ನಾಯಕತ್ವ ಗೊಂದಲ: ಮತ್ತೆ ಚರ್ಚೆಗೆ ತಿದಿಯೊತ್ತಿದ ಶಾಸಕ ಸುನೀಲ್ ಕುಮಾರ್!

ನಾಯಕತ್ವ ಬದಲಾವಣೆಯ ರಾಜ್ಯ ಬಿಜೆಪಿಯ ಬಿಕ್ಕಟ್ಟು ಇನ್ನೇನು ಮುಗಿದೇ ಹೋಯಿತು. ಸ್ವತಃ ಮುಖ್ಯಮಂತ್ರಿಗಳೇ ಪಕ್ಷದ ವರಿಷ್ಠರು ಬಯಿಸಿದರೆ ರಾಜೀನಾಮೆ ನೀಡಲು ಸಿದ್ದ ಎಂದು ಹೇಳುವ ಮೂಲಕ ಈವರೆಗಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ ಸುನೀಲ್ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಆ ಮೂಲಕ ನಾಯಕತ್ವ ಬದಲಾವಣೆಯ ವಿಷಯ ಇನ್ನೂ ಮುಗಿದಿಲ್ಲ. ಅದು ಹಾವೂ ಸಾಯದು, ಕೋಲೂ ಮುರಿಯದು ಎಂಬಂತೆ ತೆರೆಮರೆಯಲ್ಲಿ ಬುಸುಗುಡುತ್ತಲೇ ಇದೆ ಎಂಬುದನ್ನು ಸುನೀಲ್ ಕುಮಾರ್ ತಮ್ಮ ಟ್ವೀಟ್ ಮೂಲಕ ಸಾಬೀತುಮಾಡಿದ್ದಾರೆ.

ಒಂದು ಕಡೆ ಮುಖ್ಯಮಂತ್ರಿಗಳ ಪರ ಶಾಸಕರು ಮತ್ತು ಮುಖಂಡರು ಮೇಲಿಂದ ಮೇಲೆ ಹೇಳಿಕೆಯ ಜೊತೆಯಲ್ಲಿ ಸಹಿ ಸಂಗ್ರಹದ ಮೂಲಕ ಸಿಎಂ ಬಲಾಬಲ ಸಾಬೀತಿನ ಮಾತನಾಡುತ್ತಿದ್ದಾರೆ. ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಸಿಎಂ ಪರ 65ಕ್ಕೂ ಹೆಚ್ಚು ಶಾಸಕರು ಬೆಂಬಲ ವ್ಯಕ್ತಪಡಿಸಿ ಸಹಿ ಮಾಡಿರುವ ಪತ್ರ ತಮ್ಮ ಬಳಿ ಇದ್ದು, ಕೋವಿಡ್ ಬಳಿಕ ಆ ಪತ್ರವನ್ನು ವರಿಷ್ಠರಿಗೆ ನೀಡುವುದಾಗಿ ಹೇಳಿದ ಬೆನ್ನಲ್ಲೇ ಸ್ವತಃ ಸಿಎಂ ಯಡಿಯೂರಪ್ಪ, ಹಿರಿಯ ಸಚಿವರಾದ ಕೆ ಎಸ್ ಈಶ್ವರಪ್ಪ, ಆರ್ ಅಶೋಕ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು ಸೇರಿದಂತೆ ಹಲವರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಹಿ ಸಂಗ್ರಹಿಸುವ ಅಗತ್ಯವೇ ಇಲ್ಲ ಎಂದು ಸಿಎಂ ಹೇಳಿದ್ದರೆ, ಸಹಿ ಸಂಗ್ರಹಿಸುವ ವ್ಯವಸ್ಥೆ ಬಿಜೆಪಿಯಲ್ಲಿ ಇಲ್ಲ ಮತ್ತು ರೇಣುಕಾಚಾರ್ಯಗೆ ಯಾರೂ ಸಹಿ ಸಂಗ್ರಹಿಸಲು ಹೇಳಿಲ್ಲ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದರು. ಅಶೋಕ್ ಕೂಡ, ಸಹಿ ಸಂಗ್ರಹ ಸೇರಿದಂತೆ ನಾಯಕತ್ವದ ಕುರಿತು ಯಾವುದೇ ಗೊಂದಲ ಹುಟ್ಟಿಸುವ ಪ್ರಯತ್ನಗಳು ಬೇಡ ಎಂದಿದ್ದರು.

ಆದರೆ, ಸಿಎಂ ಯಡಿಯೂರಪ್ಪ ವಿರೋಧಿ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಮತ್ತು ಒಂದು ವೇಳೆ ನಾಯಕತ್ವ ಬದಲಾವಣೆಯ ಪ್ರಸ್ತಾಪ ಬಂದಲ್ಲಿ ಸಿಎಂ ಅಭ್ಯರ್ಥಿ ಕುರಿತ ವರಿಷ್ಠರ ಮುಂದಿನ ಆಯ್ಕೆಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರಾಗಿರುವ ಅರವಿಂದ್ ಬೆಲ್ಲದ್ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಪರ ಅಥವಾ ವಿರುದ್ದ ಯಾವುದೇ ಸಹಿ ಸಂಗ್ರಹ ನಡೆದಿಲ್ಲ. ಹಿಂದೊಮ್ಮೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಣ ಬಿಡುಗಡೆಗೆ ಕೋರಿ ಸಿದ್ಧಪಡಿಸಿದ್ದ ಪತ್ರಕ್ಕೆ 65 ಶಾಸಕರು ಸಹಿ ಮಾಡಿದ್ದರು ಮತ್ತು ಆ ಪತ್ರ ಶಾಸಕರ ಬಳಿ ಇತ್ತು. ಅದನ್ನೇ ಹೀಗೆ ಬಿಂಬಿಸಲಾಗುತ್ತಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ವಿರೋಧಿ ಬಣ ಈ ‘ಸಹಿ ಸಂಗ್ರಹ’ ಹೇಳಿಕೆಯನ್ನು ಹೇಗೆ ಗ್ರಹಿಸುತ್ತದೆ ಎಂಬ ಸೂಚನೆ ನೀಡಿದ್ದರು.

ಸಹಿ ಸಂಗ್ರಹದ ಪ್ರಸ್ತಾಪದ ಮೂಲಕ ಯಡಿಯೂರಪ್ಪ ಆಪ್ತರೂ, ಅವರ ರಾಜಕೀಯ ಕಾರ್ಯದರ್ಶಿಯೂ ಆದ ರೇಣುಕಾಚಾರ್ಯ, ಭಾನುವಾರದ ಸಿಎಂ ಹೇಳಿಕೆಯ ಬಳಿಕ ಬಹುತೇಕ ಒಂದು ಹಂತಕ್ಕೆ ಇತ್ಯರ್ಥವಾದಂತೆ ಕಂಡಿದ್ದ ನಾಯಕತ್ವ ಬದಲಾವಣೆಯ ಚರ್ಚೆಗೆ ಮರುಜೀವ ನೀಡಿದ್ದರು. ಸಿಎಂ ಹೇಳಿಕೆಯ ಬೆನ್ನಲ್ಲೇ ಪ್ರಹ್ಲಾದ್ ಜೋಷಿ, ಸಿ ಟಿ ರವಿ, ಕಟೀಲು ಸೇರಿದಂತೆ ಆರ್ ಎಸ್ ಎಸ್ ಬದ್ಧ ಮೂಲ ಗುಂಪಿನವರೂ ನಾಯಕತ್ವ ಬದಲಾವಣೆಯ ಪ್ರಸ್ತಾಪ ಇಲ್ಲ ಎಂಬ ಪ್ರತಿಕ್ರಿಯೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಎಲ್ಲವೂ ಇತ್ಯರ್ಥಗೊಂಡಿದೆ ಎಂಬ ಸೂಚನೆ ಸಿಕ್ಕಿತ್ತು. ಆದರೆ, ರೇಣುಕಾಚಾರ್ಯ ಸಹಿಸಂಗ್ರಹ ಹೇಳಿಕೆ ಅಂತಹ ಸೂಚನೆಗೆ ಬ್ರೇಕ್ ಹಾಕಿ, ಇಲ್ಲ, ಬಿಜೆಪಿಯಲ್ಲಿ ಎಲ್ಲವೂ ಮುಗಿದಿಲ್ಲ ಎಂಬುದನ್ನು ಗಟ್ಟಿಗೊಳಿಸಿದ್ದರು. ಕೇವಲ 65 ಮಂದಿ ಸಹಿ ಮಾಡಿದ್ದಾರೆ ಎಂಬ ಅವರ ಹೇಳಿಕೆಯೇ ಪಕ್ಷದ ಇನ್ನುಳಿದ ಶಾಸಕರು ಸಿಎಂ ವಿರುದ್ಧ ಇದ್ದಾರೆ ಎಂಬುದನ್ನು ಸೂಚ್ಯವಾಗಿ ಹೇಳಿತ್ತು!

ರೇಣುಕಾಚಾರ್ಯರ ಅಂತಹ ‘ಡಬ್ಬಲ್ ಎಡ್ಜ್’ ಹೇಳಿಕೆಯ ಬೆನ್ನಲ್ಲೇ ಇದೀಗ ಸಂಘಪರಿವಾರದ ಹಿನ್ನೆಲೆಯ ಪ್ರಭಾವಿ ಯುವ ನಾಯಕ ಹಾಗೂ ಶಾಸಕ ಸುನೀಲ್ ಕುಮಾರ್ ಟ್ವೀಟ್ ನಾಯಕತ್ವ ಬದಲಾವಣೆಯ ವಿಷಯದ ಮೇಲೆ ಒಂದೆರಡು ದಿನಗಳ ಮಟ್ಟಿಗೆ ಮುಚ್ಚಿದ್ದ ಬೂದಿಯನ್ನು ಕೆದರಿ ನಿಗಿನಿಗಿ ಕೆಂಡದ ದರ್ಶನ ಮಾಡಿಸಿದೆ! ಅದರಲ್ಲೂ ಪಕ್ಷದ ಎಲ್ಲಾ ಶಾಸಕರ ಅಭಿಪ್ರಾಯ ಕೇಳುವುದು ಮುಖ್ಯ. ಹಾಗಾಗಿ ಪಕ್ಷದ ಶಾಸಕರ ಸಭೆ ಕರೆಯಿರಿ ಎಂದು ಅವರು ಪಕ್ಷದ ರಾಜ್ಯಾಧ್ಯಕ್ಷ ಕಟೀಲು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವುದು, ಪರೋಕ್ಷವಾಗಿ ಪಕ್ಷದ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದೇ ಅರ್ಥ.

“ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿವೆ. ಅಷ್ಟಕ್ಕೂ ಆ ಅಭಿಪ್ರಾಯಗಳು ಪಕ್ಷದ ಎಲ್ಲಾ ಶಾಸಕರ ಅಭಿಪ್ರಾಯವೇನಲ್ಲ. ಹಾಗಾಗಿ ಶಾಸಕರ ಅಭಿಪ್ರಾಯ ಕೇಳಲು ಶಾಸಕರ ಸಭೆ ಕರೆಯಬೇಕು” ಎಂಬರ್ಥದಲ್ಲಿ ಸುನೀಲ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಸದಾ ಪಕ್ಷನಿಷ್ಠೆ ಮತ್ತು ಸಂಘನಿಷ್ಠೆಯ ಮೂಲಕ ಪಕ್ಷದಲ್ಲಿ ಪ್ರಬುದ್ಧ ಯುವ ನಾಯಕರಾಗಿ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಅವರು, ಹೀಗೆ ಶಾಸಕರ ಸಭೆ ಕರೆಯಲು ಹೇಳಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಬಹಿರಂಗ ಹೇಳಿಕೆ ನೀಡಿದ್ದರು ಅಲ್ಲದೆ, ಕಳೆದ ವಿಧಾನಸಭಾ ಅಧಿವೇಶನದ ವೇಳೆ ಕೆಲವು ಸಮಾನಮನಸ್ಕ ಶಾಸಕರ ಪ್ರತ್ಯೇಕ ಸಭೆಯನ್ನೂ ನಡೆಸಿದ್ದು ವರದಿಯಾಗಿತ್ತು. ಹಾಗಾಗಿ ಸುನೀಲ್ ಕುಮಾರ್ ಈ ಟ್ವೀಟ್ ಇದೀಗ ಸಾಕಷ್ಟು ಮಹತ್ವ ಪಡೆದಿದ್ದು, ನಾಯಕತ್ವ ಬದಲಾವಣೆಯ ವಿಷಯ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.

ಈ ನಡುವೆ, ಎಂ ಪಿ ರೇಣುಕಾಚಾರ್ಯ ಮತ್ತು ಸಿ ಪಿ ಯೋಗೀಶ್ವರ್ ಅವರ ಹೆಸರು ಪ್ರಸ್ತಾಪಿಸಿ, ಬರೀ ಹೇಳಿಕೆ, ದೆಹಲಿ ಭೇಟಿಗಳ ಮೂಲಕ ಸುದ್ದಿಯಲ್ಲಿರುವ ಅವರಷ್ಟೇ ಬಿಜೆಪಿ ಪಕ್ಷವಲ್ಲ. ಪಕ್ಷವನ್ನು ಕಟ್ಟಿಬೆಳೆಸಿದ ಮುಖಂಡರು, ಶಾಸಕರು, ನಾಯಕರು ಹಲವರು ಇದ್ದಾರೆ. ನಾವು ಸುಮ್ಮನಿದ್ದೇವೆ ಎಂದ ಮಾತ್ರಕ್ಕೆ ನಮಗೂ ಭಾವನೆಗಳು, ಅಭಿಪ್ರಾಯಗಳಿಲ್ಲ ಎಂದಲ್ಲ. ಇಂತಹ ಒಂದಿಬ್ಬರ ಹೇಳಿಕೆ, ನಡೆಗಳಿಂದ ಪಕ್ಷದ ಬಗ್ಗೆ ಕಾರ್ಯಕರ್ತರು ಮತ್ತು ಜನಸಾಮಾನ್ಯರಿಗೆ ಬೇರೆಯದೇ ಸಂದೇಶ ಹೋಗುತ್ತದೆ. ಆ ಹಿನ್ನಲೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯುವುದು ಮುಖ್ಯ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

ಆರ್ ಎಸ್ ಎಸ್ ಮತ್ತು ಪರಿವಾರದ ನಡುವೆ ಸಾಕಷ್ಟು ಪ್ರಭಾವ ಹೊಂದಿರುವ ಸುನೀಲ್ ಕುಮಾರ್ ಅವರ ಈ ಟ್ವೀಟ್ ಸಹಜವಾಗೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಂಘ-ಪರಿವಾರದ ಪರೋಕ್ಷ ಸಮ್ಮತಿ ಇರದೆ ಅವರು ಏನನ್ನೂ ಮಾಡುವುದಿಲ್ಲ. ಅದರಲ್ಲೂ ಇಂತಹ ತೀವ್ರ ಕದಡಿದ ನೀರಿನ ಸ್ಥಿತಿಯಲ್ಲಿ ಸುಖಾ ಸುಮ್ಮನೆ ಮೀನು ಹಿಡಿಯುವ ಕೆಲಸಕ್ಕೆ ಕೈಹಾಕುವಂಥವರೂ ಅಲ್ಲ. ಹಾಗಾಗಿ ಅವರ ಈ ಟ್ವೀಟ್ ಕೇವಲ ವೈಯಕ್ತಿಕ ಮಟ್ಟದ ಪ್ರತಿಕ್ರಿಯೆ ಅಲ್ಲ. ಅದರ ಹಿಂದೆ ಬಿಜೆಪಿಯ ಯಡಿಯೂರಪ್ಪ ವಿರೋಧಿ ಬಣವಲ್ಲದೇ ಇದ್ದರೂ, ಪಕ್ಷ ಮತ್ತು ಸಂಘಟನೆಯ ಹಿತದ ಬಗ್ಗೆ ಹೆಚ್ಚು ಕಾಳಜಿ ಇರುವ ಪರಿಹಾರದ ಹಿನ್ನೆಲೆಯ ನಾಯಕರ ಒತ್ತಾಸೆಯಂತೂ ಇದ್ದೇ ಇರಲು ಸಾಧ್ಯ. ಆ ಹಿನ್ನೆಲೆಯಲ್ಲಿ ನೋಡಿದರೆ, ಇನ್ನೇನು ಗೊಂದಲಗಳು ಬಗೆಹರಿದವು ಎನ್ನುವಷ್ಟರಲ್ಲೇ ಸಿಎಂ ಯಡಿಯೂರಪ್ಪ ಅವರಿಗೆ, ಮತ್ತೊಂದು ಸಂದೇಶ ರವಾನೆಯಾಗಿದೆ.

ಈ ನಡುವೆ, ಸ್ವತಃ ಪಕ್ಷದ ಮುಖ್ಯಮಂತ್ರಿಗಳೇ ರಾಜೀನಾಮೆಯಂತಹ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದರೂ, ಅಂತಹ ಹೇಳಿಕೆ ಪಕ್ಷ ಮತ್ತು ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಾದರೂ ಕೂಡಲೇ ಪ್ರತಿಕ್ರಿಯಿಸಬೇಕಿದ್ದ ಪಕ್ಷದ ದೆಹಲಿ ವರಿಸ್ಠರು ಇನ್ನೂ ಮೌನ ಮುರಿದಿಲ್ಲ! ಹಾಗಾಗಿ, ಸಿಎಂ ಹೇಳಿಕೆ ಹೊರಬಿದ್ದು ಮೂರು ದಿನಗಳ ಬಳಿಕವೂ ಮುಂದುವರಿದಿರುವ ವರಿಷ್ಠರ ಆ ಮಹಾಮೌನ ಕೂಡ ಇನ್ನೇನನ್ನೋ ಸೂಚಿಸುವಂತಿದೆ! ಅದೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗದೇ ಹೋದರೂ, ತಹಬದಿಗೆ ಬಂದಿದ್ದ ಗೊಂದಲ ಮತ್ತೆ ಎದ್ದು ಕೂತಿದೆ ಎಂಬುದಂತೂ ದಿಟ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...