ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು ಮಾಧ್ಯಮ ಪ್ರತಿನಿಧಿಯೊಬ್ಬರು ಅಟ್ಟಾಡಿಸಿಕೊಂಡು ಹೋಗಿ ವರದಿ ಮಾಡಿದ ಘಟನೆ ಇನ್ನೂ ಹಸಿ ಹಸಿಯಾಗಿರುವಾಗಲೇ ಕರ್ನಾಟಕ ಸರ್ಕಾರ ಪಿಯು ಮತ್ತು ಡಿಗ್ರಿ ಕಾಲೇಜ್ (Degree Collage) ಪುನರಾರಂಭಕ್ಕೆ ಅನುಮತಿ ನೀಡಿತು. ಹೈಕೋರ್ಟಿನ (High court) ಮಧ್ಯಂತರ ಆದೇಶದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಕಡ್ಡಾಯ ಮಾಡಿದ್ದರೆ ಮಾತ್ರ ಸಮವಸ್ತ್ರ ಧರಿಸಬೇಕು ಎಂಬುವುದು ಸ್ಪಷ್ಟವಾಗಿದ್ದರೂ ನೂರಾರು ಹೈಸ್ಕೂಲ್ ವಿದ್ಯಾರ್ಥಿನಿಯರು (High School students) ಶಾಲೆಗೆ ಪ್ರವೇಶ ಸಿಗದೆ ವಾಪಾಸ್ ಆದದ್ದು ಕಣ್ಣ ಮುಂದೆ ಇರುವಂತೆಯೇ ಕಾಲೇಜು ವಿದ್ಯಾರ್ಥಿನಿಯರು ಸಹ ಗೇಟಿನ ಮುಂದೆ ಅಸಹಾಯಕರಾಗಿ ಕುಳಿತಿರುವ, ಕಣ್ಣೀರುಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ಇಷ್ಟೂ ವರ್ಷಗಳ ಕಾಲ ಹಿಜಾಬ್ (Hijab) ಧರಿಸಿಕೊಂಡು ಸಹಜವಾಗಿ ಇತರ ವಿದ್ಯಾರ್ಥಿನಿಯರ ಜೊತೆ ಓದುತ್ತಿದ್ದ, ಆಟವಾಡುತ್ತಿದ್ದ ಮಕ್ಕಳನ್ನು ಪ್ರತ್ಯೇಕವಾಗಿರಿಸುವ ಪ್ರವೃತ್ತಿಯೊಂದು ಕೋರ್ಟಿನ ಮಧ್ಯಂತರ ಆದೇಶದ ನಂತರ ರಾಜ್ಯಾದ್ಯಂತ ಕಂಡು ಬರುತ್ತಿದೆ.
ಬಲಪಂಥೀಯ ಬೆಂಬಲಿಗರು (Right Wing) ಹಿಜಾಬ್ ಶಾಲೆ-ಕಾಲೇಜಿನ ಸಮವಸ್ತ್ರವನ್ನು ಉಲ್ಲಂಘಿಸುತ್ತದೆ ಮತ್ತು ಪರಿಣಾಮವಾಗಿ ಸಮಾನತೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತಾರೆ. ಕರ್ನಾಟಕ ಸರ್ಕಾರದ (Karnataka Goverment) ಆದೇಶದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಕಾನೂನು, ಸುವ್ಯವಸ್ಥೆ ಮತ್ತು ಸಮಗ್ರತೆಯನ್ನು ಉಲ್ಲಂಘಿಸುವ ಬಟ್ಟೆಗಳನ್ನು ಧರಿಸುವಂತಿಲ್ಲ ಎಂದು ಹೇಳುತ್ತದೆ. ತಿಲಕ, ಸಿಖ್ ಪೇಟ ಅಥವಾ ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವಷ್ಟು ಅಪಾಯಕಾರಿಯೇ? ಮತ್ತೊಂದೆಡೆ ಮಾಧ್ಯಮ ಪ್ರತಿನಿಧಿಗಳು ಧರ್ಮ ಬೇಕೇ? ಶಿಕ್ಷಣ ಬೇಕೇ? ಎಂದು ವಿದ್ಯಾರ್ಥಿಗಳ ಮುಂದೆ ಮೈಕ್ ಹಿಡಿಯುತ್ತಿವೆ. ಆದರೆ ಧರ್ಮ ಮತ್ತು ಶಿಕ್ಷಣದಲ್ಲಿ ಒಂದನ್ನು ಆಯ್ದುಕೊಳ್ಳುವಂತೆ ಆದೇಶಿಸುವುದೇ ಬಾಲಿಷತನ ಮತ್ತು ಅಮಾನವೀಯ.
ಕರ್ನಾಟಕ ಹೈಕೋರ್ಟ್ನಲ್ಲಿ ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳ ಪರ ವಕೀಲರು, ಭಾರತದಲ್ಲಿ ಧಾರ್ಮಿಕ ಚಿಹ್ನೆಗಳು ಯಾವಾಗಲೂ ಸಾರ್ವಜನಿಕ ಜೀವನದ ಒಂದು ಭಾಗವಾಗಿದೆ, ಇದು ಸಾರ್ವಜನಿಕ ಜೀವನದಿಂದ ಧರ್ಮವನ್ನು ನಿರಾಕರಿಸುವ ಯುರೋಪಿಯನ್ ಮಾದರಿಗಿಂತ ಸಕಾರಾತ್ಮಕ ಜಾತ್ಯತೀತತೆಯ ಭಾರತೀಯ ಮಾದರಿಯನ್ನು ಸೂಚಿಸುತ್ತದೆ. ಮೂಲಭೂತವಾಗಿ 14, 21, 25ನೇ ವಿಧಿಗಳ ಆಧಾರದ ಮೇಲೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಶಿಕ್ಷಣದ ಹಕ್ಕಿನ ಭರವಸೆಯ ಆಧಾರದ ಮೇಲೆ, ಮುಸ್ಲಿಂ ಹೆಣ್ಣುಮಕ್ಕಳು (Muslim girls) ಸ್ಕಾರ್ಫ್ ಧರಿಸುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಪ್ರವೇಶವನ್ನು ನಿರಾಕರಿಸುವುದು ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಧರಿಸುವ ಹಕ್ಕನ್ನು ಹಲವಾರು ತೀರ್ಪುಗಳು ಸಮರ್ಥಿಸಿವೆ ಮತ್ತು ಇಸ್ಲಾಂನಲ್ಲಿ ಹಿಜಾಬ್ನ ಅಗತ್ಯತೆಯೂ ನ್ಯಾಯಾಲಯಗಳಲ್ಲಿ ಸಾಬೀತಾಗಿದೆ. ಇಷ್ಟಿದ್ದೂ ಕೇಸರಿ ಶಾಲನ್ನು ಮುಂದಿಟ್ಟುಕೊಂಡು ಬಲಪಂಥೀಯ ಸಂಘಟನೆಗಳು ತೋಡಿದ ಖೆಡ್ಡಾಕ್ಕೆ ಮಾಧ್ಯಮಗಳೂ ಬಿದ್ದು ಎಳೆಯ ಮಕ್ಕಳನ್ನು ಸಮಾಜ ದ್ರೋಹಿಗಳಂತೆ ಬಿಂಬಿಸುತ್ತಿವೆ.
ಮಾಧ್ಯಮಗಳ (Media) ಹಾಗೂ ಕೆಲ ಪ್ರಗತಿಪರರ ನಿರೂಪಣೆಯ ಪ್ರಕಾರ ಇನ್ನು ಎರಡು ತಿಂಗಳುಗಳಲ್ಲೇ ಪರೀಕ್ಷೆ ಎದುರಿಸಲಿರುವ ಮುಸ್ಲಿಂ ಯುವತಿಯವರ ತಲೆಯ ಮೇಲೆ ‘ಸಾರ್ವಜನಿಕ ಸುವ್ಯವಸ್ಥೆ’ ಕಾಪಾಡುವ ಮತ್ತು ‘ಧ್ರುವೀಕರಣ’ ವನ್ನು ತಗ್ಗಿಸುವ ಸಂಪೂರ್ಣ ಹೊರೆ ಬಿದ್ದಿದೆ. ಆದರೆ ಹಲವು ವರ್ಷಗಳಿಂದ ಹಿಜಾಬ್ ಧರಿಸುತ್ತಲೇ ವಿದ್ಯಾಭ್ಯಾಸ ಪಡೆಯುತ್ತಿರುವ ಆ ಹೆಣ್ಣುಮಕ್ಕಳು ತಮ್ಮ ಶಾಲೆ ಕಾಲೇಜುಗಳಲ್ಲಿ ಇದುವರೆಗೆ ಆಚರಿಸಿಕೊಂಡು ಬಂದಿರುವ ಇತರ ಧರ್ಮಗಳ ಆಚರಣೆಯನ್ನು ಇದುವರೆಗೆ ಪ್ರಶ್ನಿಸಿಯೇ ಇಲ್ಲ ಎನ್ನುವುದನ್ನು ಈ ಎರಡೂ ಪಂಗಡಗಳು ಪ್ರಜ್ಞಾಪೂರ್ವಕವಾಗಿ ಮರೆತಿವೆ. ಸಾರ್ವಜನಿಕ ಸುವ್ಯವಸ್ಥೆ, ಧರ್ಮ ನಿರಪೇಕ್ಷ ಸಮಾಜ, ಸಮಾನತೆ ಎಂದೆಲ್ಲಾ ಈಗ ಹುಯಿಲಿಡುತ್ತಿರುವ ಪಕ್ಷದ ಸದಸ್ಯರು, ಮುಖ್ಯಮಂತ್ರಿಗಳೇ ಕೇಸರಿ ವಸ್ತ್ರ ಧರಿಸಿ ಸಂಸತ್ತನ್ನೂ ಪ್ರವೇಶಿಸುತ್ತಾರೆ. ಆದರೆ ತಮ್ಮ ಧಾರ್ಮಿಕ ಅದಕ್ಕಿಂತ ಮುಖ್ಯವಾಗಿ ಸಾಂವಿಧಾನಿಕ ಹಕ್ಕಿನ ಪ್ರಕಾರ ಶಿಕ್ಷಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಿ ಎಂದು ವಿದ್ಯಾರ್ಥಿನಿಯರು ಕೇಳುತ್ತಿರುವುದನ್ನೇ ದೊಡ್ಡ ರಾದ್ದಾಂತ ಮಾಡಲಾಗುತ್ತಿದೆ.
ಆದ್ದರಿಂದ ಈ ಅಸಹನೆಗೆ ಖಂಡಿತಾ ಹಿಜಾಬ್ ಕಾರಣವಲ್ಲ. ಸಾರ್ವಜನಿಕ ಸುವ್ಯವಸ್ಥೆ, ಸಮಗ್ರತೆಯೂ ಒಂದು ನೆಪವಷ್ಟೇ. ಹಿಂದುತ್ವದ ಪ್ರಯೋಗ ಶಾಲೆಯೆಂದು ಜನಜನಿತವಾಗಿರುವು ಉಡುಪಿ, ದಕ್ಷಿಣ ಕನ್ನಡದಲ್ಲಿ ಎಲ್ಲಾ ರಂಗಗಳಲ್ಲೂ ತಮ್ಮ ಛಾಪೊತ್ತುತ್ತಿರುವ ಮುಸ್ಲಿಂ ಮಹಿಳೆಯರನ್ನು ಮುಖ್ಯವಾಹಿನಿಯಿಂದ ದೂರವಿಡುವ, ಆ ಮೂಲಕ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರಲ್ಲಿ ಅಭದ್ರತೆ ಹುಟ್ಟಿಸುವ ಸಂಚಿದು.