ಮೈಸೂರು : ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ಇಂದು ಖುದ್ದು ಹೆಚ್ಡಿಕೆ ತೆರೆ ಎಳೆದಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾನೆ ಎಂದು ಹೇಳಿದವರು ಯಾರು..? ಎಂದು ಪ್ರಶ್ನಿಸಿದ್ದಾರೆ.

ನಾನು ಚನ್ನಪಟ್ಟಣದ ಅಭ್ಯರ್ಥಿಯಾಗಿ ಬ್ಯಾಂಕ್ ಖಾತೆ ತೆರೆದಿದ್ದೇನೆ.ಚನ್ನಪಟ್ಟಣದ ವಂದಾರಗುಪ್ಪೆ ಶಾಖೆಯಲ್ಲಿ ಅಕೌಂಟ್ ಓಪನ್ ಆಗಿದೆ.ಮಂಡ್ಯದಲ್ಲಿ ಹೆಡ್ ಆಫೀಸ್ ಇರುವ ಕಾರಣ ಅದರಲ್ಲಿ ಉಲ್ಲೇಖಿಸಿದ್ದಾರೆ.ಸುಮಲತಾರಷ್ಟು ದೊಡ್ಡ ವ್ಯಕ್ತಿ ನಾನಲ್ಲ.ಅವರಷ್ಟು ವರ್ಚಸ್ಸು ನನಗಿಲ್ಲ.ಮಂಡ್ಯಕ್ಕೆ ಅವರು ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ.ಹಾಗಾಗಿ ಅವರ ಸವಾಲನ್ನು ನಾನು ನಿರಾಕರಣೆ ಮಾಡುತ್ತೇನೆ.ನಾನು ಈ ಕ್ಷೇತ್ರದಲ್ಲಿ ಸಾಮಾನ್ಯ ರೈತ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿಕೊಳ್ತೇನೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಚುನಾವಣೆ ನಿಲ್ತೀನಿ ಎಂಬುದು ಮಾಧ್ಯಮಗಳ ಸೃಷ್ಟಿ.ಇದಕ್ಕೆ ಸುಮಲತಾ ನನ್ನ ವಿರುದ್ಧ ಸ್ಪರ್ಧೆ ಮಾಡೋದಾಗಿ ಚಾಲೆಂಜ್ ಮಾಡಿದ್ದಾರೆ.ಅವರದು ದ್ವೇಷದ ರಾಜಕಾರಣ, ನಮ್ಮದಲ್ಲ.ನನ್ನ ಸ್ಪರ್ಧೆಯಿಂದ 7ಕ್ಷೇತ್ರಗಳಲ್ಲೂ ಪಕ್ಷಕ್ಕೆ ಅನುಕೂಲ ಇದೆ.ನಾನು ಸ್ಪರ್ಧೆ ಮಾಡದಿದ್ರು ಮಂಡ್ಯ ಜನ ಜೆಡಿಎಸ್ ಗೆಲ್ಲಿಸುತ್ತಾರೆ.ಅನಿವಾರ್ಯ ಅವಶ್ಯಕತೆ ಇದ್ರೆ ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬರ್ತಾರೆ.ಇವತ್ತು ಅಥವಾ ನಾಳೆ ಒಳಗೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಹೇಳಿದರು.