ಒಬ್ಬ ಪತ್ರಕರ್ತನ ಜವಾಬ್ದಾರಿಯುತ ಪ್ರಶ್ನೆಗಳಿಗೆ ಉತ್ತರಿಸುವುದು ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂತಿರುವವರ ಜವಾಬ್ದಾರಿ. ಆದರೆ, ಉತ್ತರಿಸದಿದ್ದರೂ, ಸಂಯಮದಿಂದ ವರ್ತನೆಯನ್ನಾದರೂ ಸಿಎಂ ಬಿಎಸ್ ಯಡಿಯೂರಪ್ಪ ಪಾಲಿಸಬೇಕಿದೆ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ವರ್ಷಗಳ ಅನುಭವ ಇರುವ ಬಿ ಎಸ್ ಯಡಿಯೂರಪ್ಪ, ಮಾಧ್ಯಮಗಳೆದುರೇ, ಮಾಧ್‌ಯಮ ಪ್ರತಿನಿಧಿಯೊಬ್ಬರ ಮೇಲೆ ರೇಗಾಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಷ್ಟಕ್ಕೂ, ಪತ್ರಕರ್ತರೇನೂ ಮುಖ್ಯಮಂತ್ರಿ ಅವರ ಖಾಸಗಿ ವಿಷಯವನ್ನೋ, ಅಥವಾ ಕೇಳಬಾರದ ಏನನ್ನೋ ಕೇಳಿಲ್ಲ. ಬದಲಾಗಿ, ಸಾರ್ವಜನಿಕ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ವಿಮೆ ಹಾಗೂ ಪರ್ಮಿಟ್ ಇಲ್ಲದ, ಅಸುರಕ್ಷಿತ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಒಂದು ವೇಳೆ ಏನಾದರೂ, ಅನಾಹುತ ಸಂಭವಿಸಿದರೆ ಯಾರು ಜವಾಬ್ದಾರಿ ಎಂದು ಸಾರ್ವಜನಿಕ ಕಾಳಜಿಯಿಂದ ಪ್ರಶ್ನಿಸಿದ್ದಾರೆ.
ಇದೊಂದು ಗಂಭೀರ ಪ್ರಶ್ನೆಯಾಗಿದ್ದು, ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದಕ್ಕೆ ಅಲ್ಲೇ ಉತ್ತರಿಸಬೇಕಿತ್ತು. ಅಥವಾ, ಈ ಬಗ್ಗೆ ಚರ್ಚಿಸಿ ಮುಂದೆ ತಿಳಿಸಲಾಗುವುದು ಎಂಬ ಸಾಗ ಹಾಕುವ ಉತ್ತರವನ್ನಾದರೂ ನೀಡಬೇಕಿತ್ತು. ಇದ್ಯಾವುದೂ ಇಲ್ಲದೆ, ಪ್ರಶ್ನೆ ಕೇಳಿದ ಪತ್ರಕರ್ತನ ಮೇಲೆಯೇ ಎಗರಾಡಿದ್ದಾರೆ,
ಪತ್ರಕರ್ತನ ಪ್ರಶ್ನೆಗೆ ಕೆರಳಿದ ಸಿಎಂ, ʼನೀನು ಜವಾಬ್ದಾರಿ ವಹಿಸ್ಕೋಬೇಡ. ಸರ್ಕಾರ ನಡೆಸುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ. ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡʼ ಎಂದು ಏಕವಚನದಿಂದ ಸಂಭೋದಿಸಿದ್ದಾರೆ.
ಪತ್ರಕರ್ತರಲ್ಲಿ ಜವಾಬ್ದಾರಿ ವಹಿಸ್ಕೋಬೇಡಿ, ತಲೆ ಕೆಡಿಸಬೇಡಿ ಎಂದು ಸಾರ್ವಜನಿಕವಾಗಿ ಎಗರಾಡುವ ಯಡಿಯೂರಪ್ಪ ಅವರು ಪ್ರಜಾಪ್ರಭುತ್ವ ಮಾದರಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು, ಈ ನಾಡಿನ ನಿರಂಕುಶ ದೊರೆಯಲ್ಲ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಬೇಕು. ಹಾಗೂ ಈ ವ್ಯವಸ್ಥೆಯಲ್ಲಿ ಇರುವವರೆಗೆ ಅವರು ಸದಾ ಪ್ರಶ್ನಾರ್ಹರು ಎಂಬುದನ್ನು ಮನದಲ್ಲಿಟ್ಟು ಸಾರ್ವಜನಿಕವಾಗಿ ವ್ಯವಹರಿಸಬೇಕು.
.