ವಿಜಯನಗರ :ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಖಾಸಗಿ ಶಾಲೆಯ ಶಿಕ್ಷಕಿ ಶಾಲಾ ಕೊಠಡಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆಯು ವಿಜಯನಗರ ಜಿಲ್ಲೆ ಹೂವಿನಹಡಗಲಿ ಪಟ್ಟಣದ ನ್ಯಾಷನಲ್ ಶಾಲೆಯಲ್ಲಿ ಸಂಭವಿಸಿದೆ. ಆತ್ಮಹತ್ಯೆಗೆ ಬಲಿಯಾದ ಶಿಕ್ಷಕಿಯನ್ನು ಬಸಮ್ಮ ಅಲಿಯಾಸ್ ರೂಪಾ ಎಂದು ಗುರುತಿಸಲಾಗಿದೆ. ಖಾಸಗಿ ಶಾಲಾ ಶಿಕ್ಷಕ ಅರ್ಜುನ ಪರಶೆಟ್ಟಿ ವರದಕ್ಷಿಣೆಗಾಗಿ ಬಸಮ್ಮರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಪತಿ – ಪತ್ನಿ ಇಬ್ಬರೂ ಒಂದೇ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ರವಿವಾರ ಪರೀಕ್ಷೆ ಕೆಲಸದ ಸಂಬಂಧ ಶಾಲೆಗೆ ಬಂದಿದ್ದ ಶಿಕ್ಷಕಿ ಬಸಮ್ಮ ಶಾಲಾ ಕೊಠಡಿಯಲ್ಲಿಯೇ ವಿಷ ಸೇವನೆ ಮಾಡಿದ್ದಾರೆ. ಮಾತ್ರವಲ್ಲದೇ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೂಪಾ ಹಾಗೂ ಪತಿ ಅರ್ಜುನ್ ಪರಶೆಟ್ಟಿ 10 ವರ್ಷಗಳಿಂದ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ. ಆದರೆ ಪತಿ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೇ ರೂಪಾ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಈ ಪ್ರಕರಣ ಸಂಬಂಧ ಅರ್ಜುನ ಪರಶೆಟ್ಟಿ, ಅತ್ತೆ ಅಂಬಿಕಾ ಪರಶೆಟ್ಟಿ, ನಾದಿನಿ ಸಂಗೀತಾ ಸೇರಿದಂತೆ ಆರು ಜನರ ವಿರುದ್ಧ ವಿಜಯನಗರ ಜಿಲ್ಲೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






