ಮಂಗಳ ಗ್ರಹದ ಮೂಲ ಮತ್ತು ಅಲ್ಲಿನ ಸಂಭವನೀಯ ಜೀವ ಜಾಲಗಳ ಸುಳಿವುಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ ಮಂಗಳ ಗ್ರಹದಿಂದ ಮಣ್ಣಿನ ಮಾದರಿಗಳನ್ನು ತರಲು ಯೋಜಿಸಿದೆ. ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಅಥವಾ JAXAವು 2024ರಲ್ಲಿ ಎಕ್ಸಪ್ಲೋರರ್ ಅನ್ನು ಮಂಗಳ ಗ್ರಹದಲ್ಲಿ ಇಳಿಸಿ ಅಲ್ಲಿನ 10 ಗ್ರಾಂ (0.35 ಔನ್ಸ್) ಮಣ್ಣನ್ನು ಸಂಗ್ರಹಿಸಿ 2029 ರಲ್ಲಿ ಭೂಮಿಗೆ ಮರಳಿ ತರುವ ಯೋಜನೆಯನ್ನು ಪ್ರಕಟಿಸಿದೆ.
ಗುರುವಾರ ಆನ್‌ಲೈನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಜೆಕ್ಟ್ ಮ್ಯಾನೇಜರ್ ಯಸುಹಿರೋ ಕವಾಕಟ್ಸು ಮಂಗಳ ಗ್ರಹದಿಂದ ಮಾದರಿಗಳನ್ನು ತರುವಲ್ಲಿ ಅಮೆರಿಕ ಮತ್ತು ಚೀನಾವನ್ನು ಜಪಾನ್ ಹಿಂದಿಕ್ಕಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ನಾಸಾದ ‘ಪರ್ಸೆವೆರೆನ್ಸ್ ರೋವರ್’ ಮಂಗಳನ ಕುಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 31 ಮಾದರಿಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು 2031 ರಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಹಾಯದಿಂದ ಭೂಮಿಗೆ ಹಿಂತಿರುಗಲಿದೆ. ಚೀನಾ ಮೇ ತಿಂಗಳಲ್ಲಿ ಮಂಗಳನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದೆ ಮತ್ತು 2030ರಲ್ಲಿ ಮಾದರಿಗಳನ್ನು ಮರಳಿ ತರಲು ಯೋಜಿಸಿದೆ.
JAXA ವಿಜ್ಞಾನಿಗಳು ಫೋಬೋಸ್‌ನ ಮೇಲ್ಮೈಯಲ್ಲಿನ ಮಣ್ಣಿನ ಶೇಕಡಾ 0.1 ರಷ್ಟು ಮಂಗಳ ಗ್ರಹದಿಂದ ಬಂದಿರಬಹುದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಮಣ್ಣಿನ ಸ್ಥಿರತೆಗೆ ಅನುಗುಣವಾಗಿ 10 ಗ್ರಾಂ ಮಣ್ಣು ಸುಮಾರು 30 ಕಣಗಳನ್ನು ಹೊಂದಿರಬಹುದು ಎಂದು ಕವಾಕಟ್ಸು ಹೇಳಿದ್ದಾರೆ.
‘ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಅಂಡ್ ಅಸ್ಟ್ರೋನಾಟಿಕಲ್ ಸೈನ್ಸ್ ‘ನ ಪ್ರಾಧ್ಯಾಪಕರಾದ ಟೊಮೊಹಿರೊ ಉಸುಯಿ, ಫೋಬೋಸ್ ನಲ್ಲಿನ ಮಣ್ಣು ಚಂದ್ರನಿಂದ ಮತ್ತು ಮಂಗಳದಿಂದ ಬಂದ ವಸ್ತುಗಳ ಮಿಶ್ರಣವಾಗಿದ್ದು ಮರಳಿನ ಬಿರುಗಾಳಿಯಿಂದ ಹರಡಿರಬಹುದು ಎಂದು ಹೇಳುತ್ತಾರೆ. ಮಂಗಳ ಗ್ರಹದ ಒಂದು ಸ್ಥಳದಿಂದ ಮಣ್ಣನ್ನು ಸಂಗ್ರಹಿಸುವುದಕ್ಕಿಂತ ಫೋಬೋಸ್‌ನ ಅನೇಕ ಸ್ಥಳಗಳಿಂದ ಮಾದರಿಗಳನ್ನು ಸಂಗ್ರಹಿಸುವುದರಿಂದ ಮಂಗಳದಲ್ಲಿರುವ ಜೀವಜಾಲದ ಸಂಭವನೀಯ ಕುರುಹುಗಳನ್ನು ಪಡೆಯುವ ಅವಕಾಶ ಹೆಚ್ಚಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಫೋಬೋಸನಲ್ಲಿನ ಕಠಿಣ ಸೌರ ಮತ್ತು ಕಾಸ್ಮಿಕ್ ವಿಕಿರಣದಿಂದಾಗಿ ಮಂಗಳ ಗ್ರಹದಿಂದ ಬಂದಿರಬಹುದಾದ ಯಾವುದೇ ಜೀವಜಂತುಗಳು ಸಾಯಬಹುದು ಎಂದು ಜಾಕ್ಸಾ ವಿಜ್ಞಾನಿಗಳು ಹೇಳುತ್ತಾರೆ. ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಗಳು ಸಂಭಾವ್ಯ ಜೀವಜಾಲಗಳು ಮತ್ತು ಜೆಝಿರೋ (Jezero) ಕುಳಿ ಪ್ರದೇಶದ ವಿಕಾಸದ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು ಆ ಕುಳಿಯನ್ನು ಪುರಾತನ ಸರೋವರವೆಂದು ನಂಬಲಾಗಿದೆ.
ಮಂಗಳ ಗ್ರಹದ ಕಣಗಳು ಸೇರಿದಂತೆ ಫೋಬೋಸ್ ಮಣ್ಣಿನ ಮಾದರಿಗಳನ್ನು ಅಧ್ಯಯನ ಮಾಡುವ ಮೂಲಕ, ವಿಜ್ಞಾನಿಗಳು ಮಂಗಳದ ಜೀವ ವಿಕಾಸದ ಬಗ್ಗೆ ಕಲಿಯ ಬಯಸುತ್ತಾರೆ ಎಂದು ಉಸುಯಿ ಹೇಳಿದ್ದಾರೆ.
ಮಂಗಳದ ಕುಳಿಗಳಲ್ಲಿನ ನಿರ್ದಿಷ್ಟ ಸ್ಥಳದ ಕಣಗಳ ಕುರಿತಾಗಿನ ನಾಸಾದ ಮಾದರಿಗಳು ಮತ್ತು ಜಪಾನಿನ ಸಂಶೋಧನೆಯು ಒಂದಕ್ಕೊಂದು ಪೂರಕವಾಗಬಹುದು. ಮತ್ತು ಮಂಗಳ ಗ್ರಹದಲ್ಲಿ ಜೀವಜಂತುಗಳು ಅಸ್ತಿತ್ವದಲ್ಲಿದ್ದರೆ ಅವು ಯಾವ ಸಮಯದಲ್ಲಿ ಮತ್ತು ಯಾವ ಸ್ಥಳದಲ್ಲಿ ಹೇಗೆ ವಿಕಸನಗೊಂಡಿತು ಎಂಬಂತಹ ಪ್ರಶ್ನೆಗಳಿಗೆ ಉತ್ತರ ದೊರಕಬಹುದು ಎಂದು ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ JAXA ಉಡಾಯಿಸಿದ್ದ Hayabusa2 ನೌಕೆಯು ಭೂಮಿಯಿಂದ 300 ದಶಲಕ್ಷ ಕಿಲೋಮೀಟರ್ (190 ದಶಲಕ್ಷ ಮೈಲಿ) ಗಿಂತಲೂ ಹೆಚ್ಚು ದೂರ ಚಲಿಸಿ 5 ಗ್ರಾಂ (0.19 ಔನ್ಸ್) ಮಣ್ಣನ್ನು ಮರಳಿ ತಂದಿತ್ತು. ಇದು ಕ್ಷುದ್ರಗ್ರಹಕ್ಕೆ ಹೋಗಿ ಮಾದರಿ ಸಂಗ್ರಹಿಸಿ ಮರಳಿ ಬಂದ ವಿಶ್ವದ ಮೊದಲ ಯಶಸ್ವಿ ನೌಕೆ ಎಂದು ಗುರುತಿಸಲ್ಪಟ್ಟಿದೆ.