ತುಮಕೂರು: ನಾವು ಬ್ರಿಟೀಷರಿಗೆ ಹೆದರಲಿಲ್ಲ, ಇನ್ನು ಬಿಜೆಪಿಗೆ ಹೆದರುತ್ತೇವಾ? ಅಂಬೇಡ್ಕರ್ ಅವರು ಕೊಟ್ಟ, ಸಂವಿಧಾನ ಉಳಿಸದಿದ್ದರೆ ಸರ್ವಾಧಿಕಾರಿ ಸರ್ಕಾರ ಬರುತ್ತದೆ. ಹಾಗಾಗಿ ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಟ ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಕಚೇರಿ ‘ರಾಜೀವ್ ಭವನ’ ಉದ್ಘಾಟನಾ ಸಮಾರಂಭ ಹಾಗೂ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂದು ಮಾತನಾಡಿದ ಅವರು, ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕಾದರೆ, ನೀವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇವರ ಅನಾಚಾರದ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.
ಮೋದಿ ಮುಖ ನೋಡಿ ಎಷ್ಟು ಬಾರಿ ಮತ ಹಾಕುತ್ತೀರಿ? ಗ್ರಾಮಪಂಚಾಯ್ತಿಯಿಂದ ಲೋಕಸಭೆ ಚುನಾವಣೆವರೆಗೂ ಮೋದಿ ಮುಖ ನೋಡಿ ಮತ ಹಾಕಬೇಕಾ? ಇಲ್ಲೆಲ್ಲಾ ಮೋದಿ ಬಂದು ಆಡಳಿತ ಮಾಡುತ್ತಾರಾ? ಮೋದಿ ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರಾ? ಎಷ್ಟು ಆಣೆಕಟ್ಟು, ಸಾರ್ವಜನಿಕ ವಲಯ ಕಾರ್ಖಾನೆ ಮುಚ್ಚಿದ್ದಾರೆ? ಕೇಂದ್ರ ಸರ್ಕಾರದಲ್ಲಿ 30 ಲಕ್ಷ ನೌಕರಿ ಖಾಲಿ ಇವೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಸರ್ಕಾರಿ ಹುದ್ದೆ ಖಆಲಿ ಇವೆ. ನಾವು ಅಧಿಕಾರಕ್ಕೆ ಬಂದಾಗ ಈ ಹುದ್ದೆ ತುಂಬುತ್ತೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. 9 ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಕೇಳಿದಾಗ ನನ್ನ ಮಾತನ್ನು ಸದನದ ಕಡತದಿಂದ ತೆಗೆದುಹಾಕಿದರು ಎಂದು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮೋದಿ ಅವರನ್ನು ಪ್ರಧಾನಿ ಮಾಡಿರುವುದು ಅಭಿವೃದ್ಧಿಗಾಗಿಯೋ, ಕಾಂಗ್ರೆಸ್ ಟೀಕಿಸಲೋ
ಮೋದಿ ಅವರು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದಾಗ ಕಲಬುರ್ಗಿಗೆ ಬಂದು ಅನೇಕ ಮಾತುಗಳನ್ನು ಹೇಳಿದರು. ಅವರು ಪ್ರಧಾನಿ ಬಂದು ಮಾತನಾಡಲಿ ಎಂದು ಸ್ವಾಗತಿಸಿದೆ. ಅವರು ರಾಜ್ಯದ ಅಭಿವೃದ್ಧಿಗೆ ಸರ್ಕಾರ ಹಣ, ವಿಮಾನ, ಸೌಲಭ್ಯ, ಅಧಿಕಾರವನ್ನು ಬಳಸಿಕೊಳ್ಳಬೇಕೇ ಹೊರತು, ನಮ್ಮನ್ನು ಟೀಕಿಸಲು ಅಲ್ಲ ಪ್ರಧಾನಮಂತ್ರಿ ಮಾಡಿ ಅಧಿಕಾರ ಮಾಡಿರುವುದು ದೇಶದ ಅಭಿವೃದ್ಧಿಗಾಗಿಯೋ ಅಥವಾ ನಮ್ಮ ಬಗ್ಗೆ ಟೀಕೆ ಮಾಡಲೋ? ಎಂದು ಪ್ರಶ್ನಿಸಿದರು.

ಮೋದಿ, ಶಾ ಮೂಗಿನ ಕೆಳಗೆ ಭ್ರಷ್ಟಾಚಾರ
ರಾಜ್ಯದಲ್ಲಿ 40% ಭ್ರಷ್ಟಾಚಾರ ನಡೆಯುತ್ತಿದೆ. ಮೋದಿ, ಅಮಿತ್ ಶಾ ಅವರು ಈ ಬಗ್ಗೆ ಮಾತನಾಡಬೇಕು. ಅವರ ಮೂಗಿನ ಕೆಳಗೆ ಭ್ರಷ್ಟಾಚಾರ ನಡೆಯುತ್ತಿದೆ. ಇವರು ದುಪ್ಪಟ್ಟು ಅಂದಾಜು ವೆಚ್ಚ ನಿಗದಿ ಮಾಡಿ 100% ರಷ್ಟು ಭ್ರಷ್ಟಾಚಾರ ಮಾಡುತ್ತಿದ್ದಾರೆ. ನಾನು 52 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಪ್ರಧಾನಿಯನ್ನು ನಾನು ನೋಡಿಲ್ಲ. ಈ ಪ್ರಧಾನಿ ಕೇವಲ ಕಾಂಗ್ರೆಸ್ ಪಕ್ಷದ ಟೀಕೆಗೆ ಸೀಮಿತವಾಗಿದ್ದಾರೆ ಎಂದರು.
ಕಾಂಗ್ರೆಸ್ ಸಾಧನೆ ನಮ್ಮದೆನ್ನುತ್ತಾರೆ
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ತಾವೇ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ಜಿಲ್ಲೆಯಲ್ಲಿ ಹೆಚ್’ಎಎಲ್ ಘಟಕ ತಂದಿದ್ದು ಕಾಂಗ್ರೆಸ್ ಸರ್ಕಾರದಲ್ಲಿ . ಎ.ಕೆ ಆಂಟೋನಿಯವರು ನೀಡಿದ ಕೆಲಸ ಅದು. ಈಗ ಬಂದು ಇದು ನಾನು ಮಾಡಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷ ಹೆಚ್ ಎಂಟಿ, ಐಐಟಿ, ಐಐಎಂ, ಆಣೆಕಟ್ಟುಗಳನ್ನು ಕಟ್ಟಿದ್ದಾರೆ. ಮೋದಿ ಅವರು ಒಂದಾದರೂ ಆಣೆಕಟ್ಟು ಕಟ್ಟಿದ್ದಾರಾ? ನೀರಾವರಿ ಯೋಜನೆ ಮಾಡಿದ್ದಾರಾ? ಆದರೂ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ ಈ ಜಿಲ್ಲೆಗೆ ಹೇಮಾವತಿ ನೀರು ತಂದುಕೊಟ್ಟಿದ್ದು ವೀರೇಂದ್ರ ಪಾಟೀಲ್ ಅವರ ಕಾಲದಲ್ಲಿ. ದೇವರಾಜ ಅರಸು ಅವರ ಕಾಲದಲ್ಲಿ ಅದನ್ನು ಜಾರಿಗೆ ತಂದರೇ ಹೊರತು ಮೋದಿಯವರಲ್ಲ ಎಂದು ಕುಟುಕಿದರು.
ಸೂಜಿಯಿಂದ ರಾಕೆಟ್ ನಿರ್ಮಾಣದವರೆಗೂ ಮಾಡಿರುವ ಸಾಧನೆ ಕಾಂಗ್ರೆಸ್ ಪಕ್ಷದ್ದು
ಅವರ ಪ್ರಕಾರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು 2014ರಲ್ಲಿ. 1947ರಿಂದ 2014ರವರೆಗೆ ಕಾಂಗ್ರೆಸ್ ಸಾವಿರಾರು ಕೆಲಸ ಮಾಡಿದ್ದಾರೆ. ದೇಶದಲ್ಲಿ ಜನರ ಹೊಟ್ಟೆ ತುಂಬಿಸಲು ಅನ್ನ ಇಲ್ಲದಾಗ ಹಸಿರು ಕ್ರಾಂತಿ ಮಾಡಿದ್ದು ನೆಹರು. ಪರಿಣಾಮ ಇಂದು ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಮೋದಿ ಅವರು ಬರುವ ಮುನ್ನ ದೇಶದ ಜನ ಉಪವಾಸದಲ್ಲಿದ್ದರು, ಇವರು ಬಂದ ನಂತರ ಮನೆಯಲ್ಲಿ ವಾಸ ಮಾಡುತ್ತಿದ್ದೆವು ಎಂಬಂತೆ ಅವರು ಮಾತನಾಡುತ್ತಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮೋದಿ ಅವರೇ ನಿರ್ಮಾಣ ಮಾಡಿದ್ದಾರಾ? ನಾವು ಮಾಡದ ಕೆಲಸಕ್ಕೆ ಶ್ರೇಯಸ್ಸು ಪಡೆಯಲು ಮುಜುಗರ ಪಡುತ್ತೇವೆ. ಆದರೆ ಈತ ಬೇರೆಯವರ ಕೆಲಸ ತಾವೇ ಮಾಡಿರುವಂತೆ ಮಾತನಾಡುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ 16% ಇದ್ದ ಸಾಕ್ಷರತೆ, ಇಂದು 73% ಇದೆ. ಇದನ್ನು ಮೋದಿಯವರು ಮಾಡಿದರಾ? ನಿಮ್ಮ ಊರಿನಲ್ಲಿರುವ ಶಾಲೆಗಳನ್ನು ನಿರ್ಮಾಣ ಮಾಡಿದವರು ಯಾರು? ಈ ದೇಶದಲ್ಲಿ ಸೂಜಿಯಿಂದ ರಾಕೆಟ್ ನಿರ್ಮಾಣದವರೆಗೂ ಸಾಧನೆ ಮಾಡಿರುವುದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಸಾಕಷ್ಟು ಜನಪರ ಯೋಜನೆ ನೀಡಿದೆ. ಅಂತಹ ಕಾರ್ಯಕ್ರಮಗಳು ಮತ್ತೆ ಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.