ವಕ್ಫ್ ಬೋರ್ಡ್ ಆಸ್ತಿ ಎಂದು ರಾಜ್ಯಾದ್ಯಂತ ಎಂಟ್ರಿ ಆಗುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದಾರೆ. ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳನ್ನೂ ರದ್ದು ಮಾಡಲು ಸರ್ಕಾರದ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ನೋಟಿಸ್ಗಳನ್ನು ತಕ್ಷಣದಿಂದಲೇ ವಾಪಸ್ ಪಡೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡಬೇಡಿ ಎಂದಿರುವ ಸಿಎಂ ಸಿದ್ದರಾಮಯ್ಯ, ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಸಭೆ ನಡೆಸಿದ್ದಾರೆ.

ವಕ್ಫ್ ಜಮೀನು ವಿಚಾರದಲ್ಲಿ ಇತ್ತೀಚಿಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೋಟಿಸ್ ವಿಚಾರದಲ್ಲಿ ಕೆಲ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆಯೂ ಗರಂ ಆಗಿದ್ದಾರೆ. ವಕ್ಫ್ ವಿಚಾರ ಜೆಡಿಎಸ್ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಕೆ ಆಗ್ತಿದೆ ಎಂದು ಚಾಟಿ ಬೀಸಿದ್ದಾರೆ.

ವಕ್ಫ್ ಆಸ್ತಿ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಬಿಜೆಪಿ ಜೆಡಿಎಸ್ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ರಾಜ್ಯದ ಜನರು ಸೊಪ್ಪು ಹಾಕದಂತೆ ಮನವಿ ಮಾಡಿದ್ದಾರೆ. ಅಪ ಪ್ರಚಾರಗಳಿಗೆ ಕಿವಿಗೊಡದಂತೆ ಸಿಎಂ ಕೋರಿಕೊಂಡಿದ್ದಾರೆ.