ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ‘ಸಾಧನಾ ಸೌರಭ’ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹಿರಿಯ ಪತ್ರಕರ್ತ ದಿವಂಗತ ರವಿ ಬೆಳೆಗೆರೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ‘ರಾಷ್ಟ್ರೀಯ ಸೌರಭ ಸಮ್ಮಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, “ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ ರವಿ ಬೆಳೆಗೆರೆ ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ಅವರು ಪತ್ರಿಕಾ ಲೋಕದ ಒಬ್ಬ ಪಾತಕಿ,” ಎಂದು ಕಿಡಿಕಾರಿದರು.ಮುಂದುವರಿದು, “ಅವರು ಯಾವಾಗಲೂ ಎಲ್ಲರನ್ನು ಹೀಯಾಳಿಸುವ ರೀತಿಯಲ್ಲಿ ಬರೆಯುತ್ತಿದ್ದರು. ಅದರಲ್ಲೂ ಮಹಿಳೆಯರನ್ನು ಕೀಳಾಗಿ ಉಲ್ಲೇಖಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದರು. ನನ್ನ ಬಗ್ಗೆ ಕೂಡ ಅಸಹ್ಯವಾಗಿ, ಕೆಟ್ಟ ರೀತಿಯಲ್ಲಿ ಬರೆಯಲಾಗಿತ್ತು. ಸತತವಾಗಿ 27 ವಾರಗಳ ಕಾಲ ತಮ್ಮ ಪತ್ರಿಕೆಯಲ್ಲಿ ನನ್ನ ವಿರುದ್ಧ ಲೇಖನ ಪ್ರಕಟಿಸಿದ್ದರು,” ಎಂದು ಆರೋಪಿಸಿದರು.

“ಪತ್ರಿಕೆಯಲ್ಲಿ ವೈಯಕ್ತಿಕ ಮಾನಹಾನಿ ಮಾಡುವ ರೀತಿಯಲ್ಲಿ ಬರೆಯುತ್ತಿದ್ದರು. ವಿಶೇಷವಾಗಿ ಮಹಿಳೆಯರ ಬಗ್ಗೆ ಅವಮಾನಕಾರಿ ಪದಗಳನ್ನು ಬಳಸಿ ಪತ್ರಿಕೆ ಮಾರಾಟ ಮಾಡುತ್ತಿದ್ದರು. ಚಿತ್ರರಂಗದ ನಟಿಯರ ಬಗ್ಗೆ ಅತಿ ಅಸಭ್ಯವಾಗಿ ಬರೆದು, ಸಮಾಜದಲ್ಲಿ ಅವರಿಗೆ ತಲೆ ಎತ್ತಿ ನಡೆಯಲು ಕೂಡ ಅವಕಾಶ ಕೊಡದಂತಾಗುತ್ತಿತ್ತು,” ಎಂದು ಬೇಸರ ವ್ಯಕ್ತಪಡಿಸಿದರು.ಇದಲ್ಲದೆ, ಮತಾಂತರದ ಕುರಿತು ನಡೆದ ಚರ್ಚೆಗಳ ವೇಳೆ ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಬಗ್ಗೆಯೂ ಬೆಳೆಗೆರೆ ಕೆಟ್ಟ ಶಬ್ದಗಳನ್ನು ಬಳಸಿದ್ದರು ಎಂದು ಪ್ರತಾಪ್ ಸಿಂಹ ಆರೋಪಿಸಿದರು.

“ಭೈರಪ್ಪ ಅವರನ್ನು ಎಡಪಂಥೀಯರಿಗಿಂತಲೂ ತುಚ್ಛವಾಗಿ ಬರೆದಿದ್ದರು,” ಎಂದು ಹೇಳಿದರು. ಪ್ರತಾಪ್ ಸಿಂಹ ಅವರ ಈ ಹೇಳಿಕೆಗಳು ಇದೀಗ ಹೊಸ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ವಲಯಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.





