
ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಜೆಡಿಎಸ್ ಎಕ್ಸ್ ಖಾತೆಯಲ್ಲಿ ಆಕ್ರೋಶ ಹೊರ ಹಾಕಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರ ನಡೆಸುವ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು, ಕರಿಯ ಕುಮಾರಸ್ವಾಮಿ ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ. ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಮಾತುಗಳು ಅಕ್ಷಮ್ಯ. ಅಪರಾಧ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ. ಜೆಡಿಎಸ್‌ನ ಮಾಜಿ MLC ಶ್ರೀಕಂಠೇಗೌಡ ಮಾತನಾಡಿ, ಜಮೀರ್ ಅಹ್ಮದ್ ಖಾನ್ ಅವರನ್ನು ರಾಜಕಾರಣದಲ್ಲಿ ಬೆಳೆಸಿದ್ದೇ ಕುಮಾರಸ್ವಾಮಿ. ಆದರೆ ಇವತ್ತು ಈ ರೀತಿಯ ಪದಬಳಕೆ ಮಾಡಿರೋದು ಸರಿಯಲ್ಲ. ಚುನಾವಣಾ ಆಯೋಗಕ್ಕೆ ದೂರು ಕೊಡ್ತೇವೆ ಎಂದಿದ್ದಾರೆ. ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಚನ್ನಪಟ್ಟಣದ ಜನರೇ ತಕ್ಕ ಉತ್ತರ ಕೊಡ್ತಾರೆ ಎಂದಿದ್ದಾರೆ.

ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ವಾಗ್ದಾಳಿ ಮಾಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಜಮೀರ್ ಕರಿಯ ಕುಮಾರಸ್ವಾಮಿ ಎಂಬ ಪದಬಳಕೆ ಮಾಡಿರುವುದಕ್ಕೆ ಬಂಡೆಪ್ಪ ಕಾಶೆಂಪುರ್ ಖಂಡಿಸಿದ್ದು, ಕಾಂಗ್ರೆಸ್‌ನವರು ಕೂಡಲೇ ಜಮೀರ್ ಅವರನ್ನ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದ್ದಾರೆ.
ಜಮೀರ್ ಅಹ್ಮದ್ ಖಾನ್ ಗಲ್ಫ್ ಕಂಟ್ರಿಯಿಂದ ಬಂದಿರಬಹುದು. ಆದರೆ ಸಾಮಾನ್ಯವಾಗಿ ರೈತರ ಮಕ್ಕಳು ಕಪ್ಪಾಗಿರುತ್ತಾರೆ. ಕರಿಯಾ ಕುಮಾರಸ್ವಾಮಿ ಅನ್ನೋ ಮಾತಿಗೆ ಚನ್ನಪಟ್ಟಣದ ಜನರು ಮತದ ಮೂಲಕ ಪಾಠ ಕಲಿಸುತ್ತಾರೆ ಎಂದು ಜೆಡಿಎಸ್ ಮಾಧ್ಯಮ ವಕ್ತಾರ ನರಸಿಂಹಮೂರ್ತಿ ವಾಗ್ದಾಳಿ ಮಾಡಿದ್ದಾರೆ.
