ಒಂದು ಭಾಷೆಯ ಪರಂಪರೆ ಮತ್ತು ನೈಜ ಜಗತ್ತಿನಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕಾದ ಪಠ್ಯಪುಸ್ತಕಗಳು ಆ ಭಾಷೆಯ ಸಾಹಿತ್ಯ, ಸಂಪ್ರದಾಯವನ್ನೂ ಮಕ್ಕಳಿಗೆ ಪರಿಚಯಿಸುವಷ್ಟು ಸಶಕ್ತವಾಗಿರಬೇಕು. ದೇವನೂರು ಮಹದೇವ ಅವರು ತಮ್ಮ ಬಹಿರಂಗ ಪತ್ರದಲ್ಲಿ ಹೇಳಿರುವಂತೆ ಎಲ್ ಬಸವರಾಜು, ಎಎನ್ ಮೂರ್ತಿ ರಾವ್, ಪಿ ಲಂಕೇಶ್, ಸಾರಾ ಅಬೂಬಕರ್ ಅವರ ಕೃತಿಗಳನ್ನು ಕೈಬಿಟ್ಟರೆ ಅದಕ್ಕೆ ಕಾರಣರಾದವರಿಗೆ ಕರ್ನಾಟಕ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದೇ ತಿಳಿದುಕೊಳ್ಳಬೇಕಾಗುತ್ತದೆ. ಆರೆಸ್ಸೆಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಅವರ ಭಾಷಣದ ಸೇರ್ಪಡೆಯ ಅರ್ಹತೆ ಮತ್ತು ಅನರ್ಹತೆಗಳನ್ನು ಮೇಲಿನ ಲೇಖಕರ ಪಾಠಗಳನ್ನು ಅಳಿಸಿಹಾಕಿರುವುದರ ಹಿನ್ನೆಲೆಯಲ್ಲಿಯೇ ನೋಡಬೇಕಾಗುತ್ತದೆ. ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಯಾವುದೇ ಸೈದ್ಧಾಂತಿಕ ಪ್ರಭಾವ ಇರಲಿಲ್ಲ ಎಂದು ಸಮಿತಿ ಹೇಳುತ್ತಿದ್ದರೂ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಶೀಲನಾ ಸಮಿತಿಯು ಕರ್ನಾಟಕದ ಬಹುತ್ವ ಸಂಸ್ಕೃತಿಯನ್ನು ಪ್ರತಿನಿಧಿಸುವ ನಿರ್ದಿಷ್ಟ ಧ್ವನಿಗಳನ್ನು ಅಳಿಸುವ ಯತ್ನ ಮಾಡಿದೆ ಎನ್ನುವುದು ಎದ್ದು ಕಾಣುವ ಸತ್ಯ.
ಪಠ್ಯಪುಸ್ತಕಗಳು ಜಗತ್ತಿನ ಬಾಗಿಲು
ಕನ್ನಡ ಪುಸ್ತಕಗಳು ಮತ್ತು ಸಂಸ್ಕೃತಿಯ ಸುತ್ತವೇ ನಾನು ಬೆಳೆದಿದ್ದರೂ ಸಹ ನನಗೆ ಪಠ್ಯಪುಸ್ತಕದಲ್ಲಿ ಪಾಠವಾಗಿದ್ದ ಗಂಗಾಧರ ಚಿತ್ತಾಲರ ‘ಗುಲ್ಮೊಹರ್’ ಕವಿತೆಯನ್ನು ಓದಿದ ನಂತವೇ ಕಾವ್ಯದ ಬಗ್ಗೆ ಪ್ರೀತಿ ಹುಟ್ಟಿತು. ಈ ಒಂದು ಕವಿತೆ ಚಿತ್ತಾಲರ ಇನ್ನಷ್ಟು ಕವಿತೆಗಳನ್ನು ಹುಡುಕಲು ನನ್ನನ್ನು ಪ್ರೇರೇಪಿಸಿತು.
ದೇವನೂರು ಮಹಾದೇವ ಅವರ ‘ಡಾಂಬರು ಬಂದುದು’ ಮತ್ತು ಪಿ ಲಂಕೇಶ್ ಅವರ ‘ಅವ್ವ’ ಕವನಗಳಿಗೂ ಇದು ಅನ್ವಯಿಸುತ್ತದೆ . ಮೊದಲನೆಯದು ಗ್ರಾಮೀಣ ಜೀವನ ಮತ್ತು ಆಧುನಿಕತೆಯ ಸಂಗಮವನ್ನು ಬಗ್ಗೆ ವಿವರಿಸಿದ್ದರೆ, ಎರಡನೆಯದು ನನಗೆ ಜನಪ್ರಿಯ ಸಂಸ್ಕೃತಿಯಲ್ಲಿ ನಾನು ನೋಡಿದ ಮತ್ತು ನನ್ನದೇ ತಾಯಿಯನ್ನು ಪ್ರತಿಬಿಂಬಿಸುವಂತಹಾ ಕವಿತೆ. ಈ ಎರಡೂ ಪದ್ಯಗಳನ್ನು ಪಠ್ಯ ಪುಸ್ತಕಗಳಲ್ಲಿ ಓದಿದ ನಂತರ ನಾನು ಅವರ ಕೃತಿಗಳನ್ನು ಹೇಗೆ ಓದದೇ ಇರಲಿ!
ಲಂಕೇಶರ ಸಂಗ್ರಹಿತ ಸಂಪಾದಕೀಯ ಬರಹಗಳಾದ ‘ಟೀಕೆ ಟಿಪ್ಪಣಿ’ಯನ್ನು ನಾನು ಮೊದಲ ಬಾರಿಗೆ ಓದಿದಾಗ ಕಾಲಚಕ್ರದಲ್ಲಿ ಹಿಂದಕ್ಕೆ ಚಲಿಸಿದಂತಾಗಿತ್ತು. ಯಾವ ಸಮಕಾಲೀನ ಸಮಸ್ಯೆಯೂ ಅವರ ಸಂಪಾದಕೀಯ ಲೇಖನದಿಂದ ತಪ್ಪಿಸಿಕೊಂಡಿರಲಿಲ್ಲ. ಫ್ರಾಂಕೋಯಿಸ್ ಮಿತ್ತರಾಂಡ್‌ನಿಂದ ಮುಅಮರ್ ಗಡಾಫಿಯವರೆಗೆ ಅವರು ಇಂಟರ್ನೆಟ್ ಇಲ್ಲದ ಕಾಲದಲ್ಲೂ ವಿದೇಶಿ ರಾಜಕೀಯವನ್ನು ಕನ್ನಡದ ಒಂದು ಇಡೀ ಪೀಳಿಗೆಗೆ ಪರಿಚಯಿಸಿದ್ದರು. ‘ಎದೆಗೆ ಬಿದ್ದ ಅಕ್ಷರ’ದಲ್ಲಿನ ಒಂದು ಸಣ್ಣ ಬರಹದಲ್ಲಿ, ದೇವನೂರು ಅವರು “ಜನರು ಏನನ್ನಾದರೂ ಮಾಡುವ ಮೊದಲು ಎರಡು ಅಥವಾ ಮೂರು ಬಾರಿ ಯೋಚಿಸುತ್ತಿದ್ದರು. ಲಂಕೇಶ್ ಅವರ ಉಪಸ್ಥಿತಿ ಎಷ್ಟು ಪ್ರಬಲವಾಗಿತ್ತು” ಎನ್ನುತ್ತಾರೆ. ಲಂಕೇಶ್ ಅವರು ಕನ್ನಡದ ಸಾಕ್ಷಿ ಪ್ರಜ್ಞೆಯಂತಿದ್ದರು ಎನ್ನುವುದಕ್ಕೆ ಈ ಮಾತೇ ಸಾಕ್ಷಿ.
ಪಿ ಲಂಕೇಶ್ ಅವರ ಹೆಸರನ್ನು ಮನೆಯಲ್ಲಿ ಕೇಳಿರದ ವಿದ್ಯಾರ್ಥಿಗಳು ಕನಿಷ್ಠ ಈ ವ್ಯಕ್ತಿಯನ್ನು ಪಠ್ಯಪುಸ್ತಕಗಳಲ್ಲಾದರೂ ಓದಬೇಕು. ಇಂತಹ ಸಾಧ್ಯತೆಯನ್ನೇ ಇಲ್ಲವಾಗಿಸಲು ಹೊರಟಿದೆ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ. ಲಂಕೇಶ್ ಅವರನ್ನು ಕೈಬಿಟ್ಟ ಕನ್ನಡ ಪಠ್ಯಪುಸ್ತಕ ಪ್ರಶ್ನಾರ್ಹ ಮಾತ್ರವಲ್ಲ, ಅದು ಕನ್ನಡ ಸಾಹಿತ್ಯಕ್ಕೆ ಅಗೌರವ. ಅವರನ್ನು ಅಧ್ಯಯನ ಮಾಡದೆಯೇ ಎಸ್ಎಸ್ಎಲ್ಸಿ ಕನ್ನಡ ಮೊದಲ ಭಾಷಾ ಪರೀಕ್ಷೆಯನ್ನು ಪಾಸ್ ಮಾಡಿದೆ ಎಂದು ಒಬ್ಬ ವಿದ್ಯಾರ್ಥಿ ಹೇಗೆ ಹೇಳಲು ಸಾಧ್ಯ?

ತಿರಸ್ಕರಿಸಲ್ಪಟ್ಟ ಮೌಲ್ಯಗಳು
ಸಾರಾ ಅಬೂಬಕ್ಕರ್ ಅವರ ‘ಯುದ್ಧ’ ಎನ್ನುವುದು ಶತ್ರುಗಳ ಭೂಪ್ರದೇಶದಲ್ಲಿ ಕ್ರ್ಯಾಶ್ಲ್ಯಾಂಡ್ ಆದ ವೈದ್ಯರ ಬಗೆಗಿನ ಒಂದು ಸರಳ ಕಥೆಯಾಗಿದೆ. ಈ ಕಥೆಯು ಯುದ್ಧದಲ್ಲಿ ಭಾಗಿಯಾದ ರಾಷ್ಟ್ರಗಳ ಹೆಸರನ್ನು ಪ್ರಸ್ತಾಪಿಸದಿದ್ದರೂ, ಒಂದು ಕಡೆ ಮುಸ್ಲಿಂ ಇನ್ನೊಂದು ಕಡೆ ಹಿಂದೂ ಎನ್ನುವುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತದೆ. ಈ ಅಧ್ಯಾಯವು ಪರಾನುಭೂತಿ ಮತ್ತು ಮಾನವೀಯತೆಯಂತಹ ಸಾರ್ವತ್ರಿಕ ಮೌಲ್ಯಗಳೊಂದಿಗೆ ರೂಪುಗೊಂಡಿದೆ. ಇದು ಯುದ್ಧದ ಅನಿವಾರ್ಯತೆ ಪ್ರಶ್ನಿಸುವ ಮತ್ತು ರಾಷ್ಟ್ರೀಯತೆಯನ್ನು ವಿಮರ್ಶಿಸುವ ಕಥೆಯಾಗಿತ್ತು.
ಎ ಎನ್ ಮೂರ್ತಿ ರಾವ್ ಅವರ ‘ವ್ಯಾಘ್ರ ಗೀತೆ’ಯು ಆಹಾರದ ರಾಜಕೀಯ ಮತ್ತು ತಿನ್ನುವ ಆಹಾರವನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿರುವ ಶ್ರೇಣೀಕೃತ ವ್ಯವಸ್ಥೆಯನ್ನು ಪ್ರಶ್ನಿಸುವ ಪಾಠವಾಗಿತ್ತು. ಅಂತಿಮವಾಗಿ ಇದು ವಿದ್ಯಾರ್ಥಿಗಳನ್ನು ನಾಸ್ತಿಕತೆಯ ಬಗೆಗಿನ ಮತ್ತು ದೇವರ ಪರಿಕಲ್ಪನೆಯ ಬಗೆಗಿನ ಅವರ ಬರಹ ‘ದೇವರು’ ಅನ್ನು ಹುಡುಕಲು ಮತ್ತು ಓದಲು ಪ್ರೇರೇಪಿಸಬಹುದು.
ಭಾಷಾ ಪಠ್ಯಗಳು ಮಾಡಬೇಕಿರುವುದು ಇದನ್ನೇ, ಅವು ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಪ್ರೇರೇಪಿಸುತ್ತದೆ ಸಮಾಜಕ್ಕೆ ಕನ್ನಡಿ ಹಿಡಿಯುತ್ತದೆ ಮತ್ತು ಸಮಕಾಲೀನ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದನ್ನು ಪ್ರೋತ್ಸಾಹಿಸುತ್ತವೆ. ಇತರ ವಿಷಯಗಳಂತಲ್ಲದೆ, ಭಾಷೆಯ ತರಗತಿಗಳು ಪಠ್ಯವನ್ನು ಮೀರಿ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರಭಾವ ಬೀರುತ್ತವೆ.
ನೀವು ಈಗಾಗಲೇ ಟೆಕ್ಸ್ಟ್ ಮತ್ತು ಲೇಖಕರ ಪಟ್ಟಿಯಲ್ಲಿ ಒಂದು ಮಾದರಿಯನ್ನು ಕಂಡುಕೊಂಡಿದ್ದರೆ ಆಶ್ಚರ್ಯವೇನಿಲ್ಲ. ಅವರು ಕನ್ನಡ ಸಾಹಿತ್ಯವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುವುದಿಲ್ಲ ಮಾತ್ರವಲ್ಲ, ಆರ್ಎಸ್ಎಸ್ ಅಜೆಂಡಾದ ಮೌಲ್ಯಗಳನ್ನು ಸಮರ್ಥಿಸುವಂತಿದೆ ನಮ್ಮ ಸಂವಿಧಾನವನ್ನು ವಿರೋಧಿಸುವಂತಿದೆ.
ಕನ್ನಡದ ಮಕ್ಕಳ ಸಂಸ್ಕೃತೀಕರಣ
ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲೆ ತನಕ ಓದಿರುವ ನಾನು ವೈಯಕ್ತಿಕವಾಗಿ ಸಂಸ್ಕೃತ-ಭಾರೀ ಪಠ್ಯಗಳನ್ನು ಓದಿದ್ದೇನೆ. ವಿಶೇಷವಾಗಿ ಗಣಿತ ವಿಜ್ಞಾನ ಪಠ್ಯಪುಸ್ತಕಗಳಲ್ಲಿ. ಇತ್ತೀಚೆಗೆ ಹೆಚ್ಚು ಹೆಚ್ಚು ಕನ್ನಡ ಪದಗಳನ್ನು ಬಳಸಬೇಕೆಂಬ ಆಗ್ರಹ ಕೇಳಿಬರುತ್ತಿರುವುದು ಸಮಾಧಾನತರುವ ಸಂಗತಿಯಾಗಿದೆ. ಆದರೆ ಪಠ್ಯಪುಸ್ತಕ ಸಮಿತಿಯು ಇದಕ್ಕೆ ವ್ಯತಿರಿಕ್ತವಾಗಿ ಹೋಗುತ್ತಿದೆ.
ಮೂಲತಃ ಆಡುಮಾತು ಕನ್ನಡದಲ್ಲಿ ಬರೆದ ಪಠ್ಯಗಳನ್ನು ತೆಗೆದು ಹಾಕಿ ಎರಡು ಪಠ್ಯಗಳನ್ನು ಸೇರಿಸಲಾಗಿದೆ. ಅದರಲ್ಲಿ ಒಂದು ಹೆಡ್ಗೆವಾರರ ‘ಆದರ್ಶ ಪುರುಷ ಯಾರಾಗಬೇಕು?’ ಮತ್ತು ಇನ್ನೊಂದು ಶತಾವಧಾನಿ ಆರ್ ಗಣೇಶ್‌ರ ‘ಶ್ರೇಷ್ಠ ಭಾರತೀಯ ಚಿಂತನೆಗಳು’. ಇವು ಕಷ್ಟಕರ ಸಂಸ್ಕೃತ ಪದಗಳು ಮತ್ತು ಯಜ್ಞ, ಧ್ಯಾನ, ಪುರುಷಾರ್ಥಗಳ ಬಗ್ಗೆಯೇ ಮಾತಾಡುತ್ತವೆ. ಕನ್ನಡ ಭಾಷಾ ಪಠ್ಯಪುಸ್ತಕವು ಅವುಗಳನ್ನು ಏಕೆ ಹೊಂದಬೇಕು ಎಂಬುದು ನನಗೆ ಅರ್ಥವಾಗುವುದಿಲ್ಲ. ಕನ್ನಡ ಪಠ್ಯಪುಸ್ತಕವು ನೈತಿಕ ಶಿಕ್ಷಣಕ್ಕಾಗಿ ಇರುವುದಲ್ಲ, ವಿಶೇಷವಾಗಿ ಬ್ರಾಹ್ಮಣ್ಯದ ಕಲ್ಪನೆಗಳನ್ನು ಆಧರಿಸಿ ನೈತಿಕಪಾಠಗಳಿಗಲ್ಲ. ಅದರಲ್ಲೂ ಕನ್ನಡದ ಶ್ರೇಷ್ಠ ಪಠ್ಯಗಳನ್ನು ಹೊರಗಿಟ್ಟು ಮಕ್ಕಳು ಓದುವಂಥದ್ದು ಅಲ್ಲವೇ ಅಲ್ಲ.

ಅಲ್ಲದೆ ಈ ಪಠ್ಯಗಳು ಸಂಕುಚಿತವಾಗಿದೆ, ಆದೇಶಗಳನ್ನು ನೀಡುವಂತಿದೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರೋತ್ಸಾಹಿಸುವುದಿಲ್ಲ. ಪಾಠಗಳನ್ನು ಆನಂದಿಸುವ ಬದಲು, ಬಲವಂತವಾಗಿ ಪಾಠಗಳನ್ನು ಮಕ್ಕಳ ಹೇರಿಸಿಕೊಳ್ಳುವಂತಿದೆ. ಕೇವಲ ಬ್ರಾಹ್ಮಣ ಲೇಖಕರನ್ನು ಸೇರಿಸುವುದರಿಂದ ಪಠ್ಯಪುಸ್ತಕ ಬ್ರಾಹ್ಮಣೀಯವಾಗುವುದಿಲ್ಲ ನಿಜ. ಆದರೆ ಪಠ್ಯವನ್ನು ಅರ್ಥಮಾಡಿಕೊಳ್ಳದೆ ಪರೀಕ್ಷೆಗಾಗಿ ಬಾಯಿಪಾಠ ಮಾಡಲು ಒತ್ತಾಯಿಸುವುದು ಪಠ್ಯಪುಸ್ತಕಗಳನ್ನು ಬ್ರಾಹ್ಮಣೀಯವಾಗಿಸುತ್ತದೆ. ಶ್ರೇಷ್ಠತೆಯ ಸಿದ್ಧಾಂತದ ಆಧಾರದ ಮೇಲೆ ಅಸಮಂಜಸ ವಿಚಾರಗಳ ಬಗ್ಗೆ ಹೆಚ್ಚಾಗಿ ಮಾತನಾಡುವ ಪಠ್ಯಗಳನ್ನು ಸೇರಿಸುವುದು, ವಸ್ತು ಸ್ಥಿತಿಗಳನ್ನು ಮರೆಮಾಚುವುದು, ಸಮಕಾಲೀನ ಅಪಾಯಗಳ ಬಗ್ಗೆ ಮಾತನಾಡದೇ ಇರುವುದು ಬ್ರಾಹ್ಮಣ್ಯವಾಗಿದೆ.
ಕನ್ನಡದ ಮಕ್ಕಳು ರಾಜ್ಯದ ಎಲ್ಲಾ ಮೂಲೆಗಳ ಮತ್ತು ಈ ನೆಲದ ಎಲ್ಲಾ ಉಪಭಾಷೆಗಳ ಪಠ್ಯಗಳನ್ನು ಅಧ್ಯಯನ ಮಾಡುವುದು ಕಾಲದ ಜರೂರತ್ತಾಗಿದೆ.
ಪಠ್ಯಪುಸ್ತಕಗಳಲ್ಲಿನ ಸಮಸ್ಯೆಗಳು
ಕನ್ನಡ ಪಠ್ಯಪುಸ್ತಕಗಳು ಎಂದೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಿಖರವಾಗಿ ಪ್ರತಿನಿಧಿಸಿರಲಿಲ್ಲ. ಇದು ಕುವೆಂಪು ಆಗಿರಲಿ ಅಥವಾ ಬಸವಣ್ಣನೇ ಆಗಿರಲಿ, ಆಯ್ದ ಕೃತಿಗಳನ್ನು ತಮ್ಮ ಜಾತಿ ಸಂದರ್ಭ ಮತ್ತು ಕ್ರಾಂತಿಕಾರಿ ಸಾಮರ್ಥ್ಯದ ರಹಿತಾಗಿಯೇ ವಿದ್ಯಾರ್ಥಿಗಳ ಮುಂದೆ ಪ್ರಸ್ತುತಪಡಿಸಲಾಗಿತ್ತು. ವಚನ ಚಳವಳಿಯ ಸಂದರ್ಭದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಅವುಗಳ ಒಳಗಿದ್ದ ಜಾತೀಯತೆಯ ವಿಮರ್ಶೆಗಳಾಗಿ ಪ್ರಸ್ತುತ ಪಡಿಸಿದ್ದಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಮೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದ್ದೇ ಹೆಚ್ಚು.
ಆದರೆ ಈ ಉದಾಸೀನತೆ ಮತ್ತು ಅನ್ಯಾಯಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ ಈಗಿನ ಪಠ್ಯಪುಸ್ತಕಗಳು. ಕೆಲವನ್ನು ಪ್ರಜ್ಞಾಪೂರ್ವಕವಾಗಿಯೇ ಹೊರಗಿಡುವ ಹಿಂದುತ್ವದ ರಾಜಕೀಯವು ಅಂತಿಮವಾಗಿ ಯುರೋಪಿಯನ್ ಎಕ್ಸ್‌ಕ್ಲೂಷನ್ ಪೊಲಿಟಿಕ್ಸ್‌ನ ದಾರಿಯನ್ನೇ ತುಳಿಯಲಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಆ ಹಾದಿಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ನಮ್ಮ ಮಕ್ಕಳನ್ನು ರಕ್ಷಿಸಬೇಕು. ಅದಕ್ಕಾಗಿ, ಕರ್ನಾಟಕದ ಮಕ್ಕಳು ತಮ್ಮ ಜಾತ್ಯತೀತ ಮತ್ತು ಬಹುತ್ವದ ಸಾಹಿತ್ಯ, ಇತಿಹಾಸವನ್ನು ಅಳವಡಿಸಿಕೊಳ್ಳಬೇಕು. ಯಾಕೆಂದರೆ ನಾಗ್ಪುರದೆಡೆಗಿನ ಹಾದಿಯನ್ನು ಹಿಂದುಳಿದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಭುಜದ ಮೇಲೆಯೇ ಕಾಲಿಟ್ಟು ನಿರ್ಮಿಸಲಾಗಿದೆ.
ಮೂಲ: ಅಮೂಲ್ಯ ಕೆ, ಡೆಕ್ಕನ್ ಹೆರಾಲ್ಡ್












