ಅಷ್ಟೊಂದು ಜನಪ್ರಿಯವಾಗಿದ್ದ ಪ್ಲಾಸ್ಮಾ ಚಿಕಿತ್ಸೆ ಇತಿಹಾಸದ ಪುಟ ಸೇರಲು ಅಸಲಿ ಕಾರಣವೇನು?

“ನಾನು ಪ್ಲಾಸ್ಮಾ ದಾನ ಮಾಡಿದ್ದೇನೆ. ನೀವೂ ಪ್ಲಾಸ್ಮಾ ದಾನ ಮಾಡಿ” ಎಂದು ಅಭಿಮಾನಿಗಳನ್ನು ಕೇಳಿಕೊಳ್ಳುತ್ತಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಚಿತ್ರವನ್ನು ಮತ್ತು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದುದನ್ನು ನೆನಪಿಸಿಕೊಳ್ಳಿ. ತಮ್ಮ ಜನ್ಮದಿನದಂದು ಅವರು ಈ ಭರವಸೆಯ ಸಂದೇಶ ನೀಡಿದ್ದರು.

“ನೀವೂ ಪ್ಲಾಸ್ಮಾ ದಾನ ಮಾಡಿ, ಕರೋನಾ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ” ಎಂದು ಕೈಮುಗಿದು ಪ್ರಾರ್ಥಿಸುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಡಿಯೋ ತುಣುಕು ದೇಶದ ಪ್ರಮುಖ ಟಿವಿ ಚಾನೆಲ್ ಗಳಲ್ಲಿ ಹಲವು ತಿಂಗಳುಗಳ ಕಾಲ ನಿತ್ಯವೂ ಪ್ರಸಾರವಾಗುತ್ತಿದ್ದುದನ್ನು ಸ್ಮರಿಸಿಕೊಳ್ಳಿ.

ಮುಂದೆ ಕರೋನಾ ವಿರುದ್ಧದ ಹೋರಾಟದ ಅಂಗವಾಗಿ, ದಿಲ್ಲಿಯಲ್ಲಿ ಮಾತ್ರವಲ್ಲ, ದೇಶದ ನಾನಾ ಕಡೆ ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಗಳೂ ಆರಂಭವಾಗಿದ್ದವು. ಅಮೆರಿಕದಲ್ಲೂ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಆರಂಭಗೊಂಡಾಗ, “ನಿನ್ನೆ ದಿಲ್ಲಿ ಮಾಡಿದ್ದನ್ನು ಇಂದು ಅಮೇರಿಕಾ ಮಾಡುತ್ತಿದೆ” ಎಂದು ಕಳೆದ ಆಗಸ್ಟ್ 24ರಂದು ಕೇಜ್ರಿವಾಲ್ ಹೆಮ್ಮೆಯಿಂದ ಟ್ವೀಟ್ ಮಾಡಿದ್ದು, ಮಾಧ್ಯಮಗಳಲ್ಲೂ ಸಾಕಷ್ಟು ಪ್ರಚಾರವಾಗಿತ್ತು.

ಈ ಎಲ್ಲ ಹೆಮ್ಮೆಗಳೂ ಈಗ ಇತಿಹಾಸದ ಪುಟ ಸೇರಿವೆ. ಏಕೆಂದರೆ ಪರಿಚಯಿಸಿದ ಸುಮಾರು ಒಂದು ವರ್ಷದ ಬಳಿಕ, ಪ್ಲಾಸ್ಮಾ ಚಿಕಿತ್ಸಾ ವಿಧಾನವು ಕೋವಿಡ್ ರೋಗ ಗುಣಪಡಿಸುವಲ್ಲಿ ಬಹಳ ಪ್ರಯೋಜನಕಾರಿ ಅಲ್ಲ ಎನ್ನುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಪ್ಲಾಸ್ಮಾ ಚಿಕಿತ್ಸೆ ವಿಧಾನವನ್ನು ಕೈಬಿಟ್ಟಿದೆ. ದೇಶದಲ್ಲಿ ಕೋವಿಡ್ 19 ಗೆ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಮಾಡಿ ಪರಿಷ್ಕರಿಸಿರುವ ಕೇಂದ್ರ ಸರಕಾರವು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.

ಪ್ಲಾಸ್ಮಾ ಥೆರಪಿ ವಿರುದ್ಧ ಪತ್ರ ಬರೆದಿದ್ದ ವಿಜ್ಞಾನಿಗಳು:

ಕೊರೋನಾ ಸೋಂಕಿನ ಚಿಕಿತ್ಸೆಯಲ್ಲಿ ಬಳಸುತ್ತಿರುವ ಪ್ಲಾಸ್ಮಾ ಥೆರಪಿ ಹಾಗೂ ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿಗಳು ಸತ್ಯವನ್ನು ಆಧರಿಸಿಲ್ಲ ಎಂದು ಹಲವು ವೈದ್ಯ ವಿಜ್ಞಾನಿಗಳು, ಭಾರತ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ.ಕೆ.ವಿಜಯ್ ರಾಘವನ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಲಸಿಕೆ ತಜ್ಞ ಗಗನ್‍ದೀಪ್ ಕಾಂಗ್ ಹಾಗೂ ಡಾ.ಪ್ರಮೇಶ್ ಸಿ.ಎಸ್. ಸೇರಿದಂತೆ ಹಲವು ತಜ್ಞರು ಸಹಿ ಹಾಕಿದ್ದರು.

ಅಲ್ಲದೆ, ಪ್ಲಾಸ್ಮಾ ಚಿಕಿತ್ಸೆಯ ತರ್ಕ ರಹಿತ ಬಳಕೆಯಯವ ಕೊರೋನಾ ವೈರಸ್ ನ ಅಪಾಯಕಾರಿ ರೂಪಾಂತರಿ ಆವೃತ್ತಿಗಳನ್ನು ಹುಟ್ಟು ಹಾಕುವ ಅಪಾಯದ ಬಗ್ಗೆ ಪತ್ರದಲ್ಲಿ ಎಚ್ಚರಿಸಿದ್ದರು. ಈ ಸಂಬಂಧ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಡಿಜಿ ಬಲರಾಮ್ ಭಾರ್ಗವ ಮತ್ತು ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಅವರ ಹಸ್ತಕ್ಷೇಪದ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.

ಕಳೆದ ವಾರ ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದ್ದ, ಕೋವಿಡ್ 19 ಬಗ್ಗೆ ಐಸಿಎಂಆರ್ ನ್ಯಾಶನಲ್ ಟಾಸ್ಕ್ ಫೋರ್ಸ್, ಹಲವು ಪ್ರಕರಣಗಳಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಜನಕಾರಿ ಆಗಿಲ್ಲ ಎನ್ನುವುದರ ಬಗ್ಗೆ ಚರ್ಚೆ ನಡೆಸಿತ್ತು. ಇದೊಂದು ಅಸಮರ್ಪಕ ವಿಧಾನವೆನ್ನುವುದು ಖಚಿತವಾಗಿರುವುದರಿಂದ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿತ್ತು. ಇದರ ಆಧಾರದಲ್ಲಿ ಕೇಂದ್ರ ಸರಕಾರ ಪರಿಷ್ಕರಿಸಿದ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಈ ಹಿಂದೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿನ ನಿಯಮಾವಳಿಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ದಾನಿಗಳ ನೆರವಿನಿಂದ ಸಂಗ್ರಹಿಸಿದ ಪ್ಲಾಸ್ಮಾವನ್ನು ಬಳಸಿಕೊಳ್ಳಲು ವೈದ್ಯರಿಗೆ ಅನುಮತಿ ನೀಡಲಾಗಿತ್ತು.

ಪ್ಲಾಸ್ಮಾ ಥೆರಪಿ ಅಂದರೇನು?

ಸಾಮಾನ್ಯವಾಗಿ ರೋಗ ಹರಡುವ ರೋಗಕಾರಕಗಳು ನಮ್ಮ ದೇಹದ ಮೇಲೆ ದಾಳಿ ಮಾಡಿದಾಗ, ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯು ಪ್ರತಿಕಾಯಗಳೆಂಬ ಪ್ರೋಟೀನ್ ಗಳನ್ನು ಉತ್ಪಾದಿಸುತ್ತದೆ. ಅದು ದಾಳಿ ಮಾಡಿದ ರೋಗಕಾರಕ ಉಂಟು ಮಾಡುವ ಸೋಂಕಿನ ವಿರುದ್ಧ ಹೋರಾಡುತ್ತದೆ. ವೈರಸ್ ಸೋಂಕಿತ ರೋಗಿಯ ದೇಹವು ಸಾಕಷ್ಟು ಪ್ರತಿಕಾಯಗಳನ್ನು ಸೃಷ್ಟಿಸಿದಾಗ, ಅವು ತನ್ನ ಶತ್ರುವಿನ ವಿರುದ್ಧ ಹೋರಾಡಿ ಗೆಲುವು ತಂದುಕೊಟ್ಟು, ರೋಗಿಯನ್ನು ಸೋಂಕಿನಿಂದ ಕಾಪಾಡುತ್ತದೆ.

ಪ್ಲಾಸ್ಮಾ ಎಂಬುದು ಮಾತೃಕೆ ಆಗಿದ್ದು, ಅದರಲ್ಲಿ ರಕ್ತದ ಕಣಗಳು ತೇಲುತ್ತಿರುತ್ತದೆ. ದೇಹದ ರೋಗನಿರೋಧಕ ಚಕ್ರದೊಳಗೆ ಕಾಣಿಸುವ ಮಹತ್ವದ ಕಾಗ್ಸ್ ಗಳೇ ಈ ಪ್ರತಿಕಾಯಗಳು (ಆಂಟಿಬಾಡಿ). ಪ್ಲಾಸ್ಮಾ ಥೆರಪಿಯಲ್ಲಿ ಮೊದಲಿಗೆ ಕೋವಿಡ್ ವೈರಸ್ ವಿರುದ್ಧ ಹೋರಾಡಿ ಗೆದ್ದ ವ್ಯಕ್ತಿಯ ಪ್ರತಿಕಾಯಗಳನ್ನು, ಕೋವಿಡ್ ಗೆ ತುತ್ತಾಗಿ ತೀವ್ರವಾಗಿ ಬಳಲುತ್ತಿರುವ ವ್ಯಕ್ತಿಯ ದೇಹದೊಳಗೆ ಸೇರಿಸಲಾಗುತ್ತದೆ. ಆಗ ಗೆದ್ದವನ ಪ್ರತಿಕಾಯಗಳು, ಬಳಲುತ್ತಿರುವನ ದೇಹದಲ್ಲಿ ಸೇರಿಕೊಂಡು ಕೋವಿಡ್ 19 ವೈರಸ್ ವಿರುದ್ಧ ಹೋರಾಡುತ್ತದೆ ಮತ್ತು ಆತನೂ ದಾನಿಯಷ್ಟೇ ಶಕ್ತಿಶಾಲಿ ರಕ್ಷಣಾ ವ್ಯವಸ್ಥೆಯನ್ನು ಪಡೆದುಕೊಳ್ಳುವುದರಿಂದ ಆತ ಕೋವಿಡ್ 19 ಸೋಲಿಸಲು ನೆರವಾಗುತ್ತದೆ ಎನ್ನುವುದು ಪ್ಲಾಸ್ಮಾ ಥೆರಪಿಯ ಸರಳ ಪರಿಕಲ್ಪನೆ.

ರಕ್ತದಾನ ಮಾಡುವ ವಿಧಾನದಂತೆಯೇ ರಕ್ತದ ಪ್ಲಾಸ್ಮಾ ದಾನ ಮಾಡುವ ಪ್ರಕ್ರಿಯೆಯೂ ಇರುತ್ತದೆ ಎಂದು ಅಮೆರಿಕದಲ್ಲಿ ಮೊದಲ ಬಾರಿಗೆ ಪ್ಲಾಸ್ಮಾ ಥೆರಪಿ ಮಾಡಿ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಹೌಸ್ಟನ್ ಮೆಥಾಡಿಸ್ಟ್ ಹೇಳುತ್ತದೆ.

ಕರೋನಾ ಪೀಡಿತರ ಆಶಾ ಕಿರಣವಾಗಿದ್ದ ಪ್ಲಾಸ್ಮಾ ಥೆರಪಿ:

ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾಟ ಶುರುವಾದ ಆರಂಭದ ಕೆಲವು ತಿಂಗಳುಗಳಲ್ಲಿ ವೈದ್ಯ ಜಗತ್ತಿನಲ್ಲಿ ಪ್ಲಾಸ್ಮಾ ಥೆರಪಿಯು ಬಹಳ ಜನಪ್ರಿಯವಾಗಿತ್ತು. ನಗರಗಳು, ಪಟ್ಟಣಗಳ ವೈದ್ಯರೂ ತಾವು ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯಾಗಿ ಮಾಡಿರುವುದನ್ನು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ, ರೋಗಿಗಳ ಪಾಲಿಗೆ ಹೊಸ ಸ್ಫೂರ್ತಿಯನ್ನು ನೀಡುತ್ತಿದ್ದರು. ನಮ್ಮೂರಲ್ಲಿ ಈಗ ಪ್ಲಾಸ್ಮಾ ಥೆರಪಿ ಲಭ್ಯವಿದೆ ಎನ್ನುವುದು ಕೊರೋನಾ ಪೀಡಿತರಿಗೆ ಬಹಳ ದೊಡ್ಡ ಧೈರ್ಯವನ್ನು ತುಂಬುತ್ತಿತ್ತು. ಸಾಧಾರಣದಿಂದ ಗಂಭೀರ ಸ್ಥಿತಿಯಲ್ಲಿದ್ದ ಅದೆಷ್ಟೋ ಕೋವಿಡ್ ರೋಗಿಗಳು ನಮಗೂ ಪ್ಲಾಸ್ಮಾ ಚಿಕಿತ್ಸೆ ಕೊಡಿಸಿ ಎಂದು ವೈದ್ಯರಿಗೆ ದುಂಬಾಲು ಬೀಳುವಷ್ಟು ಜನಪ್ರಿಯವಾಗಿತ್ತು ಪ್ಲಾಸ್ಮಾ ಥೆರಪಿ.

ಅಷ್ಟೇಕೆ, ಕೋವಿಡ್ ನಿಂದ ಪೀಡಿತರಾಗಿದ್ದ ದೇಶದ ಪ್ರಮುಖ ರಾಜಕಾರಣಿಗಳು, ಸಚಿವರುಗಳು ಈ ಚಿಕಿತ್ಸಾ ವಿಧಾನದಿಂದ ಜೀವದಾನ ಪಡೆದಿದ್ದರು. ಕೇಂದ್ರ ಸಚಿವ ಶ್ರೀಪಾದ್ ನಾಯಕ್ , ದಿಲ್ಲಿ ಸರಕಾರದ ಸಚಿವರಾದ ಮನೀಶ್‍ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್ ಮುಂತಾದವರು ಕೂಡ ಇದೇ ಚಿಕಿತ್ಸೆಯಿಂದ ಪ್ರಾಣ ಉಳಿಸಿಕೊಂಡಿದ್ದರು. ಇದು ಪ್ಲಾಸ್ಮಾ ಥೆರಪಿಯ ಜನಪ್ರಿಯತೆಗೆ ಇನ್ನಷ್ಟು ಸ್ಫೂರ್ತಿ ನೀಡಿತ್ತು.

ಕ್ರಮೇಣ ಕೋವಿಡ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಮಟ್ಟದ ಸಂಶೋಧನೆಗಳಾಗತೊಡಗಿದವು. ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್ ರೋಗದ ವಿರುದ್ಧದ ಹೋರಾಟದಲ್ಲಿ ಬಹಳ ಪರಿಣಾಮಕಾರಿ ಅಸ್ತ್ರವಲ್ಲ ಎನ್ನುವುದೂ ಸಾಬೀತಾಗತೊಡಗಿತು. ಪ್ಲಾಸ್ಮಾ ಥೆರಪಿಗೆ ಒಳಗಾಗದವರೂ ಕೂಡ ನಿಧಾನವಾಗಿ ತಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಸ್ವತಃ ಹೋರಾಡಬಲ್ಲ ತಾಕತ್ತನ್ನು ಪಡೆಯುತ್ತಿರುವುದು ಖಚಿತವಾಗುತ್ತಿದ್ದಂತೆ ಪ್ಲಾಸ್ಮಾ ಥೆರಪಿಯು ನಿಧಾನವಾಗಿ ಅಸ್ತಿತ್ವವನ್ನು ಕಳೆದುಕೊಳ್ಳತೊಡಗಿತು. ಈ ನಡುವೆ ಕೊರೋನಾದ ರೂಪಾಂತರಿತ ಆವೃತ್ತಿಗಳು ಬರತೊಡಗುತ್ತಿದ್ದಂತೆ ಪ್ಲಾಸ್ಮಾ ಥೆರಪಿಯ ಉಪಯುಕ್ತತೆಯೂ ಕಡಿಮೆ ಆಗತೊಡಗಿತು.

ವೈದ್ಯಕೀಯ ತಜ್ಞರು ಸ್ವಾಗತಿಸಲು ಕಾರಣಗಳೇನು?:

ದೇಶದಲ್ಲಿ ಕೋವಿಡ್ 19 ಚಿಕಿತ್ಸೆಯ ನಿಯಮಾವಳಿಗಳನ್ನು ಪರಿಷ್ಕರಿಸಿ, ಅದರಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿರುವ ಕ್ರಮವನ್ನು ದೇಶದ ಹಲವಾರು ವೈದ್ಯಕೀಯ ತಜ್ಞರು ಸ್ವಾಗತಿಸಿದ್ದಾರೆ. ಹಾಗೂ ಇದೊಂದು ಅತ್ಯವಶ್ಯಕವಾಗಿ ಆಗಬೇಕಾಗಿದ್ದ ಅನಿವಾರ್ಯ ನಡೆ ಎಂದು ತಿಳಿಸಿದ್ಧಾರೆ.

ಪ್ಲಾಸ್ಮಾ ಥೆರಪಿಗೆ ಒಳಗಾದ ರೋಗಿಗಳಲ್ಲಿ ಕರೋನಾದ ರೂಪಾಂತರಿ ವೈರಸ್ ಗಳು ಹುಟ್ಟುತ್ತಿವೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿ ಬರುತ್ತಿದ್ದವು. ಕೋವಿಡ್ ವೈರಸ್ ನ ರೂಪಾಂತರಗಳನ್ನು ಉತ್ತೇಜಿಸಲು ಪ್ಲಾಸ್ಮಾ ಚಿಕಿತ್ಸೆ ನೆರವಾಗುತ್ತಿದೆ ಎಂದು ಕೆಲವು ವೈದ್ಯ ವಿಜ್ಞಾನಿಗಳು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು.

“ಪ್ಲಾಸ್ಮಾ ಥೆರಪಿಯು ಕಳೆದ ಒಂದು ವರ್ಷದಲ್ಲಿ ಕೋವಿಡ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ಫಲಪ್ರದವಾಗಿಲ್ಲ. ಈ ಚಿಕಿತ್ಸಾ ವಿಧಾನವು ಯಶಸ್ವಿ ಪ್ರಕ್ರಿಯೆಯಲ್ಲ ಎನ್ನುವುದು ಈಗಾಗಲೇ ಸಾಬೀತಾಗಿತ್ತು. ಹೀಗಾಗಿ ಕೇಂದ್ರ ಸರಕಾರ ಜಾಣ ನಿರ್ಧಾರವನ್ನು ಕೈಗೊಂಡಿದೆ” ಎಂದು ದಿಲ್ಲಿಯ ಗಂಗಾರಾಂ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಎಸ್. ರಾಣಾ ಅವರು ಪ್ಲಾಸ್ಮಾ ಥೆರಪಿ ಕೈಬಿಟ್ಟಿದ್ದನ್ನು ಸ್ವಾಗತಿಸಿದ್ಧಾರೆ.

ಯಾವ ಚಿಕಿತ್ಸಾ ವಿಧಾನದಿಂದ ಒಳಿತಿಗಿಂತ ಕೆಡುಕೇ ಹೆಚ್ಚಾದರೆ ಅಂಥ ಥೆರಪಿಯಿಂದ ಯಾವ ಪ್ರಯೋಜನವೂ ಇಲ್ಲ. ಹೀಗಾಗಿ ಪ್ಲಾಸ್ಮಾ ಚಿಕಿತ್ಸೆ ಕೈಬಿಡುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಹಲವು ವೈದ್ಯ ವಿಜ್ಞಾನಿಗಳು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಈಗಲೂ ಏರುಮುಖದಲ್ಲಿದೆ. ಅಂಥದ್ದರಲ್ಲಿ ಹಲವು ತಜ್ಞರು ಒಳ್ಳೆಯದ್ದಕ್ಕಿಂತ ಕೆಟ್ಟದ್ದನ್ನೇ ಹೆಚ್ಚಾಗಿ ಮಾಡಿದೆ ಎಂದು ಅಭಿಪ್ರಾಯಪಟ್ಟಿರುವ ಪ್ಲಾಸ್ಮಾ ಥೆರಪಿ ಕೈಬಿಟ್ಟಿರುವ ನಡೆ ಸ್ವಾಗತಾರ್ಹ ಎಂದು ದಿಲ್ಲಿಯ ಸಫ್ದರ್ ಜಂಗ್ ಆಸ್ಪತ್ರೆಯ ತಜ್ಞ ವೈದ್ಯೆ, ಸಹಾಯಕ ಪ್ರೊಫೆಸರ್ ಹಾಗೂ ಕೋವಿಡ್ 19 ನೋಡಲ್ ಅಧಿಕಾರಿಯಾಗಿರುವ  ಡಾ.ಶೀಬಾ ಮರ್ವಾ ಅಭಿಪ್ರಾಯಪಟ್ಟಿದ್ದಾರೆ.

ವಿಜ್ಞಾನ ಕ್ಷೇತ್ರವು ನಿರಂತರ ಬದಲಾವಣೆಗಳ ಪ್ರತೀಕ. ಇಂದು ಜನಪ್ರಿಯವಾಗಿರುವ ಔಷಧ, ಸಾಧನ, ಚಿಕಿತ್ಸಾ ವಿಧಾನ ನಾಳೆ ಇತಿಹಾಸವಾಗಬಹುದು. ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಕೂಡ ಇನ್ನು ಇತಿಹಾಸವಾಗಲಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...