್ಧಪಡಿಸಿದೆ. ಸ್ಟಟ್ನಿಕ್ ವಿ ಯನ್ನು ಅರ್ಜೆಂಟಿನಾ, ಪ್ಯಾಲೆಸ್ತೀನ್, ವೆನಿಜುವೆಲಾ, ಹಂಗೇರಿ, ಇರಾನ್ ಹಾಗೂ ಯುಎಇ ಸೇರಿದಂತೆ 60 ದೇಶಗಳು ಈಗಾಗಲೇ ಬಳಸುತ್ತಿವೆ.
18 ವರ್ಷ ಮೇಲ್ಪಟ್ಟವರಿಗೆ ತಡವಾದೀತು, ಆದರೆ ಎಲ್ಲರೂ ಲಸಿಕೆ ಹಾಕಿಸಿ:
ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಕೇಂದ್ರ ಸರಕಾರದ ಯೋಜನೆಗೆ ಭಂಗ ಬಂದಿದೆ. ಬಹುತೇಕ ರಾಜ್ಯಗಳಲ್ಲಿ ಮೇ 1ರಿಂದಲೇ ಲಸಿಕೆ ಹಾಕುವ ಸಾಧ್ಯತೆ ಇಲ್ಲ. ಅಗತ್ಯವಿರುವಷ್ಟು ಲಸಿಕೆಗಳ ಡೋಸ್ ಗಳ ಸಂಗ್ರಹ ಇಲ್ಲದಿರುವುದೇ ಇದಕ್ಕೆ ಕಾರಣ. ನೋಂದಣಿ ಪ್ರಕ್ರಿಯೆ ಜಾರಿಯಾಗಿ ಎರಡು ದಿನಗಳಾಗಿದ್ದು, ರಾಜ್ಯ ಸರಕಾರಗಳಿಗೆ ಪೂರೈಕೆ ಆಗುತ್ತಿದ್ದಂತೆ ಪ್ರಕ್ರಿಯೆ ಶುರುವಾಗಲಿದೆ.
ಈಗಾಗಲೇ ನಡೆಸಿರುವ ಅಧ್ಯಯನದ ಪ್ರಕಾರ, ಕೋವಿಶೀಲ್ಡ್ ನ ಎರಡೂ ಡೋಸ್ ಗಳನ್ನು ಹಾಕಿಕೊಂಡ ಮೇಲೂ ಕೊರೋನಾ ಪಾಸಿಟಿವ್ ಪತ್ತೆಯಾದವರ ಪ್ರಮಾಣ 0.03 ಶೇಕಡಾ ಆಗಿದ್ದರೆ, ಕೋವ್ಯಾಕ್ಸಿನನ ಎರಡೂ ಡೋಸ್ ಗಳನ್ನು ಹಾಕಿಕೊಂಡ ಮೇಲೂ ಕೊರೋನಾ ಪಾಸಿಟಿವ್ ಪತ್ತೆಯಾದವರ ಪ್ರಮಾಣ 0.04 ಶೇಕಡಾ ಆಗಿದೆ.
ಅಂದಹಾಗೆ, ಆರೋಗ್ಯ ಕಾಪಾಡುವ ಸಲುವಾಗಿ ಸ್ವದೇಶಿ ಲಸಿಕೆಗಳು ಬಹುತೇಕ ಸುರಕ್ಷಿತವಾಗಿರುವುದರಿಂದ, ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಲಸಿಕೆ ಹಾಕಿಸಿಕೊಂಡ ಮೇಲೂ ಅಗತ್ಯವಾಗಿ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು.