ರಸಗೊಬ್ಬರದ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡಿರುವುದು ರೈತಾಪಿ ವರ್ಗವನ್ನು ಆತಂಕಕ್ಕೆ ದೂಡಿದೆ. ದೇಶಾದ್ಯಂತ ರೈತ ಸಂಘಟನೆಗಳು ರಸಗೊಬ್ಬರದ ಬೆಲೆ ಏರಿಕೆ ಕುರಿತಂತೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ರಸಗೊಬ್ಬರ ಬೆಲೆ ಏರಿಕೆಯನ್ನು ಖಂಡಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಿಂದಾಗಿ ಬೆಲೆ ಜಾಸ್ತಿಯಾಗಿದೆ ಎಂಬ ಸರ್ಕಾರದ ವಾದವನ್ನು ತಳ್ಳಿ ಹಾಕಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ.79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರದ ರೈತ ಶತ್ರು ನರೇಂದ್ರ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60 ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1 ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ ಗಳಾಗುತ್ತಿದೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ.2350 ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ.3600ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ