ಇಂದು ಸಂಜೆ ನಗರದ ಮಾಗಡಿ ರಸ್ತೆಯ ಹೇರೋಹಳ್ಳಿ ಕೆರೆ ವೀಕ್ಷಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡುತ್ತ ” ನಗರದ ಕೆರೆಗಳ ಉಳಿವಿಗಾಗಿ ಆಮ್ ಆದ್ಮಿ ಪಕ್ಷ ಎಲ್ಲ ಹೋರಾಟಗಳಿಗೂ ಸರ್ವಸಮದ್ಧವಾಗಿದೆ.
ಇತ್ತೀಚೆಗೆ ಹೇರೋಹಳ್ಳಿ ಕೆರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ನಾಯಕರುಗಳ ಮೇಲೆ ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಒತ್ತಡದ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿದ್ದಾರೆ. ಈ ರೀತಿಯ ಎಷ್ಟೇ ಕೇಸುಗಳನ್ನು ಹಾಕಿದರೂ ನಾವು ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ ಬಗ್ಗುವುದಿಲ್ಲ . ಕೆರೆಗಳನ್ನು ಒತ್ತುವರಿ ಮಾಡಿರುವ ರಿಯಲ್ ಎಸ್ಟೇಟ್ ಮಾಫಿಯಾ ಗಳ ವಿರುದ್ಧ ಪಕ್ಷವು ಸಂಪೂರ್ಣ ತೆರವುಗೊಳಿಸುವ ತನಕ ಹೋರಾಟ ಮಾಡುತ್ತದೆ. ಎಲ್ಲಾ ಕೆರೆಗಳಲ್ಲಿ ಎಸ್ ಟಿ ಪಿ ಘಟಕಗಳನ್ನು ತೆರೆಯಬೇಕು , ನಾಗರಿಕ ಸೌಲಭ್ಯಕ್ಕಾಗಿ ಶೌಚಾಲಯ ಉತ್ತಮ ಟ್ರ್ಯಾಕ್ ಗಳು ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.” ಎಂದು ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ ” ಇಂದು ಯಶವಂತಪುರ ಕ್ಷೇತ್ರಕ್ಕೆ ಬರಲು ಶಾಸಕರ ವೀಸಾ ಅಗತ್ಯವಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ಅವರುಗಳ ಮೇಲೆ ಪೊಲೀಸ್ ಕೇಸುಗಳನ್ನು ಹಾಕಿಸುವ ಮೂಲಕ ಶಾಸಕರು ನಡೆಸುತ್ತಿರುವ ದಬ್ಬಾಳಿಕೆ – ದೌರ್ಜನ್ಯಗಳನ್ನು ಪಕ್ಷವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಸಾಮಾನ್ಯರ ಹಿತಕ್ಕಾಗಿ ಪಕ್ಷದ ಕಾರ್ಯಕರ್ತರು ಯಾವುದೇ ತ್ಯಾಗಕ್ಕೂ ಸಿದ್ಧರಾಗಿದ್ದಾರೆ , ಯಶವಂತಪುರ ರಿಪಬ್ಲಿಕ್ ಮಾಡಲು ನಾವು ಬಿಡುವುದಿಲ್ಲ “ಎಂದು ಎಚ್ಚರಿಸಿದರು.
ವೀಕ್ಷಣೆ ಸಂದರ್ಭದಲ್ಲಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ. ಸತೀಶ್, ಜಗದೀಶ್ ಚಂದ್ರ, ಶಶಿಧರ್ ಆರಾಧ್ಯ , ಡಾ. ದಿನೇಶ್ ಕುಮಾರ್ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸೇರಿದಂತೆ ಅನೇಕ ಸ್ಥಳೀಯ ಮುಖಂಡರುಗಳಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.