
ಬದಲಾವಣೆ ಋಣಾತ್ಮಕವಾದಾಗ ಸಮಾಜ-ಸಂಸ್ಕೃತಿ ಹಿಂಚಲನೆಗೆ ಬಲಿಯಾಗುತ್ತದೆ
ನಾ ದಿವಾಕರ
(ನೆನಪಿನ ಪುಟಗಳಿಂದ)
1966 ಇರಬಹುದು. ನಾನಿನ್ನೂ ಐದು ವರ್ಷದ ಬಾಲಕ. ಆಗ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿದ್ದೆವು. ನನ್ನ ತಂದೆ ಮೈಸೂರು ಬ್ಯಾಂಕ್ನಲ್ಲಿ ಅಧಿಕಾರಿಯಾಗಿದ್ದರು. ಎಂಟು ಮಕ್ಕಳ ಸಂಸಾರದೊಂದಿಗೆ ಅಮ್ಮ. ಮಹಾರಾಷ್ಟ್ರದ ಸಾಂಸ್ಕೃತಿಕ ಪ್ರಭಾವ ದಟ್ಟವಾಗಿದ್ದ ಆ ಊರಿನಲ್ಲಿ ಹೋಳಿ ಹಬ್ಬ ಎಂದರೆ ಊರ ಹಬ್ಬ ಇದ್ದಂತೆ. ನನಗಿನ್ನೂ ಸ್ಪಷ್ಟವಾಗಿ ನೆನಪಾಗುವುದು ಎರಡು ವಿಚಾರಗಳು. ಕೊಯ್ನಾ ಅಣೆಕಟ್ಟಿನ ಪರಿಣಾಮದಿಂದ ಆಗಾಗ್ಗೆ ಆಗುತ್ತಿದ್ದ ಭೂಕಂಪದ ಅನುಭವ ಮತ್ತು ಹೋಳಿ ಹುಣ್ಣಿಮೆಯ ಹಬ್ಬ. ಹೋಳಿ ಹಬ್ಬದ ಪೌರಾಣಿಕ ಹಿನ್ನೆಲೆ ಏನೇ ಇರಲಿ, ವೈದಿಕೀಕರಣದ ಪ್ರಭಾವದಿಂದ ಇತ್ತೀಚೆಗೆ ಕಾಮದಹನವನ್ನು ಇತರ ಯಜ್ಞಗಳಿಗೆ ಸಮೀಕರಿಸಿ ಪ್ರಚಾರ ಮಾಡಲಾಗುತ್ತಿದೆ. ಇದು ಬೇರೆಯೇ ವಿಚಾರ.
ರಾಮದುರ್ಗದ ವಿಚಾರಕ್ಕೆ ಬಂದರೆ ಅಲ್ಲಿ ಹೋಳಿ ಎನ್ನುವುದು ಒಂದು ಊರ ಉತ್ಸವದಂತೆ ಆಚರಿಸಲಾಗುತ್ತಿತ್ತು. ಬಹುಪಾಲು ಮಕ್ಕಳು, ಹಿರಿಯರು, ಗಂಡು ಹೆಣ್ಣೆಂಬ ಭೇದವಿಲ್ಲದೆ ಸಮಸ್ತ ಜನರೂ ಹೋಳಿಯ ಸಂಭ್ರಮದಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಮನೆಗೆ ಬ್ಯಾಂಕಿನಲ್ಲಿ Peon ಕೆಲಸ ಮಾಡುತ್ತಿದ್ದ ಖಾಸೀಮ ಎಂಬ ವ್ಯಕ್ತಿ ನಿತ್ಯಬರುತ್ತಿದ್ದುದು ನೆನಪಿದೆ. ಆಗ ಇನ್ನೂ ಬ್ಯಾಂಕ್ ಮೇಲಧಿಕಾರಿಗಳ ಮನೆಯ ಕೆಲಸಗಳನ್ನು ಮಾಡಲು ಬ್ಯಾಂಕಿನ Peonಗಳನ್ನು ಬಳಸಿಕೊಳ್ಳುವ ಊಳಿಗಮಾನ್ಯ ಪದ್ಧತಿ ಇತ್ತು. ನನ್ನ ತಂದೆಯೂ ಅದಕ್ಕೆ ಹೊರತಾಗಿರಲಿಲ್ಲವೆನ್ನಿ. ಆತ ಹೋಳಿ ಹಬ್ಬವನ್ನು ತನ್ನ ಮನೆಯ ಹಬ್ಬದಂತೆಯೇ ಆಚರಿಸುತ್ತಿದ್ದುದಂತೂ ನೆನಪಿದೆ. ಆ ದಿನ ಮನೆಗೆ ಬರುತ್ತಿರಲೂ ಇಲ್ಲ.

ನನ್ನ ಆನಂತರದ ಬಾಲ್ಯ ಜೀವನದಲ್ಲಿ, ಕೋಲಾರದ ಬಂಗಾರಪೇಟೆಗೆ ಬಂದ ನಂತರವೂ, ಕಂಡ ಒಂದು ವಾಸ್ತವ ಎಂದರೆ ಸಮಾಜದ ಗಣ್ಯ ಸಮುದಾಯ (Elite Community) ಈ ಹಬ್ಬದ ಆಚರಣೆಯಿಂದ ದೂರವೇ ಇರುತ್ತಿತ್ತು. ಆದರೆ ರಾಮದುರ್ಗದಲ್ಲಿ ಹಾಗಿರಲಿಲ್ಲ. ಅಂತಸ್ತಿನ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಿದ್ದರು. ಒಂದು ಪ್ರಸಂಗ ನೆನಪಾಗುವುದೆಂದರೆ, ನನ್ನ ತಂದೆಯ ಸ್ನೇಹಿತರು ಆ ಸಂಜೆ ಮನೆಗೆ ಬಂದು, ತಂದೆಯನ್ನು ಹೊರಗೆ ಕರೆದು, ಒಂದು ಬಕೆಟ್ ರಂಗು ತುಂಬಿದ ನೀರನ್ನು ತಲೆಯಮೇಲೆ ಸುರಿದು ಹೋಗಿದ್ದು. ಆಗ ಬಳಸುತ್ತಿದ್ದ ರಂಗುಗಳಲ್ಲಿ ರಾಸಾಯನಿಕ ಅಂಶಗಳು ಈಗಿನಷ್ಟು ಇರುತ್ತಿರಲಿಲ್ಲ. ಆದರೆ ಅಲ್ಲಿನ ಜನರಿಗೆ ಎಲ್ಲರನ್ನೂ ಹಬ್ಬದ ಒಂದು ಭಾಗವಾಗಿ ಮಾಡುವ ಉತ್ಸುಕತೆ, ಸಂಭ್ರಮ ಇದ್ದುದನ್ನು ಈ ಪ್ರಸಂಗದಲ್ಲಿ ಕಂಡಿದ್ದೆ. ಇದನ್ನು ಸಾಮಾಜಿಕವಾಗಿ ಒಳಗೊಳ್ಳುವಿಕೆ ಎಂದು ವ್ಯಾಖ್ಯಾನಿಸಬಹುದು.
1968ರ ನಂತರದ ನನ್ನ ಬಾಲ್ಯದ ದಿನಗಳಲ್ಲಿ, ಬಂಗಾರಪೇಟೆಯಲ್ಲೂ ಹೋಳಿ ಹಬ್ಬ ಆಚರಿಸಲಾಗುತ್ತಿತ್ತು. ಹೋಳಿ ಹುಣ್ಣಿಮೆಯಂದು ಕಾಮದಹದ ಕಾರ್ಯಕ್ರಮವೂ ನಮ್ಮ ಮನೆಯ ಮುಂದೆಯೇ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ನಡೆಯುತ್ತಿತ್ತು. ನಾವಿದ್ದ ರಸ್ತೆ ಮತ್ತು ಆಸುಪಾಸಿನ ರಸ್ತೆಗಳಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಸಮುದಾಯದ ಹುಡುಗರೂ ಈ ಕೂಗಾಟ, ಅರಚಾಟದಲ್ಲಿ ಭಾಗವಹಿಸುತ್ತಿದ್ದುದು ನೆನಪಿದೆ. ನಮ್ಮನ್ನು ಮನೆಯೊಳಗೆ ಕೂಡಿಹಾಕುತ್ತಿದ್ದುದು ಮಿಲಿಟರಿ ಶಿಸ್ತಿನ ದೊಡ್ಡಣ್ಣ. ಹೊರಗೆ ಹೋದರೆ ಯಾರಾದರೂ ಬಣ್ಣ ಎರಚುತ್ತಾರೆ ಎಂಬ ಆತಂಕ ಅಮ್ಮನಿಗೆ, ಈ ಬಣ್ಣ ಎರಚುವ ಹುಡುಗರೆಲ್ಲಾ ಪಡ್ಡೆ ಹುಡುಗರು ಎಂಬ ಸಂಕುಚಿತ ಅಭಿಪ್ರಾಯ , Elitist ವಕ್ರದೃಷ್ಟಿ ನನ್ನ ಅಣ್ಣನದು. ಎರಡೂ ವಾಸ್ತವ ಆಗಿರಲಿಲ್ಲ. ಆದರೂ ನಾವು ಕಾಂಪೌಂಡಿನೊಳಗೆ ನಿಂತು ನೋಡುತ್ತಿದ್ದೆವು. ಆಗ ಕಾಮದಹನದಲ್ಲಿ ಮುಂಚೂಣಿಯಲ್ಲಿದ್ದವರು ಈಗ ದೊಡ್ಡ , ಪ್ರತಿಷ್ಠಿತ ಹುದ್ದೆಗಳಲ್ಲಿದ್ದಾರೆ. ಅವರಲ್ಲಿ ನನ್ನ ಸಹಪಾಠಿಗಳೂ, ನನಗಿಂತ ಹಿರಿಯ ಶಾಲೆಯ ಮಿತ್ರರೂ ಇದ್ದರು.

ಮದ್ಯಮ ವರ್ಗಗಳಲ್ಲಿ, ವಿಶೇಷವಾಗಿ ಗಣ್ಯ ಸಮಾಜದಲ್ಲಿ (Elite society) ಹೀಗೆ ಸಾರ್ವಜನಿಕವಾಗಿ ರಸ್ತೆಗಳಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿ, ಕುಣಿದು ಕುಪ್ಪಳಿಸಿ ಆನಂದಿಸುವವರನ್ನು, ವಕ್ರದೃಷ್ಟಿಯಿಂದ ನೋಡುವ ಒಂದು ಪರಂಪರೆಯೇ ನಮ್ಮಲ್ಲಿದೆ. ನನ್ನ ಅಣ್ಣ ಅಂಥವರಲ್ಲೊಬ್ಬ. ಅದಿರಲಿ, ಸಾಮಾನ್ಯವಾಗಿ ಕಾಮನ ಹಬ್ಬ ಎಂದು ಕರೆಯಲ್ಪಡುತ್ತಿದ್ದ ಹೋಳಿ ಹುಣ್ಣಿಮೆಯ ರಾತ್ರಿ ಕಾಮನ ದಹನ ಒಂದು ಪ್ರಮುಖ ಘಟ್ಟ. ಅದಕ್ಕಾಗಿ ಕಟ್ಟಿಗೆ, ಸೌದೆ, ಮರದ ತುಂಡುಗಳು, ಬೆರಣಿ, ಸುಲಭವಾಗಿ ಹೊತ್ತಿಕೊಳ್ಳುವ ಎಲ್ಲ ವಸ್ತುಗಳನ್ನೂ ಸಂಗ್ರಹಿಸುವ ಒಂದು ಯುವಪಡೆಯೇ ಸಿದ್ಧವಾಗುತ್ತಿತ್ತು. ಅಲ್ಲಿ ಅಪಾಯಕ್ಕೊಳಗಾಗುತ್ತಿದ್ದುದು ಮನೆಯ ಮರದ ಗೇಟುಗಳು. ಮನೆಯ ಅಂಗಳದಲ್ಲಿ ಒಣಗಲು ಇಡುತ್ತಿದ್ದ ಉರುವಲು, ಸಾ ಮಿಲ್ಗಳಲ್ಲಿ ಇಟ್ಟಿರುತ್ತಿದ್ದ ವ್ಯರ್ಥವಾದ ತುಂಡುಗಳು. ಅದನ್ನು ಜತನದಿಂದ ಕಾಪಾಡುವುದು ಒಂದು ಜವಾಬ್ದಾರಿ.
ಆದರೂ ಪ್ರತಿ ಮನೆಯಿಂದಲೂ ಉರುವಲು ನೀಡಲಾಗುತ್ತಿತ್ತು. ಸೀಮೆ ಎಣ್ಣೆ ಸಂಗ್ರಹವಾಗುತ್ತಿತ್ತು. ಕೈಲಾದುದನ್ನು ಕೊಡುತ್ತಿದ್ದರು. ಸಂಗ್ರಹಿಸಲು ಬರುವ ಯುವಪಡೆಯ ಅಬ್ಬರ ಹಾಗಿರುತ್ತಿತ್ತು. ಆದರೆ ಅಲ್ಲಿ ಅಶ್ಲೀಲತೆಯಾಗಲೀ, ಅಸಭ್ಯತೆಯಾಗಲೀ ಇರುತ್ತಿರಲಿಲ್ಲ. ಸತ್ಯವಾಗಿ ಹೇಳಬೇಕೆಂದರೆ ಹೋಳಿ ಅಥವಾ ಕಾಮನಹಬ್ಬದ ಹಿಂದೆ ಸ್ಥಾಪಿತ ಧರ್ಮದ ವಾಸನೆ ಖಂಡಿತವಾಗಿಯೂ ಇರುತ್ತಿರಲಿಲ್ಲ. ಯುವಕರಿಗೆ ಅದೊಂದು ಮನರಂಜನೆ. ಸಂಭ್ರಮಿಸುವ ಕ್ಷಣ. ಅವನು-ಇವನು, ನಾವು-ಅವರು ಎಂಬ ಭೇದಭಾವಗಳಿಲ್ಲದೆ ಎಲ್ಲರೂ ಒಂದಾಗಿ ನಡುರಾತ್ರಿಯಲ್ಲಿ ಕಾಮದಹನ ಮಾಡುವಾಗ ಕೇಕೆ, ಕಿರುಚಾಟ ಮುಗಿಲುಮುಟ್ಟುತ್ತಿತ್ತು. ಉರುವಲು ಅಥವಾ ಏನನ್ನೂ ಕೊಡದೆ ಇದ್ದರೆ ಅವರ ಮನೆಗಳ ಮುಂದೆ ಕೂಗು ಹಾಕುತ್ತಿದ್ದುದೂ ಉಂಟು. ರಾತ್ರಿ ಹತ್ತರವರೆಗೂ ಬಣ್ಣ ಎರಚುವ ಕಾರ್ಯಕ್ರಮ ನಂತರ ಕಾಮದಹನದ ಕ್ರಿಯೆ.

ಕಾಮಣ್ಣನ ಮಕ್ಕಳು, ಕಳ್ಳ ಸೂ,,,, ಮಕ್ಕಳು, ಏನನ್ನು ಕದ್ದರು,,,,, ಹೀಗೆ ಘೋಷಣೆಗಳನ್ನು ಕೂಗುವುದು ಸಾಮಾನ್ಯವಾಗಿತ್ತು. ಹೀಗೆ ಕೂಗುವುದು ಮನೆಯೊಳಗೆ ಕುಳಿತವರನ್ನು ಹೊರಗೆಳೆಯುವ ಒಂದು ತಂತ್ರವಾಗಿತ್ತು ಎನ್ನಬಹುದು. ಹೀಗೆ ಕೂಗುತ್ತಲೇ ಮನೆಯ ಯಜಮಾನ ಅಥವಾ ಹಿರಿಯ ವ್ಯಕ್ತಿ ಸತ್ತೇ ಹೋಗಿದ್ದಾನೆ ಎಂಬಂತೆ ಕೂಗುವುದು ಒಂದು ಕ್ರಮ. ಸಂಜೆವರೆಗೂ ಚೆನ್ನಾಗಿದ್ನಲ್ಲಪ್ಪಾ,,,,ಅಯ್ಯಯ್ಯೋ, ಅನ್ಯಾಯವಾಗಿ ಸತ್ಹೋದನ್ಮಲ್ಲಪ್ಪಾ,,,,,, ಅಯ್ಯಯೋ ಹೀಗೆ ಆ ವ್ಯಕ್ತಿಯ ಎದುರಿನಲ್ಲೇ ಕೂಗುವ ಒಂದು ಕ್ರಿಯೆ ಸಂಭ್ರಮದ ಒಂದು ಭಾಗ. ನನ್ನ ತಂದೆಯ ಬಗ್ಗೆಯೂ ಹೀಗೆ ಕೂಗಿದ್ದಿದೆ. (ಒಳಗೆ ಕುಳಿತಿರುತ್ತಿದ್ದ ಅಮ್ಮ – ಇವರಿಗೇನು ಬಂದಿದೆ ರೋಗ- ಎಂದು ಗೊಣಗುತ್ತಿದ್ದುದೂ ಉಂಟು). ಕೆಲವರು ತಾವೇ ಉತ್ತೇಜನ ನೀಡಿ ತಮ್ಮ ಬಗ್ಗೆ ಹೀಗೆ ಕೂಗುವಂತೆ ಹೇಳುತ್ತಿದ್ದುದೂ ಉಂಟು. ಅವರಲ್ಲಿ ಪುರಸಭೆಯ ಉಪಾಧ್ಯಕ್ಷರೂ ಒಬ್ಬರಿದ್ದರು
ಈ ಇಡೀ ಪ್ರಕ್ರಿಯೆ ಮುಗಿಯುವ ವೇಳೆಗೆ ಮಧ್ಯರಾತ್ರಿಯಾಗುತ್ತಿತ್ತು. ದಹನಕ್ಕಾಗಿ ಸಂಗ್ರಹಿಸಿದ ಉರುವಲು ಇತ್ಯಾದಿಗಳನ್ನು ಅತಿ ಎತ್ತರಕ್ಕೆ ಜೋಡಿಸುವುದೂ ಒಂದು ಸ್ಪರ್ಧೆಯಾಗಿರುತ್ತಿತ್ತು. ಕಾಣೆಯಾದ ಮನೆಯ ಗೇಟುಗಳು, ಕದ್ದು ಉರುವಲು ಅದರ ಭಾಗವಾಗಿರುತ್ತಿದ್ದವು. ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಂತಹ , ಸಂಭ್ರಮದಲ್ಲಿ ನೇರವಾಗಿ ಪಾಲ್ಗೊಳ್ಳದೆ ಹೋದರೂ, ಕಣ್ಣೋಟದಲ್ಲೇ ಆನಂದಿಸುತ್ತಿದ್ದಂತಹ ಒಂದು ಸಮಾಜದಲ್ಲೂ ನಾವಿದ್ದೆವು ಅಲ್ಲವೇ ? ದಲಿತನೋ, ಹಿಂದುಳಿದವನೋ, ಲಿಂಗಾಯತನೋ, ಬ್ರಾಹ್ಮಣನೋ, ಸಾಬಿಯೋ, ಕ್ರೈಸ್ತರೋ ಈ ಯಾವುದೇ ಗುರುತುಗಳಿಗೆ ಅಲ್ಲಿ ಅವಕಾಶವೇ ಇರುತ್ತಿರಲಿಲ್ಲ. ಎಲ್ಲರೂ ಆನಂದಿಸುತ್ತಿದ್ದರು. ಇದನ್ನೇ ʼ ಹಬ್ಬ ʼ ಎನ್ನುವುದಲ್ಲವೇ ?

ಆದರೆ 2025ರ ವಿಕಸಿತ ಭಾರತದ, ʼ ನಾಗರಿಕ ʼ ಸಮಾಜದಲ್ಲಿ ನಿಂತು ನೋಡಿದಾಗ ಇದು ಅಚ್ಚರಿ ಎನಿಸುವುದಿಲ್ಲವೇ ? ಇಂದು ರಾಜಸ್ಥಾನದಲ್ಲಿ ಹೋಳಿ ಬಣ್ಣ ಹಾಕಿಸಿಕೊಳ್ಳಲು ನಿರಾಕರಿಸಿದ 25 ವರ್ಷದ ವ್ಯಕ್ತಿಯೊಬ್ಬನನ್ನು ಮೂವರು ಯುವಕರು ಥಳಿಸಿ ಕೊಂದಿರುವ ಸುದ್ದಿ ಬಂದಿದೆ. ಉತ್ತರ ಪ್ರದೇಶದ ಸಚಿವರೊಬ್ಬರು ಹೋಳಿ ಬಣ್ಣದ ಸಮಸ್ಯೆ ಇದ್ದರೆ ʼ ದೇಶ ಬಿಟ್ಟು ಹೋಗಬಹುದು ʼ ಎಂದು ಆಜ್ಞಾಪಿಸಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ನ ಪೊಲೀಸ್ ಅಧಿಕಾರಿಯೊಬ್ಬರು, ಹೋಳಿ ಹಬ್ಬದ ದಿನ ಮುಸ್ಲಿಮರನ್ನು ಮನೆಯೊಳಗೇ ಇರುವಂತೆ ಆದೇಶ ನೀಡಿದ್ದಾರೆ. ನಮಾಜ್ ಮಾಡುವುದಾದರೆ ಮನೆಯಲ್ಲೇ ಮಾಡಿ ಎಂದು ಯೋಗಿ ಆದಿತ್ಯನಾಥ್ ಆಜ್ಞಾಪಿಸಿದ್ದಾರೆ. ಹಾಗೆಯೇ ಬಲವಂತವಾಗಿ ಬಣ್ಣ ಎರಚಬೇಡಿ, ಸೌಹಾರ್ದಯುತವಾಗಿ ಆಚರಿಸಿ ಎಂದೂ ಹೇಳಿದ್ದಾರೆ.
ಆದರೆ, ನಾವು ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ? 50 ವರ್ಷಗಳು ಯಾವುದೇ ದೇಶದ ಅಥವಾ ಸಮಾಜದ ಚರಿತ್ರೆಯಲ್ಲಿ ಬದಲಾವಣೆಗಳು ಪಕ್ವವಾಗುವ ಒಂದು ಕಾಲಾವಧಿ. ನಡೆದ ಹೆಜ್ಜೆಗಳ ತಪ್ಪುಗಳನ್ನು ಸರಿಪಡಿಸಿಕೊಳ್ಳುವ, ಚಾರಿತ್ರಿಕ ಪ್ರಮಾದಗಳನ್ನು ಮರೆತು ಬದುಕುವ, ಭವಿಷ್ಯದತ್ತ ಮುಖಮಾಡಿ ನಡೆಯುವ ಒಂದು ಪ್ರಜ್ಞೆಯನ್ನು ಮೂಡಿಸುವುದೇ ಬದಲಾವಣೆ ಅಥವಾ ಪರಿವರ್ತನೆ ಎಂದಾದರೆ, ನಾವು ನಿಜಕ್ಕೂ ಬದಲಾಗಿದ್ದೇವೆಯೇ ಎನಿಸುವುದು ಸಹಜ. ಅಥವಾ ಬರುಬರುತ್ತಾ ಇನ್ನೂ ಪ್ರಾಚೀನತೆಯತ್ತ ಜಾರುತ್ತಿದ್ದೇವೆಯೇ ? ಮನುಜ ಸಂಬಂಧಗಳನ್ನು ಬೆಸೆಯುತ್ತಿದ್ದ ಪ್ರೀತಿ-ವಾತ್ಸಲ್ಯ-ಸ್ನೇಹ ಇವೆಲ್ಲವನ್ನೂ ನಮ್ಮ ಧಾರ್ಮಿಕ ನಂಬಿಕೆಗಳಿಗೆ ಒತ್ತೆ ಇಟ್ಟು, ಸಮಾಜವನ್ನು ನೈತಿಕವಾಗಿ ಪಾತಾಳಕ್ಕೆ ದೂಡುತ್ತಿದ್ದೇವೆಯೇ ?
ಸೌಹಾರ್ದತೆ, ಸಮನ್ವಯತೆ, ಸೋದರತ್ವ, ಸಹಬಾಳ್ವೆ ಎಲ್ಲವನ್ನೂ ಸಾಪೇಕ್ಷಗೊಳಿಸುತ್ತಾ, ಸಮಷ್ಟಿ ಪ್ರಜ್ಞೆಯನ್ನು ಮತ್ತಷ್ಟು ಸಂಕುಚಿತಗೊಳಿಸುತ್ತಾ, ವ್ಯಷ್ಟಿ ಪ್ರಜ್ಞೆಯಾಗಿ ಪರಿವರ್ತಿಸುವ ಮೂಲಕ, ಸಮಾಜದೊಳಗೆ ಇಂದಿಗೂ ಗುರುತಿಸಬಹುದಾದ ಮಾನವೀಯ ಮೌಲ್ಯಗಳನ್ನು, ಕಾಮದಹನದಂತೆ, ಸುಟ್ಟುಹಾಕುತ್ತಿದ್ದೇವೆಯೇ ? ಇದನ್ನು ಆಧುನಿಕತೆ ಎನ್ನೋಣವೋ ಅಥವಾ ಮುಂದುವರೆದ ʼನಾಗರಿಕತೆಯʼ ಲಕ್ಷಣ ಎನ್ನಬಹುದೋ ? ಇದು ಅಂತರಂಗದಲ್ಲಿ ಕಾಡುವ ಗಹನವಾದ ಪ್ರಶ್ನೆ. ಕಾಮದಹನದ ಸಂದರ್ಭದಲ್ಲಿ ನನ್ನ ತಂದೆ ಹೇಳುತ್ತಿದ್ದ “ ಅಲ್ಲಿ ಸುಡುವುದು ನಮ್ಮೊಳಗಿನ ದುಷ್ಟ ಬುದ್ಧಿಗಳನ್ನು, ಲೋಭ ಮತ್ಸರ ದ್ವೇಷಗಳನ್ನು” ಎಂಬ ಮಾತು ನೆನಪಾಗುತ್ತದೆ. ನಾವು ಏನನ್ನು ಸುಡುತ್ತಿದ್ದೇವೆ ? ಯೋಚಿಸೋಣ.
-೦-೦-೦-೦-