ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರ ಹಾಗೂ ಎಕ್ಸಿಟ್ ಪೋಲ್‌ಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಮತದಾನ ಮುಗಿದ ಬಳಿಕ ಹೊರಬಂದ ಎಕ್ಸಿಟ್ ಪೋಲ್‌ಗಳಲ್ಲಿ ಬಹುತೇಕವು ಬಿಜೆಪಿಗೆ ಬಹುಮತ ಸಿಗಲಿದೆ ಎಂದು ಸೂಚಿಸಿರುವುದು ಮಮತಾ ಅಸಮಾಧಾನಕ್ಕೆ ಕಾರಣವಾಗಿದೆ.

“ಈ ಸಮೀಕ್ಷೆಗಳು ನಿಖರ ಮಾಹಿತಿಯನ್ನು ನೀಡುವುದಿಲ್ಲ. ಅವು ಬಿಜೆಪಿ ಕಚೇರಿಯಂತೆ ಕೆಲಸ ಮಾಡುತ್ತಿವೆ. ನಿಜವಾದ ಜನಾಭಿಪ್ರಾಯ ಮೇ 4ರಂದು ಹೊರಬೀಳಲಿದೆ,” ಎಂದು ಅವರು ಹೇಳಿದ್ದಾರೆ.ವಿಡಿಯೋ ಸಂದೇಶದ ಮೂಲಕ ಮಾತನಾಡಿದ ಮಮತಾ ಬ್ಯಾನರ್ಜಿ, “ಕೇಂದ್ರ ಸರ್ಕಾರ ಎಷ್ಟೇ ತೊಂದರೆ ಕೊಟ್ಟರೂ ಬಂಗಾಳದ ಜನರು ನಮ್ಮ ಬೆಂಬಲದಲ್ಲಿದ್ದಾರೆ. ಈ ಬಾರಿ ನಾವು 226ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಸರ್ಕಾರ ರಚಿಸುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ, “ಬಿಜೆಪಿ ಬಂಗಾಳವನ್ನು ಗೆಲ್ಲಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ಮತ ಎಣಿಕೆ ದಿನ ನಾನು ಸ್ವತಃ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಜನೆ ಹೊಂದಿದ್ದೇನೆ.

ನನಗೆ ನನ್ನ ಮತದಾರರ ಮೇಲೆ ಪೂರ್ಣ ನಂಬಿಕೆ ಇದೆ,” ಎಂದರು.
294 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 148 ಸ್ಥಾನಗಳು ಅಗತ್ಯವಿದೆ. ಕೆಲವು ಸಮೀಕ್ಷೆಗಳು ಬಿಜೆಪಿಗೆ ಮುನ್ನಡೆ ಸೂಚಿಸಿದರೆ, ಇನ್ನೂ ಕೆಲವು ಸಮೀಕ್ಷೆಗಳು ತೃಣಮೂಲ ಕಾಂಗ್ರೆಸ್‌ಗೆ ಮೇಲುಗೈ ಸೂಚಿಸಿವೆ.ಇನ್ನು 2021ರ ಚುನಾವಣೆಯಲ್ಲಿಯೂ ಸಮೀಕ್ಷೆಗಳು ಕಠಿಣ ಸ್ಪರ್ಧೆ ಸೂಚಿಸಿದ್ದರೂ, ಅಂತಿಮವಾಗಿ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಎಕ್ಸಿಟ್ ಪೋಲ್‌ಗಳನ್ನು ಅಂತಿಮ ಫಲಿತಾಂಶವೆಂದು ಪರಿಗಣಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.






