ಮೂಲ : When Vajpayee Worked With Opposition To Stave Off US Pressure – NDTV
ಅನುವಾದ : ನಾ ದಿವಾಕರ
ಇರಾಕ್ ವಿರುದ್ಧ ಅಮೆರಿಕ ಹೂಡಿದ ಯುದ್ಧದ 20ನೆಯ ವರ್ಷದ ಸಂದರ್ಭದಲ್ಲಿ ಪ್ರಕಟವಾದ ಒಂದು ವಿಡಿಯೋ ತುಣಕು ಅಮೆರಿಕದ ಪ್ರಜಾಸತ್ತೆಯ ಗುಣಾವಗುಣಗಳನ್ನು ಜಗಜ್ಜಾಹೀರು ಮಾಡಿತ್ತು. ಇರಾಕ್ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಈ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡನ್ ಅವರಿಗೆ ಮುಖಾಮುಖಿಯಾಗಿದ್ದೇ ಅಲ್ಲದೆ ನೇರವಾಗಿ “ ನೀವು ಅನರ್ಹರಾಗಿದ್ದೀರಿ, ನಿಮ್ಮ ಕೈಗಳು ರಕ್ತಸಿಕ್ತವಾಗಿದೆ. ಇರಾಕ್ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಯುದ್ಧವನ್ನು ನಡೆಸಿದ್ದೀರಿ. ನಿಮ್ಮ ನೀತಿಗಳ ಪರಿಣಾಮವಾಗಿಯೇ ನನ್ನ ಗೆಳೆಯರು ಮೃತಪಟ್ಟಿದ್ದಾರೆ. ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿ ನನ್ನ ಸೋದರ ಸೋದರಿಯರ ಸಾವಿಗೆ ನೀವೇ ಕಾರಣರಾಗಿದ್ದೀರಿ. ನಾಗರಿಕರನ್ನು ಹಿಂಸಿಸಲು ನೀವು ನಮ್ಮನ್ನು ರವಾನಿಸಿದ್ದಿರಿ. ನೀವು ಅನರ್ಹರಾಗಿದ್ದೀರಿ ಸರ್, ನೀವು ಅನರ್ಹರಾಗಿದ್ದೀರಿ ” ಎಂದು ಹೇಳಿದ್ದರು.
ಇದು ಜೋಬಿಡನ್ ಡೆಮಾಕ್ರಟ್ಸ್ ಪಕ್ಷದ ಅಭ್ಯರ್ಥಿಯಾಗಿ ಕ್ಯಾಲಿಫೋರ್ನಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾಗ, ಮಾರ್ಚ್ 2020ರ ಒಂದು ವಿಡಿಯೋ ತುಣುಕು. ಹಿರಿಯ ಸೇನಾಧಿಕಾರಿಯ ಮಾತುಗಳನ್ನು ತಾಳ್ಮೆಯಿಂದ ಕೇಳಿದ ನಂತರ ಬಿಡನ್ “ ನನ್ನ ಸ್ವಂತ ಮಗನೂ ಸಹ ಇರಾಕ್ನಲ್ಲಿ ಯುದ್ಧ ಮಾಡಿದ್ದಾನೆ” ಎಂದು ಹೇಳುತ್ತಾರೆ. ಬಿಡನ್ ತಮ್ಮ ಸ್ವಯಂ ರಕ್ಷಣೆಗಾಗಿ ಆಡಿದ ಮಾತುಗಳ ಹೊರತಾಗಿಯೂ ಈ ಲೇಖನದ ಚೌಕಟ್ಟಿನಲ್ಲಿ, ಗಮನಿಸಬೇಕಾದ ಅಂಶವೆಂದರೆ ಟ್ವಿಟರ್ನಲ್ಲಿ ಅನೇಕ ಭಾರತೀಯರು ಭಾರತ ಅಮೆರಿಕದಂತೆ ಒಂದು ಮುಕ್ತ ಪ್ರಜಾಸತ್ತಾತ್ಮಕ ರಾಷ್ಟ್ರವೇ ಎಂದು ಪ್ರಶ್ನಿಸುತ್ತಿರುವುದನ್ನು ಗಮನಿಸಬೇಕಿದೆ. ಅಮೆರಿಕದಲ್ಲಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಉನ್ನತ ನಾಯಕರನ್ನು ಪ್ರಶ್ನಿಸುವ ಹಕ್ಕು ಇರುತ್ತದೆ.
ಇಲ್ಲಿ ಎರಡು ಪ್ರಶ್ನೆಗಳು ಪ್ರಸ್ತುತ ಎನಿಸುತ್ತವೆ. ಮೊದಲನೆಯದಾಗಿ, 1.1 ಟ್ರಿಲಿಯನ್ ಡಾಲರ್ ವೆಚ್ಚದ ಭೀಕರ ಯುದ್ಧವೊಂದನ್ನು ನಡೆಇ, ಅಂತಾರಾಷ್ಟ್ರೀಯ ಸಮುದಾಯದ ಮತ್ತು ತನ್ನದೇ ಪ್ರಜೆಗಳ ದೃಷ್ಟಿಯಲ್ಲಿ, ತನ್ನ ವರ್ಚಸ್ಸಿಗೆ ಧಕ್ಕೆ ಉಂಟುಮಾಡಿಕೊಂಡ ಒಂದು ದೇಶ ಹೇಗೆ ಜಗತ್ತಿನ ಪ್ರಜಾಪ್ರಭುತ್ವದ ಮುಂಚೂಣಿ ನಾಯಕತ್ವ ವಹಿಸಲು ಸಾಧ್ಯ ? ಎರಡನೆಯದಾಗಿ, ಇದು ಭಾರತೀಯರಿಗೆ ಪ್ರಸ್ತುತವೇ ? ಅಮೆರಿಕದೊಂದಿಗೆ ಬಾಂಧವ್ಯವನ್ನು ಗಟ್ಟಿಗೊಳಿಸಲು ಆರಂಭಿಸಿದ್ದ ಭಾರತ ಹೇಗೆ ಯುದ್ಧದ ಸುಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ?
ಮೊದಲನೆಯ ಪ್ರಶ್ನೆಗೆ ಉತ್ತರ ಈಗಾಗಲೇ ಸ್ಪಷ್ಟವಾಗಿದೆ. ಅಮೆರಿಕ ತನ್ನನ್ನು ತಾನು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಸಂರಕ್ಷಕ ಎಂದು ಜಗತ್ತಿನಾದ್ಯಂತ ಬಿಂಬಿಸಿಕೊಂಡರೂ ಸ್ವಾತಂತ್ರ್ಯವನ್ನು ಬಯಸುವ ಪಶ್ಚಿಮೇತರ ರಾಷ್ಟ್ರಗಳ ಬಗ್ಗೆ ಅಮೆರಿಕದ ಧೋರಣೆ ಪರಮಾಧಿಪತ್ಯ ಸಾಧಿಸುವುದೇ ಆಗಿದೆ. ಪ್ರಜಾಪ್ರಭುತ್ವವು ಕನಿಷ್ಠ ಸತ್ಯಕ್ಕೆ ಬದ್ಧವಾಗಿರುವುದನ್ನು, ಇತರ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವುದನ್ನು, ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧತೆಯನ್ನು ಅಪೇಕ್ಷಿಸುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಅನುಮತಿ ಇಲ್ಲದೆಯೇ ಹೂಡಲಾದ ಇರಾಕ್ ಯುದ್ಧದ ಸಂದರ್ಭದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಈ ನೀತಿಗಳನ್ನು ಯಾವುದೇ ಮುಲಾಜಿಲ್ಲದೆ ಉಲ್ಲಂಘಿಸಿದ್ದರು. ಸದ್ದಾಂ ಹುಸೇನ್ ಮತ್ತು ಅವರ ಮಕ್ಕಳಿಗೆ ಇರಾಕ್ ತೊರೆಯಲು 48 ಗಂಟೆಗಳ ಗಡುವು ನೀಡಿದ್ದೇ ಅಲ್ಲದೆ ಇಲ್ಲವಾದಲ್ಲಿ ಎರಡೂವರೆ ಲಕ್ಷ ಸಂಖ್ಯೆಯ ಅಮೆರಿಕ ಮತ್ತು ಬ್ರಿಟನ್ ಸೈನಿಕರಿಂದ ದಾಳಿಗೊಳಗಾಗುವುದಾಗಿ ಎಚ್ಚರಿಕೆ ನೀಡಿದ್ದರು. ಇನ್ನೂ ಆಘಾತಕಾರಿ ಎಂದರೆ ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ಬುಷ್ಗೆ ದ್ವಿಪಕ್ಷೀಯ ಬೆಂಬಲವೂ ಇದ್ದು. ಬಿಡನ್ ಮತ್ತು ಇತರ ಉನ್ನತ ಡೆಮಾಕ್ರಟ್ ನಾಯಕರು ರಿಪಬ್ಲಿಕನ್ ಅಧ್ಯಕ್ಷನ ಯುದ್ಧೋನ್ಮಾದವನ್ನು ಉತ್ಸಾಹದಿಂದ ಬೆಂಬಲಿಸಿದ್ದುದೇ ಇದಕ್ಕೆ ಸಾಕ್ಷಿಯಾಗಿತ್ತು.
2003ರ ಮಾರ್ಚ್ನಲ್ಲಿ ಅಮೆರಿಕ ಇರಾಕ್ ಮೇಲೆ ನಡೆಸಿದ ಆಕ್ರಮಣವನ್ನು ಎರಡು ಸುಳ್ಳುಗಳನ್ನು ಆಧರಿಸಿ ಸಮರ್ಥಿಸಿಕೊಂಡಿತ್ತು. ಮೊದಲನೆಯ ಸುಳ್ಳು ಎಂದರೆ, ಸದ್ದಾಂ ಹುಸೇನ್ ತಮ್ಮ ಅಣ್ವಸ್ತ್ರಗಳ ಯೋಜನೆಯನ್ನು ಪುನರ್ನಿರ್ಮಾಣ ಮಾಡಿದ್ದಾರೆ, ಜೈವಿಕ ಶಸ್ತ್ರಾಸ್ತ್ರಗಳನ್ನು ರಹಸ್ಯವಾಗಿ ಸಂಗ್ರಹಿಸಿದ್ದಾರೆ, ರಾಸಾಯನಿಕ ಹಾಗೂ ಇತರ ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಕಲ್ಪಿತ ಆರೋಪ. ಆದರೆ ಯುದ್ಧ ಸಮಾಪ್ತಿಯಾದ ನಂತರ ಅಂತಹ ಯಾವುದೇ ಶಸ್ತ್ರಾಸ್ತ್ರಗಳು ಕಾಣಲಿಲ್ಲ. ಅಮೆರಿಕದ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಆಯೋಗವನ್ನು ಬುಷ್ ಅವರೇ ಸ್ಥಾಪಿಸಿದ್ದು, ಆಯೋಗವು ತನ್ನ 2005ರ ಅಂತಿಮ ವರದಿಯಲ್ಲಿ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಕರಣ ಅಮೆರಿಕದ ಇತಿಹಾಸದಲ್ಲೇ ಬೇಹುಗಾರಿಕೆಯ ವೈಫಲ್ಯದ ಅತಿದೊಡ್ಡ ಪ್ರಕರಣವಾಗಿದೆ ಎಂದು ಹೇಳಲಾಗಿತ್ತು. ಯುದ್ಧಪೂರ್ವದ ತನ್ನ ಎಲ್ಲ ತೀರ್ಮಾನಗಳಲ್ಲೂ ಅಮೆರಿಕದ ಬೇಹುಗಾರಿಕೆಯು ತಪ್ಪು ಹೆಜ್ಜೆ ಇರಿಸಿದ್ದು, ಇರಾಕ್ ಬಳಿ ವಿನಾಶಕಾರಿ ಶಸ್ತ್ರಾಸ್ತ್ರಗಳಿವೆ ಎನ್ನುವುದೂ ಸುಳ್ಳು ಆರೋಪವಾಗಿದೆ ಎಂದು ಆಯೋಗ ಹೇಳಿತ್ತು. ಅಮೆರಿಕದ ಈ ಪ್ರತಿಪಾದನೆಯನ್ನು ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ಮುಖ್ಯ ಪರಿವೀಕ್ಷಕರಾದ ಹಾನ್ಸ್ ಬ್ಲಿಕ್ಸ್ ಅವರೇ ತಿರಸ್ಕರಿಸಿದ್ದರು. ಕಳೆದ ವಾರ ಎಮ್ಎಸ್ಎನ್ಬಿಸಿಗೆ ನೀಡಿದ ಸಂದರ್ಶನವೊಂದಲ್ಲಿ ಬ್ಲಿಕ್ಸ್ ಅವರು, ಇರಾಕ್ ಮೇಲೆ ನಡೆದ ಯುದ್ಧದ ಹಿನ್ನೆಲೆಯಲ್ಲಿ ಬುಷ್ ಮತ್ತು ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಅಂತಾರಾಷ್ಟ್ರೀಯ ಯುದ್ಧಾಪರಾಧಗಳ ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಗಳಾಗಿ ನಿಲ್ಲಬೇಕಿತ್ತು ಎಂದು ಹೇಳಿದ್ದಾರೆ.
ಎರಡನೆ ಸುಳ್ಳು ಎಂದರೆ, ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಮತ್ತು ಅಲ್ಖೈದಾ ನಾಯಕರ ಒಸಾಮಾ ಬಿನ್ ಲಾಡೆನ್ ನಡುವೆ ಸಂಬಂಧ ಇದೆ ಎನ್ನುವ ಆರೋಪ. ಅಲ್ ಖೈದಾ 2001ರ ಸೆಪ್ಟಂಬರ್ 9ರಂದು ಅಮೆರಿಕದ ಮೇಲೆ ಭೀಕರ ಭಯೋತ್ಪಾದಕ ದಾಳಿ ನಡೆಸಿದ್ದುದರಿಂದ, ಅಮೆರಿಕದ ಈ ಪ್ರತಿಪಾದನೆಗೆ ಅಮೆರಿಕದ ಮೂರನೆ ಒಂದರಷ್ಟು ಜನತೆ ತಲೆದೂಗಿಸಿದ್ದರು. ಹಾಗಾಗಿ ಇರಾಕ್ ವಿರುದ್ಧದ ಯುದ್ಧಕ್ಕೆ ಬೆಂಬಲವನ್ನೂ ಸೂಚಿಸಿದ್ದರು. ಆದರೆ ಈ ಪ್ರತಿಪಾದನೆಯೂ ಸುಳ್ಳು ಎಂದು ನಂತರ ಸಾಬೀತಾಗಿತ್ತು.
20 ವರ್ಷಗಳ ನಂತರ, ಅಮೆರಿಕದ ಸುಳ್ಳುಗಳೆಲ್ಲವೂ ಬಯಲಾಗಿದ್ದು, ಭಾರತದಲ್ಲಿ ಅಲ್ಪಸಂಖ್ಯೆಯ ಜನರಷ್ಟೇ ಇರಾಕ್ ಯುದ್ಧವನ್ನು ಸಾರ್ವಜನಿಕವಾಗಿ ಸಮರ್ಥಿಸಿಕೊಳಳುತ್ತಾರೆ. ಆದರೆ ಆಗಿನ ಪರಿಸ್ಥಿತಿ ಹೀಗಿರಲಿಲ್ಲ. ಅಮೆರಿಕ ತನ್ನ ರಾಜತಾಂತ್ರಿಕ ಹಾಗೂ ಹಣಕಾಸು ಬಲವನ್ನು ಪ್ರಯೋಗಿಸುವ ಮೂಲಕ ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಯುದ್ಧದ ಪರವಾದ ಜನಾಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಿತ್ತು. ಅಮೆರಿಕದ ಪ್ರಯತ್ನಗಳು ಸಫಲವೂ ಆಗಿತ್ತು. ಭಾರತದ ರಾಜಕೀಯ ವಲಯದಲ್ಲಿ ಮತ್ತು ಮಾಧ್ಯಮ ಸಮೂಹಗಳಲ್ಲಿ ಯುದ್ಧಕ್ಕೆ ಬೆಂಬಲ ವ್ಯಕ್ತವಾಗಿದ್ದೇ ಅಲ್ಲದೆ, ಭಾರತದ ಹಲವು ವಿಶ್ಲೇಷಕರು, ಮಾಧ್ಯಮಗಳು ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ ಸದ್ದಾಂ ಹುಸೇನ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ಭಾರತೀಯ ಸೇನೆಯನ್ನು ರವಾನಿಸಲು ಒತ್ತಡ ಹೇರಲಾಗಿತ್ತು. ಭಾರತದ ಪ್ರಮುಖ ಪತ್ರಿಕೆಗಳ ಪ್ರಸಿದ್ಧ ಸಂಪಾದಕರು, ಅಂಕಣಕಾರರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಮೇಲೆ ಒತ್ತಡ ಹೇರಿದ್ದುದೇ ಅಲ್ಲದೆ, ಭಾರತ ತನ್ನ ಮೃದು ಧೋರಣೆಯನ್ನು ಕೈಬಿಟ್ಟು ಭಯೋತ್ಪಾದನೆಯ ವಿರುದ್ಧದ ಜಾಗತಿಕ ಯುದ್ಧದಲ್ಲಿ ಒದಗಿರುವ ಅವಕಾಶವನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದರು. ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಶಕ್ತಿಯಾಗಿ ಭಾರತ ಗಡಿಗಳ ಆಚೆಗೂ ಸಹ ತನ್ನ ಸೇನಾ ಬಲವನ್ನು ಪ್ರದರ್ಶಿಸಲು, ಮುಂದಣ ಹೆಜ್ಜೆ ಊರಲು ಹಿಂಜರಿಯಕೂಡದು ಎಂಬ ಅಭಿಪ್ರಾಯ ದಟ್ಟವಾಗಿತ್ತು. ಸರ್ವಾಧಿಕಾರಿಯೊಬ್ಬನನ್ನು ಪರಾಭವಗೊಳಿಸಲು ವಿಶ್ವದ ಏಕಮಾತ್ರ ಸೂಪರ್ ಪವರ್ ರಾಷ್ಟ್ರದೊಡನೆ ಕೈಜೋಡಿಸುವುದರಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನ ಲಭಿಸುತ್ತದೆ ಎಂದು ಪ್ರತಿಪಾದಿಸಲಾಗಿತ್ತು. ಹೀಗೆ ಮಾಡದೆ ಹೋದರೆ, ಭಾರತ ಇತಿಹಾಸದ ಪರ ನಿಲ್ಲುವಂತಹ ಅವಕಾಶವನ್ನು ಕಳೆದುಕೊಳ್ಳುತ್ತದೆ ಎಂದೂ ಹೇಳಲಾಗಿತ್ತು.
ಬಿಜೆಪಿ ಮತ್ತು ಅರೆಸ್ಸೆಸ್ನಲ್ಲಿದ್ದ ಪ್ರಭಾವಶಾಲಿ ನಾಯಕರು ಈ ಪ್ರಚಾರದಿಂದ ಉತ್ತೇಜಿತರಾಗಿದ್ದರು. ಭಾಗಶಃ ಈ ಉತ್ಸಾಹಕ್ಕೆ ಕಾರಣ ಎಂದರೆ ಅಮೆರಿಕನ್ನರಂತೆ ಇವರೂ ಸಹ ಸದ್ದಾಂ ಹುಸೇನ್ ಅಲ್ಖೈದಾ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ವಿಶ್ವದಾದ್ಯಂತ ಬೆಂಬಲಿಸುತ್ತಿದ್ದಾನೆ ಎಂದು ನಂಬಿದ್ದರು. ಇದಕ್ಕೆ ಸಮಾನಾಂತರವಾಗಿ ಅಮೆರಿಕದ ಆಡಳಿತ ವ್ಯವಸ್ಥೆಯೂ ಸಹ ನೇರವಾಗಿಯೇ ಇವರನ್ನು ಉತ್ತೇಜಿಸುತ್ತಿತ್ತು. ಅಮೆರಿಕದಲ್ಲಿನ ಭಾರತೀಯ ಸಂಜಾತರ ಅಭಿಪ್ರಾಯವನ್ನೂ ಇದೇ ದಿಕ್ಕಿನಲ್ಲಿ ರೂಪಿಸಲಾಗುತ್ತಿತ್ತು.
ಪ್ರಧಾನಮಂತ್ರಿಗಳ ಕಚೇರಿಯಲ್ಲಿ ವಾಜಪೇಯಿ ಅವರಿಗೆ ಸಹಾಯಕನಾಗಿ ನಾನು ಆಗ ನಡೆಯುತ್ತಿದ್ದ ಬೆಳವಣಿಗೆಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದೆ. ಆದರೆ ಇರಾಕ್ ಮೇಲೆ ಅಮೆರಿಕದ ದಾಳಿಯನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲಾಗುವುದಿಲ್ಲ ಎನ್ನುವುದು ನನ್ನ ನಿಲುವಾಗಿತ್ತು. ಭಾರತವು ಆಕ್ರಮಣವನ್ನು ಖಂಡಿಸುವುದೇ ಅಲ್ಲದೆ, ಆಕ್ರಮಣಕ್ಕೊಳಗಾದ ಸಂತ್ರಸ್ತ್ರ ದೇಶದೊಡನೆ ನಿಲ್ಲಬೇಕು ಎನ್ನುವುದು ನನ್ನ ಅಭಿಪ್ರಾಯವೂ ಆಗಿತ್ತು. ನಾನು ನನ್ನ ಅಭಿಪ್ರಾಯಗಳನ್ನು ಪ್ರಧಾನಮಂತ್ರಿಗಳಿಗೆ ತಿಳಿಸಿದ್ದೆ. ದಿನನಿತ್ಯವೂ ನನ್ನ ಕರ್ತವ್ಯದ ನಿಮಿತ್ತ ಅವರನ್ನು ಭೇಟಿಯಾಗುತ್ತಿದ್ದೆ ಆದ್ದರಿಂದ ಅವರು ನನ್ನ ಅಭಿಪ್ರಾಯಕ್ಕೆ ತಲೆದೂಗಿದ್ದರು. ಆದರೆ ವಾಜಪೇಯಿಯವರು “ ಬಿಜೆಪಿಯಲ್ಲಿ ಕೆಲವು ಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ” ಎಂದೂ ಹೇಳಿದ್ದರು.
ಹಾಗಾಗಿ ನಾನು ಅಂದಿನ ಬಿಜೆಪಿ ಅಧ್ಯಕ್ಷ ಎಮ್. ವೆಂಕಯ್ಯ ನಾಯ್ಡು ಅವರನ್ನು ಅವರ ಔರಂಗಜೇಬ್ ರಸ್ತೆಯ ನಿವಾಸದಲ್ಲಿ ಭೇಟಿಯಾಗಿದ್ದೆ. ಈಗ ಈ ರಸ್ತೆಯನ್ನು ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ನಾನು ನಾಯ್ಡು ಅವರನ್ನು ಹಲವಾರು ಬಾರಿ ಭೇಟಿಯಾಗಿದ್ದರೂ ಅಂದು ಪ್ರಕ್ಷುಬ್ಧನಾದಷ್ಟು ಹಿಂದೆಂದೂ ಆಗಿರಲಿಲ್ಲ. “ ಇರಾಕ್ನಲ್ಲಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳೊಡನೆ ಸಹಕರಿಸಲು ನಮ್ಮ ಸೇನೆಯನ್ನು ಕಳುಹಿಸುವುದರಿಂದ ಭಾರತದ ನೈತಿಕತೆ ಜಾಗತಿಕ ನೆಲೆಯಲ್ಲಿ ಕುಸಿದುಹೋಗುತ್ತದೆ. ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ದೃಷ್ಟಿಯಲ್ಲಿ ನೈತಿಕ ಸ್ಥಾನ ಕಳೆದುಕೊಳ್ಳುತ್ತೇವೆ ” ಎಂದು ಹೇಳಿದ್ದೆ. “ ಭಾರತ ವಿಶ್ವದ ಯಾವುದೇ ಭಾಗದಲ್ಲಾದರೂ, ಯಾವುದೇ ರೀತಿಯ ಅತಿಕ್ರಮಣಕಾರಿ ಆಕ್ರಮಣವನ್ು ಬೆಂಬಲಿಸಿಲ್ಲ. ಭಾರತ ತನ್ನ ಸೇನೆಯನ್ನು ವಿದೇಶಕ್ಕೆ ರವಾನಿಸಿದ ಏಕೈಕ ಸಂದರ್ಭ ಎಂದರೆ ಶ್ರೀಲಂಕಾದಲ್ಲಿ ತಮಿಳು ಪ್ರತ್ಯೇಕತಾವಾದಿಗಳ ವಿರುದ್ಧ ಐಪಿಕೆಎಫ್ ಸೇನೆಯನ್ನು ಕಳುಹಿಸಿದ್ದು. ಇದರ ಫಲಿತಾಂಶ ಸಂತೋಷದಾಯಕವೇನೂ ಆಗಿರಲಿಲ್ಲ. ನಾವು ಬಾಗ್ಧಾದ್ ಮತ್ತು ಇತರ ನಗರಗಳ ಮೇಲೆ ಅಮೆರಿಕ ನಡೆಸುತ್ತಿರುವ ನಿರಂತರ ಬಾಂಬ್ ದಾಲಿಯನ್ನು, ಇರಾಕ್ನಲ್ಲಿ ಲಕ್ಷಾಂತರ ಅಮಾಯಕ ಜನತೆಯ ಕಗ್ಗೊಲೆಯನ್ನು ಹೇಗೆ ಬೆಂಬಲಿಸಲು ಸಾಧ್ಯ ? ಪಾರಂಪರಿಕವಾಗಿ ಇರಾಕ್ ಭಾರತವನ್ನು ಬೆಂಬಲಿಸುತ್ತಲೇ ಬಂದಿರುವುದನ್ನು, ಅನೇಕ ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಭಾರತದ ಪರ ವಹಿಸಿದ್ದನ್ನು, ಕೋಟ್ಯಂತರ ಭಾರತೀಯ ಪ್ರಜೆಗಳಿಗೆ ಇರಾಕ್ನಲ್ಲಿ ಉದ್ಯೋಗವನ್ನು ಕಲ್ಪಿಸಿರುವುದನ್ನು ಹೇಗೆ ಮರೆಯಲು ಸಾಧ್ಯ ” ಎಂದು ನಾನು ಬಲವಾಗಿ ವಾದ ಮಂಡಿಸಿದ್ದೆ. ನನ್ನ ಆಕ್ರೋಶಭರಿತ ಮಾತುಗಳನ್ನು ಗಮನವಿಟ್ಟು ಆಲಿಸಿದ ವೆಂಕಯ್ಯ ನಾಯ್ಡು “ ಆದರೆ ಪಕ್ಷದಲ್ಲಿ ಭಿನ್ನವಾಗಿ ಯೋಚಿಸುವವರೂ ಹಲವರಿದ್ದಾರೆ ” ಎಂದಷ್ಟೇ ಹೇಳಿದ್ದರು.
ಈ ನಿರ್ಣಾಯಕ ಸಮಯದಲ್ಲಿ ಭಾರತದ ವಿದೇಶಾಂಗ ನೀತಿಯೂ ಸಹ ಗಂಭೀರ ಸವಾಲುಗಳನ್ನೆದುರಿಸಿತ್ತು. ಈ ಸಂದರ್ಭದಲ್ಲೇ ವಾಜಪೇಯಿ ತಮ್ಮ ನೈಜ ರಾಜತಂತ್ರಜ್ಞ ಲಕ್ಷಣಗಳನ್ನು ಪ್ರದರ್ಶಿಸಿದ್ದರು . ಎನ್ಡಿಎ ಮೈತ್ರಿಕೂಟದೊಳಗಿದ್ದ ಪಕ್ಷಗಳನ್ನೂ ಸೇರಿದಂತೆ ಹವಲು ವಿರೋಧ ಪಕ್ಷಗಳು ಅಮೆರಿಕದ ಯುದ್ಧಕ್ಕೆ ಬೆಂಬಲಿಸಿ ಇರಾಕ್ಗೆ ಭಾರತೀಯ ಸೇನೆ ರವಾನಿಸುವುದನ್ನು ವಿರೋಧಿಸುತ್ತವೆ ಎನ್ನುವ ವಾಸ್ತವವನ್ನು ವಾಜಪೇಯಿ ಅರಿತಿದ್ದರು. ಹಾಗಾಗಿ ಕಾಂಗ್ರೆಸ್, ಸಿಪಿಐ, ಸಿಪಿಎಂ ಮತ್ತಿತರ ವಿರೋಧ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯವನ್ನು ತಿಳಿಸಲು ವಾಜಪೇಯಿಯವರನ್ನು ಭೇಟಿಯಾದಾಗ, ವಾಜಪೇಯಿಯವರು ಯುದ್ಧದ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳನ್ನು ನಡೆಸುವಂತೆ ಅವರಿಗೆ ಸೂಚಿಸಿದ್ದರು. ಸಂಸತ್ತಿನಲ್ಲಿ “ ಏಕಪಕ್ಷೀಯತೆಯೇ ಮೇಲುಗೈ ಸಾಧಿಸಿದರೆ ವಿಶ್ವಸಂಸ್ಥೆಗೆ ತೀವ್ರ ಧಕ್ಕೆ ಉಂಟಾಗುತ್ತದೆ, ಇದರಿಂದ ಜಾಗತಿಕ ವ್ಯವಸ್ಥೆಯಲ್ಲಲಿ ಭೀಕರ ಪರಿಣಾಮಗಳುಂಟಾಗುತ್ತವೆ ” ಎಂಬ ತಮ್ಮ ಹೇಳಿಕೆಯ ಮೂಲಕ ವಾಜಪೇಯಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ವಾಜಪೇಯಿ ಅವರು ಸಂಸತ್ತಿನಲ್ಲಿ ಸರ್ವಾನುಮತದ ನಿರ್ಣಯವನ್ನು ಅನುಮೋದಿಸುವ ಮೂಲಕ ಸ್ಪಷ್ಟ ಸಂದೇಶವನ್ನೂ ನೀಡಿದ್ದರು.
“ ರಾಷ್ಟ್ರೀಯ ಭಾವನೆಗಳನ್ನು ಪ್ರತಿಫಲಿಸುತ್ತಲೇ ಈ ಸದನವು ಅಮೆರಿಕ ನೇತೃತ್ವದ ಮೈತ್ರಿಕೂಟವು ಇರಾಕ್ನ ಸಾರ್ವಭೌಮತ್ವದ ವಿರುದ್ಧ ನಡೆಸಿರುವ ಆಕ್ರಮಣವನ್ನು ಖಂಡಿಸುತ್ತದೆ. ಈ ಸೇನಾ ಕಾರ್ಯಾಚರಣೆಯು, ಇರಾಕ್ನಲ್ಲಿ ಸರ್ಕಾರವನ್ನು ಪದಚ್ಯುತಗೊಳಿಸುವ ಉದ್ದೇಶವನ್ನು ಹೊಂದಿದ್ದು ಇದನ್ನು ಒಪ್ಪಲಾಗುವುದಿಲ್ಲ. ಇದರ ಪರಿಣಾಮ ಇರಾಕ್ನ ಲಕ್ಷಾಂತರ ಜನತೆ , ವಿಶೇಷವಾಗಿ ಮಹಿಳೆಯರು, ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳು ಮಾನವೀಯ ದೃಷ್ಟಿಯಿಂದ ಗಂಭೀರ ಸ್ವರೂಪದ್ದಾಗಿವೆ. ಈ ಕಾರ್ಯಾಚರಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಅನುಮೋದನೆ ಇಲ್ಲದೆಯೇ ನಡೆಸಲಾಗಿದ್ದು, ಇದು ವಿಶ್ವಸಂಸ್ಥೆಯ ಸನ್ನದುಗಳಿಗೆ ವ್ಯತಿರಿಕ್ತವಾಗಿದೆ. ಆದ್ದರಿಂದ ಈ ಸದನವು ತನ್ನ ಅಸಮಾಧಾನ ಮತ್ತು ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ, ಇರಾಕ್ ಜನರಿಗೆ ತನ್ನ ಅನುಕಂಪನವನ್ನು ತೋರುತ್ತದೆ ” ಎಂಬ ನಿರ್ಣಯವನ್ನು ಸಂಸತ್ತು ಅಂಗೀಕರಿಸಿತ್ತು.
ಹೀಗೆ ಪ್ರಧಾನಿ ವಾಜಪೇಯಿ ದೇಶದ ಮನಸ್ಥಿತಿಯನ್ನು ಸ್ಪಷ್ಟವಾಗಿ, ಗಟ್ಟಿಯಾಗಿ ಹೊರಹೊಮ್ಮಿಸಲು ಶ್ರಮಿಸಿದ್ದರು. ಆನಂತರ ಬುಷ್ ಸರ್ಕಾರಕ್ಕೆ ರವಾನಿಸಿದ ಸಂದೇಶದಲ್ಲಿ, ಭಾರತ ಒಂದು ಪ್ರಜಾಸತ್ತಾತ್ಮಕ ದೇಶವಾಗಿರುವುದರಿಂದ, ಸಂಸತ್ತಿನ ಸರ್ವಾನುಮತದ ನಿರ್ಣಯದ ಪರಿಣಾಮ ಇರಾಕ್ಗೆ ಭಾರತೀಯ ಸೇನೆಯನ್ನು ರವಾನಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು. ಇದು ಭಾರತದ ಪ್ರಜಾಪ್ರಭುತ್ವದ, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳ ಮತ್ತು ಶಾಂತಿಯನ್ನು ಪ್ರೋತ್ಸಾಹಿಸುವ ವಿದೇಶಾಂಗ ನೀತಿಯ ಗೆಲುವಾಗಿತ್ತು. ಇದನ್ನು ವಾಜಪೇಯಿಯವರು ಮಾತುಕತೆಯ ಮೂಲಕ, ಸರ್ವಾನುಮತವನ್ನು ರೂಪಿಸುವ ಮೂಲಕ, ಆಡಳಿತಾರೂಢ ಸರ್ಕಾರ ಮತ್ತು ವಿರೋಧಪಕ್ಷಗಳ ಸಮ್ಮತಿಯೊಂದಿಗೆ ಸಾಧಿಸಿದ್ದರು. ಖಚಿತವಾಗಿಯೂ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ವಿರೋಧಿಗಳಿಗೆ ಇದು ಒಂದು ಪಾಠವಾಗಿ ಪರಿಣಮಿಸಬೇಕಿದೆ.
(ಮೂಲ ಲೇಖಕರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಹಾಯಕರಾಗಿದ್ದರು).
ಕೃಪೆ : ಸಮಾಜಮುಖಿ ಮಾಸಪತ್ರಿಕೆ ಏಪ್ರಿಲ್ ಸಂಚಿಕೆ
-೦-೦-೦-