ಸಿಎಂ ಯಡಿಯೂರಪ್ಪ ರಾಜೀನಾಮೆ ಹೇಳಿಕೆಯ ತಂತ್ರಗಾರಿಕೆ ಸಫಲವಾಯಿತೆ?

ಪಕ್ಷದ ವರಿಷ್ಠರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಯ ಮೂಲಕ ಬಿಜೆಪಿಯ ನಾಯಕತ್ವ ಬದಲಾವಣೆಯ ಹಾವು ಏಣಿ ಆಟ ಇದೀಗ ಮತ್ತೊಂದು ಮಜಲಿಗೆ ಹೊರಳಿದೆ.

ತಮ್ಮ ಪುತ್ರ ದೆಹಲಿಗೆ ಹೋಗಿ, ಮೂರು ದಿನಗಳ ಕಾಲ ಅಲ್ಲಿಯೇ ತಂಗಿದ್ದು, ವರಿಷ್ಠರೊಂದಿಗೆ ಮಾತುಕತೆ ನಡೆಸಿ ವಾಪಸ್ಸಾದ ಬಳಿಕ ಸಿಎಂ ಇದೇ ಮೊದಲ ಬಾರಿಗೆ ನಾಯಕತ್ವ ಬದಲಾವಣೆಯ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ವರಿಷ್ಠರು ವಿಶ್ವಾಸವಿಡುವವರೆಗೆ ಮುಂದುವರಿಯುತ್ತೇನೆ. ರಾಜೀನಾಮೆ ಕೊಡಿ ಎಂದರೆ, ಕೊಡುವೆ. ಪಕ್ಷದಲ್ಲಿ ಪರ್ಯಾಯ ನಾಯಕರಿಗೆ ಬರವಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಸಹಜವಾಗೇ ಈ ಹೇಳಿಕೆ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಮತ್ತು ಪ್ರತಿಪಕ್ಷಗಳಲ್ಲಿ ದಿಢೀರ್ ಪ್ರತಿಕ್ರಿಯೆ, ವಿಶ್ಲೇಷಣೆಗಳ ಅಲೆಯೆಬ್ಬಿಸಿದೆ. ಅದರಲ್ಲೂ ಮುಖ್ಯವಾಗಿ ಪ್ರತಿಪಕ್ಷಗಳಿಗಿಂತ ಸಿಎಂ ಸ್ವಪಕ್ಷೀಯರ ಪ್ರತಿಕ್ರಿಯೆಗಳು ಕುತೂಹಲಕಾರಿಯಾಗಿದ್ದು, ದೊಡ್ಡ ಸಂಖ್ಯೆಯ ಸಚಿವರು, ಶಾಸಕರು ಯಡಿಯೂರಪ್ಪ ಪರ ಪ್ರಬಲ ಬ್ಯಾಟಿಂಗ್ ಆರಂಭಿಸಿದ್ದಾರೆ. ಅದೇ ಹೊತ್ತಿಗೆ ನಾಯಕತ್ವ ಬದಲಾವಣೆಯ ಮಾತುಗಳನ್ನಾಡಿದ್ದ, ನೇರವಾಗಿ ಯಡಿಯೂರಪ್ಪ ವಿರುದ್ಧ ದನಿ ಎತ್ತಿದ್ದ ನಾಯಕರು ತಣ್ಣಗೆ ರಾಗಬದಲಿಸಿದ್ದು, ಯಡಿಯೂರಪ್ಪ ನಾಯಕತ್ವದಲ್ಲಿ ತಮಗೆ ವಿಶ್ವಾಸವಿದೆ. ಅವರು ಪಕ್ಷ ಕಟ್ಟಿ ಬೆಳಸಿದ ಹಿರಿಯರು ಎಂದು ವರಸೆ ಬದಲಾಯಿಸಿದ್ದಾರೆ.

ಭಾನುವಾರ ಬೆಳಗ್ಗೆ ಯಡಿಯೂರಪ್ಪ ಹೇಳಿಕೆ ಹೊರಬೀಳುತ್ತಲೇ, ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್ ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕರೋನಾ ಸಂಕಷ್ಟದ ನಡುವೆಯೂ ಯಡಿಯೂರಪ್ಪ, ಇಳಿ ವಯಸ್ಸಿನಲ್ಲೂ ರಾಜ್ಯದ ಜನತೆಗಾಗಿ ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ರಾಜ್ಯದ ಜನತೆ ಪಕ್ಷಕ್ಕೆ ಅತಿ ಹೆಚ್ಚು ಸ್ಥಾನ ನೀಡಿದ್ದು ಮತ್ತು ಇತರೆ ಪಕ್ಷಗಳ ಶಾಸಕರು ಆ ಪಕ್ಷಗಳಿಗೆ ರಾಜೀನಾಮೆ ನೀಡಿ ಹೊರಬಂದು ಸರ್ಕಾರ ರಚನೆಗೆ ಬೆಂಬಲ ನೀಡಿದ್ದು ಯಡಿಯೂರಪ್ಪ ಅವರ ಮುಖ ನೋಡಿ. ಹಾಗಾಗಿ, ಅವರ ಹೆಸರಿನ ಮೇಲೆ ಅಧಿಕಾರಕ್ಕೆ ಬಂದಿರುವ ಸರ್ಕಾರದಲ್ಲಿ ಅವರಲ್ಲದೆ ಬೇರಾರು ನಾಯಕರಾಗಲು ಸಾಧ್ಯ ಎಂದಿದ್ದಾರೆ.

ಅಷ್ಟೇ ಅಲ್ಲ; ಯಡಿಯೂರಪ್ಪ ನಿಷ್ಠ ಬಣದ ಈ ಪ್ರಮುಖರು, ನಾಯಕತ್ವ ಬದಲಾವಣೆಯ ವಿಷಯಕ್ಕೆ ಪಕ್ಷದ ವರಿಷ್ಠರು ಇಲ್ಲಿಗೇ ಮುಕ್ತಾಯ ಹಾಡಬೇಕು. ಕರೋನಾದಂತಹ ಸಂಕಷ್ಟದ ಹೊತ್ತಲ್ಲಿ ಪದೇ ಪದೆ ನಾಯಕತ್ವ ಬದಲಾವಣೆಯ ಮಾತುಗಳನ್ನಾಡುವ ಮೂಲಕ ಸರ್ಕಾರದ ಕೆಲಸ ಕಾರ್ಯಗಳಿಗೆ ಧಕ್ಕೆ ತರಲಾಗುತ್ತಿದೆ. ಇಂತಹ ಹೊತ್ತಲ್ಲಿ ಇದು ನಿರೀಕ್ಷಿತವಲ್ಲ. ಮೇಲಾಗಿ ಇದೀಗ ಮುಖ್ಯಮಂತ್ರಿಗಳೇ ಪಕ್ಷದ ವರಿಷ್ಠರು ಬಯಸಿದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಯ ಮಾತುಗಳಿಗೆ ಕೂಡಲೇ ಪೂರ್ಣ ವಿರಾಮ ಹಾಕಬೇಕು. ಪೂರ್ಣ ಅವಧಿಗೆ ಅವರ ನಾಯಕತ್ವವೇ ಮುಂದುವರಿಯಲಿದೆ ಮತ್ತು ಯಾವುದೇ ಕಾರಣಕ್ಕೂ ಪಕ್ಷದ ಯಾವುದೇ ನಾಯಕರು ನಾಯಕತ್ವ ಬದಲಾವಣೆಯ ಮಾತನ್ನು ಎತ್ತಬಾರದು ಎಂಬುದನ್ನು ಪಕ್ಷದ ವರಿಷ್ಠರೇ ಸ್ಪಷ್ಟಪಡಿಸಬೇಕು ಎಂದು ಈ ನಾಯಕರು ದೆಹಲಿ ನಾಯಕರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಅಗತ್ಯಬಿದ್ದರೆ ಯಡಿಯೂರಪ್ಪ ಪರ ಇರುವ ಶಾಸಕರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ ಪರಿಸ್ಥಿತಿ ಮನವರಿಕೆ ಮಾಡಲು ಸಿದ್ಧ ಎನ್ನುವ ಮೂಲಕ ಸಿಎಂ ಪರ ಪ್ರಬಲ ಬ್ಯಾಟಿಂಗ್ ಮಾಡಿದ್ದಾರೆ.

ಮತ್ತೊಂದು ಕಡೆ, ಸಿಎಂ ಹೇಳಿಕೆ ಹೊರಬೀಳುತ್ತಲೇ ಭಿನ್ನಮತೀಯ ಗುಂಪಿನ ದನಿಗಳಾಗಿ ಗುರುತಿಸಿಕೊಂಡಿದ್ದ ಸಚಿವ ಸಿ ಪಿ ಯೋಗೀಶ್ವರ್, ಎಚ್ ವಿಶ್ವನಾಥ್ ಅವರುಗಳೂ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ಅವರು ಪಕ್ಷ ಕಟ್ಟಿ ಬೆಳೆಸಿದ ಹಿರಿಯರು. ಅವರ ಬಗ್ಗೆ ಎಂದೂ ಮಾತನಾಡಿಲ್ಲ. ಮುಂದೆಯೂ ಮಾತನಾಡುವುದಿಲ್ಲ. ಆದರೆ, ಪ್ರತಿಪಕ್ಷಗಳು ಸರ್ಕಾರದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ನಾವೇ ಪ್ರತಿಪಕ್ಷಗಳ ಪಾತ್ರ ವಹಿಸಬೇಕಾಯಿತು ಎಂದು ಹೇಳುವ ಮೂಲಕ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಇನ್ನು ವಿಶ್ವನಾಥ್ ಕೂಡ, ಯಡಿಯೂರಪ್ಪ ಅವರು ವರಿಷ್ಠರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ ಮತ್ತು ಪಕ್ಷದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ ಎಂದಿದ್ದಾರೆ. ನಿಜ ರಾಜ್ಯದಲ್ಲಿ ಸಾಕಷ್ಟು ಮಂದಿ ಪರ್ಯಾಯ ನಾಯಕರಿದ್ದಾರೆ. ಅದರಲ್ಲೂ ವೀರಶೈವ ಪಂಚಮಸಾಲಿ ಸಮುದಾಯದ ಹಲವು ನಾಯಕರಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮತ್ತೊಂದು ಅಚ್ಚರಿಯ ಬೆಳವಣಿಗೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕೂಡ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಕರೋನಾ ಸಂಕಷ್ಟದ ಹೊತ್ತಲ್ಲಿ ಯಡಿಯೂರಪ್ಪ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಹೊತ್ತಲ್ಲಿ ನಾಯಕತ್ವ ಬದಲಾವಣೆಯ ಯಾವ ಪ್ರಸ್ತಾಪವೂ ಪಕ್ಷದ ಮುಂದಿಲ್ಲ. ಕೇಂದ್ರದ ನಾಯಕರು ಕೂಡ ಯಾರೂ ಅಂತಹ ಸೂಚನೆಯನ್ನೂ ನೀಡಿಲ್ಲ ಎಂದು ಹೇಳುವ ಮೂಲಕ ಇಷ್ಟು ದಿನಗಳ ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಹೆಸರು ಪದೇ ಪದೇ ಕೇಳಿಬಂದಿದ್ದು ಕೇವಲ ಅಶರೀರವಾಣಿ ಎಂಬಂತೆ ಪ್ರತಿಕ್ರಿಯಿಸಿದ್ದಾರೆ!

ಒಟ್ಟಾರೆ, ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಂಡ ಸಂದರ್ಭದಲ್ಲಿ, ಅದರಲ್ಲೂ ಸಿ ಪಿ ಯೋಗೀಶ್ವರ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ ಪ್ರಮುಖರು ಮಾಧ್ಯಮಗಳ ಮುಂದೆ ನಾಯಕತ್ವ ಬದಲಾವಣೆಯ ಬಗ್ಗೆ ಪ್ರಸ್ತಾಪಿಸಿ ತಮ್ಮ ಮತ್ತು ತಮ್ಮ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುತ್ತಿರುವ ಹೊತ್ತಲ್ಲಿ, ವಿರೋಧಿ ಬಣದ ಕೆಲವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದ ಹಿನ್ನೆಲೆಯಲ್ಲಿ, ಸ್ವತಃ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನೇ ದೆಹಲಿಗೆ ಕಳಿಸಿ ಪ್ರತಿತಂತ್ರ ಹೂಡಿದ್ದ ಸಿಎಂ ಯಡಿಯೂರಪ್ಪ ಇದೀಗ ಸಿಡಿಸಿರುವ ಹೇಳಿಕೆ ಸಾಕಷ್ಟು ಕೆಲಸ ಮಾಡಿದೆ. ಪಕ್ಷದ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕುವ ಜೊತೆಗೆ, ತಮ್ಮ ವಿರೋಧಿ ಬಣವನ್ನು ಮೂಲೆಗುಂಪು ಮಾಡಿ, ಬಹುತೇಕ ಶಾಸಕರು, ಸಚಿವರು, ನಾಯಕರು ಸಿಎಂ ಪರ ಮೊದಲ ಬಾರಿಗೆ ಬಹಿರಂಗ ಬ್ಯಾಟಿಂಗ್ ಮಾಡುವಂತೆ ಆ ಹೇಳಿಕೆ ಪ್ರೇರೇಪಿಸಿದೆ. ಆ ಮೂಲಕ ದೆಹಲಿಯ ಪಕ್ಷದ ವರಿಷ್ಠರಿಗೂ ಒಂದು ಸ್ಪಷ್ಟ ಸಂದೇಶ ರವಾನಿಸುವಲ್ಲಿ ಕೂಡ ಆ ಹೇಳಿಕೆ ಯಶಸ್ವಿಯಾಗಿದೆ.

ಆದರೆ, ನಿಜವಾಗಿಯೂ ಕುತೂಹಲ ಇರುವುದು ಸಿಎಂ ಯಡಿಯೂರಪ್ಪ ಅವರ ಇಂದಿನ ಹೇಳಿಕೆ ನಿಜಕ್ಕೂ ದಿಢೀರ್ ಪ್ರತಿಕ್ರಿಯೆಯೇ? ಅಥವಾ ಅದೊಂದು ಯೋಜಿತ ತಂತ್ರಗಾರಿಕೆಯ ಭಾಗವೇ ಎಂಬುದರ ಬಗ್ಗೆ. ಯಾಕೆಂದರೆ, ಕಳೆದ ವಾರ ದೆಹಲಿಗೆ ಹೋಗಿದ್ದ ಸಿಎಂ ಪುತ್ರ ವಿಜಯೇಂದ್ರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ವರಿಷ್ಠರನ್ನು ಭೇಟಿ ಮಾಡಿ, ನಾಯಕತ್ವ ಬದಲಾವಣೆಯ ಪ್ರಸ್ತಾಪದ ಬಗ್ಗೆ ಮಾತನಾಡಿದ್ದರು. ಒಂದು ವೇಳೆ ನಾಯಕತ್ವ ಬದಲಾವಣೆಯ ಹೇಳಿಕೆಗಳಿಗೆ ಕಡಿವಾಣ ಬೀಳದೆ ಹೋದರೆ, ಸರ್ಕಾರ ಮತ್ತು ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ. ಸಂಕಷ್ಟದ ಹೊತ್ತಲ್ಲಿ ಇಂತಹ ಹೇಳಿಕೆಗಳು ಜನರ ವಿಶ್ವಾಸ ಕಳೆಯುತ್ತಿವೆ. ಅಧಿಕಾರಶಾಹಿ ಕೂಡ ಸರ್ಕಾರದ ಮಾತು ಕೇಳದ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಕೂಡಲೇ ಅಂತಹ ಹೇಳಿಕೆ ನೀಡುವವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದರೆ, ತಮ್ಮ ದಾರಿ ತಾವು ನೋಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂಬ ಖಡಕ್ ಸಂದೇಶ ನೀಡಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.

ಆ ಭೇಟಿಯ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ವರಿಷ್ಠರು ಕೇಳಿದರೆ ರಾಜೀನಾಮೆಗೆ ಸಿದ್ಧ ಎಂಬ ಮಾತನ್ನಾಡಿರುವುದು, ವರಿಷ್ಠರಿಂದ ಬಲವಾದ ಸಂದೇಶ ಸಿಕ್ಕಿರುವುದ ಸೂಚಕವೇ ಎನ್ನಲಾಗುತ್ತಿದೆ. ವರಿಷ್ಠರ ಅಂತಹ ಸೂಚನೆಯ ಪರಿಣಾಮವಾಗಿಯೇ ಈವರೆಗೆ ಬಹುತೇಕ ಜಾಣ ಮೌನ ವಹಿಸಿದ್ದ ಬಿಜೆಪಿಯ ಹಲವರು ಇದೀಗ ದಿಢೀರನೇ ಯಡಿಯೂರಪ್ಪ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಜೊತೆಗೆ ಭಿನ್ನರು ಕೂಡ ನಾಜೂಕಾಗಿ ವರಸೆ ಬದಲಿಸಿದ್ದಾರೆ. ಹಾಗಾಗಿ ವಿಜಯೇಂದ್ರ ದೆಹಲಿ ಭೇಟಿ ಮತ್ತು ಸಿಎಂ ಅವರ ಭಾನುವಾರದ ಹೇಳಿಕೆಗಳು ನಾಯಕತ್ವ ಬದಲಾವಣೆಯ ಬಿಜೆಪಿ ಭಿನ್ನರ ದನಿಗೆ ಸದ್ಯಕ್ಕಂತೂ ವಿರಾಮ ಹಾಕುವುದರಲ್ಲಿ ಯಶಸ್ವಿಯಾಗಿವೆ. ಆದರೆ, ದೆಹಲಿಯ ವರಿಷ್ಠರ ಕಡೆಯಿಂದ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಅಂತಹ ಹೇಳಿಕೆಯೊಂದು ಯಾವುದೇ ಕ್ಷಣದಲ್ಲಿ ಹೊರಬೀಳಬಹುದು ಮತ್ತು ಅದು ನಾಯಕತ್ವ ಬದಲಾವಣೆಯ ಮಾತುಗಳಿಗೆ ಶಾಶ್ವತವಾಗಿ ಪೂರ್ಣ ವಿರಾಮ ಹಾಕಬಹುದು ಎನ್ನಲಾಗುತ್ತಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...