ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಕ್ಸ್–ಫೋರ್‌ಗಳ ಸುರಿಮಳೆಗೈಯುತ್ತಾ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿರುವ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಈಗ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್‌ಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ಕ್ರೀಡಾ ವಿಶ್ಲೇಷಕ ನೌಮಾನ್ ನಿಯಾಝ್, “ವೈಭವ್ ಬ್ಯಾಟ್‌ನಲ್ಲಿ ಎಐ ಚಿಪ್ ಇರಬಹುದು” ಎಂದು ವಿಚಿತ್ರ ಆರೋಪ ಮಾಡಿದ್ದಾರೆ.

ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ನಿಯಾಝ್, “ಈ ವಯಸ್ಸಿನಲ್ಲಿ ಇಂತಹ ಆಟ ಅಸಾಧ್ಯವೆನಿಸುತ್ತದೆ. ಅವರ ಬ್ಯಾಟ್ ಅನ್ನು ಲ್ಯಾಬ್‌ನಲ್ಲಿ ಪರೀಕ್ಷಿಸಬೇಕು. ಇದರಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ ಇರಬಹುದು” ಎಂದು ಹೇಳಿದ್ದಾರೆ.ಈ ಹೇಳಿಕೆಗೆ ಪ್ರತಿಕ್ರಿಯಿಸಿದ ವೈಭವ್ ಸೂರ್ಯವಂಶಿ, ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಚುಟುಕಾಗಿ ಉತ್ತರಿಸಿದ್ದಾರೆ. “ನನ್ನ ಬ್ಯಾಟ್‌ನಲ್ಲಿ ಚಿಪ್ ಇದ್ದರೆ ಅದನ್ನು ದೇವರೇ ಅಳವಡಿಸಿ ಕಳುಹಿಸಿದ್ದಾನೆ. ನಾನು ಕೇವಲ ಅದನ್ನು ಬಳಸುತ್ತಿದ್ದೇನೆ ಅಷ್ಟೇ,” ಎಂದು ಅವರು ನಗುತ್ತಾ ಹೇಳಿದ್ದಾರೆ.

ವೈಭವ್ ಅವರ ಈ ಸರಳ ಹಾಗೂ ಚಾತುರ್ಯಪೂರ್ಣ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಇತ್ತ ಮೈದಾನದಲ್ಲಿಯೂ ವೈಭವ್ ಸೂರ್ಯವಂಶಿ ಅಬ್ಬರದ ಪ್ರದರ್ಶನ ಮುಂದುವರಿಸಿದ್ದು, ಈ ಸೀಸನ್‌ನಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕೇವಲ 167 ಎಸೆತಗಳಲ್ಲಿ 400 ರನ್ ಪೂರೈಸಿರುವ ಅವರು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 37 ಎಸೆತಗಳಲ್ಲಿ ಶತಕ ಸಿಡಿಸಿ ಗಮನಸೆಳೆದಿದ್ದರು.

ಪಂಜಾಬ್ ಕಿಂಗ್ಸ್ ವಿರುದ್ಧವೂ 16 ಎಸೆತಗಳಲ್ಲಿ 43 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆರೆಂಜ್ ಕ್ಯಾಪ್ ಪೈಪೋಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ವೈಭವ್, ತಮ್ಮ ಮೇಲೆ ಕೇಳಿಬರುತ್ತಿರುವ ಟೀಕೆಗಳಿಗೆ ಬ್ಯಾಟ್‌ನ ಮೂಲಕವೇ ತಿರುಗೇಟು ನೀಡುತ್ತಿದ್ದು, ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಿದ್ದಾರೆ.






