ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಚುನಾವಣೆ ನಡೆಸುವ ಸಂಬಂಧ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ನಾವು ಹೇಳಿದಂತೆ ಚುನಾವಣೆಗೆ ತಯಾರಿ ಮಾಡಿಕೊಳ್ಳಿ ಎಂದು ಕಟ್ಟಪ್ಪಣೆ ಹೊರಡಿಸಿದ್ದರೂ ಸಹ ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರ ಇದೇ ವಿಚಾರಕ್ಕೆ ಸುಪ್ರೀಂ ಕದ ತಟ್ಟಿದೆ.

ಜಿಬಿಎ ಚುನಾವಣೆಯನ್ನು ಡಿಸೆಂಬರ್ 31ರ ವರೆಗೆ ಮುಂದೂಡುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆಗಸ್ಟ್ ತಿಂಗಳಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.
ಇನ್ನೂ ಈ ಹಿಂದೆಯೂ ಕೂಡ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೂ ಸೂಚನೆ ನೀಡಿತ್ತು ಆ.31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲೇಬೇಕು, ಯಾವುದೇ ಮಧ್ಯಂತರ ಅರ್ಜಿ ಸಲ್ಲಿಸುವುದು ಬೇಡ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರಿಂ ಕೋರ್ಟ್ ಪೀಠ ಆದೇಶ ನೀಡಿತ್ತು. ಆದರೆ ಚುನಾವಣೆ ಮುಂದೂಡುವ ಮತ್ತೊಂದು ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ.
ಕಳೆದ ಮೇ ತಿಂಗಳ 20 ರಂದು ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸುವಂತೆ ರಾಜ್ಯ ಸರ್ಕಾರ ಕೋರಿದೆ. ಅಲ್ಲದೇ 31 ಆಗಸ್ಟ್ ಒಳಗೆ ಚುನಾವಣೆ ನಡೆಸುವುದು ಕಷ್ಟಕರವಾಗಿದ್ದು, 31 ಡಿಸೆಂಬರ್ 2026ರವರೆಗೆ ಕಾಲಾವಕಾಶ ವಿಸ್ತರಣೆಯನ್ನು ಮಾಡುವಂತೆ ಅರ್ಜಿಯಲ್ಲಿ ಸಲ್ಲಿಕೆ ಮೂಲಕ ಸರ್ಕಾರ ಕೋರಿದೆ. ಇನ್ನೂ ಈ ಅರ್ಜಿಯ ವಿಚಾರಣೆಯ ವಿಚಾರಣೆಯು ಮುಂದಿನವಾರದಲ್ಲಿ ನಡೆಯುವ ಸಾಧ್ಯತೆಗಳಿವೆ.






